Saturday, 23rd November 2024

JaljeevanMission: ಜಲಜೀವನ್ ಮಿಷನ್ ಯೋಜನೆ ಅನುಷ್ಟಾನದಲ್ಲಿ ಕೇಂದ್ರಕ್ಕಿಂತ ರಾಜ್ಯ ಸರಕಾರದ ಪಾಲು ಹೆಚ್ಚಿದೆ-ಸಚಿವ ಎಂ.ಸಿ.ಸುಧಾಕರ್

ಚಿಂತಾಮಣಿ: ಮನೆ-ಮನೆಗೂ ನಲ್ಲಿ ಮೂಲಕ ನೀರು ಶುದ್ಧ ನೀರು ಪೂರೈಸುವ ಜಲಜೀವನ್ ಮಿಷನ್ ಯೋಜನೆ ಯಲ್ಲಿ ರಾಜ್ಯ ಸರ್ಕಾರದ ಪಾಲು ಶೇಕಡ.೫೫ ಇದ್ದರೆ ಕೇಂದ್ರ ಸರ್ಕಾರದ ಪಾಲು ಶೇಕಡ 45 ಮಾತ್ರ. ಸತ್ಯ ಹೀಗಿದ್ದರೂ ಕೆಲವರು ಇದು ಕೇಂದ್ರ ಸರ್ಕಾರ ಯೋಜನೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ವ್ಯಂಗ್ಯವಾಡಿದರು.

ತಾಲ್ಲೂಕಿನ ಕೈವಾರ ಗ್ರಾಮದಲ್ಲಿ “ಶುದ್ಧ ಕುಡಿಯುವ ನೀರಿನ ಘಟಕ’ವನ್ನು ಜನಬಳಕೆಗೆ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಜಲಜೀವನ್ ಮಿಷನ್ ಯೋಜನೆ ರೂಪಿಸಿದಾಗ ಕೇಂದ್ರದ ಪಾಲು ಶೇ.45, ರಾಜ್ಯ ಸರ್ಕಾರದ ಪಾಲು ತಲಾ ಶೇ.45, ಉಳಿದ ಶೇ.10 ರಷ್ಟು ಪಾಲನ್ನು ಆಯಾ ಗ್ರಾಮಗಳ ಸಮುದಾಯ ನೀಡಬೇಕಾಗಿತ್ತು. ಆದರೆ ಸಮುದಾಯದ ಪಾಲು ಶೇ.10 ರಷ್ಟನ್ನು ಬಹುತೇಕ ಗ್ರಾಮಗಳಲ್ಲಿ ಕೊಡಲು ಮುಂದೆ ಬರಲಿಲ್ಲ. ಹಾಗಾಗಿ ಸಮುದಾಯದ ಶೇ.10 ರಷ್ಟನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ. ಪ್ರಸ್ತುತ ರಾಜ್ಯ ಸರ್ಕಾರ ಶೇ.55 ಮತ್ತು ಕೇಂದ್ರ ಸರ್ಕಾರ ಶೇ.45 ರಷ್ಟು ಅನುದಾನವನ್ನು ನೀಡುತ್ತಿವೆ ಎಂದರು.

ಜಿಲ್ಲೆಯಲ್ಲಿ ಸುಮಾರು ೧೬೦೦ ಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ಕೇವಲ ೩೦೦-೩೫೦ ಗ್ರಾಮಗಳಲ್ಲಿ ಮಾತ್ರ ಜಲಜೀವನ್ ಮಿಷನ್ ಯೋಜನೆಯ ಪ್ರಕ್ರಿಯೆ ಆರಂಭವಾಗಿತ್ತು. ವಿಧಾನಸಭೆ ಚುನಾವಣೆಯ ಮೊದಲು ಯೋಜನೆಯ ಕಾಮಗಾರಿ ಕೈಗೊಳ್ಳಲು ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದರು. ಚುನಾವಣೆಯ ನಂತರ ನಾನು ಜಿಲ್ಲಾ ಕೇಂದ್ರದಲ್ಲಿ ಗುತ್ತಿಗೆದಾರರ ಸಭೆಯನ್ನು ಕರೆದು ಚರ್ಚೆ ನಡೆಸಿದೆ.ಗುತ್ತಿಗೆದಾರರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದೇನೆ ಎಂದು ತಿಳಿಸಿದರು.

ಈಗ ಜಿಲ್ಲೇ ಶೇಕಡ.೯೯ ರಷ್ಟು ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆ ಆರಂಭವಾಗಿದೆ.”ಸಿಪೆಟ್’ ಎಂಬ ಸಂಸ್ಥೆಗೆ ಪೈಪ್‌ಗಳ ಗುಣಮಟ್ಟದ ಪರೀಕ್ಷೆಗೆ ನೀಡಲಾಗಿದೆ. ಬಹುತೇಕ ಗ್ರಾಮಗಳ ಟೆಂಡರ್ ಆಗಿದೆ.೪ ಗ್ರಾಮಗಳಲ್ಲಿ ಮಾತ್ರ ಮರು ಟೆಂಡರ್ ಕರೆಯಲಾಗಿದೆ ಎಂದು ನುಡಿದರು.

ಕೇಂದ್ರ ಸರಕಾರ ಜಲಜೀವನ್ ಮಿಷನ್ ಯೋಜನೆ ಘೋಷಣೆಗೆ ಸಾಕಷ್ಟು ವರ್ಷ ಮೊದಲೇ ಚಿಂತಾಮಣಿ ಕ್ಷೇತ್ರದಲ್ಲಿ ಪ್ರತಿಯೊಂದು ಗ್ರಾಮಕ್ಕೂ ಶುದ್ಧ ನೀರು ಕೊಡುವ ಯೋಜನೆಯನ್ನು ನಾನು ರೂಪಿಸಿದ್ದೆ. ಓವರ್ ಹೆಡ್ ಟ್ಯಾಂಕ್ ಅಥವಾ ಜಿ.ಎಸ್.ಎಲ್.ಆರ್ ಟ್ಯಾಂಕ್‌ಗಳನ್ನು ಇದಕ್ಕಾಗಿ ಮಂಜೂರು ಮಾಡಿಸಿದ್ದೆ. ಬಹುತೇಕ ಕಡೆ ಟ್ಯಾಂಕ್ ಗಳ ನಿರ್ಮಾಣವೂ ಆಗಿತ್ತು. ಸಣ್ಣ-ಪುಟ್ಟ ಪೈಪ್ ಲೈನ್ ಕೆಲಸ ಬಾಕಿ ಇತ್ತು. ಚುನಾವಣಿಯಲ್ಲಿ ನಾನು ಸೋತ ನಂತರ ಕಳೆದ ೧೦ ವರ್ಷಗಳಿಂದ ಯಾರು ಕೂಡ ಆ ಕಡೆ ಗಮನಹರಿಸಲಿಲ್ಲ ಎಂದು ಮಾಜಿ ಶಾಸಕರ ಹೆಸರೇಳದೆ ಚುಚ್ಚಿದರು.

ತಾಲ್ಲೂಕಿನಲ್ಲಿ ಸುಮಾರು ೩೪೦ ಗ್ರಾಮಗಳಿದ್ದು ೬೫-೭೦ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿದೆ. ೨೦೧೨-೧೩ ರಲ್ಲೆ ಸರ್ಕಾರದಿಂದ ೮ ಶುದ್ಧ ಕುಡಿಯುವ ನೀರಿನ ಘಟಕ ಮಂಜೂರು ಆಗಿತ್ತು.”ಇಂಡೋ ಎಂಐಎಂ’ ಕಂಪನಿ ೪ ಘಟಕಗಳನ್ನು ನೀಡಿದೆ. ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ವಿನೂತನ ವಿನ್ಯಾಸದ ೯ ಘಟಕಗಳನ್ನು ನೀಡಲಾಗಿದೆ. ಜಿಲ್ಲಾ ಗಣಿಗಾರಿಕೆ ನಿಗಮದಿಂದ ೧ ಕೋಟಿ ರೂ ವೆಚ್ಚದಲ್ಲಿ ೧೩ ಘಟಕಗಳನ್ನು ಮಂಜೂರು ಮಾಡಿಸಿದೆ. ಈ ವರ್ಷದ ತಾಲ್ಲೂಕು ಪಂಚಾಯಿತಿ ಅನುದಾನದಲ್ಲಿ ೯ ಘಟಕಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

ಪ್ರತಿಯೊಂದು ಗ್ರಾಮದವರು ಘಟಕಗಳ ಬೇಡಿಕೆ ಇಡುತ್ತಿದ್ದಾರೆ. ಬೇಡಿಕೆಗಳು ಬಹಳಷ್ಟಿವೆ, ಎಲ್ಲವನ್ನು ಒಮ್ಮೆಲೇ ಮಾಡಲು ಸಾಧ್ಯವಿಲ್ಲ. ಹಂತ ಹಂತವಾಗಿ ಎಲ್ಲ ಗ್ರಾಮಗಳಿಗೂ ಘಟಕಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಉಮಾದೇವಿ,ಉಪಾಧ್ಯಕ್ಷೆ ಯಾಸ್ಮಿನ್ ತಾಜ್,ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ಎಸ್ ಎನ್ ಚಿನ್ನಪ್ಪ, ಬ್ಲಾಕ್ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷರಾದ ಡಾಬಾ ನಾಗರಾಜ್, ಮುಬೀನ್ ತಾಜ್, ಅಸ್ಲಾಂ ಪಾಷಾ ಪಿಟ್ಟು, ಮುಸ್ತಫಾ, ಮೌಲಾ, ಗೋವಿಂದಪ್ಪ, ಗ್ರಾಮ ಪಂಚಾಯತಿ ಸದಸ್ಯರಾದ ಅಂಬರೀಶ್, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಚಂದ್ರಶೇಖರ್, ಸಾಮ್ರಾಟ್, ಡಾಕ್ಟರ್ ವಿ ಅಮರ್, ಗೋವಿಂದರಾಜ, ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಆನಂದ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕರಿಬಸಪ್ಪ ಸೇರಿದಂತೆ ಸ್ಥಳೀಯರು ಮತ್ತಿತರರು ಭಾಗವಹಿಸಿದ್ದರು.

ಇದನ್ನೂ ಓದಿ: Chikkaballapur News: ಮಾರಕ ಕುಲಾಂತರಿ ತಳಿ ಬಿತ್ತನೆ ಬೀಜದ ವಿಷ ವರ್ತುಲಕ್ಕೆ ಸರಕಾರ ಅವಕಾಶ ನೀಡಬಾರದು- ಎಂ.ಆರ್.ಲಕ್ಷ್ಮೀನಾರಾಯಣ