ಮಾಳಿಂಗರಾಯ ಪೂಜಾರ
ಜಿಲ್ಲೆಯಲ್ಲಿ ಹೆಚ್ಚುತ್ತಿದೆ ನಾಯಿಗಳ ಹಾವಳಿ
ನಗರಸಭೆಯಿಂದ ಬೌ ಬೌ ಕಾಟಕ್ಕೆ ಕಡಿವಾಣ ಹಾಕಲು ಸಾರ್ವಜನಿಕರ ಆಗ್ರಹ
ಗದಗ: ಗದಗ ಬೆಟಗೇರಿ ಅವಳಿ ನಗರದ ತ್ಯಾಜ್ಯದಿಂದ ತತ್ತರಿಸಿದ್ದಲ್ಲದೆ, ಇದರಿಂದ ಬೀದಿ ನಾಯಿಗಳ ಹಾಗೂ ಬೀದಿ ದನಗಳ ಹಾವಳಿ ಹೆಚ್ಚಾಗಿದೆ. ಬೀದಿ ದನದ ಓರ್ವ ವೃದ್ಧ ಸಾವನ್ನಪ್ಪಿದ್ದು, ಅನೇಕರ ಮೇಲೆ ದಾಳಿ ಮಾಡಿ ಗಾಯ ಗೊಂಡಿದ್ದರು ಇದು ಮಾಸುವ ಮುನ್ನವೇ ಈಗ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ ನಗರದಲ್ಲಿ ಅನೇಕರ ಮೇಲೆ ನಾಯಿಗಳು ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ನಡೆದಿದ್ದು, ಆತಂಕ ಸೃಷ್ಟಿಸಿದೆ.
ನಗರದಲ್ಲಿ ಎಂದರಲ್ಲಿ ತ್ಯಾಜ್ಯ ಸುರಿಯುತ್ತಿದ್ದು, ಇದರಿಂದ ಬೀದಿ ನಾಯಿಗಳಿಗೆ ಮೃಷ್ಟಾನ್ನ ಸಿಕ್ಕಂತಾಗಿದೆ. ನಗರದ ಜಿಲ್ಲಾಸ್ಪತ್ರೆಯ ಆವಾರದಲ್ಲಿಯೂ ನಾಯಿಗಳ ಹಿಂಡು ರೋಗಿಗಳ ನಿದ್ದೆ ಗೆಡಿಸಿವೆ. ಇನ್ನು ಮಾಂಸದ ಅಂಗಡಿಗಳ ಬಳಿಯಂತೂ ಸ್ವಚ್ಛತೆ ಮಾಯವಾಗಿದ್ದು, ಎಡೆ ತ್ಯಾಜ್ಯ ತುಂಬಿ ತುಳುಕುತ್ತಿರುವುದರಿಂದ ಬೀದಿ ನಾಯಿಗಳ
ಹಾವಳಿ ಒಂದೆಡೆಯಾದರೆ ಇನ್ನೂ ಭೀಷ್ಮ ಕೆರೆಯ ಸುತ್ತಮುತ್ತ ಸ್ವಚ್ಛತೆಯ ಮರಿಚಿಕೆಯಿಂದ ನಾಯಿಗಳು ಬೀಡು ಬಿಟ್ಟಿವೆ ಕೊಳೆತ ತ್ಯಾಜ್ಯದಿಂದ ಉತ್ಪತ್ತಿಯಾಗುತ್ತಿರುವ ಸೊಳ್ಳೆ ಸಂತತಿ ಅವಳಿ ನಗರದ ಜನತೆಯ ನಿದ್ದೆಗೆಡಿಸಿದೆ. ಇದರಿಂದ ನಗರಸಭೆಗೆ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.
ಭೀಷ್ಮ ಕೆರೆಯ ದಡದ ಸುತ್ತಮುತ್ತ ಸತ್ತ ಪ್ರಾಣಿಗಳು ಹಾಗೂ ಮಾಂಸದ ತ್ಯಾಜ್ಯ ಹಾಗೂ ಘನತ್ಯಾಜ್ಯ ಹಾಕುತ್ತಿದ್ದು, ಇದಕ್ಕೆ ಯಾವುದೇ ಕಡಿವಾಣವಿಲ್ಲದಂತಾಗಿದ್ದು, ಇದರಿಂದ ಕೆರೆಯ ಸುತ್ತ ಹೋಗಬೇಕಾದರೆ ಮೂಗು ಮುಚ್ಚಿ ಕೊಂಡು ಹೋಗಬೇಕಾಗಿದೆ. ಇದು ಅಲ್ಲದೆ ನಗರದ ಬಹುತೇಕ ಕಡೆ ಘನತ್ಯಾಜ್ಯ ಬಿದ್ದಿರುವುದರಿಂದ ಇದರ ಜತೆ ಬಹುತೇಕ ಕಡೆ ಮಾಂಸದ ಅಂಗಡಿಗಳ ತ್ಯಾಜ್ಯವನ್ನು ಎಂದರಲ್ಲಿ ಬಿಸಾಡುತ್ತಿದ್ದು, ಮಾಂಸದ ಅಂಗಡಿಗಳ ತ್ಯಾಜ್ಯದಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಲು ಮೂಲ ಕಾರಣ ಎನ್ನಲಾಗಿದೆ.
ಇದು ಅಷ್ಟೇ ಅಲ್ಲದೆ ಗದಗ ಜಿಲ್ಲೆಯಲ್ಲಿಯೇ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಪ್ರಸಕ್ತ ವರ್ಷ ಜನವರಿ ತಿಂಗಳಿನಿಂದ ಅಗಸ್ಟವರೆಗೂ ೮೧೪೪ ನಾಯಿಗಳ ದಾಳಿ ನಡೆಸಿ ಗಾಯಗೊಳಿಸಿದ ಪ್ರಕರಣಗಳಾಗಿದ್ದು, ಈ ನಾಯಿ ಗಳ ಹಾವಳಿಗೆ ಮುಖ್ಯ ಕಾರಣ ನಗರ ಹಾಗೂ ಗ್ರಾಮಿಣ ಪ್ರದೇಶಗಳಲ್ಲಿ ಸ್ವಚ್ಚತೆ ಇಲ್ಲದೆ ಇರುವುದು ಸದಾ ಮಾಂಸದ ಅಂಗಡಿ ಸುತ್ತ ಮುತ್ತ ಬಿಡು ಬಿಟ್ಟು ಮಾಂಸದ ರುಚಿ ನೋಡಿರುವ ಈ ನಾಯಿಗಳು ಏಕಾಏಕಿಯಾಗಿ ಜನರ ಮೇಲೆ ದಾಳಿ ಮಾಡಿ ಅವರ ಗಾಯಗೊಳಿಸುತ್ತಿವೆ.
ಗದಗ ನಗರದ ವಾರ್ಡ್ ನಂಬರ್ ೨೦ ರ ಖಾನತೋಟದ ಶಾಬಾದಿಮಠ ಲೇಜೌಟ್ ಬಳಿ ನಡೆದಿದೆ. ಬೆಳಗಿನ ಜಾವ ಬೀದಿ ನಾಯಿಗಳು ದಾಳಿ ನಡೆಸಿದ್ದು ಹೊಲಕ್ಕೆ ಹೊಗಿದ್ದ ಓರ್ವ ಮಹಿಳೆ ಹಾಗೂ ಶೌಚಾಲಯಕ್ಕೆ ತೆರಳಿದ್ದ ಮಹಿಳೆ ಮೇಲೆ ದಾಳಿ ನಡೆಸಿವೆ. ಸ್ಥಳೀಯರು ತಕ್ಷಣ ಮಹಿಳೆಯರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
೨೦ ನೇ ವಾರ್ಡಿನ ಮಹಿಳೆಯರು, ಮಕ್ಕಳು, ವೃಧ್ಧರು ಏರಿಯಾದಲ್ಲಿ ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಒಂದು ಕಡೆ ಅಲ್ಲ ನಗರದ ಅನೇಕ ಕಡೆ ಇದೆ ಸ್ಥಿತಿ ಇದೆ ಅಲ್ಲದೆ ಜವಳ ಗಲ್ಲಿ (ಮೀನು ಮಾರುಕಟ್ಟೆ), ಮಾಂಸದ
ಮಾರುಕಟ್ಟೆ ಇಲ್ಲಿ ಅಂತೂ ನೂರಾರು ನಾಯಿಗಳು ಇದ್ದು, ಅಲ್ಲಿಗೆ ಹೊಸಬರು ಹೋಗಲು ಭಯ ಪಡುವ ಸ್ಥಿತಿ ಇದೆ.
ನಗರದಲ್ಲಿ ದುಡಿಯುವ ವರ್ಗದವರು ವಾಸಿಸುವ ಏರಿಯಾದಲ್ಲಿ ಕೆಲಸಕ್ಕೆ ಹೋಗುವಾಗ ಎಲ್ಲಿ ನಾಯಿಗಳು ದಾಳಿ ಮಾಡುತ್ತವೆಯೋ ಅನ್ನೋ ಆತಂಕದಲ್ಲಿದ್ದಾರೆ.
ಅನೇಕ ಬಾರಿ ಅಧಿಕಾರಿಗಳಿಗೆ ತಿಳಿಸಿದರು ನಾಯಿಗಳ ಸ್ಥಳಾಂತರ ಮಾಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ
ಹೊರ ಹಾಕಿದ್ದಾರೆ. ನಗರಸಭೆ ಅಧಿಕಾರಿಗಳು ಎಚ್ಚೆತ್ತು ನಾಯಿಗಳ ಸ್ಥಳಾಂತರ ಮಾಡಬೇಕು ಎಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ.
*
ನಗರದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಾಯಿಗಳು ಏಕಾಏಕಿ ಸಾರ್ವಜನಿಕರ ಮೇಲೆ ದಾಳಿ ಮಾಡಿ
ಗಾಯಗೊಳಿಸುತ್ತಿವೆ. ನಮ್ಮ ವಾರ್ಡಿನಲ್ಲಿ ಇಬ್ಬರು ಮಹಿಳೆಯರ ಮೇಲೆ ನಾಯಿ ದಾಳಿ ಮಾಡಿದ್ದು, ಆರೋಗ್ಯ ಕೇಂದ್ರಕ್ಕೆ ಹೋಗಿ ಅವರ ಆರೋಗ್ಯ ಕೇಂದ್ರಕ್ಕೆ ತೆರಳಿ ಆರೋಗ್ಯ ವಿಚಾರಣೆ ಮಾಡಿದ್ದೇನೆ. ನಗರಸಭೆಯವರು ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕು.
-ಪರವೀನಬಾನು ಮು, ನಗರಸಭೆ ಸದಸ್ಯೆ
ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 8144 ನಾಯಿಗಳ ಕಡಿತ ಪ್ರಕರಣಗಳು ದಾಖಲಾಗಿದ್ದು, ಜಿಯ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ನಾಯಿ ಹಾಗೂ ಇತರ ಪ್ರಾಣಿ ಕಡಿತ ನಂತರ ನೀಡುವ ಚುಚ್ಚುಮದ್ದು ಸಾಕಷ್ಟು ಲಭ್ಯ ಇವೆ.
-ಎಸ್.ಎಸ್.ನೀಲಗುಂದ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಗದಗ
ಇದನ್ನೂ ಓದಿ: Gadag_Betageri_Muncipality Election: ಕುತೂಹಲ ಕೆರಳಿಸಿದೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ