Friday, 29th November 2024

Shakib Al Hasan: ಟಿ20, ಟೆಸ್ಟ್‌ಗೆ ನಿವೃತ್ತಿ ಘೋಷಿಸಿದ ಶಕೀಬ್ ಅಲ್ ಹಸನ್

Shakib Al Hasan

ಕಾನ್ಪುರ: ಬಾಂಗ್ಲಾದೇಶದ ಹಿರಿಯ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಅವರು ಭಾರತ ವಿರುದ್ಧದ ದ್ವಿತೀಯ ಟೆಸ್ಟ್‌ ಅರಂಭಕ್ಕೂ ಮುನ್ನವೇ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಗುರುವಾರ ತನ್ನ ನಿವೃತ್ತಿಯನ್ನು ಪ್ರಕಟಿಸಿದರು. ದಕ್ಷಿಣ ಆಫ್ರಿಕಾ ವಿರುದ್ದದ ತವರಿನ ಸರಣಿ ಅವರಿಗೆ ಕೊನೆಯ ಟೆಸ್ಟ್‌ ಪಂದ್ಯವಾಗಿರಲಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಟಿ20 ಕ್ರಿಕೆಟ್‌ಗೂ ನಿವೃತ್ತಿ ಪ್ರಕಟಿಸಿದರು.

ಆಗಸ್ಟ್‌ನಲ್ಲಿ ಶೇಖ್ ಹಸೀನಾ ಆಡಳಿತದ ರಾಜಕೀಯ ಕ್ರಾಂತಿಯ ನಂತರ 37 ವರ್ಷದ ಶಕೀಬ್ ಬಾಂಗ್ಲಾದೇಶಕ್ಕೆ ಪ್ರಯಾಣಿಸಿಲ್ಲ. ಮಾಜಿ ಪ್ರಧಾನಿ ಶೇಕ್‌ ಹಸೀನಾ ನೇತೃತ್ವದ ಅವಾಮಿ ಲೀಗ್‌ ಪಕ್ಷದ ಸದಸ್ಯನಾಗಿದ್ದರು. ಕಳೆದ ತಿಂಗಳು ಢಾಕಾದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಆರೋಪಿಸಲಾದ 147 ಜನರಲ್ಲಿ ಶಕೀಬ್ ಅಲ್ ಹಸನ್ ಹೆಸರೂ ಕೂಡ ಇತ್ತು. ಇದಾದ ಬಳಿಕ ಅವರು ಬಾಂಗ್ಲಾಗೆ ತೆರಳಿಲ್ಲ.

ಇದನ್ನೂ ಓದಿ IND vs BAN 2nd Test: ಪಿಚ್‌ ರಿಪೋರ್ಟ್‌, ಆಡುವ ಬಳಗ, ಹವಾಮಾನ ವರದಿ ಹೇಗಿದೆ?

ಟೆಸ್ಟ್‌ ಕ್ರಿಕೆಟ್‌ಗೂ ವಿದಾಯ ಹೇಳಲು ನಿರ್ಧರಿಸಿರುವ ಶಕೀಬ್‌, ದಕ್ಷಿಣ ಆಫ್ರಿಕಾ ಸರಣಿಯ ವೇಳೆ ತವರಿನ ಮಿರ್‌ಪುರದಲ್ಲಿ ನಡೆಯುವ ಅಂತಿಮ ಟೆಸ್ಟ್‌ ಆಡುವ ಭರವಸೆ ಇದೆ. ಎರಡು ಪಂದ್ಯಗಳ ಸರಣಿಯು ಅಕ್ಟೋಬರ್ 21 ರಂದು ಮೀರ್‌ಪುರದಲ್ಲಿ ಪ್ರಾರಂಭವಾಗಲಿದೆ. ಆದಾಗ್ಯೂ, ಭದ್ರತಾ ಕಾಳಜಿಗಳು ಈ ಕ್ರಮಕ್ಕೆ ಅಡ್ಡಿಯುಂಟು ಮಾಡಿದರೆ, ಕಾನ್ಪುರದಲ್ಲಿ ಭಾರತದ ವಿರುದ್ಧದ ಟೆಸ್ಟ್‌ ಪಂದ್ಯವೇ ನನ್ನ ಪಾಲಿನ ಅಂತಿಮ ಟೆಸ್ಟ್‌ ಪಂದ್ಯವಾಗಿರಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಾಂಗ್ಲಾ ಪರ ಶಕೀಬ್‌ 71 ಟಿ20 ಪಂದ್ಯಗಳನ್ನು ಆಡಿ 2551 ರನ್‌ ಮತ್ತು 149 ವಿಕೆಟ್‌ ಕಿತ್ತ ಸಾಧನೆ ಮಾಡಿದ್ದಾರೆ. 20 ರನ್‌ಗೆ 5 ವಿಕೆಟ್‌ ಕಿತ್ತದ್ದು ವೈಯಕ್ತಿಕ ಸಾಧನೆಯಾಗಿದೆ. 70 ಟೆಸ್ಟ್ ಪಂದ್ಯಗಳನ್ನಾಡಿರುವ ಶಕೀಬ್ 128 ಇನಿಂಗ್ಸ್‌ಗಳಿಂದ​ 4,600 ರನ್ ಕಲೆಹಾಕಿದ್ದಾರೆ. ಈ ವೇಳೆ 5 ಶತಕ, 1 ದ್ವಿಶತಕ ಹಾಗೂ 31 ಅರ್ಧಶತಕಗಳನ್ನು ಬಾರಿಸಿದ್ದಾರೆ. ಬೌಲಿಂಗ್‌ನಲ್ಲಿ 242 ವಿಕೆಟ್​ಗಳನ್ನು ಕಬಳಿಸಿದ್ದಾರೆ. 19 ಬಾರಿ 5 ವಿಕೆಟ್ ಗೊಂಚಲು ಪಡೆದ ಸಾಧನೆ ಮಾಡಿದ್ದಾರೆ.

ಅಮೆರಿಕ ಮತ್ತು ವೆಸ್ಟ್‌ ಇಂಡೀಸ್‌ ಜಂಟಿ ಆತಿಥ್ಯದಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ ಟೂರ್ನಿಯ ಅಫಘಾನಿಸ್ತಾನ ವಿರುದ್ಧದ ಲೀಗ್‌ ಪಂದ್ಯವೇ ತನ್ನ ಕೊನೆಯ ಟಿ20 ಪಂದ್ಯವಾಗಿತ್ತು ಎಂದು ಹೇಳುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಅನುಭವಿ ಕ್ರಿಕೆಟಿಗ ಶಕೀಬ್‌ 2007 ರಿಂದ ಆರಂಭಗೊಂಡು 2024ರ ತನಕ ನಡೆದ ಎಲ್ಲ ಆವೃತ್ತಿಯ ಟಿ20 ವಿಶ್ವಕಪ್‌ ಆಡಿದ ಹಿರಿಮೆ ಇವರದ್ದಾಗಿದೆ. ಜತೆಗೆ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್‌ ಕಿತ್ತ ಸಾಧಕನೂ ಹೌದು. ಒಟ್ಟು 43 ವಿಶ್ವಕಪ್‌ ಪಂದ್ಯಗಳಿಂದ 50 ವಿಕೆಟ್‌ ಕಿತ್ತಿದ್ದಾರೆ.