Saturday, 14th December 2024

Actor Jayasurya: ನ್ಯಾಯಾಂಗ ವ್ಯವಸ್ಥೆಯಲ್ಲಿ ವಿಶ್ವಾಸವಿದೆ; ತಮ್ಮ ವಿರುದ್ದ ಕೇಳಿಬಂದ ಆರೋಪಕ್ಕೆ ನಟ ಜಯಸೂರ್ಯ ಪ್ರತಿಕ್ರಿಯೆ

Actor Jayasurya

ತಿರುವನಂತಪುರಂ: ಮಲಯಾಳಂ ಚಿತ್ರಂಗದಲ್ಲಿ ಮಹಿಳಾ ಕಲಾವಿದರ ಮೇಲೆ ಲೌಂಗಿಕ ದೌರ್ಜನ್ಯ ನಡೆದಿದೆ ಎನ್ನುವ ಹೇಮಾ ಸಮಿತಿ ವರದಿ ಬಿರುಗಾಳಿ ಎಬ್ಬಿಸಿದೆ. ಇದೀಗ ಸ್ಟಾರ್‌ ನಟರ ವಿರುದ್ಧ ಸಹ ಕಲಾವಿದೆಯರು ಒಬ್ಬೊಬ್ಬರಾಗಿ ದೂರು ನೀಡಲು ಮುಂದೆ ಬರುತ್ತಿದ್ದಾರೆ. ಹಿರಿಯ ಕಲಾವಿದರಾದ ಸಿದ್ದಿಕ್‌, ಮುಕೇಶ್‌,  ನಿರ್ದೇಶಕ ರಂಜಿತ್‌ ಮುಂತಾದ ಖ್ಯಾತನಾಮರ ವಿರುದ್ದ ಲೈಂಗಿಕ ಕಿರುಕಿಳದ ಆರೋಪ ಕೇಳಿ ಬಂದಿದೆ. ಇದೀಗ ತಮ್ಮ ವಿರುದ್ಧ ಕೇಳಿ ಬಂದ ಆರೋಪವನ್ನು ನಿರಾಕರಿಸಿರುವ ನಟ ಜಯಸೂರ್ಯ (Actor Jayasurya),  ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಇಬ್ಬರು ಸಹ ಕಲಾವಿದೆಯರು ಜಯಸೂರ್ಯ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ. ಇವೆರಡೂ ಸುಳ್ಳು ಆರೋಪ ಎಂದು ನಟ ಹೇಳಿದ್ದಾರೆ. “ನಾನು ಇದನ್ನು ಕಾನೂನು ಮೂಲಕ ಎದುರಿಸಲು ನಿರ್ಧರಿಸಿದ್ದೇನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಕಾನೂನು ತಂಡವು ಕಾರ್ಯ ಪ್ರವೃತ್ತವಾಗಿದೆ. ಆತ್ಮಸಾಕ್ಷಿಯ ಕೊರತೆಯಿರುವ ಯಾರಿಗಾದರೂ ಸುಳ್ಳು ಆರೋಪಗಳನ್ನು ಮಾಡುವುದು ಸುಲಭ. ಕಿರುಕುಳದ ಸುಳ್ಳು ಆರೋಪವನ್ನು ಎದುರಿಸುವುದು ಕಿರುಕುಳದಷ್ಟೇ ನೋವಿನಿಂದ ಕೂಡಿದೆ” ಎಂದು ಜಯಸೂರ್ಯ ತಮ್ಮ ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

“ಸುಳ್ಳು ಯಾವಾಗಲೂ ಸತ್ಯಕ್ಕಿಂತ ವೇಗವಾಗಿ ಚಲಿಸುತ್ತದೆ. ಆದರೆ ಅಂತಿಮವಾಗಿ ಸತ್ಯ ಮೇಲುಗೈ ಸಾಧಿಸುತ್ತದೆ ಎಂಬುದನ್ನು ನಾನು ನಂಬುತ್ತೇನೆ. ನನ್ನ ನಿರಪರಾಧಿತ್ವವನ್ನು ಸಾಬೀತುಪಡಿಸುವ ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಮುಂದುವರಿಸುತ್ತೇನೆ. ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ. ಈ ಜನ್ಮದಿನವನ್ನು ಅತ್ಯಂತ ನೋವಿನಿಂದ ಕೂಡಿರುವಂತೆ ಮಾಡಲು ಸಹಕರಿಸಿದವರಿಗೆ ಧನ್ಯವಾದಗಳು” ಎಂದು ಅವರು ಭಾವುಕರಾಗಿ ಬರೆದುಕೊಂಡಿದ್ದಾರೆ.

https://www.instagram.com/p/C_WmBk1O-cr/?utm_source=ig_web_copy_link&igsh=MzRlODBiNWFlZA==

ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರು ಲೈಂಗಿಕ ಕಿರುಕುಳ ಎದುರಿಸುತ್ತಿದ್ದಾರೆ ಎಂದು ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿ ಬಹಿರಂಗವಾದ ನಂತರ ಮಾಲಿವುಡ್‌ನಲ್ಲಿ  ಮೀಟೂ (MeToo) ಬಿರುಗಾಳಿ ಪ್ರಾರಂಭವಾಗಿದೆ. ಸರ್ಕಾರಕ್ಕೆ ಸಲ್ಲಿಸಿದ  235 ಪುಟಗಳ ವರದಿಯಲ್ಲಿ ಮಲಯಾಳಂ ಚಲನಚಿತ್ರೋದ್ಯಮವನ್ನು 10-15 ನಿರ್ಮಾಪಕರು, ನಿರ್ದೇಶಕರು ಮತ್ತು ನಟರು ನಿಯಂತ್ರಿಸುತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಈ ವರದಿ ಸಲ್ಲಿಕೆಯಾದ ಬಳಿಕ ಹಲವರು ತಮಗಾದ ಕಹಿ ಅನುಭವವನ್ನು ಮುಕ್ತವಾಗಿ ಬಿಚ್ಚಿಡುತ್ತಿದ್ದಾರೆ.

ಮಿನು ಮುನೀರ್ ಆರೋಪ

2013ರಲ್ಲಿ ಸಿನಿಮಾ ಚಿತ್ರೀಕರಣದ ವೇಳೆ ಜಯಸೂರ್ಯ ಮತ್ತು ಮುಕೇಶ್‌ ಲೈಂಗಿಕ ಕಿರುಕುಳ ನೀಡಿದ್ದಾಗಿ ನಟಿ  ಮಿನು ಮುನೀರ್ ಆರೋಪಿಸಿದ್ದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ʼʼಸಿನಿಮಾವೊಂದರ ಚಿತ್ರೀಕರಣದ ವೇಳೆ ನನಗೆ ಕಹಿ ಅನುಭವವಾಯಿತು. ನಾನು ಶೌಚಾಲಯಕ್ಕೆ ಹೋಗಿ ಹೊರಬಂದಾಗ ಜಯಸೂರ್ಯ ನನ್ನನ್ನು ಹಿಂದಿನಿಂದ ತಬ್ಬಿಕೊಂಡು ನನ್ನ ಒಪ್ಪಿಗೆಯಿಲ್ಲದೆ ಚುಂಬಿಸಿದ್ದರು. ಆ ಕ್ಷಣ ನಾನು ಆಘಾತಕ್ಕೊಳಗಾಗಿದ್ದೆ ಮತ್ತು ಹೊರಗೆ ಓಡಿ ಬಂದಿದ್ದೆ. ಹೊಂದಾಣಿಕೆ ಮಾಡಿದರೆ ಇನ್ನಷ್ಟು ಚಿತ್ರಗಳಲ್ಲಿ ಅವಕಾಶ ನೀಡುವುದಾಗಿ ತಿಳಿಸಿದ್ದರುʼʼ ಎಂದು ವಿವರಿಸಿದ್ದರು.

ಜಯಸೂರ್ಯ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354 (ಮಹಿಳೆಯ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ) ಅಡಿಯಲ್ಲಿ ಕರಮನ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಅವರು ಕೆಲವು ವೈಯಕ್ತಿಕ ಕಾರಣಗಳಿಂದ ಅವರು ಕೆಲವು ದಿನಗಳಿಂದ ಕುಟುಂಬ ಸಮೇತ ಅಮೆರಿಕದಲ್ಲಿ ನೆಲೆಸಿದ್ದಾರೆ.