ಪತಿ ಎಷ್ಟು ವರ್ಷ ಜತೆಯಾಗಿರಬಹುದು! ನಿಜ ಹೇಳಬೇಕೆಂದರೆ, ಇಬ್ಬರಿಗೂ ಹೊಂದಾಣಿಕೆಯಾದರೆ, ಈ ಪ್ರೀತಿಯ ಬಂಧನಕ್ಕೆ ಕಾಲ ಮಿತಿ ಇಲ್ಲ. ಇಲ್ಲೊಂದು ಜೋಡಿ 80 ವರ್ಷಗಳ ಕಾಲ ಸತಿ ಪತಿಯಾಗಿ ಬಾಳಿದ್ದಾರೆ. ಅವರ ದಾಂಪತ್ಯ ಸುಖ ಇನ್ನಷ್ಟು ಕಾಲ ಮುಂದುವರಿಯಲಿ!
ಸುರೇಶ ಗುದಗನವರ
ನಮ್ಮ ಬದುಕಿನಲ್ಲಿ ದಾಂಪತ್ಯ ಎನ್ನುವುದು ಕಳಚಲಾಗದ ಒಂದು ಭಾವಬಂಧನ. ಸುಖ ದುಃಖಗಳನ್ನು ಸಮನಾಗಿ ಹಂಚಿ ಕೊಂಡು ಮತ್ತು ಪರಸ್ಪರ ಸಾಮ ರಸ್ಯದಿಂದ ಹೊಂದಿಕೊಂಡು ಹೆಜ್ಜೆ ಇಡುವ ಜೀವನವದು.
ಆರೋಗ್ಯವಂತ ಜೀವನಕ್ಕೆ ಹೊಂದಾಣಿಕೆ, ಸಾಮರಸ್ಯವೇ ಅಡಿಪಾಯ. ದಾಂಪತ್ಯದಲ್ಲಿ ಮುಖ್ಯವಾಗಿರುವದು ಮಾನವೀಯ ನೆಲೆಯಲ್ಲಿನ ಅಂತಃಕರಣದ ಆಪ್ತತೆ. ದೈಹಿಕ ಮನೋವಲಯಗಳನ್ನು ದಾಟಿದ ಆತ್ಮಸಾಂಗತ್ಯವೆನ್ನುವದು ಇಲ್ಲಿ ನೆಲೆಯಾಗ ಬೇಕು. ಹೀಗೆ ಆತ್ಮಸಾಂಗತ್ಯದೊಂದಿಗೆ ಸಂತೋಷದಿಂದ ಜೀವನ ಸಾಗಿಸಿದ ಶತಾಯುಷಿ ಜೋಡಿ ಈಗ ಗಿನ್ನಿಸ್ ದಾಖಲೆಯಲ್ಲಿ ತಮ್ಮ ಹೆಸರು ದಾಖಲಿಸಿದ್ದಾರೆ.
ಅಮರ ಪ್ರೇಮಕ್ಕೆ ಮಾದರಿಯಾಗಬಹುದಾದ ಈ ಅನುರೂಪದ ದಂಪತಿ ಸದ್ಯ ಈಕ್ವೆಡಾರ್ನಲ್ಲಿ ವಾಸಿಸುತ್ತಿದ್ದಾರೆ. ಜೂಲಿಯೋ ಸೀಸರ್ ಮೊರಾ (110) ಮತ್ತು ವಾಲ್ಡ್ರಾಮಿನಾ ಕ್ವಿಂಟೆರೋ (104) ದಂಪತಿ ಈಗ ವಿಶ್ವದಲ್ಲಿ ಅತೀ ದೀರ್ಘಕಾಲ ದಾಂಪತ್ಯವನ್ನು ಹೊಂದಿದ ಜೋಡಿ. ಇವರ ದಾಂಪತ್ಯಕ್ಕೆ 80 ವರ್ಷ ಆಯಸ್ಸು! ಇವರಿಬ್ಬರ ಒಟ್ಟು ಆಯಸ್ಸು ಸೇರಿಸಿದರೆ 215 ವರ್ಷಗಳು ಆಗು ತ್ತವೆ. ಇದು ಒಂದು ವಿಶ್ವ ದಾಖಲೆ ಎಂದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಗುರುತಿಸಿದೆ.
ಜೂಲಿಯೋ ಸೀಸರ್ ಅವರು 10 ಮಾರ್ಚ್ 1910ರಂದು ಮತ್ತು ವಾಲ್ಡ್ರಾಮಿನಾರವರು 16, ಅಕ್ಟೋಬರ್ 1915ರಂದು ಜನಿಸಿದರು. ವಾಲ್ಡಾಮಿನಾ ತನ್ನ ಶಾಲಾ ರಜಾ ದಿನಗಳನ್ನು ಅಕ್ಕನ ಮನೆಯಲ್ಲಿ ಕಳೆಯುತ್ತಿದ್ದರು. ಜೂಲಿಯೋ ಸೀಸರ್ರವರು ಅದೇ ಕಟ್ಟಡ ದಲ್ಲಿ ವಾಸಿಸುತ್ತಿದ್ದರಿಂದ, ಇವರಿಬ್ಬರಿಗೂ ಪರಿಚಯವಾಗುತ್ತದೆ. ಈ ಪರಿಚಯ ಗೆಳೆತನದಲ್ಲೇ ಆರಂಭವಾಗಿ, ಕ್ರಮೇಣ ಪರಸ್ಪರ ಇಷ್ಟಪಡುವಂತಾಗುತ್ತದೆ. ಹೀಗೆ ಏಳು ವರ್ಷಗಳು ಕಳೆದ ಮೇಲೆ ಫೆಬ್ರುವರಿ 7, 1941ರಂದು ಅವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಬ್ಬರೂ ಅಂದು ಶಿಕ್ಷಕ ವೃತ್ತಿಯಲ್ಲಿ ಹೆಗ್ಗಳಿಕೆಯನ್ನು ಗಳಿಸಿದ್ದಾರೆ.
ಶಿಕ್ಷಕ ವೃತ್ತಿಯನ್ನು ಯಶಸ್ವಿಯಾಗಿ ಪೂರೈಸಿದ ನಂತರ, ಈಗ ತಮ್ಮ ಸಂತೃಪ್ತಿಯ ನಿವೃತ್ತಿ ಜೀವನವನ್ನು ಕಳೆಯುತ್ತಿದ್ದಾರೆ. ಈ ಶಿಕ್ಷಕ ದಂಪತಿಗಳಿಗೆ ಐವರು ಮಕ್ಕಳಿದ್ದಾರೆ. 11 ಮೊಮ್ಮಕ್ಕಳು, 21 ಮರಿ ಮೊಮ್ಮಕ್ಕಳು ಮತ್ತು 9 ಮರಿ ಮರಿ ಮೊಮ್ಮಕ್ಕಳು ಅವರ ದಾಖಲೆಯ ದಾಂಪತ್ಯಕ್ಕೆ ಸಾಕ್ಷಿಯಾಗಿದ್ದಾರೆ. ‘‘ಸಹನೆ, ಸಂಯಮ ಮತ್ತು ಹೊಂದಾಣಿಕೆಯೇ ನಮ್ಮ ದೀರ್ಘಾವಧಿ ದಾಂಪತ್ಯ
ಗೀತೆಯ ಗುಟ್ಟು ಎನ್ನುತ್ತಾರೆ’’ ಈ ವಯೋವೃದ್ಧ ದಂಪತಿ. ಕಳೆದ ಎಂಟು ದಶಕಗಳಿಂದಲೂ ದಾಂಪತ್ಯ ಜೀವನ ನಡೆಸುತ್ತಿರುವ ಈ ಶತಾಯುಷಿ ದಂಪತಿಯ ದಾಂಪತ್ಯ ಗೀತೆ ಮತ್ತು ಉತ್ತಮ ಆರೋಗ್ಯ ಬೆರಗು ಮೂಡಿಸುವಂಥದ್ದು. ಅಚ್ಚರಿ ಎಂದರೆ, ಇವರು
ಮದುವೆಯಾಗುವಾಗ ಅವರ ಕುಟುಂಬದವರ ಸಂಪೂರ್ಣ ಸಹಮತ ಇಲ್ಲದೇ ಇದ್ದುದರಿಂದ, ಮೊದಲಿಗೆ ರಹಸ್ಯವಾಗಿ ಮದುವೆ ಯಾಗಿದ್ದರು!
ನಂತರ, ಇವರ ಅನ್ಯೋನ್ಯತೆ ಕಂಡು ಕುಟುಂಬದವರು ಒಪ್ಪಿದರು. ಕವಿ ದ.ರಾ.ಬೇಂದ್ರೆಯವರ ನಾನು ಬಡವಿ ಎಂಬ ಸರಳ, ಸುಂದರ ಭಾವಗೀತೆಯನ್ನು ನೆನಪಿಸಿಕೊಳ್ಳಬಹುದು. ದಾಂಪತ್ಯ ಸುಖಸಾಗರವಾಗಲು ಬದುಕಿನಲ್ಲಿ ಸಿರಿಸಂಪತ್ತು, ವಸ್ತು ಒಡವೆ ಗಳು ತುಂಬಿ ತುಳಕಬೇಕಾಗಿಲ್ಲ. ದಾಂಪತ್ಯ ಆನಂದಸಾಗರವಾಗಲು ಪರಸ್ಪರರಲ್ಲಿ ಮುಖ್ಯವಾಗಿ ಇರಬೇಕಾದುದು ಒಲವು ಎಂಬು ದನ್ನು ಈ ಗೀತೆ ಸಾರುತ್ತದೆ. ಆದ್ದರಿಂದ ಸಂತಸ ತುಂಬುವ ದಾಂಪತ್ಯವೇ ನಿಜವಾಗಿಯೂ ಸಿರಿವಂತ ದಾಂಪತ್ಯವಾಗುತ್ತದೆ.
ಹಾಗೆಯೇ ಪ್ರೀತಿ, ಹೊಂದಾಣಿಕೆ ಮತ್ತು ಪರಸ್ಪರ ಗೌರವದೊಂದಿಗೆ ಎಂಟು ದಶಕಗಳ ಸುದೀರ್ಘ ಮತ್ತು ಸಂತೋಷದ ದಾಂಪತ್ಯವನ್ನು ಜೂಲಿಯೋ ಸೀಸರ್ ಮತ್ತು ವಾಲ್ಡ್ರಾಮಿನಾರವರು ನಡೆಸುತ್ತಿದ್ದಾರೆ. ಇವರ ಅನುಪಮ ಪ್ರೀತಿಯೇ ಇವರಿಬ್ಬರ
ಖುಷಿಗೆ ಕಾರಣ. ಇವರ ಯಶಸ್ವಿ ದಾಂಪತ್ಯ ಜೀವನ ಎಲ್ಲರಿಗೂ ಮಾದರಿಯಾಗಲಿ.