Saturday, 23rd November 2024

Sadguru Jaggi Vasudev: ಸದ್ಗುರುಗೆ ಬಿಗ್‌ ರಿಲೀಫ್‌; ಇಶಾ ಫೌಂಡೇಶನ್‌ ವಿರುದ್ಧದ ಕಾನೂನು ಕ್ರಮಕ್ಕೆ ಸುಪ್ರೀಂ ತಡೆ

Sadguru Jaggi Vasudev

ನವದೆಹಲಿ: ಸದ್ಗುರು ಜಗ್ಗಿ ವಾಸುದೇವ್‌ (Sadguru Jaggi Vasudev) ಅವರಿಗೆ ಸೇರಿದ ಕೊಯಮತ್ತೂರ್‌ನ ಇಶಾ ಫೌಂಡೇಶನ್‌ನ (Isha foundation) ವಿರುದ್ಧ ಮದ್ರಾಸ್‌ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್‌(Supreme Court) ತಡೆಯಾಜ್ಞೆ ನೀಡಿದೆ. ಮದ್ರಾಸ್‌ ಕೋರ್ಟ್‌ (Madras High Court) ಆದೇಶದ ಮೇರೆಗೆ ಈಗಾಗಲೇ ಆಶ್ರಮದ ಮೇಲೆ ದಾಳಿ ನಡೆಸಿರುವ ಪೊಲೀಸರು ಇನ್ನು ಮುಂದೆ ಯಾವುದೇ ಕಾನೂನು ಕ್ರಮ ಮುಂದುವರೆಸದಂತೆ ಕೋರ್ಟ್‌ ಖಡಕ್‌ ಆಗಿ ಹೇಳಿದೆ.

ಮದ್ರಾಸ್‌ ಕೋರ್ಟ್‌ ಆದೇಶದ ವಿರುದ್ಧ ಫೌಂಡೇಶನ್‌ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಇದ್ದ ತ್ರಿಸದಸ್ಯ ಪೀಠ ಮದ್ರಾಸ್‌ ಕೋರ್ಟ್‌ ಆದೇಶಕ್ಕೆ ತಡೆಯಾಜ್ಷೆ ತಂದಿದೆ. ಅಲ್ಲದೇ ಈಶಾ ಫೌಂಡೇಶನ್‌ ವಿರುದ್ಧ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಸವಿಸ್ತಾರವಾದ ವರದಿ ಸಲ್ಲಿಸುವಂತೆ ತಮಿಳುನಾಡು ಸರ್ಕಾರಕ್ಕೆ ಆದೇಶಿಸಿದೆ.

ಮದ್ರಾಸ್ ಹೈಕೋರ್ಟ್‌ನಲ್ಲಿ ಬಾಕಿ ಉಳಿದಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸ್ವತಃ ವರ್ಗಾಯಿಸಿತು ಮತ್ತು ತನಗೆ ಪ್ರಸ್ತುತ ಸ್ಥಿತಿ ಬಗ್ಗೆ ವರದಿಯನ್ನು ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿತು. ಈ ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 18 ರಂದು ನಡೆಯಲಿದೆ.

ಏನಿದು ಪ್ರಕರಣ?

ಇಶಾ ಫೌಂಡೇಶನ್‌ನ (Isha foundation) ಆಶ್ರಮದ ಮೇಲೆ 150 ಪೊಲೀಸರ ತಂಡ ಮಂಗಳವಾರ ದಿಢೀರ್ ದಾಳಿ ನಡೆಸಿದೆ. ಫೌಂಡೇಶನ್‌ ವಿರುದ್ಧ ದಾಖಲಾದ ಎಲ್ಲಾ ಕ್ರಿಮಿನಲ್ ಪ್ರಕರಣಗಳ ವರದಿಯನ್ನು ಪರಿಶೀಲಿಸುವಂತೆ ಮದ್ರಾಸ್ ಹೈಕೋರ್ಟ್ಆದೇಶದ ಬೆನ್ನಲ್ಲೇ ಈ ದಾಳಿ ನಡೆಸಲಾಗಿತ್ತು. ಸಹಾಯಕ ಸಬ್ ಇನ್ಸ್‌ಪೆಕ್ಟರ್ ಶ್ರೇಣಿಯ ಅಧಿಕಾರಿ, ಮೂವರು ಡಿಎಸ್‌ಪಿಗಳ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ತನಿಖೆಯಲ್ಲಿ, ಆಶ್ರಮದ ಎಲ್ಲಾ ನಿವಾಸಿಗಳ ವಿವರವಾದ ಪರಿಶೀಲನೆ ಮತ್ತು ಕೊಠಡಿಗಳ ಹುಡುಕಾಟವನ್ನು ಮಾಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ನಿವೃತ್ತ ಪ್ರಾಧ್ಯಾಪಕರಾದ ಡಾ. ಕಾಮರಾಜ್ ಎಂಬವರು, ತನ್ನ ಇಬ್ಬರು ಪುತ್ರಿಯರಾದ ಗೀತಾ ಕಾಮರಾಜ್ (42) ಮತ್ತು ಲತಾ ಕಾಮರಾಜ್ (39) ಅವರನ್ನು ಬಲವಂತವಾಗಿ ಫೌಂಡೇಶನ್‌ನಲ್ಲಿ ಇರಿಸಲಾಗಿತ್ತು ಎಂದು ಆರೋಪಿಸಿದ್ದರು. ಇಶಾ ಫೌಂಡೇಶನ್ ಜನರನ್ನು ಮಾನಸಿಕವಾಗಿ ನಿಯಂತ್ರಿಸಿ ಅವರನ್ನು ಸನ್ಯಾಸಿಗಳನ್ನಾಗಿ ಮಾಡಿ ಅವರ ಕುಟುಂಬದೊಂದಿಗೆ ಸಂಪರ್ಕವನ್ನು ಮುರಿದುಕೊಳ್ಳುವಂತೆ ಮಾಡುತ್ತಿದೆ ಎಂದು ಪ್ರಾಧ್ಯಾಪಕರು ಆರೋಪಿಸಿದ್ದಾರೆ.

ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ಸದ್ಗುರು ಅವರು ತಮ್ಮ ಮಗಳಿಗೆ ಮದುವೆ ಮಾಡಿ ಸುಖಮಯ ಜೀವನ ನೀಡಿದ್ದು, ಇತರ ಯುವತಿಯರಿಗೆ ತಲೆ ಬೋಳಿಸಿಕೊಂಡು ತಪಸ್ಸಿನ ಜೀವನ ನಡೆಸುವಂತೆ ಪ್ರೇರೇಪಿಸುತ್ತಿರುವುದು ಏಕೆ ಎಂದು ನ್ಯಾಯಾಧೀಶರು ಪ್ರಶ್ನಿಸಿದರು. ನ್ಯಾಯಮೂರ್ತಿ ಎಸ್.ಎಂ. ಸುಬ್ರಮಣ್ಯಂ ಮತ್ತು ವಿ.ಶಿವಗಣನಂ ದ್ವಿಸದಸ್ಯ ಪೀಠದಲ್ಲಿದ್ದರು.

ಆದರೆ, ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ಇಬ್ಬರೂ ಹೆಣ್ಣುಮಕ್ಕಳು ತಮ್ಮ ಸ್ವಂತ ಇಚ್ಛೆಯ ಮೇರೆಗೆ ಆಶ್ರಮದಲ್ಲಿ ವಾಸಿಸುತ್ತಿದ್ದೇವೆ ಮತ್ತು ತಮ್ಮ ಮೇಲೆ ಯಾವುದೇ ಒತ್ತಡವಿಲ್ಲ ಎಂದು ಹೇಳಿದ್ದಾರೆ. ಆದರೆ ನ್ಯಾಯಾಧೀಶ ಶಿವಗಣನಂ ಇದನ್ನು ಪರಿಗಣಿಸದೆ, ‘ತನ್ನ ಮಗಳನ್ನು ಮದುವೆಯಾಗಿ ಆಕೆಗೆ ಒಳ್ಳೆಯ ಜೀವನ ನೀಡಿದ ವ್ಯಕ್ತಿ ಇತರರ ಹೆಣ್ಣುಮಕ್ಕಳನ್ನು ತಪಸ್ವಿ ಜೀವನ ನಡೆಸಲು ಪ್ರೇರೇಪಿಸಿದ್ದು ಏಕೆ ಎಂದು ತಿಳಿಯಲು ಬಯಸುತ್ತೇವೆ’ ಎಂದು ಹೇಳಿದರು. ಪ್ರತಿಷ್ಠಾನದ ವೈದ್ಯರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿರುವುದನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಅರ್ಜಿದಾರರ ಪ್ರಕಾರ, ಆ ವೈದ್ಯರ ಮೇಲೆ ಬುಡಕಟ್ಟು ಸರ್ಕಾರಿ ಶಾಲೆಯ 12 ಬಾಲಕಿಯರಿಗೆ ಕಿರುಕುಳ ನೀಡಿದ ಆರೋಪವಿದೆ.

ಈ ಸುದ್ದಿಯನ್ನೂ ಓದಿ: Sadguru Jaggi Vasudev: ಸದ್ಗುರು ಆಶ್ರಮದ ಮೇಲೆ 150 ಪೊಲೀಸರ ದಿಢೀರ್‌ ದಾಳಿ, ವಿಡಿಯೊ ಇಲ್ಲಿದೆ