Saturday, 23rd November 2024

Vishweshwar Bhat Column: ಲಾಂಫೇಳಲೋಉಳಲೋಗುಲೊಳುಲೆಪಲುಳೊಳ

ಯಾವ ದೇಶದಲ್ಲಿ ಅತಿ ಹೆಚ್ಚು ಪ್ರಾದೇಶಿಕ ಭಾಷೆಗಳಿರುವವೋ, ಆ ದೇಶದ ಊರುಗಳ ಹೆಸರುಗಳು ಮತ್ತು ಅವುಗಳ
ಅರ್ಥಗಳು ಬಹಳ ವಿಚಿತ್ರವಾಗಿರುತ್ತವೆ ಎಂಬುದು ಸಾಮಾನ್ಯ ನಿಯಮ. ನಮ್ಮ ದೇಶವೂ ಸೇರಿದಂತೆ, ಇದಕ್ಕೆ ಉತ್ತಮ ಉದಾಹರಣೆ ಅಂದ್ರೆ, ಯುರೋಪ್.

ನನ್ನ ಆತ್ಮೀಯ ಸ್ನೇಹಿತರೊಬ್ಬರು ಕೆಲಕಾಲ ಪೋಲ್ಯಾಂಡಿನ ವಿಚಿತ್ರ ಹೆಸರಿನ ಊರಿನಲ್ಲಿದ್ದರು. ಅವರು ೨-೩ ಸಲ ತಾವಿರುವ ಊರಿನ ಹೆಸರನ್ನು ಹೇಳಿದರೂ ನನಗೆ ಮರೆತುಹೋಗುತ್ತಿತ್ತು. ನಾನು ಅವರಿಗೆ ಫೋನ್ ಮಾಡಿದಾಗಲೆಲ್ಲ,
ತಾವಿರುವ ಊರಿನ ಹೆಸರನ್ನು ಹೇಳಿ ಮಾತು ಆರಂಭಿಸುತ್ತಿದ್ದರು. ಹೀಗಾಗಿ ನನಗೆ ಆ ಊರಿನ ಹೆಸರು ಈಗ ಬಾಯಿ ಪಾಠವಾಗಿದೆ. ಅಂದ ಹಾಗೆ, ಆ ಊರಿನ ಹೆಸರನ್ನು Niemyje-Zabki- ನಿಮಿಜ್ ಝಬ್ಕಿ ಎಂದು ಉಚ್ಚರಿಸುತ್ತಾರೆ.

ಈ ಊರು ಬಹಳ ದೊಡ್ಡದೇನಲ್ಲ. ಹೆಚ್ಚೆಂದರೆ ಅಲ್ಲಿ 400 ಜನರಿರಬಹುದು. ಆ ಊರಿನ ಹೆಸರಿನ ಅರ್ಥದಲ್ಲಿ ಒಂದು ತಮಾಷೆಯಿದೆ. ಸ್ಥಳೀಯ ಭಾಷೆಯಲ್ಲಿ ಅದರ ಅರ್ಥ- ‘ನಾನು ನನ್ನ ಹಲ್ಲುಗಳನ್ನು ಉಜ್ಜುವುದಿಲ್ಲ’. ಈ
ಕಾರಣಕ್ಕಾಗಿಯೇ ಈ ಊರಿನಲ್ಲಿ ಹೆಚ್ಚು ಜನರು ಇರಲಿಕ್ಕಿಲ್ಲ ಎಂಬುದು ನನ್ನ ವಾದ. ಇದು ಎಷ್ಟರಮಟ್ಟಿಗೆ ಸತ್ಯವೋ ಗೊತ್ತಿಲ್ಲ. ಕೆಲವು ವರ್ಷಗಳ ಹಿಂದೆ, ನಾನು ಸ್ಪೇನ್‌ಗೆ ಹೋದಾಗ, ಪೂ (Poo) ಎಂಬ ನಗರಕ್ಕೆ ಹೋಗಿದ್ದೆ. ಇಲ್ಲಿನ ಬೀಚ್ ಹೆಸರುವಾಸಿ. ಅದನ್ನು ನೋಡಲು ಜನ ಜಗತ್ತಿನೆಡೆಯಿಂದ ಬರುತ್ತಾರೆ. ಆದರೆ ಯಾರಾದರೂ ಎಲ್ಲಿಗೆ ಹೋಗಿz ಅಥವಾ ಎಲ್ಲಿಂದ ಬಂದಿರಿ ಎಂದು ಕೇಳಿದರೆ, ಈ ಊರಿನ ಹೆಸರನ್ನು ಹೇಳಲು ಯೋಚಿಸಬೇಕು. ಕಾರಣ
ಇಂಗ್ಲಿಷಿನಲ್ಲಿ ‘ಪೂ’ ಅಂದ್ರೆ unpleasant smell ಅಥವಾ dog poo ಅಥವಾ ಮಲ ಎಂದರ್ಥ. ಇಷ್ಟು ಸುಂದರವಾದ ಊರಿಗೆ ಯಾಕಿಷ್ಟು ಹೊಲಸು ಹೆಸರನ್ನು ಇಟ್ಟಿದ್ದಾರೋ ಎಂದು ಎಂಥವರಿಗಾದರೂ ಅನಿಸದೇ ಇರದು.

ಇದೇ ಅರ್ಥ ಕೊಡುವ ಊರು ಫಿನ್‌ಲ್ಯಾಂಡಿನಲ್ಲೂ ಇದೆ. ಫಿನ್ನಿಷ್ ಭಾಷೆಯಲ್ಲಿ ಲೆಮು (Lemu) ಅಂದ್ರೆ ಹೊಲಸು ನಾತ ಎಂದರ್ಥ. ಆದರೂ ಆ ಊರಿಗೆ ಆ ಹೆಸರನ್ನೇ ಇಟ್ಟಿದ್ದಾರೆ.

ನಾನು ವೇಲ್ಸ್ ರಾಜಧಾನಿ ಕಾರ್ಡಿಫ್ ನಲ್ಲಿದ್ದಾಗ, ಯುರೋಪಿನಲ್ಲಿಯೇ ಅತಿ ಉದ್ದವಾದ ಮತ್ತು ಜಗತ್ತಿನಲ್ಲಿ ಎರಡನೇ ಅತಿ‌ ಉದ್ದವಾದ ಹೆಸರಿರುವ ಊರಿಗೆ ಹೋಗಿದ್ದೆ. ಆ ಊರಿನ ಸ್ಪೆಲ್ಲಿಂಗ್‌ನಲ್ಲಿ 58 ಅಕ್ಷರಗಳಿವೆ. ಇದನ್ನು ತಪ್ಪಿಲ್ಲದೇ ಆ ಊರಿನಲ್ಲಿರುವವರ ಪೈಕಿ ಎಷ್ಟು ಜನ ಬರೆಯುತ್ತಾರೋ ಗೊತ್ತಿಲ್ಲ. ಅಂದ ಹಾಗೆ ಆ ಊರಿನ ಹೆಸರು-Llanfairp wllgwyngyllgogerychwyrndrobwllllantysiliogogogoch. ಆ ಊರಿನಲ್ಲಿ ಸುಮಾರು 3000 ಜನರಿದ್ದಾರೆ. ವರ್ಷದಿಂದ ವರ್ಷಕ್ಕೆ ಅಲ್ಲಿನ ಜನಸಂಖ್ಯೆ ಕಮ್ಮಿಯಾಗುತ್ತಿದೆಯಂತೆ. ಅದಕ್ಕೆ ಊರಿನ ಹೆಸರು ಕಾರಣವಿರಲಿಕ್ಕಿಲ್ಲ.

ಅಲ್ಲಿನ ಜನಸಂಖ್ಯೆಯಲ್ಲಿ ಸುಮಾರು ೭೦ರಷ್ಟು ಮಂದಿ ವೆಲ್ಶ್ ಭಾಷಿಕರು. ಇವರಿಗೆ ಇಂಗ್ಲಿಷ್ ಮಾತಾಡಿದರೂ ಅರ್ಥವಾಗುವುದಿಲ್ಲ.‌ ಅಷ್ಟು ಉದ್ದದ ಹೆಸರನ್ನು ಹೇಳುವುದು, ಬರೆಯುವುದು ಕಷ್ಟವೆಂದು Llanfairpwllgwyngyll ಅಥವಾ Llanfair Pwllgwyngyll ಎಂದು ಕಿರಿದುಗೊಳಿಸಲಾಗಿದೆ. ಇತ್ತೀಚೆಗೆ ಮತ್ತಷ್ಟು ಕಿರಿದುಗೊಳಿಸಿ, Llanfairpwll ಅಥವಾ Llanfair PG ಎನ್ನುತ್ತಾರೆ. ಮೊದಲ ಹತ್ತಾರು ಅಕ್ಷರಗಳನ್ನು ಹೇಳಿ, ಮುಂದಿನದನ್ನು ಉಚ್ಚರಿಸಲಾಗದೇ, ತಮಾಷೆಗೆ ಒಳಬಾಯಲ್ಲಿ ‘ಲಾಂ-ಲೆ ಳಲೋಉಳಲೋಗುಲೊಳುಲೆಪಲುಳೊಳಲೆಸ್ಲೋಳಲೆ’ ಎಂದು ಬೇಕಾಬಿಟ್ಟಿ ಹೇಳಿ ನಗುತ್ತಾರೆ.

ಈ ಊರಿಗೆ ಪ್ರತಿವರ್ಷ ಏನಿಲ್ಲವೆಂದರೂ ೨ ಲಕ್ಷ ಪ್ರವಾಸಿಗರು ಆಗಮಿಸುತ್ತಾರೆ. ಅಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಊರಿನ ರೈಲು ನಿಲ್ದಾಣದ ಬೋರ್ಡ್ ಸಹ ಒಂದು. ಅಷ್ಟು ಉದ್ದದ ಹೆಸರಿರುವ ಬೋರ್ಡಿನ ಮುಂದೆ ಎಲ್ಲರೂ ಫೋಟೋ ತೆಗೆಸಿಕೊಳ್ಳುತ್ತಾರೆ. ಈಗಂತೂ ಆ ಜಾಗ ‘ಇನ್ಸ್ಟಾಗ್ರಾಮ್ ಹಾಟ್‌ಸ್ಪಾಟ್’ ಆಗಿಬಿಟ್ಟಿದೆ. ಸುಮಾರು 20 ವರ್ಷಗಳ ಹಿಂದೆ, ಈ ಊರಿನ ವೆಬ್‌ಸೈಟ್ the longest URL on the Internet ಎಂಬ ಅಗ್ಗಳಿಕೆಗೆ ಪಾತ್ರವಾಗಿತ್ತು. ಕೆಲವರು ಈ ಊರಿನ ಹೆಸರನ್ನು ಕಿರಿದುಗೊಳಿಸಬೇಕು ಎಂದು ಆಗ್ರಹಿಸಿದರೆ, ಯಾವ ಕಾರಣಕ್ಕೂ ಅಂಥ ಪ್ರಯತ್ನ ಮಾಡಬಾರದು, ಅದು ನಮ್ಮೂರಿನ ಹೆಮ್ಮೆಯ ಪ್ರತೀಕ ಎಂದು ಇನ್ನು ಕೆಲವರು ವಾದಿಸುತ್ತಾರೆ. ಹೀಗಾಗಿ ಆ ಹೆಸರು ಹಾಗೇ ಉಳಿದಿದೆ.