Sunday, 29th September 2024

Musheer Khan: ಮುಶೀರ್ ಖಾನ್ ಹೆಲ್ತ್‌ ಬುಲೆಟಿನ್ ಬಿಡುಗಡೆ; ಹೇಗಿದೆ ಆರೋಗ್ಯ ಸ್ಥಿತಿ?

Musheer Khan

ಮುಂಬಯಿ: ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಭಾರತದ ಬ್ಯಾಟರ್‌ ಸರ್ಫರಾಜ್ ಖಾನ್ ಅವರ ಸೋದರನಾಗಿರುವ ಮುಂಬೈ ಆಲ್‌ರೌಂಡರ್‌ ಮುಶೀರ್ ಖಾನ್(Musheer Khan) ಅವರ ಹೆಲ್ತ್‌ ಬುಲೆಟಿನ್(Musheer Khan Health Update) ಬಿಡುಗಡೆಗೊಂಡಿದೆ. ಲಖನೌದ ಮೇದಾಂತ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಭೋಲಾ ಸಿಂಗ್‌ ಅವರು ಮುಶೀರ್ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕನಿಷ್ಠ ಮೂರು ತಿಂಗಳು ಕ್ರಿಕೆಟ್‌ನಿಂದ ಹೊರಗಿರಬೇಕಾಗಬಹುದು. ಅಪಘಾತದಲ್ಲಿ ಮುಶೀರ್‌ಗೆ ಕುತ್ತಿಗೆಗೆ ಗಾಯಗಳಾಗಿತ್ತು.

19 ವರ್ಷದ ಬ್ಯಾಟರ್‌, ಮುಶೀರ್‌ ಖಾನ್‌ ಅ.1ರಿಂದ 5ರವರೆಗೆ ಲಖನೌದಲ್ಲಿ ನಿಗದಿಯಾಗಿದ್ದ ಇರಾನಿ ಕಪ್‌ ಟೂರ್ನಿಯನ್ನಾಡಲು ಅಜಂಗಢ್‌ನಲ್ಲಿರುವ ತಮ್ಮ ಮನೆಗೆ ಬಂದಿದ್ದರು. ಅಭ್ಯಾಸ ನಡೆಸಿ ಪೂರ್ವಾಂಚಲ ಎಕ್ಸ್‌ಪ್ರೆಸ್‌ ಮೂಲಕ ಅವರು ಲಖನೌದಿಂದ ಅಜಂಗಢಕ್ಕೆ ಕಾರಿನಲ್ಲಿ ತಂದೆ ಜತೆ ಹೋಗುತ್ತಿದ್ದರು. ಈ ವೇಳೆ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ, ನಂತರ ಉರುಳಿಬಿದ್ದಿದೆ. ಅಪಘಾತದಲ್ಲಿ ತಂದೆ ನೌಶಾದ್ ಖಾನ್ ಅವರಿಗೆ ತರಚಿದ ಗಾಯಗಳಾಗಿತ್ತು. ಆದರೆ ಮುಶೀರ್‌ ಅವರ ಕುತ್ತಿಗೆಗೆ ಗಂಭೀರ ಗಾಯಗಳಾಗಿದೆ.

ದೇಶೀಯ ಕ್ರಿಕೆಟ್‌ನಲ್ಲಿ ಆಡಿದ ಎಲ್ಲ ಟೂರ್ನಿಗಳಲ್ಲಿಯೂ ಅಮೋಘ ಬ್ಯಾಟಿಂಗ್‌ ಪ್ರದರ್ಶನ ತೋರುವ ಮೂಲಕ ಭವಿಷ್ಯದ ಟೀಮ್‌ ಇಂಡಿಯಾದ ಉದಯೋನ್ಮುಖ ಆಟಗಾರನೆಂದೇ ಪರಿಗಣಿಸಲಾಗಿತ್ತು. ಇತ್ತೀಚೆಗೆ ನಡೆದ ದುಲೀಪ್‌ ಟ್ರೋಫಿಯಲ್ಲಿ ಶತಕ ಹಾಗೂ ಕಳೆದ ಬಾರಿಯ ರಣಜಿ ಟ್ರೋಫಿಯಲ್ಲಿ ಮುಶೀರ್ ಖಾನ್ ದ್ವಿಶತಕ ಬಾರಿಸಿ ಮಿಂಚಿದ್ದರು.

ಇದನ್ನೂ ಓದಿ IND vs BAN: ಲಂಗೂರ್​ ಕಣ್ಗಾವಲಿನಲ್ಲಿ ಭಾರತ-ಬಾಂಗ್ಲಾ ಟೆಸ್ಟ್‌

19 ವರ್ಷದ ಮುಶೀರ್ ಖಾನ್ ಮುಂಬೈ ತಂಡದ ಪರ 9 ಪ್ರಥಮ ದರ್ಜೆ ಪಂದ್ಯವನ್ನಾಡಿ 716 ರನ್‌ ಗಳಿಸಿದ್ದಾರೆ. ಈ ವೇಳೆ 3 ಶತಕ ಮತ್ತು ಒಂದು ಅರ್ಧಶತಕ ಬಾರಿಸಿದ್ದಾರೆ. ಬೌಲಿಂಗ್‌ನಲ್ಲಿ 8 ವಿಕೆಟ್‌ ಕಿತ್ತಿದ್ದಾರೆ. ಕಳೆದ ಅಂಡರ್‌-19 ವಿಶ್ವಕಪ್‌ ಟೂರ್ನಿಯಲ್ಲಿ ಮುಶೀರ್ ಖಾನ್ ಒಟ್ಟು 360 ರನ್‌ ಬಾರಿಸಿ ಮಿಂಚಿದ್ದರು. ಕಳೆದ ಬಾರಿ ರಣಜಿ ಟ್ರೋಫಿಯಲ್ಲಿ ಮುಂಬೈ ತಂಡ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಮುಶೀರ್ ಪ್ರಮುಖ ಪಾತ್ರವಹಿಸಿದ್ದರು.

ಮುಂಬಯಿ ತಂಡ: ಅಜಿಂಕ್ಯ ರಹಾನೆ (ನಾಯಕ), ಪೃಥ್ವಿ ಶಾ, ಆಯುಷ್‌ ಮ್ಹಾತ್ರೆ, ಸರ್ಫರಾಜ್‌ ಖಾನ್‌, ಶ್ರೇಯಸ್‌ ಅಯ್ಯರ್‌, ಸಿದ್ದೇಶ್‌ ಲಾಡ್‌, ಸೂರ್ಯಾಂಶ್‌ ಶೇಡ್ಗೆ, ಹಾರ್ದಿಕ್‌ ತಮೋರೆ, ಸಿದ್ಧಾಂತ್‌ ಆದತ್‌ರಾವ್‌, ಶಮ್ಸ್‌ ಮುಲಾನಿ, ತನುಷ್‌ ಕೋಟ್ಯಾನ್‌, ಹಿಮಾಂಶು ಸಿಂಗ್‌, ಶಾರ್ದೂಲ್‌ ಠಾಕೂರ್‌, ಮೋಹಿತ್‌ ಅವಸ್ತಿ, ಮೊಹಮ್ಮದ್‌ ಜುನೇದ್‌ ಖಾನ್‌, ರಾಯ್‌ಸ್ಟನ್‌ ಡಾಯಸ್‌.