ವಾಷಿಂಗ್ಟನ್ : ಜಾರ್ಜಿಯಾ ಮತ್ತು ಮಿಚಿಗನ್ ರಾಜ್ಯಗಳಲ್ಲಿ ಮತ ಎಣಿಕೆ ಸ್ಥಗಿತಗೊಳಿಸುವಂತೆ ಡೊನಾಲ್ಡ್ ಟ್ರಂಪ್ ಮಾಡಿ ಕೊಂಡಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಈ ಮೂಲಕ ಅಮೆರಿಕದ ಅಧ್ಯಕ್ಷ ಗಾದಿಗೆ ಮರಳಲು ಹಾಲಿ ಅಧ್ಯಕ್ಷ ಟ್ರಂಪ್ಗೆ ಇದ್ದ ಕೊನೆಯ ಅವಕಾಶ ಮುಚ್ಚಿದಂತಾಗಿದೆ. ಈ ಮಧ್ಯೆ ನೆವಾಡಾದಲ್ಲಿ ಕಾನೂನು ಸಮರಕ್ಕೆ ಟ್ರಂಪ್ ಬಣ ಧುಮುಕಿದೆ.
ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ 264 ಮತ ಪಡೆದಿದ್ದರೆ, ಟ್ರಂಪ್ ಬುಟ್ಟಿಯಲ್ಲಿ 214 ಮತಗಳಷ್ಟೇ ಇವೆ. ಬೈಡನ್ ಶೇಕಡ 50.5 ಮತ ಪಡೆದಿದ್ದರೆ, 47.9 ಮತಗಳನ್ನು ಪಡೆದಿರುವ ಟ್ರಂಪ್ ಹಿನ್ನಡೆಯಲ್ಲಿದ್ದಾರೆ.
ಜಾರ್ಜಿಯಾದಲ್ಲಿ ತಡವಾಗಿ ಬಂದ 53 ಬ್ಯಾಲೆಟ್ಗಳನ್ನು ಸಕಾಲಕ್ಕೆ ಬಂದ ಬ್ಯಾಲೆಟ್ಗಳ ಜತೆ ಮಿಶ್ರ ಮಾಡಲಾಗಿದೆ ಎಂದು ಟ್ರಂಪ್ ಬಣ ಆಪಾದಿಸಿತ್ತು. ಮಿಚಿಗನ್ನಲ್ಲಿ ಮತ ಎಣಿಕೆ ಸ್ಥಗಿತಗೊಳಿಸುವಂತೆ ಕೋರಿತ್ತು. ಆದರೆ ಎರಡೂ ಮನವಿಗಳನ್ನು ರಾಜ್ಯ ನ್ಯಾಯಾಧೀಶರು ತಿರಸ್ಕರಿಸಿದ್ದಾರೆ.
ನೆವಾಡಾದಲ್ಲಿ ಬೈಡನ್ ಹಾಗೂ ಜಾರ್ಜಿಯಾದಲ್ಲಿ ಟ್ರಂಪ್ ಅಲ್ಪ ಮುನ್ನಡೆಯಲ್ಲಿದ್ದಾರೆ. ಮಿಚಿಗನ್ನಲ್ಲಿ ಬೈಡನ್ ಗೆಲುವು ಬಹುತೇಕ ಖಚಿತವಾಗಿದೆ. 15 ಅಧ್ಯಕ್ಷೀಯ ಮತಗಳಿರುವ ಉತ್ತರ ಕ್ಯಾಲಿಫೋರ್ನಿಯಾ ಮತ್ತು ಪೆನ್ಸಲ್ವೇನಿಯಾದಲ್ಲಿ ಟ್ರಂಪ್ ಮುನ್ನಡೆಯಲ್ಲಿದ್ದಾರೆ.