Saturday, 23rd November 2024

vishweshwar bhat column: ಕೆಲವೊಮ್ಮೆ ಬೇರೆಯವರ ಅನುಕೂಲಕ್ಕಾಗಿ ನಾವು ಬೆಲೆ ತೆರಬೇಕಾಗುತ್ತದೆ !

ಇದೇ ಅಂತರಂಗ ಸುದ್ದಿ

vbhat@me.com

ಕೆಲವು ಸಲ ಬೇರೆಯವರ ಸಿಟ್ಟು, ಸೆಡವು, ದ್ವೇಷ, ಅನುಕೂಲ, ಆಕ್ರೋಶಗಳಿಗೆ ನಾವು ಬೆಲೆ ತೆರಬೇಕಾಗುತ್ತದೆ. ನಮ್ಮ ಪಾತ್ರವಿಲ್ಲದಿದ್ದರೂ ನಾವು ಹಿಂಸೆ ಅನುಭವಿಸಬೇಕಾಗುತ್ತದೆ. ನಾನು ‘ವಿಜಯ ಕರ್ನಾಟಕ’ದ ಸಂಪಾದಕನಾಗಿದ್ದಾಗ, ಒಂದು ಸುದ್ದಿಯನ್ನು ಪ್ರಕಟಿಸಿದ್ದೆವು. ನಿವೃತ್ತ ಐಪಿಎಸ್ ಅಧಿಕಾರಿ ಮತ್ತು ಚಿತ್ರದುರ್ಗದ ಮಾಜಿ ಲೋಕಸಭಾ ಸದಸ್ಯ ಪಿ.ಕೋದಂಡರಾಮಯ್ಯ ಅವರ ಪತ್ರಿಕಾಗೋಷ್ಠಿಯ ವರದಿಯದು.
ಕೋದಂಡರಾಮಯ್ಯನವರಿಗೆ ಅದ್ಯಾವ ಸಿಟ್ಟು, ಹತಾಶೆ ಇತ್ತೋ ಗೊತ್ತಿಲ್ಲ. ಹಾಲಿ ಮಂತ್ರಿ ಮತ್ತು ಮಾಜಿ ಪೊಲೀಸ್ ಕಾನ್‌ಸ್ಟೇಬಲ್ ಸಿ.ಚೆನ್ನಿಗಪ್ಪ ಅವರ ವಿರುದ್ಧ ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ಮಾಡಿ, ವಾಚಾಮಗೋಚರ ಟೀಕಿಸಿದ್ದರು. ಪೊಲೀಸ್ ಕಾನ್‌ಸ್ಟೇಬಲ್ ಆಗಿದ್ದವ ಮಂತ್ರಿಯಾಗಿ ಮೆರೆಯುತ್ತಿದ್ದಾನಲ್ಲ ಎಂಬ ಉರಿಯೂ ಇದ್ದಿರಬಹುದು.

ಮಾತಿನ ಭರದಲ್ಲಿ ಕೋದಂಡರಾಮಯ್ಯನವರು, ‘ಆತ(ಚೆನ್ನಿಗಪ್ಪ) ನನ್ನ ಮನೆಯ ಬಾಗಿಲು ಕಾದ ಮನುಷ್ಯ. ಯಶವಂತಪುರ ಟ್ರಾಫಿಕ್ ಕಾನ್‌ಸ್ಟೇಬಲ್ ಆಗಿದ್ದಾಗ ನಕಲಿ ಚಲನ್ ಸೃಷ್ಟಿಸಿ, ದುಡ್ಡು ಲಪಟಾಯಿಸಿ ಸಿಕ್ಕಿ ಬಿದ್ದಿದ್ದ. ಬಚಾವ್ ಮಾಡುವಂತೆ ಅಂಗಲಾಚಿ ನನ್ನ ಮನೆ ಬಾಗಿಲಿಗೆ ಬಂದಿದ್ದ. ಆತ ಅದಕ್ಕೇ ಲಾಯಕ್ಕಾದ ಮನುಷ್ಯ. ಅದು ಹೇಗೆ ಮಂತ್ರಿಯಾದನೋ?’ ಎಂದು ಅಂದುಬಿಟ್ಟರು. ಪತ್ರಿಕಾಗೋಷ್ಠಿಯಲ್ಲಿ ಕೋದಂಡ ರಾಮಯ್ಯ ಹೇಳಿದ್ದನ್ನು ನಾವು ಯಥಾವತ್ ವರದಿ ಮಾಡಿದೆವು. ಇದರಲ್ಲಿ ನಮ್ಮ ತಪ್ಪೇನು ಬಂತು? ಅದಕ್ಕೆ ಚೆನ್ನಿಗಪ್ಪನವರು ಅಷ್ಟೇ ಕಟುವಾಗಿ ಕೋದಂಡರಾಮಯ್ಯನವರನ್ನು ಬೈದಿದ್ದರೂ ನಾವು ಯಥಾವತ್ ವರದಿ ಮಾಡುತ್ತಿದ್ದೆವು. ಅದು ನಮ್ಮ ಕರ್ತವ್ಯ. ಅಷ್ಟಕ್ಕೇ ಚೆನ್ನಿಗಪ್ಪ ವ್ಯಗ್ರರಾಗಿಬಿಟ್ಟರು. ‘ನಾನು ನನ್ನ ಜೀವನದ ಆ ಮನುಷ್ಯನ ಮನೆಬಾಗಿಲು ಕಾದಿಲ್ಲ.

ಸುಳ್ಳು ಬೊಗಳಿದ್ದಾನೆ. ನಾನು ಅವನನ್ನು ಬಿಡೊಲ್ಲ. ಕೋರ್ಟಿಗೆ ಎಳೆಯುತ್ತೇನೆ. ಆತ ಕ್ಷಮೆ ಕೇಳಿದರೂ ಬಿಡೊಲ್ಲ. ನೋಡೇ ಬಿಡ್ತೇನೆ’ ಎಂದು ಅಬ್ಬರಿಸಿದರು. ಚೆನ್ನಿಗಪ್ಪನವರು ಕೋದಂಡರಾಮಯ್ಯನವರ ವಿರುದ್ಧ ಕೋರ್ಟಿನಲ್ಲಿ ದಾವೆ ಹೂಡಿದರು. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಅದು ಅವರಿಬ್ಬರಿಗೆ ಸೇರಿದ ವಿಷಯ ಎಂದು ಸುಮ್ಮನಾಗಿಬಿಡಬಹುದಿತ್ತು. ಚೆನ್ನಿಗಪ್ಪನವರು ನನ್ನನ್ನು ಮತ್ತು ಪತ್ರಿಕೆಯ ಮಾಲೀಕರಾದ ವಿಜಯ  ಸಂಕೇಶ್ವರರನ್ನೂ ಪಾರ್ಟಿ ಮಾಡಿದರು. ನಮ್ಮನ್ನೂ ಆರೋಪಿಗಳನ್ನಾಗಿ ಮಾಡಿದರು. ನಮಗೆ ಕೋರ್ಟ್ ನೋಟಿಸ್ ಬಂತು. ನಾನು ಮತ್ತು ಸಂಕೇಶ್ವರರು ಕೋರ್ಟಿಗೆ ಹಾಜರಾದೆವು. ಸಂಕೇಶ್ವರರು ಹೇಳಿ ಕೇಳಿ ಬಹಳ ಬ್ಯುಸಿ ವ್ಯಕ್ತಿ. ಅಲ್ಲದೇ ಅವರಿಗೂ, ಈ ಕೇಸಿಗೂ ಯಾವ ಸಂಬಂಧವೂ ಇರಲಿಲ್ಲ, ಅವರು ಪತ್ರಿಕೆಯ ಮಾಲೀಕರು ಎಂಬುದನ್ನು ಬಿಟ್ಟರೆ. ಅವರಿಗೆ ಕೋರ್ಟಿಗೆ ಅಲೆಯುವುದೆಂದರೆ ಕಿರಿಕಿರಿ.

ನಾನು ಚೆನ್ನಿಗಪ್ಪನವರಿಗೆ ಫೋನ್ ಮಾಡಿ, ‘ನಮ್ಮನ್ನೇಕೆ ಪಾರ್ಟಿ ಮಾಡಿದ್ದೀರಿ? ಇದರಲ್ಲಿ ನಮ್ಮ ಪಾತ್ರವೇನಿದೆ? ನೀವು ಕೋದಂಡರಾಮಯ್ಯನವರನ್ನು ಹಿಗ್ಗಾಮುಗ್ಗಾ ಟೀಕಿಸಿದರೂ ನಾವು ಪ್ರಕಟಿಸುತ್ತೇವೆ, ಅದು ನಮ್ಮ ಧರ್ಮ. ಈ ಕೇಸಿನಿಂದ ನಮ್ಮನ್ನು ಬಿಟ್ಟುಬಿಡಿ’ ಎಂದು ವಿನಂತಿಸಿದೆ. ಅದಕ್ಕೆ ಚೆನ್ನಿಗಪ್ಪನವರು, ‘ನೀವು ನನ್ನ ಉತ್ತಮ ಸ್ನೇಹಿತರು. ಸಂಕೇಶ್ವರರು ದೊಡ್ಡ ಮನುಷ್ಯ. ನಿಮ್ಮಿಬ್ಬರ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ ನಿಮ್ಮನ್ನು ಪಾರ್ಟಿ ಮಾಡುವುದು ಅನಿವಾರ್ಯವಾಗಿದೆ. ಕೋರ್ಟಿನಲ್ಲಿ ಸಾಕ್ಷ್ಯ ಹೇಳುವ ಸಂದರ್ಭ ಬಂದಾಗ, ಕೋದಂಡರಾಮಯ್ಯ ಹಾಗೆ ನುಡಿದಿದ್ದು ನಿಜ ಎಂದು ನೀವು ಹೇಳಲಿ ಎಂಬ ಕಾರಣಕ್ಕೆ ನಿಮ್ಮಿಬ್ಬ ರನ್ನು ಪಾರ್ಟಿ ಮಾಡಿದ್ದೇನೆ.

ನನಗೆ ಗೊತ್ತು ಇದರಿಂದ ನಿಮಗೆ ಸಮಸ್ಯೆ ಆಗುತ್ತೆ ಅಂತ. ಆದರೆ ಅನ್ಯ ಮಾರ್ಗವಿಲ್ಲ. ದಯವಿಟ್ಟು ತಪ್ಪು ಭಾವಿಸಬೇಡಿ. ಬೇಕಾದರೆ ನನಗೆ ಎರಡು ಹೊಡೆಯಿರಿ. ಆದರೆ ಆ ಮನುಷ್ಯನಿಗೆ ಪಾಠ ಕಲಿಸದೇ ಬಿಡುವುದಿಲ್ಲ’ ಎಂದು ಖಡಾಖಡಿ ಹೇಳಿಬಿಟ್ಟರು. ಈ ಕೇಸಿನ ಸಂಬಂಧ ನಾನು ಮತ್ತು ಸಂಕೇಶ್ವರರು ಎರಡು- ಮೂರು ಬಾರಿ ಕೋರ್ಟಿಗೆ ಅಲೆದೆವು. ಈ ಮಧ್ಯೆ, ಚೆನ್ನಿಗಪ್ಪನವರ ಪಕ್ಷದ ಮುಖ್ಯಸ್ಥರಾದ ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ನಾನು ನಮ್ಮ ಪತ್ರಿಕೆಯ ಮುಖ್ಯ ವರದಿಗಾರರನ್ನು ಕಳುಹಿಸಿ, ಅವರಿಂದ (ಗೌಡರಿಂದ) ಚೆನ್ನಿಗಪ್ಪನವರ ಮೇಲೆ ಪ್ರಭಾವ ಬೀರುವಂತೆ ವಿನಂತಿಸಿದೆವು. ದೇವೇಗೌಡರು ಖುದ್ದಾಗಿ ಚೆನ್ನಿಗಪ್ಪನವರಿಗೆ ಫೋನ್ ಮಾಡಿ, ‘ಭಟ್ಟರು ಮತ್ತು ಸಂಕೇಶ್ವರರ ತಪ್ಪೇ ನೂ ಇಲ್ಲ. ಅವರನ್ನು ಈ ಪ್ರಕರಣದಲ್ಲಿ ಪಾರ್ಟಿ ಮಾಡಬೇಡ. ಅವರ ಮೇಲಿನ ಕೇಸನ್ನು ವಾಪಸ್ ತೆಗೆದುಕೋ’ ಎಂದು ಗಟ್ಟಿಯಾಗಿಯೇ ಹೇಳಿದರು.

‘ಅಪ್ಪಾಜಿ, ನಿಮ್ಮ ಮಾತನ್ನು ನಾನು ಎಂದೂ ತೆಗೆದು ಹಾಕಿದವನಲ್ಲ. ಆದರೆ ಇದೊಂದು ವಿಷಯದಲ್ಲಿ ನನ್ನನ್ನು ಕ್ಷಮಿಸಿಬಿಡಿ’ ಎಂದು ದಾಕ್ಷಿಣ್ಯವಿಲ್ಲದೇ ತಮ್ಮ ಪಕ್ಷದ ನಾಯಕರಿಗೇ ನೇರವಾಗಿ ಚೆನ್ನಿಗಪ್ಪನವರು ಹೇಳಿಬಿಟ್ಟರು. ಪ್ರತಿಸಲ ಕೋರ್ಟಿಗೆ ಹೋಗುವಾಗಲೂ ಸಂಕೇಶ್ವರರು, ‘ಚೆನ್ನಿಗಪ್ಪ ಅವರಿಗೆ ಮಾತಾಡಿ ನಮ್ಮಿಬ್ಬರನ್ನು ಕೇಸಿನಿಂದ ಕೈಬಿಡುವಂತೆ ಹೇಳಬೇಕಿತ್ತು’ ಎಂದು ನೆನಪಿಸುತ್ತಿದ್ದರು. ಒಂದು ದಿನ ಚೆನ್ನಿಗಪ್ಪ ನವರು, ನಮ್ಮಿಬ್ಬರಿಗೂ ಆತ್ಮೀಯರಾದ ಸ್ನೇಹಿತರೊಬ್ಬರ ಗೃಹಪ್ರವೇಶ ಕಾರ್ಯಕ್ರಮವೊಂದರಲ್ಲಿ ಸಿಕ್ಕರು. ನನ್ನನ್ನು ನೋಡುತ್ತಿದ್ದಂತೆ, ‘ಸ್ವಾಮಿ, ನಿಮಗೆ ಬಹಳ ನೋಯಿಸಿದ್ದೇನೆ. ನನ್ನನ್ನು ಕ್ಷಮಿಸಿರುವೆ ಎಂದು ಹೇಳುವ ತನಕ ನಿಮ್ಮ ಕೈ ಬಿಡೊಲ್ಲ. ಇದು ನಿಮ್ಮ ಕೈ ಅಲ್ಲ, ಕಾಲು.. ಆದರೆ ಯಾವ ಕಾರಣಕ್ಕೂ ನನಗೆ ಕೇಸ್ ವಾಪಸ್ ತೆಗೆದುಕೊಳ್ಳಿ ಎಂದು ವಿನಂತಿಸಿಕೊಳ್ಳಬೇಡಿ.

ನಿಮ್ಮಿಬ್ಬರನ್ನು ಬಿಟ್ಟರೆ ಕೇಸ್ ವೀಕ್ ಆಗುತ್ತದೆ. ಆ ಕೋದಂಡರಾಮಯ್ಯನಿಗೆ ಬುದ್ಧಿ ಕಲಿಸದೇ ಬಿಡೊಲ್ಲ. ಸ್ವಲ್ಪ ಸಹಾಯ ಮಾಡಿ, ಕಿರಿಕಿರಿಯಾಗಿದ್ದರೂ ಅಡ್ಜ ಮಾಡಿಕೊಳ್ಳಿ’ ಎಂದುಬಿಟ್ಟರು. ನಾನು ಹೇಳಬೇಕಿದ್ದ ಮಾತುಗಳೆಲ್ಲ ನನ್ನ ಗಂಟಲ ಉಳಿದು ಬಿಟ್ಟಿತು. ಅದಾದ ಬಳಿಕ ನಾನು ಏನಿಲ್ಲವೆಂದರೂ ಹತ್ತಾರು ಮಂದಿ ಮೂಲಕ ಚೆನ್ನಿಗಪ್ಪನವರ ಮೇಲೆ ಪ್ರಭಾವ ಬೀರುವ ಪ್ರಯತ್ನ ಮಾಡಿದೆ. ಬಡಪೆಟ್ಟಿಗೆ ಕೊನೆಗೂ ಜಗ್ಗಲೇ ಇಲ್ಲ. ಒಂದು ದಿನ ಬೆಳಗ್ಗೆ ಬೆಳಗ್ಗೆ ಚೆನ್ನಿಗಪ್ಪ ನಮ್ಮ ಮನೆಯ ಮುಂದೆ ಹಾಜರ್! ಕೈಯಂದು ಶಾಲು, ಆನೆಕಾಲಿನ ಗಾತ್ರದ ಹಾರ ಮತ್ತು ದೊಡ್ಡ ಬುಟ್ಟಿ ತುಂಬಾ ಹಣ್ಣು.

‘ಸ್ವಾಮಿ, ನಿಮಗೆ ಬಹಳ ನೋವನ್ನು ಕೊಟ್ಟಿದ್ದೇನೆ. ಕ್ಷಮಿಸಿ ಎಂದು ಹೇಳಿ ಹೋಗಲು ಬಂದೆ. ಇನ್ನು ಮುಂದೆ ಯಾರ ಹತ್ತಿರವೂ ಹೇಳಿಸಬೇಡಿ. ನಾನು ಆ ಭಗವಂತ ಬಂದರೂ ನಿಮ್ಮಿಬ್ಬರ ಹೆಸರುಗಳನ್ನು ಕೈಬಿಡುವು ದಿಲ್ಲ. ನೀವಿರುವುದರಿಂದಲೇ ಇಡೀ ಕೇಸಿಗೆ ಪ್ರಾಮುಖ್ಯ ಬಂದಿರುವುದು. ನೀವು ಕೋದಂಡರಾಮಯ್ಯ ಹಾಗೆ ಹೇಳಿದ್ದು ಹೌದು ಎಂದು ಹೇಳುತ್ತೀರಿ. ಕಾರಣ ಹಾಗೆ ಹೇಳಿದ್ದನ್ನು ನಿಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ್ದೀರಿ. ಹೀಗಾಗಿಯೇ ನಿಮ್ಮನ್ನು ಪಾರ್ಟಿ ಮಾಡಿರುವುದು. ಇದರಿಂದ ನಿಮಗೆ ತೊಂದರೆಯಾಗುತ್ತದೆ ಎಂಬುದು ಗೊತ್ತು. ಆದರೆ ನಾನು ಅಸಹಾಯಕ’ ಎಂದು ಹೇಳಿ ಚೆನ್ನಿಗಪ್ಪ ಹೊರಟುಹೋದರು. ಅಲ್ಲಿಗೆ ನಾನು ನನ್ನ ಪ್ರಯತ್ನವನ್ನು ಮುಂದುವರಿಸಲಿಲ್ಲ. ಮೂರು ತಿಂಗಳುಗಳಿಗೊಮ್ಮೆ ನಾವು ಕೋರ್ಟಿನಲ್ಲಿ ಭೇಟಿಯಾಗುತ್ತಿzವು. ಚೆನ್ನಿಗಪ್ಪ ಪ್ರತಿ ಸಲವೂ ಖುದ್ದಾಗಿ ಕೋರ್ಟಿಗೆ ಹಾಜರಾಗುತ್ತಿದ್ದರು.

ಕೋದಂಡರಾಮಯ್ಯನವರೇ ಬರುತ್ತಿರಲಿಲ್ಲ. ವಾರಂಟ್ ಆದಾಗ ಒಂದು ದಿನ ಮುಂಚಿತವಾಗಿ ಕೋರ್ಟಿಗೆ ಹಾಜರಾಗಿ ರೀಕಾಲ್ ಮಾಡಿಸಿಕೊಂಡು ಹೋಗುತ್ತಿದ್ದರು. ಅವರಿಗೆ ಚೆನ್ನಿಗಪ್ಪನವರನ್ನು ಕೋರ್ಟಿನಲ್ಲಿ ಮುಖಾಮುಖಿ ಭೇಟಿಯಾಗುವುದು ಇಷ್ಟವಿರಲ್ಲವೆನಿಸುತ್ತದೆ. ಈ ಪ್ರಕರಣ ಕೋರ್ಟಿನಲ್ಲಿ ಸುಮಾರು ಹದಿನೇಳು ವರ್ಷಗಳ ತನಕ ನಡೆಯಿತು. ನಾನು, ಸಂಕೇಶ್ವರರು ಮತ್ತು ಚೆನ್ನಿಗಪ್ಪ ತಪ್ಪದೇ ಹಾಜರಾಗುತ್ತಿದ್ದೆವು. ಎದುರಿಗೆ ಸಿಕ್ಕಾಗ ಚೆನ್ನಿಗಪ್ಪನವರು, ‘ಸ್ವಾಮಿ, ನಿಮ್ಮನ್ನು ಕೋರ್ಟಿಗೆ ಎಳೆದಿದ್ದಕ್ಕಾಗಿ ಕ್ಷಮಿಸಿಬಿಡಿ, ತಪ್ಪಾಯ್ತು’ ಎಂದು ಆರಂಭದಲ್ಲಿ ಮತ್ತು ಕೊನೆಯಲ್ಲಿ ವಿನೀತರಾಗಿ ಹೇಳುವುದನ್ನು ಮರೆಯುತ್ತಿರಲಿಲ್ಲ.

ಕೋರ್ಟಿನಲ್ಲಿ ಅನೇಕ ಸಲ ಭೇಟಿಯಾಗಿಯೇ ನಮ್ಮಲ್ಲಿ ಆತ್ಮೀಯತೆ ಬೆಳೆಯಿತು. ವಿಶೇಷ ಕಾರ್ಯಕ್ರಮವಿದ್ದಾಗ ತಮ್ಮ ಮನೆಗೆ ಆಹ್ವಾನಿಸುತ್ತಿದ್ದರು. ಕೋರ್ಟಿನಲ್ಲಿ ನ್ಯಾಯಾಧೀಶರು ಕರೆಯುವ ತನಕ, ಅವರು ತಮ್ಮ ಕಷ್ಟ-ಸುಖಗಳನ್ನು ಹೇಳಿಕೊಳ್ಳುತ್ತಿದ್ದರು. ಅದಾದ ಬಳಿಕ ಊಟಕ್ಕೆ ಕರೆಯುತ್ತಿದ್ದರು. ಈ ನಡುವೆ ನಾನು ‘ವಿಕ’ ಬಿಟ್ಟು ‘ಕನ್ನಡಪ್ರಭ’ ಸೇರಿz. ಸಂಕೇಶ್ವರರು ಪತ್ರಿಕೆಯನ್ನು ಮಾರಾಟ ಮಾಡಿ, ಐದು ವರ್ಷ ಕಾಲಾವ ಕಾಶದ ಬಳಿಕ, ‘ವಿಜಯವಾಣಿ’ ಆರಂಭಿಸಿದ್ದರು. ಒಂದೆರಡು ಸಲ, ನಾವು ಕೋರ್ಟಿಗೆ ಹಾಜರಾದರೂ ಚೆನ್ನಿಗಪ್ಪನವರು ಕಾಣಿಸಲಿಲ್ಲ. ನಾವು ತಪ್ಪಿಸಿದರೂ ಚೆನ್ನಿಗಪ್ಪನವರು ಕೋರ್ಟಿಗೆ ಹಾಜರಾಗುವುದನ್ನು ತಪ್ಪಿಸುತ್ತಿರಲಿಲ್ಲ. ನಾನು ಅವರ ವಕೀಲರನ್ನು ಕೇಳಿದಾಗ, ‘ಚೆನ್ನಿಗಪ್ಪನವರು ಚಿಕಿತ್ಸೆಗೆಂದು ಸಿಂಗಾಪುರಕ್ಕೆ ಹೋಗಿದ್ದಾರೆ’ ಎಂದು ತಿಳಿಸಿದರು.

ಅಲ್ಲಿ ಚಿಕಿತ್ಸೆ ಮಾಡಿಸಿದರೂ ಅವರ ಕಾಯಿಲೆ ವಾಸಿಯಾಗಲಿಲ್ಲ. ೨೦೨೦ರ ಫೆಬ್ರವರಿಯಲ್ಲಿ ಬಹುಅಂಗಾಂಗ ವೈಫಲ್ಯಗಳಿಂದ ಅವರು ನಿಧನರಾದರು. ಅಂದು ನಾನು ಶಿರಸಿಗೆ ಹೋಗಲೆಂದು ತುಮಕೂರು ಹತ್ತಿರ ವಿದ್ದೆ. ವಿಷಯ ತಿಳಿಯುತ್ತಿದ್ದಂತೆ, ಕಾರನ್ನು ವಾಪಸ್ ತಿರುಗಿಸಿ, ಚೆನ್ನಿಗಪ್ಪನವರ ಮನೆಗೆ ಹೋಗಿ, ಪಾರ್ಥಿವ ಶರೀರದ ಮೇಲೆ ಗಂಧದ ಹಾರವಿಟ್ಟು ಅಂತಿಮ ದರ್ಶನ ಪಡೆದು ಬಂದೆ. ಅಲ್ಲಿಗೆ ಕೇಸು ಖತಂ ಆಯಿತು. ಖರೆ ಅಂದ್ರೆ, ಚೆನ್ನಿಗಪ್ಪನವರ ನಿಧನದಿಂದ ಕೋದಂಡರಾಮಯ್ಯನವರು ‘ಮರುಜೀವ’ ಪಡೆದುಕೊಂಡರು. ಇಂದು ರಾಯಚೂರು ಜಿಲ್ಲೆಯ ಮಾನ್ವಿ ಕೋರ್ಟಿಗೆ ಹೋಗಿ, ನನ್ನದಲ್ಲದ ತಪ್ಪಿಗೆ, ನ್ಯಾಯಾಧೀಶರ ಮುಂದೆ ಕೈಕಟ್ಟಿ ನಿಂತುಕೊಂಡಾಗ, ಯಾಕೋ ಚೆನ್ನಿಗಪ್ಪನವರು ನೆನಪಾದರು.

ಫೀಸಂಟ್ ಐಲ್ಯಾಂಡ್ ನ್ಯಾಯ ಅಂದ್ರೆ

ನೀವು ಫೀಸಂಟ್ ಐಲ್ಯಾಂಡ್ ಹೆಸರನ್ನು ಕೇಳಿದ್ದೀರೋ, ಇಲ್ಲವೋ ಗೊತ್ತಿಲ್ಲ. ಬಿಡಸೊಯಾ ನದಿಯ ದಂಡೆಯ ಮೇಲಿರುವ ಈ ದ್ವೀಪ – ಮತ್ತು ಸ್ಪೇನ್ ದೇಶಕ್ಕೆ ಅಂಟಿಕೊಂಡಿದೆ. ಸೋಜಿಗದ ಸಂಗತಿ ಅಂದ್ರೆ ಇದು ಪ್ರತಿ ಆರು ತಿಂಗಳುಗಳಿಗೊಮ್ಮೆ ತನ್ನ ದೇಶವನ್ನು ಬದಲಿಸುತ್ತದೆ. ಫೆಬ್ರುವರಿ ಒಂದರಿಂದ ಜುಲೈ ಮೂವತ್ತೊಂದರ ತನಕ ಸ್ಪ್ಯಾನಿಷ್ ಆಡಳಿತಕ್ಕೆ ಸೇರಿದರೆ, ಮುಂದಿನ ಆರು ತಿಂಗಳು ಫ್ರೆಂಚ್ ಆಡಳಿತಕ್ಕೆ ಒಳಪಡುತ್ತದೆ. ತಲಾ ಆರು ತಿಂಗಳುಗಳಿಗೊಮ್ಮೆ ಆ ಎರಡು ದೇಶಗಳು ಈ ದ್ವೀಪದ ಮೇಲೆ ಕಬ್ಜ ಸಾಧಿಸುವುದರಿಂದ ಗಡಿ ವಿವಾದ ಇಲ್ಲದಂತಾಗಿದೆ. ಈ ದ್ವೀಪದ ವಾರಸುದಾರರು ಎಂಬ ಬಗ್ಗೆ ತಕರಾರು ಇಲ್ಲದಂತಾಗಿದೆ. ಈ ದ್ವೀಪಕ್ಕೆ ಭೇಟಿ ನೀಡುವುದು ಸುಲಭ ಅಲ್ಲ. ಸ್ಪೇನಿನ ಇರುನ್ ಎಂಬ ಊರಿನ ಮೂಲಕ ಅಥವಾ ಫ್ರಾನ್ಸಿನ ಹಂಡಯೇ ಎಂಬ ಊರಿನ ಮೂಲಕ ಫೀಸಂಟ್ ಐಲ್ಯಾಂಡ್‌ಗೆ ಹೋಗಬಹುದು.

ವಿಶ್ವಸಂಸ್ಥೆ ಆಗಾಗ ‘ಫೀಸಂಟ್ ಐಲ್ಯಾಂಡ್ ನ್ಯಾಯ’ ಎಂಬ ಮಾತನ್ನು ಹೇಳುತ್ತಿರುತ್ತದೆ. ಎರಡು ದೇಶಗಳು ಒಂದು ಭೂಭಾಗವನ್ನು ವಶಪಡಿಸಿಕೊಂಡು ತನ್ನ ಪ್ರಭುತ್ವ ಸಾಧಿಸಿದರೆ ಅಥವಾ ಯಾವುದಾದರೂ ಒಂದು ಪ್ರದೇಶವನ್ನು ಆಕ್ರಮಿಸಿಕೊಂಡು ಪರಸ್ಪರ ಕಿತ್ತಾಡಿದರೆ, ವಿಶ್ವಸಂಸ್ಥೆ ಮಧ್ಯಪ್ರವೇಶಿಸಿ, ನಿಮಗೆ ‘ಫೀಸಂಟ್ ಐಲ್ಯಾಂಡ್ ನ್ಯಾಯ’ ಕೊಡಿಸುತ್ತೇವೆ ಎಂದು ಭರವಸೆ ನೀಡುತ್ತದೆ. ಫೀಸಂಟ್ ಐಲ್ಯಾಂಡ್ ನ್ಯಾಯ ಅಂದ್ರೆ ಆರು ತಿಂಗಳು ಒಂದು ದೇಶ ಆ ಪ್ರದೇಶವನ್ನು ತನ್ನ ಆಳ್ವಿಕೆಗೆ ಒಳಪಡಿಸಿಕೊಂಡು, ಮುಂದಿನ ಆರು ತಿಂಗಳು ಮತ್ತೊಂದು ದೇಶಕ್ಕೆ ಬಿಟ್ಟುಕೊಡುವುದು. ಈ ದಿನಗಳಲ್ಲಿ ಯಾವ ದೇಶವೂ ತನ್ನ ಹಿಡಿತವನ್ನು
ಮತ್ತೊಂದು ದೇಶಕ್ಕೆ ಬಿಟ್ಟುಕೊಡುವುದಿಲ್ಲ.

ಆದರೆ ಫೀಸಂಟ್ ಐಲ್ಯಾಂಡ್ ವಿಷಯದಲ್ಲಿ ೧೬೫೯ರಲ್ಲಿಯೇ ಸ್ಪೇನ್ ಮತ್ತು – ಒಪ್ಪಂದಕ್ಕೆ ಬಂದು ಫೀಸಂಟ್ ಐಲ್ಯಾಂಡ್ ಮೇಲಿನ ನಿಯಂತ್ರಣವನ್ನು ಪರಸ್ಪರ ಆರು ತಿಂಗಳುಗಳ ಕಾಲ ಹಂಚಿಕೊಂಡವು. ಅಂದಿನಿಂದ ಆರಂಭವಾದ ಒಪ್ಪಂದ ಅಬಾಧಿತವಾಗಿ ಮುಂದುವರಿದುಕೊಂಡು ಬರುತ್ತಿದೆ. ಆರು ತಿಂಗಳು ಮುಗಿಯಲು ಹತ್ತು ದಿನಗಳು ಇರುವಂತೆ ಮತ್ತೊಂದು ದೇಶಕ್ಕೆ ಆಡಳಿತವನ್ನು ಹಸ್ತಾಂತರಿಸುತ್ತದೆ. ಫೀಸಂಟ್ ಐಲ್ಯಾಂಡ್ ಬಹಳ ಸುಂದರವಾದ ದ್ವೀಪ. ಆದರೆ ಅಲ್ಲಿ ಜನವಸತಿ ಇಲ್ಲ. ಅಷ್ಟಕ್ಕೂ ಆ ದ್ವೀಪ  ೬೬೦ ಅಡಿ ಉದ್ದ ಮತ್ತು ೧೩೦ ಅಡಿ ಅಗಲವಿದೆ. ಇರುನ್ ಮತ್ತು ಹಂಡಯೇ ಮೇಯರ್ ಅವರು ಆ ದ್ವೀಪದ ಆಡಳಿತವನ್ನು ನೋಡಿ ಕೊಳ್ಳುತ್ತಾರೆ. ಆ ಎರಡೂ ನಗರಗಳ ಮೇಯರ್‌ಗಳು ಆ ದ್ವೀಪವನ್ನು ಸ್ವಚ್ಛವಾಗಿ ಇಟ್ಟುಕೊಂಡಿದ್ದಾರೆ. ಪೈಪೋಟಿಗೆ ಬಿದ್ದವರಂತೆ ಉಭಯ ದೇಶಗಳು ದ್ವೀಪದ ಸೌಂದರ್ಯವನ್ನು ಹೆಚ್ಚಿಸಲು ಬೇಕಾದ ಎಲ್ಲ ಕ್ರಮ ಗಳನ್ನು ಕೈಗೊಳ್ಳುತ್ತಿವೆ. ಅವರು ಮಾಡಲಿ ಎಂದು ಇವರು, ಇವರು ಮಾಡಲಿ ಎಂದು ಅವರು ಎಂಬ ಧೋರಣೆಯನ್ನು ಉಭಯ ದೇಶಗಳು ಅನುಸರಿಸುವುದಿಲ್ಲ. ಆ ಎರಡೂ ದೇಶಗಳು ಫೀಸಂಟ್ ಐಲ್ಯಾಂಡನ್ನು ಸುಂದರವಾಗಿ ಇಟ್ಟುಕೊಳ್ಳುವ ಮೂಲಕ ಜಗತ್ತಿಗೆ ಮಾದರಿಯಾಗಿವೆ.

Shit ಪದದ ಕುರಿತು
ಇಂಗ್ಲಿಷಿನಲ್ಲಿ ಮಾತು ಮಾತಿಗೆ shit ಅಥವಾ Sh*t ಎಂಬ ಪದ ಪ್ರಯೋಗವನ್ನು ಕೇಳಿರಬಹುದು. ಖeಜಿಠಿ ಅಂದ್ರೆ ಮಲ ಅಥವಾ ಅಮೇಧ್ಯ ಎಂದರ್ಥ. ಆದರೆ ಕ್ಷುಲ್ಲಕ ತಪ್ಪುಗಳನ್ನು ಮಾಡಿದಾಗಲೆಲ್ಲ Shit ಎಂದು ಹೇಳುವುದು ಅನೇಕರಿಗೆ ರೂಢಿಯಾಗಿದೆ. ಅಲ್ಲದೆ ಆ ಪದಪ್ರಯೋಗ ತೀರಾ ಸಹಜ ಕೂಡ ಆಗಿದೆ. ಇಂಗ್ಲಿಷಿನ Fuck ಪದದಂತೆ ಸಂದರ್ಭಕ್ಕೆ ತಕ್ಕ ಹಾಗೆ Shit ಪದದ ಅರ್ಥವೂ ಬದಲಾಗುವುದನ್ನು ಕಾಣಬಹುದು. ಊಟಕ್ಕೆ ಕುಳಿತಾಗ ಗಂಡ, ‘ಇಂದು ನೀನು ಅಡುಗೆಗೆ ಜಾಸ್ತಿ ಉಪ್ಪು ಹಾಕಿದ್ದೀಯಾ’ ಎಂದು ಹೇಳಿದರೆ, ಹೆಂಡತಿ shit ಅಂತ ಮುಖ ಕಿವುಚಿಕೊಳ್ಳುತ್ತಾಳೆ. ಊಟಕ್ಕೆ ಕುಳಿತಾಗ ಹಾಗೆ ಹೇಳಿದರೂ ತಪ್ಪು ಭಾವಿಸುವುದಿಲ್ಲ. ಅವೆಲ್ಲವನ್ನು ಸಹಿಸಿಕೊಳ್ಳುವ ಶಕ್ತಿ ಆ ಪದಕ್ಕಿದೆ.

ಏನೋ ಮಾಡಲು ಹೋಗಿ ಇನ್ನೇನೋ ಆದರೆ, ಕ್ಷುಲ್ಲಕ ಪ್ರಮಾದಗಳನ್ನು ಮಾಡಿದರೆ, ಶಿಟ್ ಪದ ಉಪಯೋಗಕ್ಕೆ ಬರುತ್ತದೆ. ಆ ಉದ್ಗಾರಕ್ಕೂ, ಆ ಸಂದರ್ಭಕ್ಕೂ ಅರ್ಥವಿರುವುದಿಲ್ಲ. ಅವನು ಬೇರೆಯವರಿಗೆ ಸೊಪ್ಪು ಹಾಕುವುದಿಲ್ಲ ಎಂದು ಹೇಳುವಾಗ, He doesn’t take shit from anyone. ಇನ್ನು ಕೆಲವು ಸಲ ಬುದ್ಧಿ, ಉಪದೇಶ ಅರ್ಥದಲ್ಲಿಯೂ shit ಪದವನ್ನು ಬಳಸುವುದುಂಟು. ಉದಾಹರಣೆಗೆ, Do what I say, and don’t give me any shit. ಕಮ್ಮಿ ಗುಣಮಟ್ಟದ ವಸ್ತುವಿನ ಬಗ್ಗೆ ಹೇಳುವಾಗ, ಅನುಪಯುಕ್ತ ವಸ್ತುವಿನ ಕುರಿತು ಹೇಳುವಾಗ, shit ಅನ್ನುವುದುಂಟು. ಉದಾ, We need to get rid of all that shit in the basement. ಹೆಂಡತಿ ಗಂಡನನ್ನು ತೀರಾ ತಾತ್ಸರದಿಂದ ಕಂಡಾಗ She treats him like shit ಎಂದು ಹೇಳುವುದುಂಟು. ಕೆಲಸಕ್ಕೆ ಬಾರದ ವಸ್ತುವನ್ನು ಬಣ್ಣಿಸುವಾಗಲೂ ಆ ಪದ ಬಳಸುವುದುಂಟು- My car is a real piece of shit.

ಯಾವುದರಿಂದಲೂ ಭಾನಗಡಿಯಾದರೆ, ಆತಂಕಕಾರಿ, ಗೊಂದಲಮಯ ಸನ್ನಿವೇಶ ಉದ್ಭವಿಸಿದಾಗಲೂ ‘ಶಿಟ್’ ಪ್ರಯೋಗ ಬಳಕೆಯಾಗುವುದುಂಟು. Shit hits the fan, Shit hits the roof, when the shit hits the fan ಎಂದು ಹೇಳುವುದನ್ನು ಕೇಳಿರಬಹುದು. ನಾನು ಯಾರಿಗೂ ಕೇರ್ ಮಾಡುವುದಿಲ್ಲ, ಜಾಸ್ತಿ ಕಿಮ್ಮತ್ತು, ಪ್ರಾಮುಖ್ಯ ಕೊಡುವುದಿಲ್ಲ ಎನ್ನುವಾಗಲೂ ‘ಶಿಟ್’ ಪದವನ್ನು ಬಳಸುವುದನ್ನು ಕೇಳಿದ್ದೇನೆ. ಉದಾ: I don’t
give a shit what they think of me. ಸಕಾರಾತ್ಮಕವಾಗಿಯೂ ಈ ಪದವನ್ನು ಬಳಸುವುದುಂಟು. ಉದಾ: I think she is the shit. I want to keep my name largely because it’s hers.

ಮಹತ್ವದ ಸಂಗತಿಯನ್ನು ನಕಾರಾತ್ಮಕವಾಗಿ ಹೇಳುವಾಗಲೂ ಈ ಪದವನ್ನು ಹೀಗೆ ಬಳಸುವುದನ್ನು ನೋಡಿದ್ದೇನೆ- People would say we learned our lesson after World War II. Turns out we didn’t learn shit. ಮಗಳ ಡ್ರೆಸ್ ಬಗ್ಗೆ ತಂದೆ ಅಸಮಾಧಾನ ವ್ಯಕ್ತಪಡಿಸಿ, ಬೈಯುವಾಗಲೂ ಈ ಪದ ಬೇಕು- She gets a lot of shit from his parents about the way she dresses. ಭಯದ ಸಂದರ್ಭವನ್ನು ವಿವರಿಸುವಾಗಲೂ ‘ಶಿಟ್’ ಬಳಕೆಯಾಗುವುದುಂಟು- She was shitting herself, especially when he pulled out a gun.

ಈ ಪದ ವಿವಿಧ ರೂಪಗಳಲ್ಲಿ ವ್ಯಕ್ತವಾಗುವುದುಂಟು. ಉದಾಹರಣೆಗೆ, Shit hot, Hot shit, Holy shit, Shit-faced, Shit stirrer, Shit-hole…ಇನ್ನು, Shit ಮತ್ತು Oohh Shit ಎಂಬ  ಪದಗಳೂ ಚಾಲ್ತಿಯಲ್ಲಿವೆ. ಈ ಪ್ರಸಂಗವನ್ನು ಕಲ್ಪಿಸಿಕೊಳ್ಳಿ.. ಹುಡುಗ ಪ್ರೇಮಪತ್ರವನ್ನು ಬರೆದು ಪಕ್ಕದಮನೆಗೆ ಎಸೆಯುತ್ತಾನೆ. ಅದು ಹುಡುಗಿಗೆ ಸಿಗುವ ಬದಲು, ಅವಳ ಅಣ್ಣನಿಗೆ ಸಿಗುತ್ತದೆ. ಅದು Shit. ಒಂದು ವೇಳೆ ಆತ ಸಲಿಂಗಕಾಮಿಯಾಗಿದ್ದರೆ ಅದು Oohh Shit. ಅಂಕುರ್ ವಾರಿಕೂ ತಮ್ಮ ಜನಪ್ರಿಯ ಪುಸ್ತಕಕ್ಕೆ Do Epic Shit ಎಂಬ ಹೆಸರನ್ನೇ ಇಟ್ಟಿದ್ದಾರೆ. ಅವರ ಅತ್ಯಂತ ಪ್ರಸಿದ್ಧ ವಾಕ್ಯ ಅಂದ್ರೆ- Stay awesome, Stay focussed, Do Epic Shit. ಕೆಲ ದಿನಗಳ ಹಿಂದೆ, ನಾನು ಬೆಂಗಳೂರಿನ ಖ್ಯಾ  ಆರ್ಥಿಕ ಸಲಹೆಗಾರರ ಆಫೀಸಿಗೆ ಹೋಗಿದ್ದೆ. ಅವರ ಕೋಣೆಯಲ್ಲಿ ಒಂದು ಫೋಟೋ ಇತ್ತು. ಅದರಲ್ಲಿ ಹೀಗೆ ಬರೆದಿತ್ತು- Do no harma. But take no shit.