ಆಂದೋಲನ
ಎಸ್.ಶ್ರೀನಿವಾಸ್
ಅ.ನ.ಕೃಷ್ಣರಾವ್, ಮ.ರಾಮಮೂರ್ತಿ, ಕೆ.ಪ್ರಭಾಕರ್ ಮುಂತಾದವರು 1962ರಲ್ಲಿ ‘ಕರ್ನಾಟಕ ಸಂಯುಕ್ತ ರಂಗ’ ಸ್ಥಾಪಿಸುವ ಮೂಲಕ ಕರ್ನಾಟಕದಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ಬೆಂಗಳೂರಿನಲ್ಲಿ ಕನ್ನಡ ಚಳವಳಿಗೆ ನಾಂದಿ ಹಾಡಿದರು. ಅಲ್ಲಿಗೆ, ಕನ್ನಡ ಚಳವಳಿ ಪ್ರಾರಂಭವಾಗಿ ಈ ವರ್ಷಕ್ಕೆ 62 ವರ್ಷವಾಗಲಿದೆ.
ಕನ್ನಡ ಭಾಷೆಗೆ ಮತ್ತು ಕನ್ನಡಿಗರಿಗೆ ಅನ್ಯಾಯವಾದಾಗೆಲ್ಲ ಅದರ ವಿರುದ್ಧ ದನಿಯೆತ್ತಿ, ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಕನ್ನಡ ಚಳವಳಿಗಾರರು ಪ್ರಾಮಾಣಿಕವಾಗಿ ಮಾಡಿಕೊಂಡು ಬಂದಿದ್ದಾರೆ; ಆದರೆ ಇತ್ತೀಚಿನ ಕೆಲ ದಶಕಗಳಿಂದ ಕೆಲ ಚಳವಳಿಗಾರರ ನಡೆ ಹಾಗೂ ಧೋರಣೆ ನೋಡಿದರೆ, ಅವರು ತಮ್ಮ ಮುಖ್ಯಗುರಿ ಯನ್ನೇ ಮರೆತಂತೆ ತೋರುತ್ತದೆ.
ಯಾವುದೇ ಗುರಿಯನ್ನು ತಲುಪಬೇಕಾದರೆ ವಿಷಯದ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಅರಿತಿರಬೇಕು,
ಇಲ್ಲದಿದ್ದರೆ ನಮ್ಮ ಎಲ್ಲ ಪ್ರಯತ್ನವೂ ವಿಫಲವಾಗುವುದು. ಮೊದಲನೆಯದಾಗಿ, ಹಿಂದಿಯ ಹೇರಿಕೆಯಾಗುತ್ತಿದೆ ಎಂಬ ಭ್ರಮೆಯನ್ನು ನಮ್ಮ ಚಳವಳಿಗಾರರು ಹೊಂದಿದ್ದಾರೆ. ಆದರೆ, ಕರ್ನಾಟಕದಲ್ಲಿನ ಕನ್ನಡೇತರರು ಕನ್ನಡ ವನ್ನು ಕಲಿಯಲು ಔದಾಸೀನ್ಯವನ್ನು ತೋರುತ್ತಿರುವುದು ಮತ್ತು ಕನ್ನಡಿಗರಿಗೆ ಕನ್ನಡದಲ್ಲಿ ಸೇವೆಗಳು ದೊರಕ ದಿರುವುದು ಇಲ್ಲಿನ ಕಹಿವಾಸ್ತವವೆನ್ನಬೇಕು.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಹಿಂದಿ ಭಾಷೆಯಲ್ಲಿ ಮಾತಾಡುವವರೆಲ್ಲರ ಮಾತೃಭಾಷೆ ಹಿಂದಿಯಲ್ಲ. ನಮ್ಮಲ್ಲಿ ನೆಲೆಸಿರುವ ಉತ್ತರ ಭಾರತ ಮೂಲದ ಎಲ್ಲರಿಗೂ ಹಿಂದಿ ಬರುತ್ತದೆ ಹಾಗೂ ನಮ್ಮೊಂದಿಗೆ ಮಾತ
ನಾಡುವಾಗ ಅವರು ಹಿಂದಿಯಲ್ಲಿ ಮಾತನಾಡುತ್ತಾರೆ. ಇಂಥವರಲ್ಲಿ ಉತ್ತರಪ್ರದೇಶ ಮತ್ತು ಬಿಹಾರದ ಜನರು
ಮಾತ್ರವಲ್ಲದೆ ಬೆಂಗಾಲಿಗಳು, ಪಂಜಾಬಿಗಳು, ಗುಜರಾತಿಗಳೂ ಇದ್ದಾರೆ ಎಂಬುದನ್ನು ನಾವು ಅರಿಯಬೇಕು.
ಉತ್ತರ ಭಾರತೀಯರಷ್ಟೇ ಕನ್ನಡ ಕಲಿಯಲು ಆಸಕ್ತಿ ತೋರುತ್ತಿಲ್ಲ ಎಂಬುದು ತಪ್ಪುಕಲ್ಪನೆ; ಬೆಂಗಳೂರಿನಲ್ಲಿ
ದಶಕದಿಂದ ವಾಸಿಸುತ್ತಿರುವ ತಮಿಳರು ಮತ್ತು ಮಲಯಾಳಿಗಳಲ್ಲಿ ಅನೇಕರು ಕೂಡ ಕನ್ನಡದಲ್ಲಿ ಮಾತನಾಡು ವುದಿಲ್ಲ.
ದಶಕಗಳ ಹಿಂದೆ ಬೆಂಗಳೂರಿನಲ್ಲಿ, ಮನೆಗಳಲ್ಲಿ ಗೊಂಬೆಗಳನ್ನು ಕೂರಿಸುವ ಮೂಲಕ ದಸರಾ ಹಬ್ಬವನ್ನು
ಸಂಭ್ರಮಿಸುತ್ತಿದ್ದುದುಂಟು; ಆದರೆ ಇತ್ತೀಚೆಗೆ ನೂರಾರು ಕಡೆಗಳಲ್ಲಿ ದುರ್ಗಾದೇವಿಯ ಮೂರ್ತಿಯನ್ನು
ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿ ಅನೇಕ ದಿನಗಳವರೆಗೆ ಬೇರೆ ಭಾಷೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸುವುದನ್ನು ನಾವು ಕಾಣುತ್ತಿದ್ದೇವೆ. ಮಾತ್ರವಲ್ಲ, ದೇವಿಯ ಮೂರ್ತಿಯನ್ನು ತಯಾರಿಸುವ ಕಲಾವಿದ,
ಪೂಜೆಮಾಡುವ ಪುರೋಹಿತ, ಪ್ರಸಾದ ತಯಾರಿಸುವ ಬಾಣಸಿಗರು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ
ಪಾಲ್ಗೊಳ್ಳುವ ಸಂಗೀತಗಾರರನ್ನೂ ತಮ್ಮ ರಾಜ್ಯದಿಂದಲೇ ಆಮಂತ್ರಿಸುತ್ತಾರೆ.
ಕಾರ್ಯಕ್ರಮ ಮುಗಿದ ನಂತರ ಮೂರ್ತಿಯನ್ನು ಬೆಂಗಳೂರಿನ ಅಲಸೂರು ಕೆರೆಗೆ ಹಾಕಿ, ಕೆರೆ ಸ್ವಚ್ಛಗೊಳಿಸುವ ಕೆಲಸವನ್ನು ಕನ್ನಡಿಗರಿಗೆ ಕೊಡುತ್ತಾರೆ. ನೆನಪಿರಲಿ, ಇದನ್ನೆಲ್ಲ ಮಾಡುವವರು ಹಿಂದಿ ಭಾಷಿಕರಲ್ಲ. ಹಾಗೆಯೇ ಹೊರರಾಜ್ಯದಿಂದ ಬಂದ ಎಲ್ಲ ಜನರೂ ಕನ್ನಡ ವಿರೋಧಿಗಳು ಎಂದು ಸಾರಾಸಗಟಾಗಿ ದೂಷಿಸುವುದು
ಸರಿಯಲ್ಲ. ಏಕೆಂದರೆ, ಮಾರವಾಡಿ ವ್ಯಾಪಾರಸ್ಥರು ಮತ್ತು ಮಲಯಾಳಿ ಮುಸಲ್ಮಾನ ವ್ಯಾಪಾರಸ್ಥರು ಕನ್ನಡದ
ಗ್ರಾಹಕರಿಗೆ ಕನ್ನಡದಲ್ಲಿಯೇ ಸೇವೆ ಒದಗಿಸುತ್ತಾರೆ.
ಆದ್ದರಿಂದ ಕನ್ನಡ ಚಳವಳಿಗಾರರು ಮುಖ್ಯವಾಗಿ, ಬೆಂಗಳೂರಿನಲ್ಲಿರುವ ಅನ್ಯಭಾಷಿಕರ ಅಂಕಿ-ಅಂಶವನ್ನು
ಮೊದಲು ಪಡೆದುಕೊಳ್ಳಬೇಕು. ಅಂದರೆ, ಯಾವ ಭಾಷೆ ಮಾತಾಡುವವರು ಯಾವ ಪ್ರದೇಶದಲ್ಲಿ ಎಷ್ಟು ಸಂಖ್ಯೆ
ಯಲ್ಲಿದ್ದಾರೆ, ಇವರಲ್ಲಿ ಎಷ್ಟು ಜನ ಕನ್ನಡ ಕಲಿತಿದ್ದಾರೆ ಎಂಬ ಮಾಹಿತಿ. ಇದು ಲಭ್ಯವಾದಲ್ಲಿ, ಯಾವ ರೀತಿಯ
ಕ್ರಮ ಕೈಗೊಂಡರೆ ಇವರು ಕನ್ನಡವನ್ನು ಕಲಿಯುವಂತೆ ಮಾಡಬಹುದು ಎಂದು ಯೋಜಿಸಬಹುದು. ರಸ್ತೆಯಲ್ಲಿ
ಪಾನಿಪುರಿ ಮಾರುವಾತ ಕನ್ನಡದಲ್ಲಿ ಮಾತನಾಡದಿದ್ದರೂ ಅವನಿಂದ ಕನ್ನಡಕ್ಕೆ ಏನೂ ಹಾನಿಯಿಲ್ಲ; ಆದರೆ
ಕಂಪನಿಗಳಲ್ಲಿ ಕೆಲಸ ಮಾಡುವ ಶ್ರೀಮಂತ ವಲಸೆಗಾರರು ಕಾಯಮ್ಮಾಗಿ ಬೆಂಗಳೂರಿನಲ್ಲಿ ನೆಲೆಸಲು ತೀರ್ಮಾನಿಸಿದ ನಂತರವೂ ಕನ್ನಡವನ್ನು ಕಲಿಯದಿರುವ, ಕನ್ನಡಿಗರೆಡೆಗೆ ತಾತ್ಸಾರ ತೋರುವ ಹಾಗೂ ತಮ್ಮ ಮಕ್ಕಳಿಗೂ ಶಾಲೆಗಳಲ್ಲಿ ಕನ್ನಡವನ್ನು ಕಲಿಸಬಾರದೆಂದು ನ್ಯಾಯಾಲಯದಲ್ಲಿ ಅರ್ಜಿ ಹಾಕುವ ಧೋರಣೆಯೇ ಕನ್ನಡಿಗರಿಗೆ ಭಾರಿ ಕಿರಿಕಿರಿ ಉಂಟುಮಾಡುತ್ತಿದೆ.
ಸುಮಾರು ೮೦-೯೦ರ ದಶಕದವರೆಗೂ ಬೆಂಗಳೂರಿನಲ್ಲಿ ಕನ್ನಡಿಗರ ಮೇಲೆ ತಮಿಳರ ದಬ್ಬಾಳಿಕೆ ನಡೆಯುತ್ತಿತ್ತು.
ಅಲಸೂರು, ರಾಮಚಂದ್ರಾಪುರ, ಶ್ರೀರಾಮಪುರ ಮುಂತಾದ ಪ್ರದೇಶಗಳಲ್ಲಿ ‘ದ್ರಾವಿಡ ಕಳಗಂ’ ಬಾವುಟ ರಾರಾ ಜಿಸುತ್ತಿತ್ತು. ಆ ತಲೆಮಾರಿನ ಅನೇಕ ತಮಿಳರು ಕನ್ನಡವನ್ನು ಕಲಿಯದೇ, ತಮಿಳು ಮತ್ತು ಇಂಗ್ಲಿಷ್
ಮೂಲಕ ವೇ ಬೆಂಗಳೂರಿನಲ್ಲಿ ಬದುಕುತ್ತಿದ್ದರು. ಕಾಲಕ್ರಮೇಣ ಕನ್ನಡಿಗರ ಪ್ರಭಾವ ಹೆಚ್ಚಾದಂತೆ, ಕನ್ನಡ-ವಿರೋಧಿ ತಮಿಳರೆಲ್ಲರೂ ಪ್ರಗತಿಪರ/ದಲಿತಪರ ಮುಖವಾಡವನ್ನು ಧರಿಸಲಾರಂಭಿಸಿದರು.
ಪ್ರಸ್ತುತ ಕೆಲ ಚಳವಳಿಗಾರರು ತಾವು ದ್ರಾವಿಡರು, ಪೆರಿಯಾರ್ ತಮ್ಮ ಆದರ್ಶ ಎಂದು ಬಿಂಬಿಸಿಕೊಳ್ಳುತ್ತಾರೆ. ಆದರೆ ತಮಿಳರು, ಅದರಲ್ಲೂ ದ್ರಾವಿಡ ಕಳಗಂನ ಸದಸ್ಯರು ನಮ್ಮ ಬಸವೇಶ್ವರರನ್ನು ‘ಆದರ್ಶ ಪುರುಷ’ನೆಂದು ಒಪ್ಪುವುದಿಲ್ಲ. ಮೂಲತಃ ಅವರೊಬ್ಬ ಬ್ರಾಹ್ಮಣ ಎಂಬುದು ಇದಕ್ಕೆ ಕಾರಣ. ಒಂದೆಡೆ ತನ್ನ ಜನಿವಾರವನ್ನು ತ್ಯಜಿಸಿ, ಬ್ರಾಹ್ಮಣ ಹಾಗೂ ದಲಿತರ ನಡುವೆ ಮದುವೆ ಮಾಡಿಸಿದ ಬಸವಣ್ಣನಾದರೆ, ಮತ್ತೊಂದೆಡೆ ತನ್ನ ಮುಸಲ್ಮಾನ
ಶಿಷ್ಯನಿಗೆ ಜನಿವಾರ ಹಾಕಿದ ಗೋವಿಂದ ಭಟ್ಟ- ಇದು ಕರ್ನಾಟಕದ ಬ್ರಾಹ್ಮಣರ ಪ್ರಗತಿಪರ ಚಿಂತನೆಯ ಪರಿ.
ಆದ್ದರಿಂದಲೇ, ಬಿಜಾಪುರದ ಸುಲ್ತಾನನು ವ್ಯಾಸರಾಯರನ್ನು, ಅದೋನಿಯ ಸುಲ್ತಾನನು ರಾಘವೇಂದ್ರ ಸ್ವಾಮಿ ಗಳನ್ನು ಹಾಗೂ ಹೈದರಾಲಿ-ಟಿಪ್ಪು ಸುಲ್ತಾನರು ಶೃಂಗೇರಿ ಸ್ವಾಮಿಗಳನ್ನು ಪೂಜ್ಯ ಭಾವನೆಯಿಂದ
ಕಾಣು ತ್ತಿದ್ದುದು. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಗಾಂಧೀಜಿ, ದಲಿತರ ಬಗ್ಗೆ ದನಿಯೆತ್ತುವ ಮೊದಲೇ
ಕರ್ನಾಟಕದ ಕುದ್ಮಲ್ ರಂಗರಾವ್ ಹಾಗೂ ಗೋಪಾಲಸ್ವಾಮಿ ಅಯ್ಯರ್ ದಲಿತರ ಏಳಿಗೆಗಾಗಿ ತಮ್ಮ ಜೀವನವನ್ನು
ಮುಡಿಪಾಗಿಟ್ಟಿ ದ್ದರು. ಆದ್ದರಿಂದ ಚಳವಳಿಗಾರರು ಎಲ್ಲ ಸಮುದಾಯದ ಪ್ರಭಾವಶಾಲಿ ವ್ಯಕ್ತಿಗಳನ್ನು ಕನ್ನಡದ
ಕೆಲಸಕ್ಕೆ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಯೋಚಿಸಬೇಕು; ಪೆರಿಯಾರ್ರನ್ನು ದರಿಯಾಗಿಟ್ಟುಕೊಳ್ಳುವ
ಬದಲು ಬಸವ, ಕನಕ ಹಾಗೂ ಕುವೆಂಪುರನ್ನು ಆದರ್ಶವಾಗಿ ಪರಿಗಣಿಸಬೇಕು.
ಇವರೆಲ್ಲ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದಲ್ಲದೆ ಮೌಢ್ಯ, ಅಸಮಾನತೆಯ ವಿರುದ್ಧ ದನಿಯೆತ್ತಿದ ಕನ್ನಡದ ಪ್ರವಾದಿಗಳೆಂಬುದನ್ನು ಮರೆಯಬಾರದು. ಪ್ರಸ್ತುತ ಬೆಂಗಳೂರಿನಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ
ಬಾಂಗ್ಲಾದೇಶೀಯರು ವಾಸಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರದವರೇ ಅವರ ವಿರುದ್ಧ ಯಾವುದೇ ಕ್ರಮ
ಕೈಗೊಳ್ಳುತ್ತಿಲ್ಲ. ಹೀಗಿರುವಾಗ, ಭಾರತದ ಇತರೆ ಭಾಗಗಳಿಂದ ಬೆಂಗಳೂರಿಗೆ ಬರುವ ಜನರನ್ನು ನಾವು
ತಡೆಯ ಲಾದೀತೇ? ಹಿಂದಿ ಭಾಷೆಯನ್ನು ವಿರೋಧಿಸಿದ್ದರಿಂದ ಇದುವರೆಗೂ ಹೇಳಿಕೊಳ್ಳುವಂಥ ಪರಿಣಾಮ ವಾಗಿಲ್ಲ.
ಆದ್ದರಿಂದ ಹಿಂದಿಯನ್ನು ವಿರೋಧಿಸುವ ಬದಲು ಕನ್ನಡವನ್ನು ಬೆಳೆಸುವೆಡೆಗೆ ನಮ್ಮ ಗಮನ ಹರಿಸಬೇಕಿದೆ. ಹಾಗೆ ನೋಡಿದರೆ, ಪಂಜಾಬಿಗಳು, ಗುಜರಾತಿ ಗಳು, ಮಾರವಾಡಿಗಳು, ಬೆಂಗಾಲಿಗಳು ಮುಂತಾದವರು ಹಿಂದಿಯ ನೆರವಿನಿಂದಲೇ ಬೆಂಗಳೂರು, ಮುಂಬೈ ಮುಂತಾದೆಡೆ ನೆಲೆಸಲು ಸಾಧ್ಯವಾಗಿದೆ. ಈ ನಗರಗಳಲ್ಲಿ ತಂತಮ್ಮ ಭಾಷೆಯನ್ನು ಬಳಸಿ ಬದುಕಲು ಅವರಿಗೆ ಆಗುತ್ತಿರಲಿಲ್ಲ. ಅದೇ ರೀತಿ, ನಮ್ಮ ಕರಾವಳಿ ಕನ್ನಡಿಗರು ಕೂಡ ಮುಂಬೈ ಮುಂತಾದೆಡೆ ವ್ಯಾಪಾರ-ವ್ಯವಹಾರ ಮಾಡಲು ಹಿಂದಿ ನೆರವಾಗಿದೆ. ಮುಂಬೈನಲ್ಲಿ ಹಿಂದಿ ಚಿತ್ರೋದ್ಯಮವು ಅನೇಕ ಮರಾಠಿಗರಿಗೆ ಬದುಕು ಮತ್ತು ಕೀರ್ತಿಯನ್ನು ಕೊಟ್ಟಿದೆ, ಲತಾ ಮುಂಗೇಶ್ಕರ್ ಇದಕ್ಕೊಂದು ಮುಖ್ಯ ಉದಾಹರಣೆ. ಮರಾಠಿ ಭಾಷಿಕರು ಹಿಂದಿ ಬಲ್ಲವರಾಗಿದ್ದ ಕಾರಣ ಇದು ಸಾಧ್ಯವಾಗಿದೆ.
ನಮ್ಮವರೇ ಆದ ಶಂಕರ್ನಾಗ್ ಅವರು ‘ಮಾಲ್ಗುಡಿ ಡೇಸ್’ ಎಂಬ ಧಾರಾವಾಹಿಯನ್ನು ಹಿಂದಿಯಲ್ಲಿ ನಿರ್ದೇಶಿಸಿ ದಾಗ ಕನ್ನಡದ ಅನೇಕ ಕಲಾವಿದರಿಗೆ ವೃತ್ತಿ ಹಾಗೂ ವೇದಿಕೆಯನ್ನು ಒದಗಿಸಿದ್ದನ್ನು ಮರೆಯಲಾದೀತೇ?
ಆದ್ದರಿಂದ ಹಿಂದಿ ಭಾಷೆಯನ್ನು ತಮಿಳರಂತೆ ದ್ವೇಷಿಸುವ ಬದಲು, ನಮ್ಮಲ್ಲಿ ನೆಲೆಸಿರುವ ಕನ್ನಡೇತರರಿಗೆ ಕನ್ನಡ ಕಲಿಸುವೆಡೆಗೆ ಗಮನಹರಿಸಬೇಕಾಗಿದೆ. ಪ್ರಸ್ತುತ ಎಲ್ಲ ರಾಷ್ಟ್ರೀಯ ಮಾಧ್ಯಮಗಳೂ ಕನ್ನಡ ಚಳವಳಿಗಾರರನ್ನು ‘ಹಿಂದಿ ವಿರೋಧಿಗಳು’ ಎಂದು ಬಿಂಬಿಸುತ್ತಿರುವಾಗ, “ಇಲ್ಲ, ನಾವು ಕನ್ನಡಿಗರು ತ್ರಿಭಾಷಾ ಸೂತ್ರವನ್ನು ಸ್ವಾಗತಿ ಸುತ್ತೇವೆ; ಹಿಂದಿ ಸಂಪರ್ಕ ಭಾಷೆ ಯಾಗಿ ಭಾರತೀಯರನ್ನು ಒಂದುಗೂಡಿಸಿರುವುದರಿಂದ ನಾವು ಹಿಂದಿಯನ್ನು ವಿರೋಧಿಸುವುದಿಲ್ಲ; ನಮ್ಮಲ್ಲಿ ನೆಲೆಸಿರುವ ಕನ್ನಡೇತರರು ಕನ್ನಡದ ಬಗ್ಗೆ ತಿರಸ್ಕಾರದಿಂದ ನೋಡುವ, ಕನ್ನಡವನ್ನು ಕಲಿಯದಿರುವ ಬಗ್ಗೆ ಹಾಗೂ ಕನ್ನಡಿಗರಿಗೆ ಕನ್ನಡದಲ್ಲಿ ಸೇವೆ ಸಿಗದಿರುವುದರ ಬಗ್ಗೆ ನಮ್ಮ ವಿರೋಧವಿರುವುದು” ಎಂದು ನಮ್ಮ ನಿಲುವನ್ನು ಪ್ರದರ್ಶಿಸಿದರೆ ಕನ್ನಡ ವಿರೋಧಿಗಳೆಲ್ಲರೂ ತಬ್ಬಿಬ್ಬಾಗುತ್ತಾರೆ.
ನಾವು ಹಿಂದಿಯನ್ನು ದ್ವೇಷಿಸುತ್ತೇವೆ ಎಂದರೆ, ಹಿಂದಿ ಮಾತಾಡುವವರು ಕನ್ನಡವನ್ನು ದ್ವೇಷಿಸಲು ಶುರುಮಾಡು ತ್ತಾರೆ. ಆದ್ದರಿಂದ, ಹಿಂದಿಯನ್ನು ನಾವು ಸಂಪರ್ಕ ಭಾಷೆಯಾಗಿ ಸ್ವಾಗತಿಸುತ್ತೇವೆ ಎಂದರೆ, ಇಲ್ಲಿ ವಾಸಿಸುವ ಕನ್ನಡ ಕಲಿಯದ ಜನರಿಗೂ ಹೊರಗಿನವರ ಸಹಾನುಭೂತಿ ಇಲ್ಲದಂತಾಗುತ್ತದೆ ಹಾಗೂ ಕನ್ನಡವನ್ನು ವಿರೋಧಿಸುವು ದನ್ನು ಅವರು ಬಿಡಬೇಕಾಗುತ್ತದೆ.
ಒಂದಷ್ಟು ಅಪವಾದಗಳನ್ನು ಹೊರತುಪಡಿಸಿದರೆ, ಪ್ರಸ್ತುತ ಎಲ್ಲ ರಾಜಕೀಯ ಪಕ್ಷಗಳ ಸದಸ್ಯರು ಬಹುತೇಕವಾಗಿ ಇತರ ಪಕ್ಷದಲ್ಲೂ ಹಿಂದೊಮ್ಮೆ ಗುರುತಿಸಿಕೊಂಡಿದ್ದಾರೆ ಹಾಗೂ ಯಾವ ಪಕ್ಷವೂ ಸಿದ್ಧಾಂತದ ಮೇಲೆ ನಡೆಯು ತ್ತಿಲ್ಲ. ಅಲ್ಲದೆ ಕನ್ನಡದ ಬಗ್ಗೆ ಅಭಿಮಾನವಿರುವ ಜನರು ಎಲ್ಲ ಪಕ್ಷದಲ್ಲೂ ಇದ್ದಾರೆ. ಹಾಗಾಗಿ ಕನ್ನಡ ಚಳವಳಿ ಗಾರರು ಒಂದು ಪಕ್ಷದೊಂದಿಗೆ ಗುರುತಿಸಿಕೊಂಡು ಇನ್ನೊಂದನ್ನು ವಿರೋಧಿಸುವುದರಿಂದ, ಕನ್ನಡದ ಕೆಲಸಕ್ಕೆ ಧಕ್ಕೆಯಾಗುತ್ತದೆ. ಆದ್ದರಿಂದ ಯಶಸ್ಸನ್ನು ಪಡೆಯಬೇಕಾದರೆ ಕನ್ನಡ ಚಳವಳಿಗಾರರು ಒಂದು ಲಕ್ಷ್ಯವ ನ್ನಷ್ಟೇ ಇಟ್ಟುಕೊಂಡು ಹೋರಾಡಬೇಕು. ಅದೇನೆಂದರೆ- ಕರ್ನಾಟಕದಲ್ಲಿ ಕನ್ನಡಕ್ಕೆ ಸಾರ್ವಭೌಮತೆಯನ್ನು ತಂದು ಕೊಡುವುದು.
(ಲೇಖಕರು ಇತಿಹಾಸಕಾರರು ಹಾಗೂ
ಸಂಶೋಧಕರು)
ಇದನ್ನೂ ಓದಿ: Bigg Boss Kannada 11: ಬಿಗ್ ಬಾಸ್ನಲ್ಲಿ ರಮ್ಮಿ ಯಾಕೆ? ಸೋಷಿಯಲ್ ಮೀಡಿಯಾದಲ್ಲಿ ಕಾವೇರಿದ ಚರ್ಚೆ