Saturday, 23rd November 2024

Flyover Fail: ಹೂಡಿ ಮೇಲ್ಸೇತುವೆಯ ಬೇರಿಂಗ್‌ ವಿಫಲ: ವಾಹನ ಸವಾರರಿಗೆ ಆತಂಕ

flyover fail

ಬೆಂಗಳೂರು: ನಿರ್ಮಿಸಿ ಹತ್ತು ವರ್ಷವಾಗಿರುವ ಮೇಲ್ಸೇತುವೆಯೊಂದು ಬೆಂಗಳೂರಿನಲ್ಲಿ ಕುಸಿತದ (Flyover fail) ಭೀತಿಯಲ್ಲಿದ್ದು, ವಾಹನ ಸವಾರರಿಗೆ ಆತಂಕ ತಂದೊಡ್ಡಿದೆ. ರಾಜಧಾನಿಯ (Bangalore news) ಹೂಡಿಯಲ್ಲಿರುವ 10 ವರ್ಷ ಹಳೆಯದಾದ ಮೇಲ್ಸೇತುವೆಯ ನಾಲ್ಕು ಬೇರಿಂಗ್‌ಗಳು ವಿಫಲಗೊಂಡಿವೆ.

ಹೂಡಿಯಲ್ಲಿ ರೈಲ್ವೇ ಹಳಿಗೆ ಅಡ್ಡಲಾಗಿ ನಿರ್ಮಿಸಿರುವ ದಶಕದಷ್ಟು ಹಳೆಯದಾದ ಮೇಲ್ಸೇತುವೆಯ ನಾಲ್ಕು ಬೇರಿಂಗ್‌ಗಳು ಮುರಿದಿವೆ. ವಾಹನ ಬಳಕೆದಾರರಿಗೆ ಅಪಾಯ ತಂದೊಡ್ಡಿರುವ ಸೇತುವೆಯನ್ನು ತಕ್ಷಣ ದುರಸ್ತಿ ಮಾಡುವಂತೆ ನೈಋತ್ಯ ರೈಲ್ವೆ (ಎಸ್‌ಡಬ್ಲ್ಯೂಆರ್) ಅನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಸಂಪರ್ಕಿಸಿದೆ.

ಸೋಮವಾರ ತಪಾಸಣೆಯ ನಂತರ ಇಲ್ಲಿ ಭಾರಿ ವಾಹನಗಳನ್ನು ನಿಷೇಧಿಸುವ ಬಗ್ಗೆ ಸಂಚಾರ ಪೊಲೀಸರು ನಿರ್ಧರಿಸುವ ಸಾಧ್ಯತೆಯಿದೆ. ಐಟಿಪಿಎಲ್ ರಸ್ತೆಯನ್ನು ಅಯ್ಯಪ್ಪನಗರ ಮತ್ತು ವಸತಿ ಕಾಲೋನಿಗಳಿಗೆ ಸಂಪರ್ಕಿಸುವ ಮೇಲ್ಸೇತುವೆಯ ಬೇರಿಂಗ್‌ಗಳ ವೈಫಲ್ಯಗಳನ್ನು ನಿವಾಸಿಗಳು ತಿಳಿಸಿದ ನಂತರ ಭಾನುವಾರ ಸ್ಥಳಕ್ಕೆ ಡಿಎಚ್‌ಡಿ ಭೇಟಿ ನೀಡಿದರು.

ಬಿಬಿಎಂಪಿ ಎಂಜಿನಿಯರ್‌ಗಳು ಮತ್ತು ರೈಲ್ವೆ ಅಧಿಕಾರಿಗಳು ಮೇಲ್ಸೇತುವೆಯನ್ನು ಪರಿಶೀಲಿಸಿ ತಾತ್ಕಾಲಿಕ ಪರಿಹಾರವನ್ನು ಒದಗಿಸಿದ್ದಾರೆ ಎಂದು ಸ್ಥಳದದ ನಿವಾಸಿಗಳು ಹೇಳಿದ್ದಾರೆ. ಸಮಸ್ಯೆ ಗಂಭೀರವಾಗಿದೆ ಎಂದು ಮಹದೇವಪುರ ಕಾರ್ಯಪಡೆಯ ಸದಸ್ಯ ಕ್ಲೆಮೆಂಟ್ ಜಯಕುಮಾರ್ ತಿಳಿಸಿದ್ದಾರೆ.

“ಬಿಬಿಎಂಪಿ ಇಂಜಿನಿಯರ್‌ಗಳು ತಾತ್ಕಾಲಿಕವಾಗಿ ಬೇರಿಂಗ್ ಅನ್ನು ಬಲಪಡಿಸಿದ್ದಾರೆ. ಲಂಬವಾದ ಸ್ತಂಭ ಹಾಗೂ ಅಡ್ಡವಾಗಿ ಹಾದುಹೋಗುವ ಬೀಮ್‌ಗಳ ನಡುವೆ ಇರುವ, ಭಾಗಶಃ ರಬ್ಬರ್‌ನಿಂದ ಮಾಡಲಾದ ನಾಲ್ಕು ಬೇರಿಂಗ್‌ಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. ಭಾರೀ ವಾಹನಗಳನ್ನು ಇಲ್ಲಿ ನಿಲ್ಲಿಸಲು ಶಿಫಾರಸು ಮಾಡಲಾಗಿದೆ” ಎಂದು ಅವರು ಹೇಳಿದರು.

ಕಸ್ಟಮ್-ಮೇಡ್ ಬೇರಿಂಗ್‌ನ ಖರೀದಿಗೆ ಸುಮಾರು ಎರಡರಿಂದ ಮೂರು ತಿಂಗಳುಗಳು ಬೇಕಾಗುತ್ತವೆ ಎಂದು ಎಂಜಿನಿಯರ್ ತಿಳಿಸಿದ್ದಾರೆ. ಈ ರೈಲ್ವೆ ಸೇತುವೆಯನ್ನು 2014ರಲ್ಲಿ SWR ನಿರ್ಮಿಸಿದೆ.

ಬಿಬಿಎಂಪಿಯ ಕಾರ್ಯನಿರ್ವಾಹಕ ಎಂಜಿನಿಯರ್ ಉದಯ್ ಚೌಗುಲೆ ಮಾತನಾಡಿ, ದುರಸ್ತಿ ಕಾರ್ಯಕ್ಕೆ ಭಾಗಶಃ ಧನಸಹಾಯ ನೀಡುವ ಭರವಸೆಯನ್ನು ನೀಡಿ ನಾಗರಿಕ ಸಂಸ್ಥೆ SWR ಗೆ ಪತ್ರ ಬರೆದಿದೆ. ಮೇಲ್ಸೇತುವೆಯನ್ನು ಎಸ್‌ಡಬ್ಲ್ಯುಆರ್‌ನಿಂದ ನಿರ್ಮಿಸಲಾಗಿರುವುದರಿಂದ ಅದನ್ನು ದುರಸ್ತಿ ಮಾಡುವಂತೆ ಮನವಿ ಮಾಡಿದ್ದೇವೆ ಎಂದರು.

ವಾಹನಗಳು ಸಂಚರಿಸುವ ಸ್ಲ್ಯಾಬ್ ಸುಮಾರು 1,000 ಟನ್ ತೂಕವಿದೆ. ದುರಸ್ತಿ ಕಾರ್ಯ ಸುಲಭವಿಲ್ಲ. “ಮೇಲ್ಸೇತುವೆ ಕುಸಿಯುವ ನಿರೀಕ್ಷೆಯಿಲ್ಲ. ಆದರೆ ನಾಲ್ಕು ಬೇರಿಂಗ್‌ಗಳಿಗೆ ಗಮನಾರ್ಹ ಹಾನಿಯಾಗಿದೆ. ಈ ಫ್ಲೈಓವರ್‌ ಮೇಲೆ ಪ್ರಯಾಣಿಸುವುದನ್ನು ತಡೆಯಬೇಕಿದೆ. ಬೇರಿಂಗ್ ಅನ್ನು ಬದಲಾಯಿಸಲು ತಾತ್ಕಾಲಿಕವಾಗಿ ಸ್ಲ್ಯಾಬ್ ಅನ್ನು ಗರ್ಡರ್‌ಗಳ ಮೂಲಕ ಎತ್ತುವ ಅಗತ್ಯವಿದೆ” ಎಂದು ಚೌಗುಲೆ ಹೇಳಿದರು.

ಭಾರೀ ವಾಹನಗಳಿಗೆ ಮೇಲ್ಸೇತುವೆಯನ್ನು ಸೋಮವಾರದಿಂದ ಮುಚ್ಚಲಾಗುತ್ತಿದೆ ಎಂದು ಉಪ ಪೊಲೀಸ್ ಆಯುಕ್ತ (ಸಂಚಾರ, ಪೂರ್ವ) ಕುಲದೀಪ್ ಕುಮಾರ್ ಜೈನ್ ಹೇಳಿದ್ದಾರೆ. “ಸೋಮವಾರ ಸ್ಥಳ ಪರಿಶೀಲನೆ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುವುದು” ಎಂದು ಅವರು ಹೇಳಿದರು.

ಇದನ್ನೂ ಓದಿ: Bengaluru vs North Indians: ಉತ್ತರದವರು ಹೋದರೆ ಬೆಂಗಳೂರು ನಗರ ಖಾಲಿ ಎಂದಾಕೆಗೆ ಕನ್ನಡಿಗರ ತರಾಟೆ