Friday, 27th September 2024

Hindu Temple Vandalized: ಕ್ಯಾಲಿಫೋರ್ನಿಯಾದಲ್ಲಿ ಹಿಂದೂ ದೇಗುಲ ವಿರೂಪ; ಭಾರತ ಖಂಡನೆ

Hindu Temple Vandalized

ಕ್ಯಾಲಿಫೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾ(California)ದಲ್ಲಿ ಹಿಂದೂ ದೇಗುಲಗಳನ್ನು ಕಿಡಿಗೇಡಿಗಳು ವಿರೂಪಗೊಳಿಸಿರುವ ಘಟನೆ(Hindu Temple Vandalized)ಗೆ ಭಾರತ ಖಂಡನೆ ವ್ಯಕ್ತಪಡಿಸಿದೆ. ಸ್ಯಾನ್‌ ಫ್ರಾನ್ಸಿಸ್ಕೋ (San Francisco)ದಲ್ಲಿರುವ ಭಾರತದ ಕನ್ಸುಲೇಟ್‌ ಜನರಲ್‌ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ಕೃತ್ಯ ಎಸಗಿದವರ ವಿರುದ್ಧ ತಕ್ಷಣ ಕ್ರಮ ಜರುಗಿಸುವಂತೆ ಮನವಿ ಆಗ್ರಹಿಸಿದ್ದಾರೆ.

ಈ ಬಗ್ಗೆ ಭಾರತದ ಕಾನ್ಸುಲೇಟ್ ಜನರಲ್ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ಸ್ಯಾನ್ ಫ್ರಾನ್ಸಿಸ್ಕೋ ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊದಲ್ಲಿರುವ BAPS ಶ್ರೀ ಸ್ವಾಮಿನಾರಾಯಣ ಮಂದಿರದಲ್ಲಿ ಸೆಪ್ಟೆಂಬರ್ 24 ರಂದು ರಾತ್ರಿ ನಡೆದ ವಿಧ್ವಂಸಕ ಕೃತ್ಯವನ್ನು ಭಾರತ ಬಲವಾಗಿ ಖಂಡಿಸುತ್ತದೆ. ಸ್ಥಳೀಯ ಅಧಿಕಾರಿಗಳೊಂದಿಗೆ ಈ ವಿಷಯದ ಬಗ್ಗೆ ಚರ್ಚೆ ನಡೆಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಏನಿದು ಘಟನೆ?

ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊ ಪ್ರದೇಶದಲ್ಲಿನ BAPS ಶ್ರೀ ಸ್ವಾಮಿನಾರಾಯಣ ಮಂದಿರವನ್ನು ಬುಧವಾರ ರಾತ್ರಿ ಹಿಂದೂ ವಿರೋಧಿ ಸಂದೇಶಗಳೊಂದಿಗೆ ಅಪವಿತ್ರಗೊಳಿಸಲಾಗಿದೆ. 10 ದಿನಗಳೊಳಗೆ ನಡೆದ ಎರಡನೇ ದಾಳಿ ಇದಾಗಿದೆ. ಸೆಪ್ಟೆಂಬರ್ 17 ರಂದು ನ್ಯೂಯಾರ್ಕ್‌ನ ಬಿಎಪಿಎಸ್ ಮಂದಿರದಲ್ಲಿ ಇದೇ ರೀತಿಯ ವಿಧ್ವಂಸಕ ಕೃತ್ಯ ನಡೆದಿತ್ತು.

ಇನ್ನು ಈ ಬಗ್ಗೆ ದೇಗುಲದ ಆಡಳಿತ ಮಂಡಳಿ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದು, ನ್ಯೂಯಾರ್ಕ್‌ನ BAPS ಮಂದಿರವನ್ನು ಅಪವಿತ್ರಗೊಳಿಸಿದ 10 ದಿನಗಳ ನಂತರ, ಸ್ಯಾಕ್ರಮೆಂಟೊ, CA ಪ್ರದೇಶದಲ್ಲಿನ ನಮ್ಮ ಮಂದಿರವನ್ನು ಕಳೆದ ರಾತ್ರಿ ಕಿಡಿಗೇಡಿಗಳು ಅಪವಿತ್ರಗೊಳಿಸಿದ್ದಾರೆ. ಹಿಂದೂಗಳೇ ದೇಶ ಬಿಟ್ಟು ತೊಲಗಿ ಎಂದು ಗ್ರಾಫಿಟಿಯಲ್ಲಿ ದೇಗುಲ ಗೋಡೆಗಳ ಮೇಲೆ ಬರೆಯಲಾಗಿದೆ. ನಾವು ಶಾಂತಿಗಾಗಿ ಪ್ರಾರ್ಥನೆ ಮಾಡುತ್ತಾ ದ್ವೇಷದ ವಿರುದ್ಧ ಒಗ್ಗಟ್ಟಿನಿಂದ ನಿಲ್ಲುತ್ತೇವೆ ಎಂದು ಹೇಳಿದೆ.

ಈ ಬಗ್ಗೆ BAPS ಶ್ರೀ ಸ್ವಾಮಿನಾರಾಯಣ ಮಂದಿರಕ್ಕೆ ಶೆರಿಫ್ ಪ್ರತಿನಿಧಿಗಳು ಪ್ರತಿಕ್ರಿಯಿಸಿದ್ದು, ಕಿಡಿಗೇಡಿಗಳು ದೇಗುಲದ ಗೋಡೆಗಳನ್ನು ವಿರೂಪಗೊಳಿಸಿದ್ದು ಮಾತ್ರವಲ್ಲದೇ ನೀರಿನ ಪೈಪ್‌ ಲೈನ್‌ ಅನ್ನು ಕೂಡ ಧ್ವಂಸಗೊಳಿಸಿದ್ದಾರೆ. ಇದು ನಿಜಕ್ಕೂ ಖಂಡನೀಯ ಎಂದು ಹೇಳಿದ್ದಾರೆ.

ಇನ್ನು ಈ ಕೃತ್ಯಕ್ಕೆ US ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಸ್ಯಾಕ್ರಮೆಂಟೊ ಕೌಂಟಿಯನ್ನು ಪ್ರತಿನಿಧಿಸುವ ಆಮಿ ಬೆರಾ ಕೂಡ ಎಕ್ಸ್‌ನಲ್ಲಿ ಪೋಸ್ಟ್‌ ಮಾಡುವ ಮೂಲಕ ಖಂಡನೆ ವ್ಯಕ್ತಪಡಿಸಿದ್ದಾರೆ. ಸ್ಯಾಕ್ರಮೆಂಟೊ ಕೌಂಟಿಯಲ್ಲಿ ಧಾರ್ಮಿಕ ಮತಾಂಧತೆ ಮತ್ತು ದ್ವೇಷಕ್ಕೆ ಯಾವುದೇ ಸ್ಥಳವಿಲ್ಲ. ಈ ವಿಧ್ವಂಸಕ ಕೃತ್ಯವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಎಲ್ಲರೂ ನಮ್ಮಲ್ಲಿ ಅಸಹಿಷ್ಣುತೆಯ ವಿರುದ್ಧ ನಿಲ್ಲಬೇಕು ಎಂದು ಕರೆ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: ಉತ್ತರ ಕ್ಯಾಲಿಫೋರ್ನಿಯಾ ಉದ್ಯಾನವನ: ಭಾರಿ ಬೆಂಕಿಗೆ 178,000 ಎಕರೆ ಭಸ್ಮ