Saturday, 23rd November 2024

ನಾಳೆಯಿಂದ 9ನೇ ಮಹಿಳಾ ಟಿ20 ವಿಶ್ವಕಪ್‌: ಚೊಚ್ಚಲ ಪ್ರಶಸ್ತಿ ಗೆಲ್ಲಲಿ ಭಾರತ

ಬೆಂಗಳೂರು: ಟಿ20 ವಿಶ್ವಕಪ್‌ ವರ್ಷದಲ್ಲಿ ಐಸಿಸಿಯ ಎರಡನೇ ಮಹತ್ವದ ಪಂದ್ಯಾವಳಿಗೆ ಮಹಿಳೆಯರು ಸಜ್ಜಾಗುತ್ತಿದ್ದಾರೆ. 9ನೇ ಆವೃತ್ತಿಯ ಮಹಿಳಾ ಟಿ20 ವಿಶ್ವಕಪ್‌(Womens T20 World Cup) ಕೂಟಕ್ಕೆ ಅರಬರ ನಾಡು ಸಿಂಗರಿಸಿಕೊಂಡು ನಿಂತಿದೆ. ಪ್ರತಿಷ್ಠಿತ ಪಂದ್ಯಾವಳಿ ಅಕ್ಟೋಬರ್ 3 ರಿಂದ 20 ರವರೆಗೆ ದುಬಾೖ ಮತ್ತು ಶಾರ್ಜಾದಲ್ಲಿ ನಡೆಯಲಿದೆ. ನಾಳೆ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್‌ ಮುಖಾಮುಖಿಯಾಗಲಿದೆ. ದಿನದ ಮತ್ತೊಂದು ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ಸೆಣಸಾಡಲಿದೆ.

ಒಟ್ಟು 10 ತಂಡಗಳು ಪಾಲ್ಗೊಳ್ಳಲಿರುವ ಈ ಪಂದ್ಯಾವಳಿಯಲ್ಲಿ ಮತ್ತೂಮ್ಮೆ 6 ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯವೇ ನೆಚ್ಚಿನ ತಂಡವಾಗಿ ಗೋಚರಿಸುತ್ತಿದೆ. ಭಾರತ ಮೊದಲ ಪ್ರಶಸ್ತಿಯ ತವಕದಲ್ಲಿದೆ. ಜೂನ್‌ನಲ್ಲಿ ಬಾರ್ಬಡೋಸ್‌ನಲ್ಲಿ ನಡೆದಿದ್ದ ಪುರುಷರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. ಪುರುಷರ ಈ ಗೆಲುವು ಹರ್ಮನ್‌ಪ್ರೀತ್‌ ಕೌರ್‌ ಪಡೆಗೆ ಸ್ಫೂರ್ತಿಯಾಗಬೇಕಿದೆ.

ಈವರೆಗಿನ 9 ಟಿ20 ವಿಶ್ವಕಪ್‌ ಕೂಟಗಳಲ್ಲಿ ಆಸ್ಟ್ರೇಲಿಯಾದ ಮಹಿಳೆಯರು 7 ಸಲ ಫೈನಲ್‌ಗೆ ಲಗ್ಗೆಯಿರಿಸಿ ಸರ್ವಾಧಿಕ 6 ಸಲ ಚಾಂಪಿಯನ್‌ ಆಗಿ ಮೂಡಿಬಂದಿದ್ದಾರೆ. ಹ್ಯಾಟ್ರಿಕ್‌ ಪ್ರಶಸ್ತಿ ಗೆದ್ದು ಪರಾಕ್ರಮ ಮೆರೆದಿರುವ ಕಾಂಗರೂ ಮಹಿಳೆಯರು ಈ ಸಲವೂ ಗೆದ್ದರೆ ಸತತ ನಾಲ್ಕನೇ ಬಾರಿಗೆ ಪ್ರಶಸ್ತಿಗೆ ಭಾಜನರಾಗಲಿದ್ದಾರೆ.

ಇದನ್ನೂ ಓದಿ Womens T20 World Cup: ನಾಳೆಯಿಂದ ಮಹಿಳಾ ಟಿ20 ವಿಶ್ವಕಪ್‌; ತಂಡಗಳ ಪಟ್ಟಿ ಹೀಗಿದೆ

2009ರ ಚೊಚ್ಚಲ ವಿಶ್ವಕಪ್‌ನಲ್ಲಿ ನ್ಯೂಜಿಲ್ಯಾಂಡ್‌ ಮಣಿಸಿದ ಇಂಗ್ಲೆಂಡ್‌ ಚೊಚ್ಚಲ ಪ್ರಶಸ್ತಿ ಎತ್ತಿತ್ತು. ಬಳಿಕ ಆಸ್ಟ್ರೇಲಿಯಾ ಸತತ 3 ಸಲ ಚಾಂಪಿಯನ್‌ ಆಗಿ ಮೆರೆದಾಡಿತು. 4ನೇ ಪ್ರಶಸ್ತಿ ಹಾದಿಯಲ್ಲಿದ್ದಾಗ ವೆಸ್ಟ್‌ ಇಂಡೀಸ್‌ ಅಡ್ಡಗಾಲಿಕ್ಕಿತು. ಕೋಲ್ಕತಾದ ಫೈನಲ್‌ನಲ್ಲಿ ವಿಂಡೀಸ್‌ 8 ವಿಕೆಟ್‌ಗಳಿಂದ ಆಸೀಸ್‌ಗೆ ಸೋಲಿನ ರುಚಿ ತೋರಿಸಿತ್ತು. ಇದಾದ ಬಳಿಕ 2018, 2020 ಮತ್ತು 2023ರ ಕೂಟಗಳಲ್ಲಿ ಕಾಂಗರೂ ಪ್ರಭುತ್ವ ಮರಳಿ ಸ್ಥಾಪನೆಗೊಂಡಿತು. ತಂಡವನ್ನು 6 ಬಾರಿ ಚಾಂಪಿಯನ್‌ ಪಟ್ಟಕ್ಕೇರಿಸಿದ ಮೆಗ್‌ ಲ್ಯಾನಿಂಗ್‌ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದಾರೆ. ಹೀಗಾಗಿ ನೂತನ ನಾಯಕತ್ವದಲ್ಲಿ ಆಸೀಸ್‌ ಹೇಗೆ ಆಡಲಿದೆ ಎನ್ನುವುದು ಕೂಡ ಈ ಬಾರಿಯ ಕುತೂಹಲ.

ದ್ವಿಪಕ್ಷೀಯ ಸರಣಿಯಲ್ಲಿ ಭಾರತದ ಮಹಿಳೆಯರು ಅಮೋಘ ಪ್ರದರ್ಶನ ತೋರಿದರೂ ವಿಶ್ವಕಪ್‌ನಲ್ಲಿ ತೀರಾ ಕಳಪೆ ಸಾಧನೆ. ಆದರೆ ಕಳೆದ 2020ರ ಪಂದ್ಯಾವಳಿ ಮಾತ್ರ ಇದಕ್ಕೆ ಅಪವಾದವಾಗಿತ್ತು. ಆಸ್ಟ್ರೇಲಿಯಾ ಆತಿಥ್ಯದ ಈ ಕೂಟದಲ್ಲಿ ಭಾರತ ಫೈನಲ್‌ ತನಕ ಸಾಗಿತ್ತು. ಅಲ್ಲಿ ಆಸೀಸ್‌ ವಿರುದ್ಧ ತೀವ್ರ ಬ್ಯಾಟಿಂಗ್‌ ಬರಗಾಲಕ್ಕೆ ಸಿಲುಕಿ 99ಕ್ಕೆ ಕುಸಿದು ಟ್ರೋಫಿಯನ್ನು ಕಳೆದುಕೊಳ್ಳಬೇಕಾಯಿತು. ಭಾರತ ಇದುವರೆಗೆ ಒಂದು ಬಾರಿ ಮಾತ್ರ ಫೈನಲ್‌ ತಲುಪಿದೆ.

ಮೇಲ್ನೋಟಕ್ಕೆ ಭಾರತ ತಂಡ ಬಲಿಷ್ಠವಾಗಿಯೇ ಇದೆ. ಎಡಗೈ ಬ್ಯಾಟರ್‌ ಸ್ಮೃತಿ ಮಂಧನಾ, ಶಫಾಲಿ ವರ್ಮ, ಹರ್ಮನ್‌ಪ್ರೀತ್‌ ಕೌರ್‌, ದೀಪ್ತಿ ಶರ್ಮಾ, ರಿಚಾ ಘೋಷ್‌, ಜೆಮಿಮಾ ರೋಡ್ರಿಗಸ್‌, ರೇಣುಕಾ, ಯಾಸ್ತಿಕಾ, ಕನ್ನಡತಿ ಶ್ರೇಯಾಂಕಾ ಪಾಟೀಲ್‌ ಅವರನ್ನೊಳಗೊಂಡ ತಂಡ ಸಮರ್ಥವಾಗಿದೆ. ಈಗಾಗಲೇ ಆಡಿದ 2 ಅಭ್ಯಾಸ ಪಂದ್ಯದಲ್ಲಿ ಗೆಲುವು ಕೂಡ ಸಾಧಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.

ಭಾರತ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್‌ 4 ರಂದು ನ್ಯೂಜಿಲ್ಯಾಂಡ್‌ ವಿರುದ್ಧ ಆಡಲಿದೆ. ಯುಎಇಗೆ ತೆರಳುವ ಮುನ್ನವೇ ನಾಯಕಿ ಹರ್ಮನ್‌ಪ್ರೀತ್‌, ನಮ್ಮ ತಂಡ ಈ ಬಾರಿ ಕಪ್‌ ಗೆಲ್ಲುವ ನಿಟ್ಟಿನಲ್ಲಿಯೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು, ಸಂಪೂರ್ಣ ಸಿದ್ಧವಾಗಿದೆ. ನಾವು ಈಗ ಆಸ್ಟ್ರೇಲಿಯಾ ತಂಡವನ್ನು ಸೋಲಿಸಬಲ್ಲೆವು. ಅದು ಅವರಿಗೂ ತಿಳಿದಿದೆ. ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತೇವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದರು.