Saturday, 23rd November 2024

IPL 2025: ಆರ್​ಟಿಎಂ ನಿಯಮ ಬದಲಾವಣೆಗೆ ಬಿಸಿಸಿಐಗೆ ಪತ್ರ ಬರೆದ ಫ್ರಾಂಚೈಸಿ ಮಾಲಕರು

IPL 2025

ಮುಂಬಯಿ: ಫ್ರಾಂಚೈಸಿಗಳ ಒತ್ತಾಯಕ್ಕೆ ಮಣಿದು ಬಿಸಿಸಿಐ(BCCI) ಈ ಬಾರಿ ಐಪಿಎಲ್(IPL 2025)​ ತಂಡಗಳಿಗೆ ಗರಿಷ್ಠ 5 ಆಟಗಾರರ ರಿಟೇನ್​ಗೆ ಅನುವು ಮಾಡಿಕೊಟ್ಟಿದೆ. ಜತೆಗೆ ರೈಟ್​ ಟು ಮ್ಯಾಚ್​ (ಆರ್​ಟಿಎಂ) ಬಳಸಿಕೊಳ್ಳುವ ಅವಕಾಶವನ್ನೂ ಕಲ್ಪಿಸಿದೆ. ಆದರೆ, ಕೆಲ ಐಪಿಎಲ್ ಫ್ರಾಂಚೈಸಿಗಳ ಮಾಲೀಕರು ಬಿಸಿಸಿಐ ವಿರುದ್ಧ ಅಸಮಾಧಾನಗೊಂಡಿದ್ದು ಆರ್​ಟಿಎಂ(RTM) ನಿಯಮಾವಳಿಯನ್ನು ಪ್ರಶ್ನಿಸಿ ಬಿಸಿಸಿಐಗೆ ಪತ್ರವನ್ನೂ ಬರೆದಿವೆ ಎನ್ನಲಾಗಿದೆ.

ಅಸಮಾಧಾನಕ್ಕೆ ಕಾರಣವೇನು?

ಫ್ರಾಂಚೈಸಿಗಳ ಅಸಮಾಧಾನಕ್ಕೆ ಪ್ರಮುಖ ಕಾರಣವೆಂದರೆ, ಆರ್​ಟಿಎಂ ಪ್ರಕಾರ, ತಂಡವೊಂದು ಹರಾಜಿನಲ್ಲಿ ತನ್ನ ಮೂಲ ಆಟಗಾರ ಬೇರೆ ತಂಡಕ್ಕೆ ಗರಿಷ್ಠ ಮೊತ್ತಕ್ಕೆ ಬಿಡ್​ ಆದಾಗ ಆತನನ್ನು ಅದೇ ಮೊತ್ತಕ್ಕೆ ತನ್ನಲ್ಲಿಯೇ ಉಳಿಸಿಕೊಳ್ಳುವ ಅವಕಾಶ ಕಲ್ಪಿಸುತ್ತದೆ. ಆದರೆ ಈ ಬಾರಿ 2018ರ ಬಳಿಕ ಮತ್ತೆ ಐಪಿಎಲ್​ ಹರಾಜಿನಲ್ಲಿ ಆರ್​ಟಿಎಂ ಬಳಕೆಯಾಗುತ್ತಿದ್ದರೂ, ಈ ನಿಯಮಕ್ಕೆ ಸ್ವಲ್ಪ ತಿದ್ದುಪಡಿ ತಂದಿದೆ ಇದು ಫ್ರಾಂಚೈಸಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಹೊಸ ನಿಯಮದನ್ವಯ ಪ್ರಕಾರ ಉದಾಹರಣೆಗೆ ಹರಾಜಿನಲ್ಲಿ ʼಎʼ ತಂಡವೊಂದು ಆಟಗಾರನೊಬ್ಬನಿಗೆ 6 ಕೋಟಿ ರೂ. ಬಿಡ್​ ಸಲ್ಲಿಸಿದಾಗ, ʼಬಿʼ ತಂಡ ಆರ್​ಟಿಎಂ ಬಳಸಿ ತನ್ನಲ್ಲಿ ಉಳಿಸಿಕೊಳ್ಳಲು ಮುಂದಾದರೆ, ʼಎʼ ತಂಡಕ್ಕೆ ಬಿಡ್​ ಮೊತ್ತ ಏರಿಸುವ ಅವಕಾಶ ನೀಡಲಾಗುತ್ತದೆ. ಆಗ ʼಎʼ ತಂಡ 12 ಕೋಟಿ ರೂ. ಬಿಡ್​ ಸಲ್ಲಿಸಿದರೆ, ʼಬಿʼ ತಂಡ ಆರ್​ಟಿಎಂನಲ್ಲಿ ಆ ಮೊತ್ತಕ್ಕೇ ಆಟಗಾರನನ್ನು ಮರಳಿ ಗಳಿಸಬಹುದಾಗಿರುತ್ತದೆ. ʼಎʼ ತಂಡ ಎಷ್ಟೇ ಮೊತ್ತದ ಬಿಡ್​ ಏರಿಕೆಯ ಮೂಲಕ ಆಟಗಾರನನ್ನು ತನ್ನದಾಗಿಸಿಕೊಳ್ಳಲು ಪ್ರಯತ್ನಿಸಬಹುದು.

ಈ ಹಿಂದೆ ಇದ್ದ ಆರ್​ಟಿಎಂ ನಿಯಮದ ಪ್ರಕಾರ ಆಟಗಾರನೊಬ್ಬ ಹರಾಜಿನಲ್ಲಿ ತನ್ನ ಮಾರುಕಟ್ಟೆ ಮೌಲ್ಯದೊಂದಿಗೆ ಮೂಲ ತಂಡಕ್ಕೆ ಮರಳಬಹುದಾಗಿತ್ತು. ಆದರೆ ಈಗಿನ ಬದಲಾವಣೆಯಿಂದಾಗಿ ಆಟಗಾರನ ಮೊತ್ತ ಏರಿಕೆಯಾಗುತ್ತದೆ. ಇದು ಮೂಲ ತಂಡಕ್ಕೆ ಆತನನ್ನು ಉಳಿಸಿಕೊಳ್ಳಲು ಕಷ್ಟವಾಗಲಿದೆ. ಆರ್‌ಟಿಎಂ ಮೊತ್ತ ಏರಿಕೆಯಾಗುತ್ತದೆ ಎನ್ನುವುದಾದರೆ ಹರಾಜಿನಲ್ಲಿಯೇ ಆಟಗಾರರನ್ನು ಖರೀದಿಸಬಹುದು ಎನ್ನುವುದು ಫ್ರಾಂಚೈಸಿಗಳ ಫ್ರಾಂಚೈಸಿಗಳ ವಾದ.

ಇದನ್ನೂ ಓದಿ IPL 2025: ಹರಾಜಿಗೂ ಮುನ್ನ ಆರ್‌ಸಿಬಿಗೆ ಮಹತ್ವದ ಸಲಹೆ ನೀಡಿದ ಮಾಜಿ ಆಟಗಾರ

ಪ್ರತಿ ತಂಡಗಳ ಬಜೆಟ್​ ಮಿತಿ 120 ಕೋಟಿ ರೂ.ಗೆ ಏರಿಸಲಾಗಿದೆ. ಆದರೆ ಗರಿಷ್ಠ 5 ಆಟಗಾರರನ್ನು ರಿಟೇನ್​ ಮಾಡಿದರೆ ಒಟ್ಟು 75 ಕೋಟಿ ರೂ. ವ್ಯಯಿಸಬೇಕಾಗುತ್ತದೆ. ಯಾಕೆಂದರೆ 5 ಆಟಗಾರರ ರಿಟೇನ್​ಗೆ ಕ್ರಮವಾಗಿ 18, 14, 11, 18, 14 ಕೋಟಿ ರೂ. ನೀಡಬೇಕಾಗುತ್ತದೆ. ಇನ್ನು 3 ಆಟಗಾರರನ್ನಷ್ಟೇ ರಿಟೇನ್​ ಮಾಡಿದರೆ, ಹರಾಜಿನಲ್ಲಿ 3 ಆರ್​ಟಿಎಂ ಬಳಸಬಹುದಾಗಿದೆ. 4 ಮತ್ತು 5ನೇ ಆಟಗಾರರನ್ನು ಉಳಿಸಿಕೊಳ್ಳಬೇಕಾದರೆ ಮತ್ತೆ 18 ಮತ್ತು 14 ಕೋಟಿ ರೂ.ಗಳನ್ನು ನೀಡಬೇಕಾಗುತ್ತದೆ! ಹೀಗಾಗಿ ಫ್ರಾಂಚೈಸಿಗಳಿಗೆ ಹರಾಜಿನ ವೇಳೆ ಕಡಿಮೆ ಮೊತ್ತ ಉಳಿಯಲಿದೆ.

ಹೆಚ್ಚುವರಿ ವೇತನ

ಈ ಬಾರಿಯ ಐಪಿಎಲ್‌ ಆಡುವ ಆಟಗಾರರಿಗೆ ಹೆಚ್ಚುವರಿ ವೇತನ ಸಿಗಲಿದೆ. ತಾವು ಆಡುವ ಪ್ರತಿ ಪಂದ್ಯಕ್ಕೆ 7.5 ಲಕ್ಷ ಪಡೆಯಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಘೋಷಿಸಿದ್ದಾರೆ. ಆಟಗಾರರು ಹರಾಜಾಗುವ ಮೊತ್ತವನ್ನು ಹೊರತುಪಡಿಸಿ ಈ ಹೆಚ್ಚಿವರಿ ಹಣ ಸಿಗಲಿದೆ. ಒಬ್ಬ ಆಟಗಾರ ಆವೃತ್ತಿಯ ಎಲ್ಲ 14 ಲೀಗ್‌ ಪಂದ್ಯಗಳನ್ನು ಆಡಿದರೆ ಆತನಿಗೆ ಒಟ್ಟು 1.05 ಕೋಟಿ ಹೆಚ್ಚುವರಿ ವೇತನ ಸಿಗಲಿದೆ. ಕಡಿಮೆ ಮೊತ್ತಕ್ಕೆ ಹರಾಜಾಗಿ, ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ಆಟಗಾರರಿಗೆ ಈ ನಿಯಮದಿಂದ ಹೆಚ್ಚಿನ ಅನುಕೂಲ ಸಿಗಲಿದೆ.