ಗೌರಿಬಿದನೂರು: ತಮ್ಮ ಆರೋಗ್ಯವನ್ನು ಲೆಕ್ಕಿಸದೆ, ದಿನಂಪ್ರತಿ ನಗರದ ಸ್ವಚ್ಚತೆ ಹಾಗೂ ಜನರ ಆರೋಗ್ಯವನ್ನು ಕಾಪಾಡುವಲ್ಲಿ ಶ್ರಮಿಸುತ್ತಿರುವ ಪೌರ ಕಾರ್ಮಿಕರ ಕಾರ್ಯ ಅತ್ಯಂತ ದೊಡ್ಡದು ಎಂದು ಶಾಸಕ ಕೆಎಚ್.ಪುಟ್ಟ ಸ್ವಾಮಿಗೌಡ ತಿಳಿಸಿದರು.
ನಗರದ ಸುಮಂಗಲಿ ಕಲ್ಯಾಣ ಮಂಟಪದಲ್ಲಿ ನಗರಸಭೆ ವತಿಯಿಂದ ಆಯೋಜಿಸಲಾಗಿದ್ದ ಪೌರ ಕಾರ್ಮಿಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾತನಾಡುತ್ತಿದ್ದರು.
ಪ್ರತಿದಿನ ಬೆಳಗಿನ ಜಾವ ನಾಲ್ಕು ಗಂಟೆಗೆ ಚಳಿ ಮಳೆ ಗಾಳಿಯನ್ನದೆ ನಗರದ ಸ್ವಚ್ಚತೆಗೆ ಮುಂದಾಗುವ ಪೌರ ಕಾರ್ಮಿಕರು ತಮ್ಮ ಆರೋಗ್ಯದ ಕಡೆ ಕೂಡ ಗಮನ ನೀಡಬೇಕು,ಸರ್ಕಾರ ನೀಡಿರುವ ಸುರಕ್ಷಾ ಕವಚಗಳನ್ನು ಧರಿಸಿ ಸ್ವಚ್ಚತೆಯ ಕಾರ್ಯದಲ್ಲಿ ತೊಡಗಿಕೊಳ್ಳಬೇಕೆಂದು ಕಿವಿ ಮಾತು ಹೇಳಿದ ಶಾಸಕರು ಪೌರ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಎಲ್ಲಾ ರೀತಿಯ ನೆರವನ್ನು ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪೌರಾಯುಕ್ತೆ ಗೀತಾ ಅವರು ಮಾತನಾಡುತ್ತಾ ಪೌರ ಕಾರ್ಮಿಕರಿಗೆ ಸರ್ಕಾರ ದಿಂದ ಸಿಗಬಹುದಾದ ಎಲ್ಲಾ ಸವಲತ್ತುಗಳನ್ನು ಒದಗಿಸುವಲ್ಲಿ ನಾವು ಪ್ರಾಮಾಣಿಕವಾಗಿ ಕೆಲಸಮಾಡಿದ್ದೇವೆ, ಪೌರ ಕಾರ್ಮಿಕರಿಗೆ ಪ್ರತಿದಿನ ಪೌಷ್ಟಿಕ ಅಂಶಗಳುಳ್ಳ ಬೆಳಗಿನ ಉಪಹಾರ ಜೊತೆಗೆ ಒಂದು ಮೊಟ್ಟೆಯನ್ನು ನೀಡಲಾಗು ತ್ತಿದ್ದು,ಕಾಲ ಕಾಲಕ್ಕೆ ಆರೋಗ್ಯ ತಪಾಸಣೆಯ ಶಿಬಿರಗಳನ್ನು ಏರ್ಪಡಿಸಿ ಪೌರ ಕಾರ್ಮಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದೇವೆ ಮತ್ತು ಪೌರ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಕೂಡ ನಗರಸಭೆ ವತಿಯಿಂದ ಆರ್ಥಿಕ ನೆರವನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರಿಗಾಗಿ ಏರ್ಪಡಿಸಲಾಗಿದ್ದ ಕ್ರೀಡಾಕೂಟದಲ್ಲಿ ವಿಜೇತರಾದ ಪೌರ ಕಾರ್ಮಿಕರಿಗೆ ಬಹುಮಾನಗಳನ್ನು ವಿತರಿಸಲಾಯಿತು.ಇದೇ ಸಂಧರ್ಭದಲ್ಲಿ ಶಾಸಕರಾದ ಕೆಎಚ್.ಪುಟ್ಟಸ್ವಾಮಿಗೌಡರು ಪೌರ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಪೌರ ಕಾರ್ಮಿಕರಿಗೆ ಹೊಸ ಬಟ್ಟೆಗಳನ್ನು ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಲಕ್ಷ್ಮೀನಾರಾಯಣ್,ಉಪಾಧ್ಯಕ್ಷ ಫರೀದ್,ತಹಶಿಲ್ದಾರ್ ಮಹೇಶ್ ಎಸ್ ಪತ್ರಿ,ಜಿಲ್ಲಾ ಯೋಜನಾ ನಿರ್ದೇಶಕಿ ಮಾದವಿ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್, ಕರ್ನಾಟಕ ಪೌರ ಸಂಘದ ಜಿಲ್ಲಾ ಅಧ್ಯಕ್ಷ ಮುರುಳಿ, ಜೀವಿಕ ರತ್ನಮ್ಮ, ನಗರಸಭೆ ಸದಸ್ಯರಾದ ಡಿಎನ್.ವಕಟರೆಡ್ಡಿ, ರಂಗಮ್ಮ, ಅಶ್ವತ್ಥಮ್ಮ, ಶ್ರೀಕಾಂತ್, ರಾಜುಕುಮಾರ, ಭಾಗ್ಯಮ್ಮ, ಗಾಯಿತ್ರಿ, ರಮೇಶ್, ಕಲ್ಲೀಂ, ಮಂಜುಳಾ,ಜಯರಾಮ್ ಹಾಗೂ ಇನ್ನಿತರರು ಭಾಗವಹಿಸಿದ್ದರು.