Saturday, 23rd November 2024

ಆರೋಗ್ಯ ಕಾಳಜಿಯ ಆದೇಶ ಅಪಸ್ವರ ಸರಿಯಲ್ಲ

ದೀಪಾವಳಿ ಎಂದೊಡನೆ ಎಲ್ಲರಿಗೂ ಥಟ್ ಎಂದು ನೆನಪಾಗುವುದು ಪಟಾಕಿ ಸದ್ದು. ಆದರೆ ಈ ಬಾರಿ ಪಟಾಕಿ ಸದ್ದಿಗೆ ಕಡಿವಾಣ
ಬೀಳಲಿದೆ. ರಾಜ್ಯ ಸರಕಾರ ರಾಜ್ಯದಲ್ಲಿ ಸಂಪೂರ್ಣವಾಗಿ ಪಟಾಕಿ ನಿಷೇಧಿಸಲು ಮುಂದಾಗಿದೆ.

ಈಗಾಗಲೇ ರಾಜಸ್ಥಾನ, ದೆಹಲಿ, ಒಡಿಶಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಪಟಾಕಿ ನಿಷೇಧಕ್ಕೆ ಕ್ರಮಕೈಗೊಳ್ಳಲಾಗಿದೆ. ಇದೀಗ
ರಾಜ್ಯದಲ್ಲಿಯೂ ನಿಷೇಧ ಘೋಷಿಸಲು ನಿರ್ಣಯಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಈ
ಬೆಳವಣಿಗೆಯಿಂದಾಗಿ ಆಗಮಿಸಲಿರುವ ದೀಪಾವಳಿಯಲ್ಲಿ ಪಟಾಕಿ ಸದ್ದು ಮೊಳಗುವುದಕ್ಕೆ ಕಡಿವಾಣ ಬೀಳಲಿದೆ.

ದೇಶದಲ್ಲಿ ಹಾಗೂ ರಾಜ್ಯದಲ್ಲಿ ಹೆಚ್ಚಾಗಿರುವ ಮಾಲಿನ್ಯ ತಡೆ ನಿಟ್ಟಿನಲ್ಲಿ ಪಟಾಕಿ ನಿಷೇಧ ಮಹತ್ವದ ಆದೇಶ. ವಾಯುಮಾಲಿನ್ಯ, ಶಬ್ದ ಮಾಲಿನ್ಯದ ಜತೆಗೆ ಕರೋನಾ ಸಮಸ್ಯೆಯಿಂದಾಗಿ ಉಸಿರಾಟದ ಸಮಸ್ಯೆಗಳು ಹೆಚ್ಚುತ್ತಿವೆ. ಇತ್ತೀಚೆಗೆ ಅಮೆರಿಕದ ಟ್ರಂಪ್ ಸಹ ಭಾರತದ ಸ್ವಚ್ಛತೆ ಬಗ್ಗೆ ಹೀಯಾಳಿಸಿದ್ದನ್ನು ಗಮನಿಸಬಹುದು. ಆದ್ದರಿಂದ ಇಂದಿನ ಸ್ಥಿತಿಯಲ್ಲಿ ಪಟಾಕಿ ನಿಷೇಧ ಮಹತ್ವದ ನಿರ್ಣಯ. ಇದು ಕೇವಲ ಸರಕಾರದ ನಿರ್ಣಯ, ಆದೇಶ ಮಾತ್ರವಲ್ಲ ಪ್ರತಿಯೊಬ್ಬರ ಜವಾಬ್ದಾರಿ. ಪಟಾಕಿ ನಿಷೇಧ ಸರಕಾರದ ಜವಾಬ್ದಾರಿಯಾದರೂ, ಅದನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಜನರ ಜವಾಬ್ದಾರಿ.

ಸರಕಾರದ ಈ ದಿಢೀರ್ ನಿರ್ಧಾರಕ್ಕೆ ಪಟಾಕಿ ತಯಾರಕರು, ಮಾರಾಟಗಾರರಿಂದ ಒಂದಷ್ಟು ವಿರೋಧಗಳು ವ್ಯಕ್ತವಾಗುವುದು ಸಹಜ. ಆದರೆ ಇಡೀ ರಾಜ್ಯದ ಜನತೆಯ ಆರೋಗ್ಯ ಕಾಳಜಿಯ ದೃಷ್ಟಿಯಿಂದ ಇದೊಂದು ಮಹತ್ವದ ಬೆಳವಣಿಗೆ.