ನಮ್ಮ ಓದುಗರು ಆಗಾಗ ಪತ್ರಿಕೆಗಳಲ್ಲಿ ಪ್ರಕಟವಾಗುವ ಪದಗಳ ಬಳಕೆ ಬಗ್ಗೆ ಆಸಕ್ತಿಯಿಂದ ಬರೆಯುವುದುಂಟು. ನಾವು ಬಳಸಿದ ಪದಗಳ ಅರ್ಥವನ್ನು ಪ್ರಶ್ನಿಸಿ ಬರೆಯುತ್ತಾರೆ. ಇನ್ನು ಕೆಲವರಿಗೆ ಆ ಪದ ಬಳಕೆ ಸರಿಯೋ, ತಪ್ಪೋ ಎಂಬುದನ್ನು ತಿಳಿದುಕೊಳ್ಳುವ ಜಿಜ್ಞಾಸೆ ಇರುತ್ತದೆ. ಈ ವಿಷಯವಾಗಿ ಓದುಗರೊಂದಿಗೆ ಸಂವಾದ ನಿರಂತ ಚಾಲ್ತಿಯಲ್ಲಿರುತ್ತದೆ.
ಇತ್ತೀಚೆಗೆ ಶಿವಮೊಗ್ಗದ ಜಿ.ಪಿ.ಪ್ರಾಣೇಶ ಎಂಬುವವರು, ‘ಒಂದೇ ಪ್ಯಾರಾದಲ್ಲಿ ಅನಂತರ ಮತ್ತು ನಂತರ ಎಂಬ ಪದವನ್ನು ಬಳಸಿದ್ದೀರಿ. ಇವೆರಡೂ ಪದಗಳೂ ಒಂದೇನಾ ಅಥವಾ ಇವುಗಳ ಅರ್ಥಗಳಲ್ಲಿ ವ್ಯತ್ಯಾಸವಿದೆಯಾ?’ ಎಂದು ಕೇಳಿದ್ದರು. ಈ ಪ್ರಶ್ನೆಗೆ ಈಗಾಗಲೇ ಮಂಡ್ಯದ ಕೊಕ್ಕಡ ವೆಂಕಟ್ರಮಣ ಭಟ್ ಅವರು ತಮ್ಮ ‘ಸರಿಗನ್ನಡ-ಸರಿಕನ್ನಡ’ ಎಂಬ ಪುಸ್ತಕದಲ್ಲಿ
ಉತ್ತರಿಸಿದ್ದಾರೆ ಎಂಬುದು ನೆನಪಾಗಿ ಆ ಕೃತಿಯನ್ನು ತಡಕಾಡಿದೆ. ಕೊಕ್ಕಡ ಭಟ್ ಅವರು ಈ ಪದಗಳ ಬಗ್ಗೆ ಆ ಕೃತಿಯಲ್ಲಿ ಹೀಗೆ ವಿವರಿಸಿದ್ದರು – ಹೀಗೊಂದು ವಾಕ್ಯಗಳನ್ನು ಗಮನಿಸಿ. ಮುಂಜಾನೆ ಹಾಸುಗೆಯಿಂದ ಎದ್ದೊಡನೆ ಮುಖ ತೊಳೆದು ಉಷಃಪಾನವನ್ನು ಪೂರೈಸುತ್ತೇನೆ. ಅನಂತರ ಹತ್ತು ನಿಮಿಷಗಳ ಕಾಲಧ್ಯಾನವನ್ನು ಮಾಡುತ್ತೇನೆ. ಅನಂತರ ೨೦ ನಿಮಿಷಗಳ ಸಮಯವನ್ನು ಕಾಲ್ನಡುಗೆಗಾಗಿ (ವಾಕಿಂಗ್) ವಿನಿಯೋಗಿಸುತ್ತೇನೆ.
ನಂತರ ಸ್ನಾನವನ್ನು ಮಾಡುತ್ತೇನೆ. ಅನಂತರ ದೇವರ ಪೂಜೆಯನ್ನು ಮಾಡುತ್ತೇನೆ. ನಂತರ ದಿನಪತ್ರಿಕೆಯನ್ನು ನೋಡುತ್ತೇನೆ. ಅನಂತರ ತಿಂಡಿ-ತಿನಿಸುಗಳನ್ನು ಸೇವಿಸುತ್ತೇನೆ. ಈ ಮೇಲಿನ ವಾಕ್ಯಗಳಲ್ಲಿ ಒಂದೇ ಅರ್ಥದಲ್ಲಿ ‘ಅನಂತರ’ ಮತ್ತು ‘ನಂತರ’ ಎಂಬ ಶಬ್ದಗಳನ್ನು ಬಳಸಿದೆ. ಭಾಷಾ ಬೆಳವಣಿಗೆಯ ದಾರಿಯಲ್ಲಿ ಬೇರೆಯ ಭಾಷೆಯಿಂದ ಕನ್ನಡಕ್ಕೆ ಶಬ್ದಗಳು ಬರುವಾಗ ಮೂಲ ಶಬ್ದದ ರೂಪ ತುಸು ವ್ಯತ್ಯಾಸವಾಗುವ ಕ್ರಮವಿರುತ್ತದೆ. ಈ ರೀತಿಯಲ್ಲಿ ಸಂಸ್ಕೃತದ ಅನಂತರ ಎಂಬ ಶಬ್ದವು ಅಕಾರವನ್ನು ಕಳೆದುಕೊಂಡು ಕನ್ನಡಕ್ಕೆ ಬಂದು ಸೇರಿಕೊಂಡು ಒಂದು ಹೊಸ ಶಬ್ದ ರಚಿತವಾಗಿದೆ. ನಂತರ ಎಂಬುದು ಸಂಸ್ಕೃತದ ಅನಂತರದಿಂದ ರಚಿತವಾಗಿ ಬಂದ ಹೊಸಶಬ್ದವೆಂದು ತಿಳಿಯೋಣ. ಕನ್ನಡ- ಕನ್ನಡ ಶಬ್ದಕೋಶಗಳಲ್ಲಿ ‘ಅನಂತರ’ ಮತ್ತು ‘ನಂತರ’ ಎಂಬ ಎರಡು ಶಬ್ದಗಳನ್ನೂ ಕಾಣಬಹುದು. ಆದರೆ ಸಂಸ್ಕೃತದ ಶಬ್ದಕೋಶಗಳಲ್ಲಿ ‘ನಂತರ’ ಎಂಬ ಶಬ್ದವನ್ನು ಕಾಣಲಾರೆವು. ನಅಂತ= ಅನಂತ (ಅಂತ್ಯವಿಲ್ಲದ್ದು). ಸಂಸ್ಕೃತದ ‘ಅನಂತ’ ಶಬ್ದವು ಕನ್ನಡದಲ್ಲಿ ಬಳಕೆ ಇದೆ.
ಆದರೆ ‘ನಂತ’ ಎಂಬ ಶಬ್ದವಿಲ್ಲ. (‘ಅನಂತ’ ಎಂದು ಯಾರಿಗಾದರೂ ಹೆಸರಿದ್ದರೆ, ಅವರನ್ನು ಮನೆಯಲ್ಲಿ ಖಾಸಗಿಯಾಗಿ ನಂತೂ ಎಂದು ಅಡ್ಡ ಹೆಸರಿನಿಂದ ಕರೆಯುವುದನ್ನು ಗಮನಿಸಿರ ಬಹುದು. ಅಂದರೆ ‘ಅನಂತ’ ಶಬ್ದದ ‘ಅ’ ಕಾರ ಕಳಚಿಕೊಳ್ಳುವ ಸಂದರ್ಭಕ್ಕಾಗಿ ಹೇಳಿದ್ದು.) ತದ ನಂತರ ಎಂಬ ಶಬ್ದವನ್ನೂ ಕನ್ನಡದಲ್ಲಿ ಬಳಕೆ ಮಾಡುತ್ತಾರೆ. ತತ್+ಅನಂತರ= ತದನಂತರ. ಹಾಗೇ ಅನಂತರ -ನ ಅಂತರ= ಅನಂತರ. ಒಂದರ ಬಳಿಕ ಮತ್ತೊಂದು ಎಂಬ ಅರ್ಥದಲ್ಲಿ ಅನಂತರ/ ನಂತರ ಶಬ್ದ ಬಳಕೆಯಾಗುತ್ತದೆ. ಒಂದು ಕೆಲಸದ ಬಳಿಕ ಇನ್ನೊಂದು ಕೆಲಸವೆಂಬಲ್ಲಿ ‘ಬಳಿಕ’ ಎಂಬುದಕ್ಕೆ ಪರ್ಯಾಯ ಪದವಾಗಿ ಅನಂತರ/ ನಂತರ ಶಬ್ದವನ್ನು ಬಳಸುತ್ತಾರೆ. ಆದರೆ ‘ಅನಂತರ’ ಮತ್ತು ‘ಅನಂತ’ಕ್ಕೆ ಸಂಬಂಧವಿಲ್ಲ. ‘ಅನಂತರ’ ಶಬ್ದದಲ್ಲಿರುವ ‘ಅ’ ಅಕ್ಷರವು ಜನರ ಬಳಕೆಯಲ್ಲಿ ಕಾರಣಾಂತರದಿಂದ ಬಿಟ್ಟು ಹೋಗಿ, ‘ನಂತರ’ ಎಂಬುದೇ ಹೊಸ ಶಬ್ದವಾಗಿ ಶಬ್ದಕೋಶದಲ್ಲೂ ಜ್ಞಾನ ಪಡೆಯಿತು.
ಹಾಗೆಯೇ ಕೊಕ್ಕಡ ಭಟ್ ಅವರು ಸಾಷ್ಟಾಂಗ ಪ್ರಣಾಮ ಮತ್ತು ಶಿರಸಾಷ್ಟಾಂಗ ಪ್ರಣಾಮದ ಬಗ್ಗೆಯೂ ಪ್ರಸ್ತಾಪಿಸಿzರೆ. ಸಾಷ್ಟಾಂಗ ಪ್ರಣಾಮದಲ್ಲಿಯೇ ಶಿರ ಸಾಷ್ಟಾಂಗ ಪ್ರಣಾಮ ಅಡಗಿದೆ. ಹೀಗಾಗಿ ಶಿರ ಸಾಷ್ಟಾಂಗ ಪ್ರಣಾಮ ಎಂದು ಹೇಳಬೇಕಿಲ್ಲ. ತೋಳುಗಳು, ಕಾಲುಗಳು, ಮಂಡಿಗಳು, ಎದೆ, ಶಿರ, ನೇತ್ರ, ಮನಸ್ಸು ಮತ್ತು ಮಾತು ಎಂಬ ಎಂಟು ಅಂಗಗಳಿಂದ ಮಾಡುವ ನಮಸ್ಕಾರ ಅಷ್ಟಾಂಗ ನಮಸ್ಕಾರ. ಪ್ರಕರ್ಷವಾದ ನಮನಗಳು ಪ್ರಣಾಮಗಳು. ಅಷ್ಟಾಂಗ ಎಂದು ಹೇಳಿದ ಮೇಲೆ ಶಿರಸಾ ಅಷ್ಟಾಂಗ= ಶಿರಸಾಷ್ಟಾಂಗ ಎಂದು ಹೇಳುವುದರಲ್ಲಿ ಔಚಿತ್ಯವಿಲ್ಲ. ತಲೆಬಾಗಿ ಅಷ್ಟಾಂಗ ಪ್ರಣಾಮ ಎಂದು ಹೇಳುವ ಅಗತ್ಯವಿಲ್ಲ.