ನವದೆಹಲಿ: ಒಲಿಂಪಿಯನ್ ಕುಸ್ತಿಪಟು ವಿನೇಶ್ ಫೋಗಟ್(Vinesh Phogat) ಅವರಿಗೆ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ) ನೋಟಿಸ್ ಜಾರಿಗೊಳಿಸಿದೆ. ಜತೆಗೆ ಮುಂದಿನ 14 ದಿನಗಳಲ್ಲಿ ಈ ನೋಟಿಸ್ಗೆ ಉತ್ತರಿಸಬೇಕು ಎಂದೂ ಸೂಚಿಸಲಾಗಿದೆ. ಚಲನವಲನ ಮಾಹಿತಿಯನ್ನು ನಿಗದಿತ ಅವಧಿಯಲ್ಲಿ ನೀಡುವಲ್ಲಿ ವಿಫಲರಾದ ಕಾರಣ ಅವರಿಗೆ ಈ ನೋಟಿಸ್ ನೀಡಲಾಗಿದೆ.
ನಾಡಾದಲ್ಲಿ(NADA) ನೋಂದಾಯಿಸಿಕೊಂಡಿರುವ ಅಥ್ಲೀಟ್ಗಳು ತಮ್ಮ ಚಲನವಲನ ಮಾಹಿತಿಯನ್ನು ತಪ್ಪದೇ ನೀಡಬೇಕೆಂಬ ನಿಯಮವಿದೆ. ಸೆಪ್ಟೆಂಬರ್ 9ರಂದು ವಿನೇಶ್ ಅವರನ್ನು ಉದ್ದೀಪನ ಮದ್ದು ಸೇವನೆ ಪರೀಕ್ಷೆಗೊಳಪಡಿಸಲು ನಾಡಾ ಆಧಿಕಾರಿಯೊಬ್ಬರು ಸೋನಿಪತ್ನ ಖಾರ್ಕೋಡಾಗೆ ತೆರಳಿದ್ದರು. ಅಲ್ಲಿ ವಿನೇಶ್ ಅವರು ತಮ್ಮ ಮನೆಯಲ್ಲಿ ಲಭ್ಯವಿರಲಿಲ್ಲ. ಅವರು ತಮ್ಮ ಅಲಭ್ಯತೆ ಕುರಿತೂ ತಿಳಿಸಿರಲಿಲ್ಲ. ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಸ್ತಿಗೆ ವಿದಾಯ ಹೇಳಿರುವ ಕಾರಣ ಅವರಿಗೆ ನಾಡಾ ನಿಷೇಧ ಹೇರಿದರೂ ಕೂಡ ಯಾವುದೇ ನಷ್ಟ ಸಂಭವಿಸದು. ಹೀಗಾಗಿ ವಿನೇಶ್ ಈ ನೋಟಿಸ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದಿರಬಹುದು.
ನೋಟಿಸ್ನಲ್ಲಿ ಏನಿದೆ?
ವಿನೇಶ್ ಫೋಗಟ್ ಅವರಿಗೆ ನಾಡಾ ನೀಡಿದ ನೋಟಿಸ್ನಲ್ಲಿ ʼಚಲನವಲನ ಮಾಹಿತಿಯನ್ನು ನೀಡುವಲ್ಲಿ ವಿನೇಶ್ ವಿಫಲರಾಗಿದ್ದಾರೆ. ಆದ್ದರಿಂದ ಔಪಚಾರಿಕ ನೋಟಿಸ್ ಜಾರಿ ಮಾಡಿದ್ಧೇವೆ. 14 ದಿನಗಳೊಳಗೆ ವಿವರಣೆ ನೀಡಬೇಕು. ನಾವು ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ತಮ್ಮ ಹೇಳಿಕೆಗಳನ್ನು ನೀಡಿ’ ಎಂದು ಉಲ್ಲೇಖಿಸಿದೆ.
ಇದನ್ನೂ ಓದಿ Vinesh Phogat: ಪಿ.ಟಿ. ಉಷಾ ವಿರುದ್ಧ ಗಂಭೀರ ಆರೋಪ ಮಾಡಿದ ವಿನೇಶ್
ವಿನೇಶ್ಗೆ ಇರುವ ಆಯ್ಕೆ
ವಿನೇಶ್ ಅವರು ಈಗ ತಮ್ಮ ಲೋಪವನ್ನು ಒಪ್ಪಿಕೊಳ್ಳಬೇಕು ಅಥವಾ ಅಧಿಕಾರಿ ಭೇಟಿ ನೀಡಿದ ಸ್ಥಳದಲ್ಲಿ ತಾವಿದ್ದ ಕುರಿತು ಸಾಕ್ಷಿ ಒದಗಿಸಬೇಕು. ಆದರೆ ನಿಯಮದ ಪ್ರಕಾರ ಚಲನವಲನ ಮಾಹಿತಿ ನೀಡುವಿಕೆಯಲ್ಲಿ ಒಂದು ಬಾರಿ ಲೋಪವಾದರೆ ಅದನ್ನು ಉದ್ದೀಪನ ಮದ್ದು ತಡೆ ನಿಯಮ ಉಲ್ಲಂಘನೆ ಎಂದು ಪರಿಗಣಿಸುವುದಿಲ್ಲ. 12 ತಿಂಗಳುಗಳ ಅವಧಿಯಲ್ಲಿ ಮೂರು ಬಾರಿ ಮಾಹಿತಿ ನೀಡುವಿಕೆಯಲ್ಲಿ ಲೋಪ ಮಾಡಿದ್ದರೆ ನಿಯಮ ಉಲ್ಲಂಘನೆಯಾಗುತ್ತದೆ.
ಸದ್ಯ ವಿನೇಶ್ ಹರ್ಯಾಣ ವಿಧಾನಸಭಾ(Haryana Polls) ಚುನಾವಣೆಯಲ್ಲಿ ಬ್ಯೂಸಿಯಾಗಿದ್ದಾರೆ. ಕಾಂಗ್ರೆಸ್(Congress) ಅಭ್ಯರ್ಥಿಯಾಗಿ ಜುಲಾನಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಅವರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಜಾಟ್ ಪ್ರತಿನಿಧಿಯಾಗಿ ವಿನೇಶ್ ಕಾಂಗ್ರೆಸ್ಗೆ ಪ್ರವೇಶಿಸಿದ್ದು ಜುಲಾನಾದಲ್ಲಿ ಹೊಸ ಲೆಕ್ಕಾಚಾರಕ್ಕೆ ಕಾರಣವಾಗಿದೆ. ಜಾಟ್ ಪ್ರಾಬಲ್ಯದ ಬಂಗಾರ್ ಪ್ರದೇಶದ ಜುಲಾನಾ ಕ್ಷೇತ್ರದಲ್ಲಿ ಕಳೆದ 15 ವರ್ಷಗಳಿಂದ ಭಾರತೀಯ ರಾಷ್ಟ್ರೀಯ ಲೋಕದಳ (INLD) ಮತ್ತು ಜನನಾಯಕ್ ಜನತಾ ಪಾರ್ಟಿ (JJP) ಯಂತಹ ಪ್ರಾದೇಶಿಕ ಪಕ್ಷಗಳು ಪ್ರಾಬಲ್ಯ ಹೊಂದಿವೆ. 2009 ಮತ್ತು 2014ರಲ್ಲಿ ಐಎನ್ಎಲ್ಡಿಯ ಪರ್ಮಿಂದರ್ ಸಿಂಗ್ ಗೆದ್ದಿದ್ದರೆ, ಜೆಜೆಪಿಯ ಅಮರ್ಜೀತ್ ಧಂಡಾ 2019ರಲ್ಲಿ ಗೆಲುವು ಸಾಧಿಸಿದ್ದರು. ಈ ಬಾರಿ ಕ್ಷೇತ್ರ ಭಾರೀ ಕುತೂಹಲ ಕೆರಳಿಸಿದೆ.