Saturday, 23rd November 2024

Vishweshwar Bhat Column: ವಿಮಾನ ಪ್ರಯಾಣ : ಗೊತ್ತಿರದ ಸಂಗತಿಗಳು

Airtravel

ನೀವು ವಿಮಾನದಲ್ಲಿ ಆಗಾಗ ಓಡಾಡುವವರಿರಬಹುದು ಅಥವಾ ಖಾಯಂ ಪ್ರಯಾಣಿಕರಿರಬಹುದು, ಕೆಲವು ಸಂಗತಿಗಳನ್ನು ಏರ್ ಲೈನ್ ಕಂಪನಿಗಳು ಪ್ರಯಾಣಿಕರಿಗೆ ಹೇಳುವುದೇ ಇಲ್ಲ. ಅಂದರೆ ಕೆಲವು ವಿಷಯಗಳು ಪ್ರಯಾಣಿಕರ ಗಮನಕ್ಕೆ ಬರದಂತೆ ನೋಡಿಕೊಳ್ಳುತ್ತವೆ.

ನೀವು ಯಾವ ವಿಮಾನದಲ್ಲಿ ಪ್ರಯಾಣ ಮಾಡಬೇಕೆಂದು ಹಣ ನೀಡಿದ್ದೀರೋ, ಅದು ಆ ವಿಮಾನವಲ್ಲದೇ ಹೋಗಬಹುದು. ಕೆಲವು ದೊಡ್ಡ ವಿಮಾನಯಾನ ಸಂಸ್ಥೆಗಳು ಕೆಲವು ಮಾರ್ಗಗಳಲ್ಲಿ ಸಣ್ಣ ವಿಮಾನಗಳನ್ನು ಹಾರಿಸುತ್ತವೆ. ಸಣ್ಣ ವಿಮಾನಗಳು, ದೊಡ್ಡ ವಿಮಾನಗಳು ಅನುಸರಿಸುವ ಸುರಕ್ಷತಾ ನಿಯಮಗಳನ್ನು ಅನುಸರಿಸದಿರಬಹುದು. ಪೈಲಟ್ ಗಳೂ ದೊಡ್ಡ ವಿಮಾನ ಹಾರಿಸುವಷ್ಟು ಅನುಭವ ಹೊಂದಿದವರಲ್ಲದಿರ ಬಹುದು. ಅದರರ್ಥ ಅವರು ಏನೋ ಭಾನಗಡಿ ಮಾಡುತ್ತಾರೆ ಎಂದಲ್ಲ. ಆದರೆ ಈ ಸಂಗತಿಯನ್ನು ಯಾವ ಏರ್ ಲೈನ್ಸ್ ಸಂಸ್ಥೆಗಳೂ ಹೇಳುವುದಿಲ್ಲ.

ಕೆಲವು ಸಲ ದೂರ ಪ್ರಯಾಣದಲ್ಲಿ ಪೈಲಟ್ ಗಳು ನಿದ್ದೆ ಹೋಗುವ ಸಾಧ್ಯತೆ ಇರುತ್ತದೆ. ಅದರರ್ಥ ಪೈಲಟ್ ಗಳು ನಿದ್ದೆ ಮಾಡಬಾರದು ಎಂದಲ್ಲ. ಒಬ್ಬರು ನಿದ್ದೆ ಮಾಡುವಾಗ ಮತ್ತೊಬ್ಬರು ಕಮಾಂಡ್ ಸ್ಥಿತಿ (ಎಚ್ಚರವಾಗಿರುತ್ತಾರೆ) ಯಲ್ಲಿ ಇರುತ್ತಾರೆ. ಆದರೆ ಅವರು ಎಚ್ಚರವಾಗಿರಬೇಕಾದ ಹೊತ್ತಿನಲ್ಲಿಯೂ ನಿದ್ದೆ ಹೋಗುವ ಸಾಧ್ಯತೆಗಳಿರುತ್ತವೆ. ವಿಮಾನ 38 ಸಾವಿರ ಅಥವಾ 40 ಸಾವಿರ ಅಡಿ ಎತ್ತರದಲ್ಲಿ ಹಾರುವಾಗ, ಆಟೋ ಪೈಲಟ್ ಜಾಗೃತವಾಗಿರುತ್ತದೆ. ಅಂಥ ಸಂದರ್ಭದಲ್ಲೂ ಕನಿಷ್ಠ ಒಬ್ಬ ಪೈಲಟ್ ಆದರೂ ಎಚ್ಚರವಾಗಿರಬೇಕು. ಪೈಲಟ್ ಯಾವ ಸ್ಥಿತಿಯಲ್ಲಿದ್ದಾರೆ ಎಂಬುದು ಪ್ರಯಾಣಿಕರಿಗೆ ಗೊತ್ತಾಗುವುದಿಲ್ಲ. ಅವರು ಸ್ವಲ್ಪ ಮೈಮರೆತರೂ ಅಪಾಯ ತಪ್ಪಿದ್ದಲ್ಲ.

ಕೆಲವು ವಿಮಾನಗಳು ನೋಡಲು ಹೊಸತಾಗಿ ಕಾಣುತ್ತವೆ, ವಾಸ್ತವವಾಗಿ ಅವು ಹಳತಾಗಿರುತ್ತವೆ. ಇತ್ತೀಚೆಗೆ ಬೋಯಿಂಗ್ 737 ವಿಮಾನದ ಮೂತಿಯಲ್ಲಿ ರಂಧ್ರ ವಾಗಿಬಿಟ್ಟಿತು. ಆದರೂ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಯಿತು. ತನಿಖೆ ಮಾಡಿದಾಗ ಗೊತ್ತಾಗಿದ್ದೇನೆಂದರೆ, ವಿಮಾನ ಸುಮಾರು ಹದಿನೆಂಟು ವರ್ಷಗಳಷ್ಟು ಹಳತಾಗಿತ್ತು ಮತ್ತು 40 ಸಾವಿರಕ್ಕೂ ಹೆಚ್ಚು ಸಲ ಟೇಕಾಫ್ ಮತ್ತು ಲ್ಯಾಂಡ್ ಆಗಿತ್ತು.

ವಿಮಾನ ಹಾರುತ್ತಿರುವಾಗ ಒಂದು ಎಂಜಿನ್ ಕೆಟ್ಟು ಹೋಯಿತು ಎನ್ನಿ. ಪೈಲಟ್ ಗಳು ಅದನ್ನು ಅನೌನ್ಸ್ ಮಾಡುವುದಿಲ್ಲ. ಪ್ರಯಾಣಿಕರು ಗಾಬರಿಯಾಗಬಹುದು ಎಂಬ ಕಾರಣವೂ ಇರಬಹುದು. ಅದರ ಬದಲು, ‘ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ’ ಎಂದಷ್ಟೇ ಹೇಳುತ್ತಾರೆ. ಒಂದು ಎಂಜಿನ್ ಕೆಟ್ಟು ಹೋದರೆ, ಇನ್ನೊಂದು ಎಂಜಿನ್ ಇರುವುದರಿಂದ ಸುರಕ್ಷಿತ ಪ್ರಯಾಣ ಮುಂದುವರಿಸಲು ಸಮಸ್ಯೆ ಆಗದು.

ವಿಮಾನ ಮೋಡದೊಳಗೆ ಹೋಗುವಾಗ, ಕೆಲವು ಸಲ ಮುಂದೆ ಏನೇನೂ ಕಾಣುವುದಿಲ್ಲ. ಒಮ್ಮೊಮ್ಮೆ ಎರಡು-ಮೂರು ನಿಮಿಷಗಳ ಕಾಲ ಪೈಲಟ್ ಗೆ ಏನೇನೂ ಕಾಣಿಸುವುದಿಲ್ಲ. ಆತ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿ ಕೊಂಡು ಕುಳಿತ ಅನುಭವ. ಇದನ್ನು Pilot’s blindness ಎಂದು ಕರೆಯುತ್ತಾರೆ. ಹಾಗಾದಾಗ ತಕ್ಷಣ ‘ಆಟೋ ಪೈಲಟ್ ಮೋಡ್ ‘ ಜಾಗೃತವಾಗುತ್ತದೆ. ಅಷ್ಟರೊಳಗೆ ಏನು ಬೇಕಾದರೂ ಆಗಬಹುದು. ಆದರೆ ಯಾವ ಪೈಲಟ್ ಕೂಡ ಈ ಸ್ಥಿತಿಯನ್ನು ಅನೌನ್ಸ್ ಮಾಡುವುದಿಲ್ಲ.

ಪ್ರಕ್ಷುಬ್ಧ (Turbulence) ವಾತಾವರಣವಿದ್ದಾಗ, ಸೀಟ್ ಬೆಲ್ಟ್ ಕಟ್ಟಿಕೊಳ್ಳುವಂತೆ ಪೈಲಟ್ ಅನೌನ್ಸ್ ಮಾಡುತ್ತಾನೆ. ಆದರೆ ಗಗನಸಖಿಯರಿಗೆ ಸೀಟ್ ಬೆಲ್ಟ್ ಕಟ್ಟಿಕೊಂಡು ಆಸೀನರಾಗಿ ಎಂದು ಹೇಳಿದರೆ, ವಿಮಾನ ಇನ್ನೂ ಜೋರಾದ ದಢಕಿ ( air bump)ಗೆ ಸಿಲುಕಿದೆ ಎಂದರ್ಥ. ಕೆಲವೊಮ್ಮೆ ಆಹಾರ ಸರಬರಾಜು ಮಾಡುವ ಟ್ರೇಯಲ್ಲಿದ್ದ ಸಾಮಾನುಗಳು ಚೆಲ್ಲಾಪಿಲ್ಲಿಯಾಗುವುದುಂಟು.

ವಿಮಾನ ನೆಲದ ಮೇಲೆ ನಿಂತರೆ ನಷ್ಟ. ಅದು ಸದಾ ಹಾರುತ್ತಲೇ ಇರಬೇಕು. ಆಗಲೇ ಲಾಭ. ಹೀಗಾಗಿ ವಿಮಾನವನ್ನು ಸ್ವಚ್ಛಗೊಳಿಸಲು ಕಡಿಮೆ ಸಮಯ ಸಿಗುತ್ತದೆ. ಹೀಗಾಗಿ ಮೊದಲಿನ ಪ್ರಯಾಣಿಕರು ಬಳಸಿದ ಬೆಡ್ ಶೀಟ್, ದಿಂಬುಗಳನ್ನು ಬದಲಿಸಲು ಸಮಯವಿರುವುದಿಲ್ಲ. ವಿಮಾನ ಅಂದ್ರೆ ಕಣ್ಣಿಗೆ ಕಾಣದ ಸೂಕ್ಷ್ಮಾಣು (Germs) ಜೀವಿಗಳ ದೊಡ್ಡ ಪೆಟ್ಟಿಗೆ ಇದ್ದ ಹಾಗೆ. ಕೆಲವು ವಿಮಾನದಲ್ಲಿ ಕೈಗಳನ್ನು ಇಟ್ಟುಕೊಳ್ಳುವ ಆರ್ಮ್ ರೆಸ್ಟ್ ನ್ನು ಒರೆಸುವುದಿಲ್ಲ ಮತ್ತು ಹೆಡ್ ರೆಸ್ಟ್ ನ್ನು ಬದಲಿಸುವುದಿಲ್ಲ. ಕೆಲವು ವಿಮಾನಗಳು ಸಿಟಿ ಬಸ್ಸಿನಷ್ಟೇ ಕೊಳಕಾಗಿರುತ್ತವೆ.