ಕಾನ್ಪುರ: ಬಾಂಗ್ಲಾದೇಶ(IND vs BAN) ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆರ್.ಅಶ್ವಿನ್(R Ashwin) ಅವರು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗುವ ಮೂಲಕ ಶ್ರೀಲಂಕಾದ ದಿಗ್ಗಜ ಮುತ್ತಯ್ಯ ಮುರಳೀಧರನ್(Muttiah Muralitharan) ಅವರ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ. ಉಭಯ ಆಟಗಾರರು 11 ಬಾರಿ ಟೆಸ್ಟ್‌ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಅಶ್ವಿನ್ ಇನ್ನೊಂದು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರೆ ಅಗ್ರಸ್ಥಾನಕ್ಕೇರುವ ಮೂಲಕ ಮುರಳೀಧರನ್ ದಾಖಲೆ ಮುರಿಯಲಿದ್ದಾರೆ. ಜಾಕ್ ಕ್ಯಾಲಿಸ್(9) 2ನೇ ಸ್ಥಾನದಲ್ಲಿದ್ದಾರೆ. ಸರ್ ರಿಚರ್ಡ್ ಹ್ಯಾಡ್ಲಿ(8), ಇಮ್ರಾನ್ ಖಾನ್(8), ಶೇನ್ ವಾರ್ನ್(8) ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ.
ಅಶ್ವಿನ್ ಚೆನ್ನೈಯಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ 6 ವಿಕೆಟ್ ಜತೆಗೆ ಶತಕ ಕೂಡ ಬಾರಿಸಿ ಮಿಂಚಿದ್ದರು. ದ್ವಿತೀಯ ಟೆಸ್ಟ್‌ನಲ್ಲಿ ಒಟ್ಟು 5 ವಿಕೆಟ್ ಕಿತ್ತ ಸಾಧನೆ ತೋರಿದರು.
ಗೆಲುವಿನಲ್ಲೂ ದಾಖಲೆ ಬರೆದ ಭಾರತ
ಭಾರತ ಈ ಗೆಲುವಿನೊಂದಿಗೆ ಅತಿ ಹೆಚ್ಚು ಟೆಸ್ಟ್ ಗೆಲುವು ಸಾಧಿಸಿದ ತಂಡಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಭಾರತದ ಗೆಲುವಿನ ಸಂಖ್ಯೆ 180ಕ್ಕೆ ಏರಿದೆ. ಇದೇ ವೇಳೆ 179 ಗೆಲುವು ಸಾಧಿಸಿದ್ದ ದಕ್ಷಿಣ ಆಫ್ರಿಕಾವನ್ನು ಹಿಂದಿಕ್ಕಿದೆ. ಈ ಯಾದಿಯಲ್ಲಿ ಆಸ್ಟ್ರೇಲಿಯಾ(414) ಅಗ್ರಸ್ಥಾನದಲ್ಲಿದೆ. ಇಂಗ್ಲೆಂಡ್(397) ದ್ವಿತೀಯ ಸ್ಥಾನದಲ್ಲಿದೆ.
ಇದನ್ನೂ ಓದಿ IND vs BAN: ಭಾರತದ ‘ಕ್ಲೀನ್ ಸ್ವೀಪ್’ ಸಾಧನೆ
ಪಂದ್ಯ ಗೆದ್ದ ಭಾರತ
52 ರನ್‌ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದ ಬಾಂಗ್ಲಾ ನಾಲ್ಕನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್‌ಗೆ 26 ರನ್ ಗಳಿಸಿತ್ತು. ಅಂತಿಮ ದಿನವಾದ ಮಂಗಳವಾರ ಬ್ಯಾಟಿಂಗ್ ಮುಂದುವರಿಸಿದ ಬಾಂಗ್ಲಾ ನಿಂತು ಆಡುವ ಯೋಜನೆ ನಡೆಸಿದರೂ ಭಾರತೀಯ ಬೌಲರ್‌ಗಳು ಇದಕ್ಕೆ ಅನುವು ಮಾಡಿಕೊಡಲಿಲ್ಲ. ಜಡೇಜಾ, ಅಶ್ವಿನ್ ಮತ್ತು ಬುಮ್ರಾ ಜಿದ್ದಿಗೆ ಬಿದ್ದವರಂತೆ ವಿಕೆಟ್ ಬೇಟೆಯಾಡಿ ಬಾಂಗ್ಲಾವನ್ನು ಕಾಡಿದರು. ಮೂವರು ಬೌಲರ್‌ಗಳು ತಲಾ ಮೂರು ವಿಕೆಟ್ ಕೆಡವಿ ಮಿಂಚಿದರು.
7 ರನ್ ಗಳಿಸಿದ್ದ ಆರಂಭಿಕ ಆಟಗಾರ ಶಾದ್ಮನ್ ಇಸ್ಲಾಂ ಅಂತಿಮ ದಿನ 43 ರನ್ ಬಾರಿಸುವ ಮೂಲಕ ಅರ್ಥಶತಕ ಪೂರ್ತಿಗೊಳಿಸಿದರು. 101 ಎಸೆತ ಎದುರಿಸಿ ನಿಂತ ಶಾದ್ಮನ್ ಭರ್ತಿ 50 ರನ್ ಬಾರಿಸಿ ಆಕಾಶ್ ದೀಪ್‌ಗೆ ವಿಕೆಟ್ ಒಪ್ಪಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿ ತಂಡಕ್ಕೆ ಆಸರೆಯಾಗಿದ್ದ ಮಾಮಿನುಲ್ ಹಕ್ ಕೇವಲ 2 ರನ್‌ಗೆ ವಿಕೆಟ್ ಕೈಚೆಲ್ಲಿದರು. ನಾಯಕ ನಜ್ಮುಲ್ ಹೊಸೈನ್ 19 ರನ್, ಶಕೀಬ್ ಅಲ್ ಹಸನ್ ಶೂನ್ಯಕ್ಕೆ ನಿರ್ಗಮಿಸಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಬೇರೂರಿ ನಿಂತ ಅನುಭವಿ ಮುಶ್ಫಿಕರ್ ರಹೀಂ ತಾಳ್ಮೆಯುತ ಬ್ಯಾಟಿಂಗ್ ಮೂಲಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಲು ಶಕ್ತಿ ಮೀರಿ ಪ್ರಯತ್ನಪಟ್ಟರು. ಅಂತಿಮವಾಗಿ 37 ರನ್ ಗಳಿಸಿ ಜಸ್‌ಪ್ರೀತ್ ಬುಮ್ರಾ ಎಸೆತಕ್ಕೆ ಕ್ಲೀನ್ ಬೌಲ್ಡ್ ಆದರು. ಇವರ ವಿಕೆಟ್ ಪತನಗೊಳ್ಳುತ್ತಿದಂತೆ ಬಾಂಗ್ಲಾ ಕೂಡ ಆಲೌಟ್ ಆಯಿತು.
47 ಓವರ್ ಆಡಿದ ಬಾಂಗ್ಲಾ 146 ರನ್ ಬಾರಿಸಿ 94 ರನ್ ಮುನ್ನಡೆ ಸಾಧಿಸಿತು. ಗೆಲುವಿಗೆ 95ರನ್ ಗುರಿ ಪಡೆದ ಭಾರತ 3 ವಿಕೆಟ್‌ಗೆ 98 ರನ್ ಬಾರಿಸಿ ಗೆಲುವಿನ ನಗೆ ಬೀರಿತು. ಜೈಸ್ವಾಲ್ 45 ಎಸೆತಗಳಿಂದ 51 ರನ್ ಚಚ್ಚಿದರೆ, ವಿರಾಟ್ ಕೊಹ್ಲಿ 29 ರನ್ ಬಾರಿಸಿ ಅಜೇಯರಾಗಿ ಉಳಿದರು. ಬಾಂಗ್ಲಾ ಪರ ದ್ವಿತೀಯ ಇನಿಂಗ್ಸ್‌ನಲ್ಲಿ ಮೆಹಿದಿ ಹಸನ್ ಮಿರಾಜ್ 2 ವಿಕೆಟ್ ಕಿತ್ತರು.