ನವದೆಹಲಿ: 2025ರಲ್ಲಿ ಪಾಕಿಸ್ತಾನದಲ್ಲಿ ಆಯೋಜನೆಗೊಂಡಿರುವ ಚಾಂಪಿಯನ್ಸ್ ಟ್ರೋಫಿ(Champions Trophy) ಪಂದ್ಯಾವಳಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲ್ಲ ಎಂದು ವರದಿಗಳು ತಿಳಿಸಿವೆ. ಅಲ್ಲದೇ ಭಾರತ ಪಂದ್ಯಗಳು ದುಬೈನಲ್ಲಿ ನಡೆಸಲು ಐಸಿಸಿ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಇದು ಮಾತ್ರವಲ್ಲದೆ ಭಾರತ ಫೈನಲ್ ಪ್ರವೇಶಿಸಿದರೂ ಈ ಪಂದ್ಯ ಪಾಕ್ನಿಂದ ದುಬೈಗೆ(Champions Trophy 2025 Final Dubai) ಸ್ಥಳಾಂತರಗೊಳ್ಳಲಿದೆ ಎನ್ನಲಾಗಿದೆ.
ಕೆಲದಿನಗಳ ಹಿಂದಷ್ಟೇ ಚಾಂಪಿಯನ್ಸ್ ಟ್ರೋಫಿಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದ್ದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್, ಮಾ.1ಕ್ಕೆ ಲಾಹೋರ್ನಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯವನ್ನು ನಿಗದಿಪಡಿಸಿತ್ತು. ಇತ್ತೀಚೆಗೆ ಐಸಿಸಿ ಆಯೋಗವು ಪಂದ್ಯಾವಳಿ ನಡೆಯುವ ಲಾಹೋರ್ನ ಗಡಾಫಿ ಸ್ಟೇಡಿಯಂ, ರಾವಲ್ಪಿಂಡಿ, ಕರಾಚಿ ರಾಷ್ಟ್ರೀಯ ಕ್ರೀಡಾಂಗಣಗಳಿಗೆ ಭೇಟಿ ನೀಡಿ ಅಲ್ಲಿನ ಭದ್ರತಾ ಕ್ರಮಗಳು, ಮೂಲಸೌಕರ್ಯ ಮತ್ತು ಇತರ ಪ್ರಮುಖ ವ್ಯವಸ್ಥೆಗಳನ್ನು ಪರಿಶೀಲಿಸಿತ್ತು. ಐಸಿಸಿಯ ಕಾರ್ಯಕ್ರಮ ಮತ್ತು ಭದ್ರತಾ ವಿಭಾಗದ ಉನ್ನತ ಅಧಿಕಾರಿಗಳು ಹಾಗೂ ಕ್ರಿಕೆಟ್ ಮತ್ತು ಪ್ರೊಡಕ್ಷನ್ ವಿಭಾಗದ ಜನರಲ್ ಮ್ಯಾನೇಜರ್ ಈ ನಿಯೋಗದಲ್ಲಿದ್ದರು. ಸಿದ್ಧತೆಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿತ್ತು. ಹೀಗಾಗಿ ಭಾರತ ತಂಡ ಪಾಕ್ಗೆ ತೆರಳಲಿದೆ ಎಂದು ಹೇಳಲಾಗಿತ್ತು. ಆದರೆ ಭದ್ರತೆಯ ಕಾರಣವನ್ನು ನೀಡಿರುವ ಬಿಸಿಸಿಐ ಭಾರತ ತಂಡವನ್ನು ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಕಳುಹಿಸಲು ನಿರಾಕರಿದೆ ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ IND vs PAK: ಪಾಕ್ಗೆ ಸಚಿವ ಜೈಶಂಕರ್ ಭೇಟಿ; ಚಾಂಪಿಯನ್ಸ್ ಟ್ರೋಫಿಗೆ ತೆರಳುತ್ತಾ ಭಾರತ?
ಮಾಧ್ಯಮ ವರದಿಗಳ ಪ್ರಕಾರ, 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾದ ಗುಂಪು ಹಂತದ ಪಂದ್ಯಗಳ ಜತೆಗೆ ಒಂದು ವೇಳೆ ಭಾರತ ಫೈನಲ್ಗೆ ಅರ್ಹತೆ ಪಡೆದರೆ,ಈ ಪಂದ್ಯವನ್ನು ಪಾಕಿಸ್ತಾನದಿಂದ ಸ್ಥಳಾಂತರಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಫೈನಲ್ ಪಂದ್ಯವನ್ನು ಲಾಹೋರ್ನಿಂದ ದುಬೈಗೆ ಸ್ಥಳಾಂತರಿಸಬಹುದು ಎಂದು ವರದಿಯಲ್ಲಿ ಹೇಳಲಾಗಿದೆ. ಮಾರ್ಚ್ 9 ರಂದು ಫೈನಲ್ ನಡೆಯಲಿರುವುದರಿಂದ ಪಂದ್ಯದ ಸ್ಥಳವನ್ನು ಖಚಿತಪಡಿಸಲು ಮಾರ್ಚ್ 6 ರವರೆಗೆ ಸಮಯ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ. ಭಾರತ ತನ್ನ ಸೆಮಿ ಫೈನಲ್ ಪಂದ್ಯವನ್ನು ಅಬುಧಾಬಿ ಅಥವಾ ಶಾರ್ಜಾ ಸ್ಟೇಡಿಯಂನಲ್ಲಿ ಆಡುವ ನಿರೀಕ್ಷೆಯಿದೆ ಎನ್ನಲಾಗಿದೆ.
ಪಾಕಿಸ್ತಾನ ಕೊನೆಯದಾಗಿ 1996ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಭಾರತ ಮತ್ತು ಶ್ರೀಲಂಕಾ ಜತೆಗೆ ಪಾಕಿಸ್ತಾನವೂ ಆತಿಥ್ಯ ವಹಿಸಿತ್ತು. ಆ ಬಳಿಕ ಪಾಕಿಸ್ತಾನ ಐಸಿಸಿ ಟೂರ್ನಿಯ ಆತಿಥ್ಯ ಪಡೆದಿರುವುದು ಇದೇ ಮೊದಲು. ಆದರೆ ಈ ಟೂರ್ನಿಯಲ್ಲಿ ಆಡಲು ಟೀಮ್ ಇಂಡಿಯಾ ಪಾಕಿಸ್ತಾನ ಹೋಗಲು ನಿರಾಕರಿಸುತ್ತಿದೆ.
ನವೆಂಬರ್ 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ 150 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ನಂತರ ಭಾರತವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಆಡಿಲ್ಲ. ಜೂನ್-ಜುಲೈ 2008 ರಲ್ಲಿ ಏಷ್ಯಾ ಕಪ್ ಸಮಯದಲ್ಲಿ ಭಾರತೀಯ ಕ್ರಿಕೆಟ್ ತಂಡವು ಕೊನೆಯ ಬಾರಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಿತ್ತು.