Saturday, 23rd November 2024

Chikkaballapur News: ವಸತಿ ನಿಲಯ ಸಮಸ್ಯೆಗಳ ಸರಿಪಡಿಸಲು ಆಗ್ರಹಿಸಿ ಹಾಸ್ಟೆಲ್ ವಿದ್ಯಾರ್ಥಿಗಳ ಪ್ರತಿಭಟನೆ

ಬಾಗೇಪಲ್ಲಿ: ತಮಗೆ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ಶನಿವಾರ  ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳು ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಗಮನ ಸೆಳೆದರು.

ಸಮಾಜ ಕಲ್ಯಾಣ ಇಲಾಖೆಗೆ ಒಳಪಡುವ ಬಾಲಕರ ಹಾಸ್ಟೆಲ್‌ನಲ್ಲಿ ಹಲವಾರು ದಿನಗಳಿಂದ ಶುಚಿ ಮತ್ತು ರುಚಿಯಾದ ಆಹಾರ ತಯಾರಿಸದೇ, ಬೇಕಾಬಿಟ್ಟಿ ಅಡುಗೆ ಮಾಡುತ್ತಿದ್ದಾರೆ. ಹಲವು ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದರೂ ಪ್ರಯೋಜನವಾಗಲಿಲ್ಲವಾದ್ದರಿಂದ ಪ್ರತಿಭಟನೆ ನಡೆಸುವುದು ಅನಿವಾರ್ಯವಾಯಿತು ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ನಿಲಯಕ್ಕೆ ಅಪೌಷ್ಟಿಕ, ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ. ಮೂಲ ಸೌಕರ್ಯ ಒದಗಿಸದೇ ಅವ್ಯವಹಾರ ನಡೆಸುತ್ತಿರುವುದರ ವಿರುದ್ಧ ಸೂಕ್ತ ತನಿಖೆಗೆ ನಡೆಸಬೇಕು ಎಂದು ಆಗ್ರಹಿಸಿ ಎಸ್‌ಎಫ್‌ಐ ಹಾಗೂ ವಿವಿಧ ಸಂಘಗಳ ನೇತೃತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆ ಮುಂದೆ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಶನಿವಾರ ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿ ನಿಲಯದಲ್ಲಿ ಕೆಲವು ದಿನಗಳಿಂದ ಕೊಳೆತು ನಾರುತ್ತಿರುವ ತರಕಾರಿ ಬಳಸುತ್ತಿದ್ದಾರೆ.ಇದು ವಿದ್ಯಾರ್ಥಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ ಎಂದು ದೂರಿದರು.

ಹಾಸಿಗೆ, ದಿಂಬು, ಹೊದಿಕೆ, ಸೊಳ್ಳೆ ಪರದೆ, ಪೇಸ್ಟ್, ಬ್ರೆಶ್, ಸೋಪು, ಪುಸ್ತಕಗಳು ಹಾಗೂ ಆಟಿಕೆ ವಸ್ತುಗಳನ್ನು ಕೊಡುತ್ತಿಲ್ಲ. ಗುಣಮಟ್ಟದ ಆಹಾರ ಪೂರೈಸಬೇಕು. ವಿದ್ಯಾರ್ಥಿಗಳಿಗೆ ಲಭ್ಯವಾಗಬೇಕಾದ ಸವಲತ್ತುಗಳನ್ನು ದುರ್ಬಳಕೆ ಮಾಡಿಕೊಂಡವರ ವಿರುದ್ಧ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಾನೂನು ರೀತಿ ಶಿಕ್ಷೆ ನೀಡಬೇಕು. ನಿಲಯಗಳಿಗೆ ಮೂರು ವರ್ಷಗಳಿಂದ ಬಿಡುಗಡೆಯಾಗಿರುವ ಅನುದಾನದ ಬಗ್ಗೆ ಸಮಗ್ರ ತನಿಖೆಯಾಗಬೇಕು. ಪ್ರತಿ ತಿಂಗಳು ತಪ್ಪದೆ ವೈದ್ಯಕೀಯ ತಪಾಸಣೆ ಮಾಡಿಸಬೇಕು  ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಇವರ ಪ್ರತಿಭಟನೆಗೆ ದಸಂಸ,ಎಸ್‌ಎಸ್‌ಡಿ,ಸಿಪಿಎA ಸೇರಿದಂತೆ ಹಲವಾರು ಸಂಘಟನೆಗಳ ಮುಖಂಡರು ಬೆಂಬಲ ವ್ಯಕ್ತಪಡಿಸಿದರು.

ಈ ವೇಳೆ ಸಿಪಿಎಂ ಪಕ್ಷದ ಹಿರಿಯ ಮುಖಂಡ ಚನ್ನರಾಯಪ್ಪ ಮಾತನಾಡಿ, ಗಡಿಭಾಗದ ದಲಿತ, ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅನುಕೂಲಕ್ಕೆ ಸರಕಾರವು ಹಲವಾರು ಸೌಲಭ್ಯಗಳನ್ನು ಒದಗಿಸಿದೆ. ಅವುಗಳ ಸದ್ಬಳಕೆಗಿಂತ ದುರ್ಬಳಕೆಯೇ ಹೆಚ್ಚಾಗುತ್ತಿರುವುದು ಖಂಡನೀಯ. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮೆನು ಪ್ರಕಾರ ಗುಣಮಟ್ಟದ ಆಹಾರ ನೀಡಬೇಕು. ಆದರೆ ಕಾಟಾಚಾರವೆಂಬAತೆ ಇಲ್ಲಿನ ಹಾಸ್ಟೆಲ್ ನಲ್ಲಿ ಅಡುಗೆ ಮಾಡುತ್ತಾರೆ. ಮನುಷ್ಯರು ತಿನ್ನಲಂತೂ ಸಾಧ್ಯವಾಗದಷ್ಟು ಅದ್ವಾನವಾಗಿ ಮಾಡುತ್ತಾರೆ. ಇಂತಹ ನಿರ್ಲಕ್ಷ್ಯದ ವಿರುದ್ಧ ಶೀಘ್ರದಲ್ಲೆ ದಲಿತ,ವಿದ್ಯಾರ್ಥಿ ಸಂಘಟನೆಗಳು ಸೇರಿದಂತೆ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ತಿಳಿಸಿದರು.

ಈ ವೇಳೆ ಕರ್ನಾಟಕ ದಲಿತ ಸಂಗರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಎಂ.ಜಿ ಕಿರಣ್ ಕುಮಾರ್, ತಾಲೂಕು ಸಂಚಾಲಕ ಎಸ್.ಎನ್ ನರಸಿಂಹಪ್ಪ, ಡಾ.ಬಿ.ಆರ್ ಅಂಬೇಡ್ಕರ್ ವಸತಿ ನಿಲಯದ ವಿದ್ಯಾರ್ಥಿಗಳಾದ ವೆಂಕಟೇಶ್, ಆದರ್ಶ, ವಿಷ್ಣುವರ್ಧನ, ಶಿವ, ನಿತಿನ್, ಗಂಗರಾಜು, ದರ್ಶನ, ಭರತ್, ಬಾಲಾಜಿ, ಅರುಣ್, ನವೀನ್, ನರೇಂದ್ರ, ವಿಜಯ್ ಕುಮಾರ್, ಅರವಿಂದ್, ಅನಿಲ್ ಮತ್ತಿತರರು ಇದ್ದರು.

ಇದನ್ನೂ ಓದಿ: Chikkaballapur News: ಗ್ರಾಮ ಆಡಳಿತಾಧಿಕಾರಿಗಳ ಅನಿರ್ದಿಷ್ಟಾವಧಿ ಮುಷ್ಕರ