ಮಾಳಿಂಗರಾಯ ಪೂಜಾರ
ಜಿಲ್ಲೆಯ ಹಲವು ಗ್ರಾಮ ಪಂಚಾಯಿತಿಗಳಿಗೆ ಸ್ವಂತ ಕಟ್ಟಡವೇ ಇಲ್ಲ
ಪ್ರಗತಿ ಪರಿಶೀಲನಾ ಸಭೆಗೆ ಇನ್ಯಾವುದೋ ಕಟ್ಟಡ ಬಳಕೆ
ಗದಗ: ಗ್ರಾಮ ಸ್ವರಾಜ್ಯ ಎನ್ನುವುದು ಮಹಾತ್ಮ ಗಾಂಧಿ ಅವರ ಕನಸು ಆದರೆ ಜಿಲ್ಲೆಯ ಸಾಕಷ್ಟು ಗ್ರಾಮಗಳಲ್ಲಿ ಗ್ರಾಮ ಪಂಚಾಯತಿ ಸ್ವಂತ ಸೂರು ಇಲ್ಲದಾಗಿದ್ದು, ಗ್ರಾಮ ಪಂಚಾಯತಿಗಳ ದುಸ್ಥಿತಿಯಾಗಿದೆ.
ಗ್ರಾಮ ಪಂಚಾಯತಿಯು ಗ್ರಾಮಗಳ ಸುವ್ಯವಸ್ಥೆಯನ್ನು ನಿರ್ವಹಿಸುವ ಪ್ರಜಾಸತ್ತಾತ್ಮಕ ಸಂಸ್ಥೆಯಾಗಿದ್ದು,ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಯ ಕಾರ್ಯನಿರ್ವಹಣೆಗೆ ಸುಸಜ್ಜಿತವಾದ ಗ್ರಾಮ ಪಂಚಾಯತಿ ಕಟ್ಟಡ ಅವಶ್ಯ ವಾಗಿದ್ದು, ಜಿಲ್ಲೆಯಲ್ಲಿರುವ ಬಹುತೇಕ ಗ್ರಾಮ ಪಂಚಾಯತಿಗಳು ಸ್ವಂತ ಕಟ್ಟಡ ಇಲ್ಲದೆ ಇರುವದರಿಂದ ಸಮುದಾಯ ಭವನ, ಗ್ರಾಮ ಛಾವಡಿ, ಸರ್ಕಾರಿ ಶಾಲೆ, ಕೃಷಿ ಇಲಾಖೆಯ ಕಟ್ಟಡ, ಕಿರಿಯ ಆರೋಗ್ಯ ಸಹಾಯಕರ ಕೇಂದ್ರ, ಗ್ರಾಮ ಆಡಳಿತಾಧಿಕಾರಿ ಕಚೇರಿ ಹೀಗೆ ಗ್ರಾಮ ಪಂಚಾಯಿತಿ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, ಈ
ಕಚೇರಿಗಳು ಬೇರೆ ಇಲಾಖೆಗಳ ಕಟ್ಟಡದಲ್ಲಿ ಇದ್ದರು ಯಾವುದೇ ಬಾಡಿಗೆ ಇಲ್ಲದೆ ಇರುವುದರಿಂದ ಸುಮಾರು ವರ್ಷಗಳಿಂದ ಇಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ.
ಹಲವು ಕಡೆ ಭವನಗಳಲ್ಲಿ ಪಂಚಾಯಿತಿಯ ಕಚೇರಿಗಾಗಿ ಬಳಕೆಯಾಗುತ್ತಿರುವುದಕ್ಕೆ ಗ್ರಾಮದ ಜನರು ಅಸಮಾ ಧಾನ ವ್ಯಕ್ತಪಡಿಸುತ್ತಾರೆ.
ಜಿಲ್ಲೆಯಲ್ಲಿ ಒಟ್ಟು ೧೨೨ ಗ್ರಾಮ ಪಂಚಾಯತಿಗಳಿದ್ದು, ಅದರಲ್ಲಿ ಇತ್ತೀಚಿನ ವರ್ಷಗಳಲ್ಲಿ ಪ್ರಾರಂಭವಾಗಿರುವ ೧೬ ಗ್ರಾಮಪಂಚಾಯಿತಿಗಳು ಸೇರಿವೆ. ಹೊಸ ಗ್ರಾಮ ಪಂಚಾಯತಗಳಿಗೆ ಕಟ್ಟಡ ಕಟ್ಟಸಲು ೨೦ ಲಕ್ಷ ಬಿಡುಗಡೆ ಮಾಡಲಾಗಿತ್ತು. ಇನ್ನೂ ಸ್ಥಳೀಯ ಸಂಪನ್ಮೂಲ ಹಾಗೂ ಎನ್.ಆರ್.ಇ.ಜಿ ಯೋಜನೆ ಅನುದಾನ ಸೇರಿ ಒಂದು ಮಾದರಿ ಗ್ರಾಮ ಪಂಚಾಯತಿ ಗುರಿಯಾಗಿತ್ತು. ಆದರೆ ಅದರಲ್ಲಿ ೧೪ ಗ್ರಾಮ ಪಂಚಾಯತಿಗಳು ಕಟ್ಟಡ ಕಟ್ಟಿಸಲು ಮುಂದಾಗಿದ್ದು, ಅನೇಕ ವರ್ಷಗಳಿಂದ ಇನ್ನೂ ತಳಪಾಯ, ಛಾವಣಿ, ಮುಕ್ತಾಯ ಹಂತದಲ್ಲಿವೆ ಆದರೆ ಅವು ಸಹ ಪೂರ್ಣಗೊಂಡಿಲ್ಲ.
ಇನ್ನೂಳಿಂದಂತೆ ೧೦೬ ಹಳೆಯ ಪಂಚಾಯತಿಗಳಲ್ಲಿ ಅರ್ಧದಷ್ಟು ಬೇರೆ ಇಲಾಖೆಯ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಹೊಸ ಕಟ್ಟಡ ಕಟ್ಟಲು ನಿವೇಶನ ಹುಡುಕಾಟದಲ್ಲಿದ್ದು, ಪ್ರಸಕ್ತ ಕಾರ್ಯನಿರ್ವಹಿಸುತ್ತಿರುವ ಬೇರೆ ಇಲಾಖೆಯ ಕಟ್ಟಡವನ್ನು ನೆಲಸಮ ಮಾಡಿ ನೂತನ ಕಟ್ಟಡ ನಿರ್ಮಾಣ ಮಾಡಲು ಗ್ರಾಪಂಗೆ ನಿವೇಶನ ಬಿಟ್ಟುಕೊಡುವಂತೆ ಕೇಳಿಕೊಳ್ಳುತ್ತಿರುವುದು ಒಂದು ಕಡೆ ಆದರೆ ಅನೇಕ ಇಲಾಖೆಯವರು ಗ್ರಾಪಂಯವರಿಗೆ ನಮ್ಮ ಇಲಾಖೆಗೆ ಸಂಬಂಧಿಸಿದ ಕಟ್ಟಡ ಹಾಗೂ ನಮ್ಮ ನಿವೇಶನ ನೀಡಿ ಬಿಟ್ಟು ಕೊಡಿ ಎಂದು ಪತ್ರ ಬರೆದರು ಪಂಚಾಯಿತಿ ಯವರು ಬಿಟ್ಟು ಕೊಡುತ್ತಿಲ್ಲ ಎನ್ನುವ ಆರೋಪಗಳು ಸಹ ಇವೆ.
ಒಂದೊಂದು ಗ್ರಾಮದಲ್ಲಿ ನಿವೇಶನ ಇದ್ದರು ನೂತನ ಗ್ರಾಮ ಪಂಚಾಯತಿ ಕಟ್ಟದ ನಿರ್ಮಾಣ ಮಾಡಲು ಗ್ರಾಮ ಪಂಚಾಯತಿಗಳು ಇಚ್ಚಾಶಕ್ತಿ ಕೊರತೆಯಿಂದ ಹಲವು ಗ್ರಾ.ಪಂ ಕಟ್ಟಡ ಭಾಗ್ಯ ಕಂಡಿಲ್ಲ ಎನ್ನಲಾಗುತ್ತಿದೆ. ಹಲವು ಕಡೆ ನೂತನ ಗ್ರಾಪಂ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿದ್ದರೆ ಸುಮಾರು ನಾಲ್ಕೈದು ಕಳೆದರೂ ಕಟ್ಟಡ ನಿರ್ಮಾಣ ಪೂರ್ಣಗೊಳಿಸಿಲ್ಲ. ಇದರಿಂದ ಗ್ರಾಮ ಪಂಚಾಯಿತಿ ಕಟ್ಟಡದ ಕಾಮಗಾರಿಯ ಜಾಗದಲ್ಲಿ ಜಾಲಿ ಗಿಡ ಬೆಳೆದಿವೆ. ಅದರಂತೆ ಗದಗ ತಾಲೂಕಿನ ಕಣಗಿಹಾಳ ಗ್ರಾಮದಲ್ಲಿ ಶಾಲೆ ಕಟ್ಟಡದಲ್ಲಿ ಗ್ರಾಪಂ ಇರುವದರಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ ಸ್ಥಳಾಂತರಿಸಿ ಎಂದು ಅನೇಕ ಬಾರಿ ಹೇಳಿದರು ಸ್ಥಳಾಂತರಿಸುತ್ತಿಲ್ಲ.
ಮುಂಡರಗಿ ಡೋಣಿ ಗ್ರಾಮದಲ್ಲಿ ಶಾಲಾ ಆವರಣದಲ್ಲಿಯೇ ಗ್ರಾಪಂ ಸ್ವಂತ ಕಟ್ಟಡ ಕಟ್ಟಿದ್ದು ಬಿಟ್ಟು ಕೊಡುವಂತೆ ಶಿಕ್ಷಣ ಇಲಾಖೆಯವರು ಪತ್ರ ಬರೆದಿದ್ದಾರೆ. ಜಿಲ್ಲೆಯ ಶಿರಹಟ್ಟಿ ತಾಲೂಕ ಕೊಂಚಿಗೇರಿ ಗ್ರಾಮದಲ್ಲಿ ಕಿರಿಯ ಆರೋಗ್ಯ ಸಹಾಯಕಿಯರ ಕೇಂದ್ರದಲ್ಲಿ ಹಾಗೂ ಲಕ್ಷ್ಮೇಶ್ವರ ತಾಲೂಕಿನ ಪು.ಬಡ್ನಿ ಗ್ರಾಮದಲ್ಲಿ ಕೃಷಿ ಇಲಾಖೆ ಕಟ್ಟಡದಲ್ಲಿ ಗ್ರಾಪಂ ಕಾರ್ಯನಿರ್ವಹಿಸುತ್ತಿದ್ದಾರೆ.
ಜಿಲ್ಲೆಯ ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ನೂತನ ಕಟ್ಟಡವಾದರು ಗ್ರಾಮಸ್ಥರ ವಿರೋಧ ಇರುವ
ಹಿನ್ನೆಲೆ ಸ್ಥಳಾಂತರವಾಗಿಲ್ಲ. ಇದೆ ರೀತಿ ಜಿಲ್ಲೆಯಲ್ಲಿ ಅನೇಕ ಗ್ರಾಪಂ ಇವೆ. ಅನೇಕ ಗ್ರಾಪಂಗಳು ಬೇರೆ ಕಟ್ಟಡದಲ್ಲಿ
ಇರುವದರಿಂದ ಗ್ರಾಪಂಗಳ ಮೂಲ ಸೌಕರ್ಯ ಇಲ್ಲದಂತಾಗಿದೆ. ಶೌಚಾಲಯ ಇಲ್ಲದೆ ಇರುವದರಿಂದ ಬಯಲು ಶೌಚ ಹೋಗುವ ಸ್ಥಿತಿ ಇದೆ.
ಸಾರ್ವಜನಿಕರಿಗೆ ಶೌಚಾಲಯ ಕಟ್ಟಿಕೊಳ್ಳುವಂತೆ ಜಾಗೃತಿ ಮೂಡಿಸುವ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ, ಸಿಬ್ಬಂದಿ ತಮಗೇ ಶೌಚಾಲಯ ಇಲ್ಲದಿರುವುದು ಗ್ರಾಮಸ್ಥರು ಇವರನ್ನು ನೋಡಿ ನಗುವಂತಾಗಿದೆ. ಗ್ರಾಮಗಳಿಗೆ
ಮೂಲಭೂತ ಸೌಕರ್ಯಗಳು ನೀಡುವ ಗ್ರಾಮ ಪಂಚಾಯತಿಯಲ್ಲಿ ಕುಡಿಯುವ ನೀರು ಸೇರಿದಂತೆ ಇನ್ನಿತರ ಸೌಲಭ್ಯಗಳ ಕೊರತೆ ಇದೆ ಇನ್ನೂ ಗ್ರಾಮಸ್ಥರಿಗೆ ಹೇಗೆ ಸೌಲಭ್ಯ ಒದಗಿಸುತ್ತಾರೆ ಎನ್ನುವ ಪ್ರಶ್ನೆ ಜನರಲ್ಲಿ ಮೂಡಿದೆ.
ಗ್ರಾ. ಪಂ ನೂತನ ಕಟ್ಟಡ ನಿರ್ಮಾಣ ಮಾಡಲು ರಾಜೀವ ಗಾಂಧಿ ಸೇವಾ ಕೇಂದ್ರದಿಂದ, ೧೫ ನೇ ಹಣಕಾಸು, ಸ್ಥಳೀಯ ಸಂಪನ್ಮೂಲ, ಶಾಸಕರ ಮತ್ತು ಸಂಸದರ ಅನುದಾನ, ಸರಕಾರದ ಅನುದಾನ ಹೀಗೆ ಅನುದಾನ ಬಳಸಿಕೊಂಡು ಗ್ರಾಮ ಪಂಚಾಯತಿ ಸುಸಜ್ಜಿತವಾದ ಮಾದರಿ ಗ್ರಾಮ ಪಂಚಾಯತಿ ಕಟ್ಟಡ ನಿರ್ಮಾಣ ಮಾಡಬಹುದು ಆದರೆ ಇಚ್ಚಾಶಕ್ತಿ ಕೊರತೆ ಹಾಗೂ ರಾಜಕೀಯ ಕಿತ್ತಾಟದಿಂದ ಕಟ್ಟಡ ನಿರ್ಮಾಣ ಮಾಡುವ ಗೋಜಿಗೆ ಗ್ರಾಪಂಯವರು ಹೋಗುತ್ತಿಲ್ಲ.
ಒಟ್ಟಾರೆ ಜಿಲ್ಲೆಯಲ್ಲಿರುವ ಒಟ್ಟು ಗ್ರಾಪಂಗಳಲ್ಲಿ ಅರ್ಧಕ್ಕಿಂತ ಹೆಚ್ಚು ಗ್ರಾಪಂ ಸ್ವಂತ ಕಟ್ಟಡ ಇಲ್ಲದೆ ಬೇರೆ ಇಲಾಖೆಯ ಕಟ್ಟಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮಸ್ಥರಿಗೆ ಮೂಲಭೂತ ಸೌಕರ್ಯಗಳು ನೀಡುವ ಗ್ರಾಪಂಗೆ ಸ್ವಂತ ನೆಲೆ ಇಲ್ಲದಂತಾಗಿದೆ.
*
ಯಾವ ಗ್ರಾಮದಲ್ಲಿ ಗ್ರಾಪಂ ಸ್ವಂತ ಕಟ್ಟಡ ಇಲ್ಲ. ಅವುಗಳ ಬಗ್ಗೆ ಮಾಹಿತಿ ಪಡೆಯಲಾಗುವುದು ಕಟ್ಟಡ ನಿರ್ಮಾಣ
ಮಾಡಲು ಮುಂದಾದರೆ ಸರಕಾರದಿಂದ ಅನುದಾನ ನೀಡಲಾಗುವುದು.
-ಭರತ್ ಎಸ್ ಜಿಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಗದಗ
ಇದನ್ನೂ ಓದಿ: Street Dogs: ನಗರದಾದ್ಯಂತ ಬೀದಿ ನಾಯಿಗಳ ಕಾಟ