Saturday, 14th December 2024

mla yeshwantraya patil: ಬೆಳೆಹಾನಿ ಪರಿಹಾರಕ್ಕೆ ಮುಖ್ಯಮಂತ್ರಿಗಳ ಗಮನ ಸೆಳೆಯುವೆ: ಶಾಸಕ ಯಶವಂತರಾಯಗೌಡ ಪಾಟೀಲ

ಇಂಡಿ: ತಾಲೂಕಿನ ಬಹುತೇಕ ರಸ್ತೆಗಳು ಹಾಳಾಗಿದ್ದು, ಸರ್ಕಾರದ ಅನುಧಾನ ಅನುಪಾತದ ಮೇರೆಗೆ ಕೇವಲ ಎರಡು ವರ್ಷಗಳಲ್ಲಿ ರಸ್ತೆಗಳನ್ನು ಅಭಿವೃದ್ದಿಪಡಿಸಿ ಸರ‍್ವಜನಿಕರಿಗೆ ಅನುಕೂಲ ಮಾಡಿಕೊಡುತ್ತೇನೆ. ಕಳೆದ ಬಾರಿ ಭೀಮಾನದಿ ಪ್ರವಾಹದಿಂದಾಗಿ ಸಾಕಷ್ಟು ಹಾನಿಯಾಗಿದೆ. ಇದಕ್ಕೆ ಭೀಮಾನದಿಪಾತ್ರದಲ್ಲಿರುವ ಸೊನ್ನ ರಾಜ್ಯ ನಿರ್ವಹಣೆಯಲ್ಲಿ ಅಚಾತುರ‍್ಯ ಕಾರಣ. ಆದರೆ ಈ ಬಾರಿ ಅಧಿಕಾರಿಗಳು ನಿರ್ವಹಣೆ ಸರಿಯಾಗಿ ಮಾಡಿರುವುದರಿಂದ ಅಷ್ಟೊಂದು ಪ್ರಮಾಣದಲ್ಲಿ ಹಾನಿ ಸಂಭವಿಸಿರುವುದಿಲ್ಲ. ಈ ಬಾರಿ ಭೀಮಾನದಿ ಪ್ರವಾಹದಿಂದ ತೊಗರಿ, ಉದ್ದ ಬೆಳೆ ಭೀಮಾನದಿ ದಡದಲ್ಲಿ ಹಾನಿಯಾಗಿವೆ. ತಾಲೂಕು, ಜಿಲ್ಲಾಡಳಿತ ಸರ್ಕಾ ರಕ್ಕೆ ಹಾನಿಯಾದ ಬಗ್ಗೆ ವರದಿ ಸಲ್ಲಿಸಿದೆ. ನಾನು ಕೂಡಾ ಈ ಭಾಗದ ಜನಪ್ರತಿನಿಧಿಯಾಗಿ ರೈತರ ಸಮಸ್ಯೆಯನ್ನು ರ‍್ಕಾರ ಹಾಗೂ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದೇನೆ. ಪರಿಹಾರ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಅವರು ಸಾಲೋಟಗಿ ಗ್ರಾಮದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕಳೆದ ಬಾರಿಗಿಂತ ಈ ಬಾರಿ ಮಳೆ ಪ್ರಮಾಣ ಹೆಚ್ಚಾಗಿರುವುದರಿಂದ ರೈತರು ಬೆಳೆದ ತೊಗರಿ ಹಾನಿಯಾಗಿದೆ. ಅನೇಕ ರೈತರು ಹಾನಿಯಾದ ಬಗ್ಗೆ ತಮ್ಮ ನೋವು ತೊಂಡಿಕೊಂಡಿದ್ದಾರೆ. ಹಾನಿಯಾದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ವರ್ಷ ಭೀಕರ ಬೇಸಿಗೆ ಬಿಸಿಲಿನಲ್ಲಿ ೪೩ ಡಿಗ್ರಿ ಸೆಲ್ಸಿಯಸ್ ತಾಪಮಾನ ಇದ್ದರೂ ಕಾಲುವೆ ನೀರು ಕಾಲುವೆಯ ಕೊನೆಯವರೆಗೆ ನೀರು ಹರಿಸಲು ಅಧಿಕಾರಿಗಳು ಶ್ರಮಿಸಿದ್ದಾರೆ. ಕರ್ನಾಟಕ ರಾಜ್ಯ ಜಿಎಸ್ಟಿ ತುಂಬುವಲ್ಲಿ ಮುಂದಿದೆ. ಕೇಂದ್ರ ಸರ್ಕಾರ ಸರಿಯಾಗಿ ಅನುದಾನ ನೀಡುತ್ತಿಲ್ಲ. ಕೇಂದ್ರ ಸರ್ಕಾರ ಅನುದಾನ ನೀಡುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ. ಕರ್ನಾಟಕದಿಂದ ೩ ಲಕ್ಷ ಕೋಟಿ ಜಿಎಸ್ಟಿ ಭರಿಸಲಾಗುತ್ತಿದೆ.ಕೇಂದ್ರ ಸರ್ಕಾರ ಸಹಾಯ ಮಾಡಿದರೆ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ದಿ ಆಗುತ್ತಿತ್ತು. ರಾಜ್ಯ ಮತ್ತು ಕೇಂದ್ರ ನಡೆಸುತ್ತಿರುವವರು ಜನಹಿತ ಕಾಪಾಡಬೇಕು, ಇದರಲ್ಲಿ ರಾಜಕಾರಣ ಮಾಡಬಾರದು ಎಂದು ಹೇಳಿದರು.

ಜಿಲ್ಲೆಯ ಸಮಗ್ರ ನೀರಾವರಿಗೆ ೯೨ ಸಾವಿರ ಕೋಟಿ ಅನುದಾನ ಒದಗಿಸಿದರೆ ಅಭಿವೃದ್ದಿಯಾಗುತ್ತದೆ. ಸರ್ಕಾರಗಳು ಪ್ರತಿಯೊಂದು ಯೋಜನೆಗಳಿಗೆ ಆದ್ಯತೆಗಳಿಗೆ ಅನುಗುಣವಾಗಿ, ವಲಯಗಳಾಗಿ ಮಾಡಿ ಅನುದಾನ ಹಂಚಿಕೆ ಮಾಡುವುದು ಸರ್ಕಾರಗಳ ಕರ್ತವ್ಯವಾಗಿದೆ ಎಂದು ಹೇಳಿದರು.

ಜೀತಪ್ಪ ಕಲ್ಯಾಣಿ, ಶಿವಯೋಗೆಪ್ಪ ಚನಗೊಂಡ, ಶಿವಯೊಗೆಪ್ಪ ಜೊತಗೊಂಡ, ಸದಾಶಿವ ಪ್ಯಾಟಿ, ಲಿಂಬಾಜಿ ರಾಠೋಡ, ಜಹಾಂಗೀರ ಸೌದಾಗರ, ಸಂತೋಷ ಪರಸೆನವರ, ಎಸ್.ಜೆ.ಮಾಡ್ಯಾಳ ಇತರರು ಪತ್ರಿಕಾಗೊಷ್ಠಿಯಲ್ಲಿ ಇದ್ದರು.