ನೆನಪು
ವಿಕ್ರಮ ಜೋಶಿ
1995ರಲ್ಲಿ ಹೊಸ ವರ್ಷದ ಪ್ರಯುಕ್ತ ಸ್ಯಾಮ್ಸಂಗ್ ಕಂಪನಿ ತಮ್ಮ ಉದ್ಯೋಗಿಗಳಿಗೆ ಮೊಬೈಲ್ ಫೋನ್ ಗಳನ್ನು ಉಡುಗೊರೆ ಯಾಗಿ ಕೊಟ್ಟಿತು. ಅದರಲ್ಲಿ ಬಹಳಷ್ಟು ಫೋನ್‌ಗಳು ಡಿಫೆಕ್ಟಿವ್ ಎನ್ನುವ ತಕರಾರು ಬಂತು.
ಕೆಲವು ಫೋನ್‌ಗಳಂತು ಬಳಸುವುದಕ್ಕೂ ಯೋಗ್ಯವಿರಲಿಲ್ಲ. ಈ ವಿಷಯ ಕಂಪನಿಯ ಚೇರ್ಮನ್‌ಗೆ ತಲುಪುತ್ತದೆ. ಮಾರನೆಯ ದಿನವೇ ಅವರು ಫ್ಯಾಕ್ಟರಿಗೆ ಬಂದು ಅಲ್ಲಿರುವ ಒಂದೂವರೆ ಲಕ್ಷ ಮೊಬೈಲ್ ಫೋನ್, ಟಿವಿ, ಇನ್ನಿತರೆ ಎಲೆಕ್ಟ್ರಾನಿಕ್ ಗೆಜೆಟ್ ಗಳನ್ನು ಎದುರಿನ ಅಂಗಳದಲ್ಲಿಟ್ಟು ಬೆಂಕಿ ಕೊಟ್ಟು ಸುಡುತ್ತಾರೆ. ಸುಮಾರು ಐದು ಮಿಲಿಯನ್ ಡಾಲರ್ ಮೌಲ್ಯದ ಸಾಧನಗಳು ಕಣ್ಣನ್ನು ಮುಚ್ಚಿ ಒಡೆಯುವುದರಲ್ಲಿ ಬೂದಿ! ನೀವು ಇಂತಹದೇ ಕಳಪೆ ಮಟ್ಟದ ಉತ್ಪನ್ನಗಳನ್ನು ತಯಾರಿಸಿದರೆ ಹೀಗೆಯೇ
ಸುಡಲಾಗುವುದು ಎನ್ನುವ ಸಂದೇಶ ಕೊಟ್ಟಿದ್ದರು ಸ್ಯಾಮ್ಸಂಗ್ ಕಂಪನಿಯ ಎರಡನೇ ಚೇರ್ಮನ್. ಇದು ಸ್ಯಾಮ್ಸಂಗ್ ಗ್ರೂಪ್‌ನ ಉತ್ಕೃಷ್ಟತೆಯ ಸಾಧನೆಯ ಪಯಣದ ಒಂದು ಕಿರುನೋಟ.
ಇಂತಹ ಕಠೋರವಾದ ನಿರ್ಧಾರಗಳೇ ಇಂದು ಸ್ಯಾಮ್ಸಂಗ್ ಬ್ರ್ಯಾಂಡನ್ನು ಜಗತ್ತಿನ ಮೂಲೆ ಮೂಲೆಗೆ ತಲುಪುವಂತೆ ಮಾಡಿದೆ. ಈ
ಸಾಧನೆಯ ರೂವಾರಿ ಕಳೆದ ವಾರವಷ್ಟೇ ನಿಧನರಾದ 78 ವರ್ಷದ ಕುನ್-ಹೀ ಲೀ. ಇವರ ತಂದೆ ಬುಯ್ಯಂಗ್ ಚಲ್ ಲೀ ಕಂಪನಿಯ ಸ್ಯಾಮ್ಸಂಗ್ ಕಂಪನಿಯ ಸಂಸ್ಥಾಪಕರು. 1987ರಲ್ಲಿ ಅವರ ನಿಧನದ ನಂತರ ಕುನ್-ಹೀ ಲೀ ಮುಖ್ಯ ಕಾರ್ಯದರ್ಶಿ ಯಾಗಿ ಚುಕ್ಕಾಣಿ ಹಿಡಿಯುತ್ತಾರೆ.
ಎಂಬತ್ತು ವರ್ಷಗಳ ಹಿಂದೆ ಕೇವಲ ಮೂವತ್ತು ಡಾಲರ್‌ನಲ್ಲಿ ಶುರುವಾದ ಪಯಣ ಇದು, ಇವತ್ತು ಸ್ಯಾಮ್ಸಂಗ್ ಮುನ್ನೂರು ಬಿಲಿಯನ್ ಡಾಲರ್ ಗಳಿಗೂ ಹೆಚ್ಚು ಮೌಲ್ಯದ ಜಗತ್ತಿನ ಅತೀ ದೊಡ್ಡ ಎಲೆಕ್ಟ್ರಾನಿಕ್ ಕಂಪನಿ. ಸ್ಯಾಮ್ಸಂಗ್ ಎನ್ನುವ ಬ್ರ್ಯಾಂಡನ್ನು ಜಗತ್ತಿಗೆ ಮುಟ್ಟಿಸಿದ ಶ್ರೇಯಸ್ ಅದರ ಚೇರ್ಮನ್ ಕುನ್ – ಹೀ ಲೀ ಅವರಿಗೆ ಸಲ್ಲುತ್ತದೆ. ದಕ್ಷಿಣ ಕೋರಿಯಾ ಇಂದು ಜಗತ್ತಿನ ಅತೀ ದೊಡ್ಡ ಎಕಾನಮಿ ಆಗಲು ಕಾರಣ ಸ್ಯಾಮ್ಸಂಗ್ ಹಾಗೂ ಅದರ ಚೇರ್ಮನ್ ಲೀ. ಒಂದು ಕಾಲದಲ್ಲಿ ದಕ್ಷಿಣ ಕೋರಿಯಾದ ರಫ್ತಿನ ಕಾಲು ಭಾಗ ಸ್ಯಾಮ್ಸಂಗ್ ಕಂಪನಿಯ ಉತ್ಪನ್ನಗಳೇ ಆಗಿದ್ದವು.
ಸ್ಯಾಮ್ಸಂಗ್ 75 ಬೇರೆ ಬೇರೆ ಕ್ಷೇತ್ರದಲ್ಲಿದ್ದು, ಐದು ಲಕ್ಷಕ್ಕೂ ಹೆಚ್ಚು ಉದ್ಯೋೋಗಿಗಳು, 600ಕ್ಕೂ ಹೆಚ್ಚು ಘಟಕಗಳು, 65 ದೇಶಗಳಲ್ಲಿ ನೆಲೆ ಬಿಟ್ಟಿದೆ. ಲೀ ಅವರ ಕಾಲದಲ್ಲಿ ಕಂಪನಿಯ ರೆವಿನ್ಯೂ 41 ಪಟ್ಟು, ರಫ್ತು 30 ಪಟ್ಟು ಹೆಚ್ಚಿದೆ. ಇದೇನು
ಸಾಮಾನ್ಯವೇ? ಇಂದು ಜಗತ್ತಿನಲ್ಲಿ ಜನಪ್ರಿಯ 26 ವಿವಿಧ ಎಲೆಕ್ಟ್ರಾನಿಕ್ ಉತ್ಪನ್ನಗಳಲ್ಲಿ ಅತೀ ಹೆಚ್ಚು ಮಾರ್ಕೆಟ್ ಷೇರು
ಇವರದ್ದಿದೆ. ಜಗತ್ತಿನ ಪ್ರಮುಖ ಕ್ರಿಯಾಶೀಲ ಕಂಪನಿಗಳ ಪಟ್ಟಿಯಲ್ಲಿ ಇದರದ್ದು ಎರಡನೇಯ ಸ್ಥಾನ.
ಪ್ರತಿ ವರ್ಷ 5000ಕ್ಕೂ ಹೆಚ್ಚು ಪೇಟೆಂಟ್ ಇವರದ್ದು. ಹೀಗೆ ಲೀ ತಮ್ಮ ಕಾಲಾವಧಿಯಲ್ಲಿ ಸ್ಯಾಮ್ಸಂಗ್ ಗ್ರೂಪ್‌ನ ಜಗತ್ತಿನ
ದೊಡ್ಡದಾದ ಆಲದ ಮರವಾಗಿ ಬೆಳೆಸಿದ್ದಾರೆ. ಇಷ್ಟೊಂದು ದೂರದ ಹಾದಿ ಸುಲಭವಾಗಿರಲಿಲ್ಲ, ಆದರೆ ಸಾಧಿಸುವ ಛಲವಿದ್ದರೆ ಎದುರಾಗುವ ನೂರು ಕಷ್ಟಗಳನ್ನು ಪುಡಿ ಪಡಿ ಮಾಡಬಲ್ಲ ತಾಕತ್ತು ಬರುತ್ತದೆ ಎನ್ನುವುದನ್ನು ಕಲಿಸಿ ಹೋದವರು ಕುನ್ – ಹೀ ಲೀ. ಲೀ ನೇತೃತ್ವದಲ್ಲಿ ಸ್ಯಾಮ್ಸಂಗ್ ಬೆಳೆದು ಬಂದ ದಾರಿ ಒಂದು ಸಣ್ಣ ಅಂಗಡಿಯಲ್ಲಿ ತರಕಾರಿ ಹಾಗೂ ಮೀನು ಮಾರಾಟ ಮಾಡುತ್ತಿದ್ದ ಕಂಪನಿ ಸ್ಯಾಮ್ಸಂಗ್!
ಕೊರಿಯನ್ ಭಾಷೆಯಲ್ಲಿ ಸ್ಯಾಮ್ಸಂಗ್ ಅಂದರೆ ‘ಮೂರು ನಕ್ಷತ್ರಗಳು’ ಎಂದರ್ಥ. ಉತ್ತರ, ದಕ್ಷಿಣ ಅಂತ ಇರಲಿಲ್ಲ, ಕೋರಿಯಾ
ಮೊದಲು ಜಪಾನಿನ ಆಳ್ವಿಕೆಯಲ್ಲಿತ್ತು. ಯುದ್ಧದ ನಂತರ ಅವರು ಹೋದ ಮೇಲೆ ಕೋರಿಯಾ ಬೆಳೆಯಲು ಪ್ರಾರಂಭಿಸಿತು. ಅದರ ಜೊತೆಗೆ ಸ್ಯಾಮ್ಸಂಗ್ ಕೂಡ. ಮೊದಲು ತರಕಾರಿ, ದಿನಸಿ ಅಂಗಡಿ ನಂತರ ಸಕ್ಕರೆ ಕಾರ್ಖಾನೆ, ಬಟ್ಟೆಯ ಮಿಲ್, ಇನ್ಸೂರೆನ್ಸ್ ಕಂಪನಿ ಹೀಗೆ ಬೆಳೆಯುತ್ತಾ 1960ರ ಸುಮಾರಿಗೆ ಅವರು ಎಲೆಕ್ಟ್ರಾನಿಕ್ಸ್ ಜಗತ್ತಿಗೆ ಹೆಜ್ಜೆಯಿಟ್ಟರು.
ಸ್ಯಾಮ್ಸಂಗ್ ಮೊದಲ ಕಪ್ಪು ಬಿಳುಪು ಟಿವಿ ತಯಾರಿಸಿದ್ದು 1969ರಲ್ಲಿ. ಆಗ ಅವರು ತಂತ್ರಜ್ಞಾನದಲ್ಲಿ ಜಪಾನ್ ಹಾಗೂ ಅಮೆರಿಕನ್ ಕಂಪನಿಗಳಿಗಿಂತ ಇಪ್ಪತ್ತು ವರ್ಷ ಹಿಂದಿದ್ದರು. ಕ್ವಾಲಿಟಿಗಿಂತ ಕ್ವಾಂಟಿಟಿ ಮುಖ್ಯವಾಗಿತ್ತು. ಮೊದಲು ಟಿವಿ ನಂತರ ಪ್ರಿಡ್ಜ್, ಮೈಕ್ರೊವೇವ್ ಓವನ್, ವಿಸಿಆರ್, ಹೀಗೆ ಮೊಬೈಲ್ ತನಕವೂ ಬ್ಯುಸಿನೆಸ್ ಬೆಳೆಯುತ್ತಾ ಬಂತು. ತಂದೆ ಲೀ ಕಾಲದಲ್ಲಿ ಹೆಚ್ಚಾಗಿ ಸ್ಯಾಮ್ಸಂಗ್ ಉತ್ಪನ್ನಗಳಿಗೆ ದಕ್ಷಿಣ ಕೋರಿಯಾ ಮಾತ್ರ ಇವರ ಮಾರುಕಟ್ಟೆಯಾಗಿತ್ತು. ಕಂಪನಿ ಬೆಳೆಯಬೇಕು ಅಂದರೆ ಹೊರದೇಶಕ್ಕೂ ಹೋಗಿ ಮಾರಾಟ ಮಾಡಬೇಕು ಎನ್ನುವುದು ಹೊಸ ಚೇರ್ಮನ್ ಲೀ ಅವರ ವಿಚಾರ. ಆದರೆ ಇವರ ಹತ್ತಿರ ತಂತ್ರಜ್ಞಾನ, ಕ್ವಾಲಿಟಿ ಎರಡೂ ಇರುವುದಿಲ್ಲ.
ಸೆಮಿಕಂಡಕ್ಟರ್ ಕೈಗಾರಿಕೆಯಲ್ಲಿ ಅಮೆರಿಕ ಹಾಗೂ ಜಪಾನ್ ಎತ್ತಿದ ಕೈ. ಭವಿಷ್ಯ ಸೆಮಿಕಂಡಕ್ಟರ್ ನಲ್ಲಿಯೇ ಇದೆ ಎಂದು ಮನಗಂಡ ಕುನ್ – ಹೀ ಲೀ ಕಂಪನಿಯ ದಿಶೆಯನ್ನೇ ಬದಲಾಯಿಸುವ ನಿರ್ಧಾರ ಮಾಡಿದರು. ಸೆಮಿಕಂಡಕ್ಟರ್ ತಯಾರಿಕೆಗೆ ಕೈ ಹಾಕುತ್ತಾರೆ, ನಮಗೆ ಇನ್ನು ಮುಂದೆ ಕ್ವಾಲಿಟಿ ಮುಖ್ಯ ಕ್ವಾಂಟಿಟಿ ಅಲ್ಲ ಎಂದು ಘೋಷಣೆ ಮಾಡುತ್ತಾರೆ. ಕ್ವಾಲಿಟಿ ಮ್ಯಾನೇ ಜ್ಮೆಂಟ್ ಅನ್ನು ತರುವುದಕ್ಕಾಗಿ ಹೊಸ ಸ್ಟ್ರ್ಯೊಟಜಿಯನ್ನು ರೂಪಿಸುತ್ತಾರೆ. ಇಡೀ ತಂಡವನ್ನು ಕಟ್ಟಿಕೊಂಡು ಜರ್ಮನಿಗೆ
ಹೋಗಿ ಲೀ ನೇತೃತ್ವದಲ್ಲಿ ಮೂರು ದಿನದ ಸಮಾವೇಶ ನಡೆಸುತ್ತದೆ. ಆ ದಿನಗಳು ಸ್ಯಾಮ್ಸಂಗ್ ಇತಿಹಾಸದಲ್ಲಿ ಬಹಳ ಮಹತ್ವ ಪಡೆದಿದೆ. ಅವರು ಅಲ್ಲಿ ನೀಡಿದ ಪ್ರತಿಯೊಂದು ಹೇಳಿಕೆಯೂ ಇವತ್ತಿಗೂ ಸ್ಯಾಮ್ಸಂಗ್ ಕಂಪನಿಗಳ ಗೋಡೆಯಲ್ಲಿ ಪ್ರತಿಧ್ವನಿಸುತ್ತಿದೆ.
ನಾವು ಜಗದ್ವಿಖ್ಯಾತ ಬ್ರ್ಯಾಂಡ್ ಆಗಬೇಕು ಅಂದರೆ ನಿಮ್ಮ ಮಕ್ಕಳು ಹಾಗೂ ಹೆಂಡತಿಯನ್ನು ಹೊರತುಪಡಿಸಿ ಎಲ್ಲವೂ ಬದಲಾಗಬೇಕು. ಮೊದಲು ನಾವು ಪರಿವರ್ತನೆ ಆಗಬೇಕು ಆಗಲೇ ನಾವು ತಯಾರಿಸುವ ಪ್ರಾಡಕ್ಟ್ ಗಳು ಬದಲಾಗಲು ಸಾಧ್ಯ ಎನ್ನುವ ಮಾತು ಭವಿಷ್ಯದಲ್ಲಿ ಇಡೀ ಕಂಪನಿಯ ನಕ್ಷೆಯನ್ನೇ ಬದಲಾಯಿಸಿ ಬಿಡುತ್ತದೆ. ಅದರ ನಂತರ ಸ್ಯಾಮ್ಸಂಗ್
ಎಂದೂ ಹಿಂತುರಿಗಿ ನೋಡಿಲ್ಲ. ಕಳೆದ ಮೂರು ದಶಕಗಳ ಲೀ ಅವರ ಅಧಿಕಾರವನ್ನು ನಾಲ್ಕು ಹಂತಗಳಲ್ಲಿ ನೋಡಬಹುದು. ಮೊದಲನೆಯದು ಅವರು ಮೊದಲು ಅಧಿಕಾರಕ್ಕೆ ಬಂದ ನಂತರದ ವರ್ಷಗಳು – ಇದು ಸೆಕೆಂಡ್ ಫೌಂಡೇಶನ್.
1987ರಿಂದ 1993ರ ತನಕ. ಸ್ಯಾಮ್ಸಂಗ್ ಆ ಸಮಯದಲ್ಲಿ ತನ್ನೆಲ್ಲಾ ಎಲೆಕ್ಟ್ರಾನಿಕ್ ಕಂಪನಿಗಳನ್ನು ಒಗ್ಗೂಡಿಸಿತು. ಬೇರೆ
ಕ್ಷೇತ್ರಗಳಲ್ಲಿ ವ್ಯಾಪಾರವನ್ನು ವಿಸ್ತರಿಸಲಾಯಿತು. ಬೃಹತ್ ಕೈಗಾರಿಕೆ, ರಾಸಾಯನಿಕ ವಸ್ತುಗಳು, ಹಣಕಾಸು ಸೇವೆಗಳು ಹೀಗೆ ಗ್ರೂಪ್ ಬೆಳೆಯಿತು. ಮೆಮೊರಿ ಚಿಪ್‌ಗಳನ್ನು ಅತೀ ಹೆಚ್ಚು ಪ್ರಮಾಣದಲ್ಲಿ ತಯಾರಿಸ ತೊಡಗಿದರು. ನಂತರ 1993ರಿಂದ 1997ರ
ತನಕ ಆದ ಬದಲಾವಣೆ ಕ್ವಾಲಿಟಿ ಮ್ಯಾನೇಜ್ಮೆಂಟ್ ಇದು ಎರಡನೇಯ ಹಂತ. ಇಡೀ ಕಂಪನಿಯ ಡಿಎನ್‌ಎ ಬದಲಾಯಿಸಿದರು ಲೀ. ಲೈನ್ ಸ್ಟಾಪ್, ಕ್ವಾಂಟಿಟಿಯಿಂದ ಕ್ವಾಲಿ ಕಡೆ ಹೆಚ್ಚು ಒತ್ತು, ತರಬೇತಿ ಇವೆಲ್ಲ ಎರಡನೆಯ ಹಂತದಲ್ಲಿ ನಡೆಯಿತು.
ಸ್ಯಾಮ್ಸಂಗ್ ಒಂದು ಗ್ಲೋಬಲ್ ಕಂಪನಿಯಾಗಿ ರೂಪುಗೊಂಡಿದ್ದು ಈ ಸಮಯದಲ್ಲಿ. ಸ್ಯಾಮ್ಸಂಗ್ ಬ್ರ್ಯಾಂಡ್ ಸೋನಿ, ಐಬಿಎಮ್‌ನಂಥ ಕಂಪನಿಗಳಿಗೆ ಸಿಂಹಸ್ವಪ್ನವಾಯಿತು. ಮೂರನೇಯ ಹಂತವನ್ನು ಡಿಜಿಟಲ್ ಮ್ಯಾನೆಜ್ಮೆಟ್ ಎನ್ನಬಹುದು.
ಡಿಜಿಟಲ್ ಯುಗಕ್ಕೆ ತಕ್ಕಂತೆ ಕಂಪನಿಯ ಮ್ಯಾನೆಜ್ಮೆಂಟ್, ವಿಚಾರ, ಸ್ಟ್ರ್ಯೊಟಜಿ ಎಲ್ಲವೂ ಬದಲಾಯಿತು. ಇವತ್ತು ಸ್ಯಾಮ್ಸಂಗ್ ನಾಲ್ಕನೆಯ ಹಂತದಲ್ಲಿದೆ. ಇದರಲ್ಲಿ ಸ್ಯಾಮ್ಸಂಗ್ ಕಂಡ ಬೆಳವಣಿಗೆ ಅದ್ಭುತವಾದದ್ದು.
ಅಮೆರಿಕಾದ ತಂತ್ರಜ್ಞಾನ, ಚೀನಾದ ಕಡಿಮೆ ಬೆಲೆಯ ಸರಕು, ನೂರಾರು ದೇಶಗಳ ಭಾಷೆ, ಸಂಸ್ಕೃತಿ ಎಲ್ಲವನ್ನೂ ಮೀರಿ ಅತೀ ಮೆಚ್ಚುಗೆಯ ಬ್ರ್ಯಾಂಡ್ ಆಗಿದೆ. ಇದನ್ನು ಕ್ರಿಯೇಟಿವ್ ಮ್ಯಾನೇಜ್ಮೆಂಟ್ ಎಂದು ಗುರುತಿಸಬಹದು. ಸ್ಯಾಮ್ಸಂಗ್ ಬ್ಯಾಟರಿ, ಬಯಾಲಾಜಿಕ್ಸ್ ಹೀಗೆ ಎರಡು ದಶಕ ಮುಂದಿದ್ದಾರೆ. ಕಾಲದ ವೇಗವನ್ನು ಅರಿತು ಅದನ್ನು ಹಿಂದಕ್ಕೆ ಹಾಕುವುದು ಸುಲಭದ ಸ್ಪರ್ಧೆಯಲ್ಲ. ಅದರ ಹಿಂದೆ ಸಾಕಷ್ಟು ಪ್ರಮಾಣದ ಕಷ್ಟ, ಸೋಲು, ಅಪವಾದಗಳೂ ಇವೆ!
ಚೇರ್ಮನ್ ಲೀ ಅವರಿಗೆ ಎದುರಾದ ಸಂಕಷ್ಟಗಳು ಯಶಸ್ಸನ್ನು ನಾವು ನೋಡಿ ಬೀಗುತ್ತೇವೆ. ಆದರೆ ಅದರ ಹಿಂದಿನ ಕಷ್ಟ ಗೊತ್ತಿರುವುದಿಲ್ಲ. ಸ್ಯಾಮ್ಸಂಗ್ ಕಥನದಲ್ಲೂ ಇದು ಸತ್ಯ. ಕಾಲ ಕಾಲಕ್ಕೆ ಟ್ರೆಂಡ್ ಬದಲಾಗುತ್ತಾ ಬಂತು. ಅದಕ್ಕೆ ತಕ್ಕಂತೆ ವೇಗವಾಗಿ ಬದಲಾಗಬೇಕು, ಇಲ್ಲವೇ ಬದಿಗಾಗಬೇಕು. ಜಾಗತೀಕರಣ, ಡಿಜಿಟಲ್ ಜಗತ್ತು, ಹೊಸ ಸ್ಪರ್ಧಾಳುಗಳು, ಹೊಸ ಸರಕಾರ, ದೇಶ, ವಿದೇಶ ಅಲ್ಲಿಯ ರಾಜಕೀಯ ಆಗುಹೋಗು ಎಲ್ಲವನ್ನೂ ಮೀರಿ ನಿಲ್ಲುವುದು ಸಣ್ಣ ವಿಷಯವೇ? ಶೀತಲ ಸಮರದ ನಂತರ ಜಾಗತಿಕ ಮಾರುಕಟ್ಟೆಯ ನಿರ್ಮಾಣವಾಯಿತು. ಜಪಾನ್, ಅಮೆರಿಕಾ ತಮ್ಮ ತಂತ್ರಜ್ಞಾನವನ್ನು ಜಗತ್ತಿನಾದ್ಯಂತ ತೋರಿಸಿ
ಮೆಚ್ಚುಗೆ ಪಡೆದವು.
ಅವರೊಡನೆ ಸ್ಪರ್ಧೆಯಲ್ಲಿ ಇಳಿಯುವುದು ಅಂದರೆ? ಸ್ಯಾಮ್ಸಂಗ್ ಆಗತಾನೆ ಹೊಸ ಚೇರ್ಮನ್ ಅವರನ್ನು ಸ್ವಾಗತಿಸಿತ್ತು, ಅದೇ ಸಮಯದಲ್ಲಿ ಪ್ಲಾಜಾ ಒಪ್ಪಂದವು ದಕ್ಷಿಣ ಕೋರಿಯಾದಲ್ಲಿ ಜಪಾನಿನ ಕಂಪನಿಗಳಿಗೆ ಬರಲು ಕೆಂಪು ಚಾಪೆಯನ್ನು ಹಾಸಿದವು. ಅವರ ಹತ್ತಿರ ತಂತ್ರಜ್ಞಾನ ಇದೆ, ವಿದೇಶಿ ಬಂಡವಾಳದ ಸವಲತ್ತು ಬೇರೆ. ಸ್ಯಾಮ್ಸಂಗ್‌ಗೆ ಇದು ಕಷ್ಟವಾಯಿತು. ಆದರೆ ಲೀ ಹೆಜ್ಜೆಯನ್ನು ಹಿಂದಕ್ಕೆ ಇಡಲಿಲ್ಲ, ಧೈರ್ಯದಿಂದ ಮುಂದಿಡುತ್ತಾ ಹೋದರು. ಏಷ್ಯನ್ ಕರೆನ್ಸಿ ಬಿಕ್ಕಟ್ಟು, ಕಾರ್ಮಿಕರ ವೇತನ ಹೆಚ್ಚಳ, ಜಾಗತಿಕ ಹಣಕಾಸಿನ ಬಿಕ್ಕಟ್ಟು, ಚೀನಾದ ಪ್ರಗತಿ ಹೀಗೆ ಒಂದಾದ ಮೇಲೆ ಇನ್ನೊಂದು ಸವಾಲು. ಅಷ್ಟೇ ಅಲ್ಲ ಒಂದು ಕಾಲದಲ್ಲಿ ನೋಕಿಯಾ ಬಿರುಗಾಳಿ ಬೀಸಿದರೆ, ಇನ್ನೊಮ್ಮೆ ಆ್ಯಪಲ್. ಈಗಂತೂ ಚೀನಾದ ನೂರಾರು ಕಂಪನಿಗಳು ಒಂದೇ ಸ್ಯಾಮ್ಸಂಗ್ ಜೊತೆ ಸ್ಪರ್ಧೆ ನಡೆಸುತ್ತಿವೆ.
ನೋಕಿಯಾ ಸಮಯದಲ್ಲಿ ಇವರ ಮಾರುಕಟ್ಟೆಯ ಪಾಲು ಶೇ.33ರಷ್ಟು ಇತ್ತು, ಆ್ಯಪಲ್ ನಿಂದಾಗಿ ಶೇ.15ಕ್ಕೆೆ ಇಳಿದಿತ್ತು. ಆ ಭಾರ ಹೊತ್ತಿದ್ದು ಲೀ ಕುನ್ -ಹೀ. ಅಷ್ಟೇ ಅಲ್ಲ ಎರಡು ಬಾರಿ ಭ್ರಷ್ಟಾಚಾರದ ದೂರಿನಿಂದ ಆಜೀವ ಜೈಲಿಗೆ ಹೋಗುವ ಪ್ರಸಂಗ ಬಂದಿತ್ತು. ಮೂರು ವರ್ಷಗಳ ಕಾಲ ಜೈಲು ಶಿಕ್ಷೆಯನ್ನೂ ಅನುಭವಿಸಿದರು. ಕಷ್ಟದ ಸಂಕೋಲೆಯನ್ನು ಕೊರಳಿಗೆ ಹಾಕಿಕೊಂಡು ಎಳೆ ಎಳೆಯಾಗಿ ಬಿಡಿಸುತ್ತಾ ಬಂದರು. ನಾಲ್ಕು ವರ್ಷಗಳ ಹಿಂದೆ ಅವರಿಗೆ ಹೃದಯಾಘಾತವಾದಾಗಿನಿಂದ ಕೋಮಾದಲ್ಲೇ ಇದ್ದವರು ಅಕ್ಟೋಬರ್‌ನಲ್ಲಿ ವಿಧಿವಶ ರಾಗಿದ್ದಾರೆ. ಅವರ ಮಗನೇ ಇಂದು ಸ್ಯಾಮ್ಸಂಗ್ ಧ್ವಜವನ್ನು ಹಿಡಿದವನು. ಆತನ ಮೇಲೂ ದೂರುಗಳಿವೆ.
ಸ್ಯಾಮ್ಸಂಗ್ ಗ್ರೂಪ್ ದಕ್ಷಿಣ ಕೋರಿಯಾದ ಚೇಬಾಲ್ ನಲ್ಲಿ ಪರಿಗಣಿಸಲ್ಪಡುತ್ತದೆ. ಅದರ ಬಗ್ಗೆ ಇನ್ನೊಮ್ಮೆ ತಿಳಿಯೋಣ.
ಈ ಚೇಬಾಲ್ ಮತ್ತು ಸರಕಾರದ ನಡುವೆ ಮುಗಿಯದ ಸಮರ. ಅದೇನೆ ಇದ್ದರೂ ಸತತವಾಗಿ ತಮ್ಮನ್ನು ತಾವು ಬದಲಾಯಿಸುತ್ತಾ ಕಂಪನಿಯನ್ನು ಬದಲಾಯಿಸಿದರು ಲೀ. ಕಳೆದ ಶತಮಾನದಲ್ಲಿ ಜಗತ್ತನ್ನು ಮುಂದಕ್ಕೆ ತಳ್ಳಿದ ಬಹಳಷ್ಟು ನಾಯಕರಲ್ಲಿ ಸ್ಯಾಮ್ಸಂಗ್ ಗ್ರೂಪ್‌ನ ಚೇರ್ಮನ್ ಲೀ ಕೂಡ ಪ್ರಮುಖರು. ಅವರ ಆದರ್ಶ ಮುಂದಿನ ಯುಗಕ್ಕೆ ದಾರಿದೀಪವಾಗಲಿ. ಬದಲಾ ವಣೆಯೇ ಬದುಕಿನಲ್ಲಿ ಸತ್ಯ ಆಗಿರುವಾಗ ಅದನ್ನು ನಾವು ಅಪ್ಪಿಕೊಳ್ಳೋಣ. ಬರಹ, ತಂತ್ರಜ್ಞಾನ, ರಾಜಕೀಯ, ಕಲೆ, ವಿಜ್ಞಾನ, ನಟನೆ, ವಿಚಾರ ಎಲ್ಲವೂ ಬದಲಾಗುತ್ತಿರಬೇಕು.
ಲೀ ಹೇಳಿದಂತೆ – In the end, I’m the one who has to change. You have to change from the inside out… ನಿಂತ ನೀರಾಗ ಬಾರದು ಬದುಕು. ಹೊಸ ನೀರು ಹರಿಯುತ್ತಿದ್ದರೆ ಮಾತ್ರ ಕೆರೆಯಲ್ಲಿ ಉಸಿರಿರುತ್ತದೆ!