Saturday, 23rd November 2024

Viral Video: ಹೊಕ್ಕಳು ಕಾಣುವ ಉಡುಪು; ಇಬ್ಬರು ಯುವತಿಯರನ್ನು ಹೊರದಬ್ಬಿದ ಸ್ಪಿರಿಟ್ ಏರ್‌ಲೈನ್ಸ್!

Viral Video

ಪ್ರಯಾಣಿಕರಿಬ್ಬರು ಕ್ರಾಪ್ ಟಾಪ್ಸ್ (Crop Tops) ಧರಿಸಿದ್ದಾರೆ ಎನ್ನುವ ಕಾರಣಕ್ಕೆ ಅವರನ್ನು ವಿಮಾನದಿಂದ ಹೊರ ದಬ್ಬಿರುವ ಘಟನೆ ನ್ಯೂಯಾರ್ಕ್ ನಲ್ಲಿ (Newyark) ನಡೆದಿದೆ. ಈ ಕುರಿತು ಯುವತಿಯರು ಸಾಮಾಜಿಕ ಜಾಲತಾಣದಲ್ಲಿ (social media) ಹೇಳಿಕೊಂಡಿದ್ದು, ವೈರಲ್ (Viral Video) ಆಗಿದೆ.

ಸ್ನೇಹಿತರಾದ ತಾರಾ ಕೆಹಿಡಿ ಮತ್ತು ತೆರೇಸಾ ಅರೌಜೊ ಅವರು ಅಕ್ಟೋಬರ್ 4ರಂದು ಲಾಸ್ ಏಂಜಲೀಸ್‌ನಿಂದ ನ್ಯೂ ಓರ್ಲಿಯನ್ಸ್‌ಗೆ ಸ್ಪಿರಿಟ್ ಏರ್‌ಲೈನ್ಸ್ ನಲ್ಲಿ (Spirit Airlines) ಹೊರಟಿದ್ದರು. ಆದರೆ ಅವರ ಉಡುಪಿನ ಕಾರಣದಿಂದ ಅವರನ್ನು ವಿಮಾನದಿಂದ ಹೊರಹಾಕಲಾಯಿತು.

ಆರಂಭದಲ್ಲಿ ಸ್ವೆಟರ್‌ಗಳನ್ನು ಧರಿಸಿದ್ಧ ಅವರು ವಿಮಾನದಲ್ಲಿ ಹವಾನಿಯಂತ್ರಣದ ಕೊರತೆಯಿಂದಾಗಿ ಅವುಗಳನ್ನು ತೆಗೆದು ಹಾಕಿದರು. ಸ್ವೆಟರ್ ಒಳಗೆ ಅವರು ಕ್ರಾಪ್ ಟಾಪ್ ಧರಿಸಿದ್ದರು. ಆದರೆ ಒಬ್ಬ ಸಿಬ್ಬಂದಿ ಅವರ ಬಳಿ ಬಂದು ಡ್ರೆಸ್ ಕೋಡ್ ನೀತಿಯ ಬಗ್ಗೆ ಪ್ರಶ್ನಿಸಿದ್ದಾರೆ. ಅದಕ್ಕೆ ಯುವತಿಯರು ನಮಗೆ ಯಾವುದೇ ನೀತಿಯ ಬಗ್ಗೆ ಹೇಳಿಲ್ಲ ಎಂದು ಹೇಳಿದ್ದಾರೆ.

ನಾವು ಕ್ರಾಪ್ ಟಾಪ್ ಧರಿಸಿದ್ದೇವೆ. ಸ್ವಲ್ಪ ಹೊಟ್ಟೆ, ಹೊಕ್ಕಳು ಕಾಣುತ್ತಿತ್ತು. ಆದರೆ ಅವರ ವರ್ತನೆ ಗೊಂದಲಮಯವಾಗಿತ್ತು. ಇದು ತಾರತಮ್ಯ ಎಂದು ತಾರಾ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

ಉಳಿದ ಪ್ರಯಾಣಿಕರು ಅವರನ್ನೇ ಸಮರ್ಥಿಸಿಕೊಂಡರು. ಆದರೆ ಮೇಲ್ವಿಚಾರಕರು ಮಧ್ಯಪ್ರವೇಶಿಸಿ ಹೊರನಡೆಯದಿದ್ದರೆ ಪೊಲೀಸರನ್ನು ಕರೆಯುವುದಾಗಿ ಬೆದರಿಕೆ ಹಾಕಿದ್ದರು ಎಂದು ಯುವತಿಯರು ತಿಳಿಸಿದ್ದಾರೆ.
ವಿಮಾನದ ಮೇಲ್ವಿಚಾರಕರು ಮರು ಬುಕ್ಕಿಂಗ್ ಮಾಡುವುದಾಗಿ ಭರವಸೆ ನೀಡಿದರು. ಆದರೆ ಅದನ್ನು ನಾವು ನಿರಾಕರಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಅಕ್ಟೋಬರ್ 6ರಂದು ತಮ್ಮ ಅಳಲನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಅವರು ಸ್ಪಿರಿಟ್ ಏರ್‌ಲೈನ್ಸ್ ಬಗ್ಗೆ ದೂರಿದ್ದಾರೆ.

ಈ ಕುರಿತು ಇನ್ ಸ್ಟಾಗ್ರಾಮ್ ನಲ್ಲಿ ಹೇಳಿಕೊಂಡಿರುವ ಅವರು, ಇದು ಭಯಾನಕ ಸೇವೆ. ನಮ್ಮ ಶರ್ಟ್‌ಗಳನ್ನು ಇಷ್ಟಪಡದ ಒಬ್ಬ ಪುರುಷ ಸಿಬ್ಬಂದಿಯಿಂದ ನಾವು ವಿಮಾನದಿಂದ ಹೊರಹಾಕಲ್ಪಟ್ಟಿದ್ದೇವೆ. ಇದು ಪೂರ್ವಗ್ರಹ ತಾರತಮ್ಯ ಮತ್ತು ಸ್ತ್ರೀದ್ವೇಷದ ಕೃತ್ಯ ಎಂದು ಅರೌಜೊ ತಿಳಿಸಿದ್ದಾರೆ.

ಇದರಿಂದಾಗಿ ನಾವು ಬೇರೆ ಏರ್‌ಲೈನ್‌ನೊಂದಿಗೆ ಮತ್ತೊಂದು ವಿಮಾನವನ್ನು ಮರು ಬುಕ್ ಮಾಡಲು 1,000 ಡಾಲರ್ ಖರ್ಚು ಮಾಡಬೇಕಾಯಿತು ಎಂದು ತಿಳಿಸಿದ್ದಾರೆ.

ಈ ಘಟನೆಯಿಂದ ನಾವು ಮುಜುಗರಕ್ಕೊಳಗಾಗಿದ್ದೇವೆ. ಯಾಕೆಂದರೆ ನಮ್ಮನ್ನು ಅಪರಾಧಿಗಳಂತೆ ನಡೆಸಿಕೊಳ್ಳಲಾಗಿದೆ. ವಿಮಾನದಲ್ಲಿದ್ದ ಎಲ್ಲರೂ ನಮ್ಮನ್ನು ನೋಡುತ್ತಿದ್ದರು ಎಂದು ಅವರು ಹೇಳಿದ್ದು, ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಈ ಘಟನೆಯು ಏರ್‌ಲೈನ್ ಡ್ರೆಸ್ ಕೋಡ್‌ಗಳು ಮತ್ತು ಸಂಭಾವ್ಯ ಪಕ್ಷಪಾತಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

ಸ್ಪಿರಿಟ್ ಏರ್‌ಲೈನ್ಸ್‌ನ ನೀತಿಯು ಪ್ರಯಾಣಿಕರು “ಸೂಕ್ತವಾದ ಉಡುಗೆಯನ್ನು ಧರಿಸಬೇಕು” ಎಂದು ಹೇಳಿದೆ. ಆದರೆ ನಿರ್ದಿಷ್ಟವಾಗಿ ಯಾವುದು ಎಂದು ತಿಳಿಸಿಲ್ಲ ಎನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸ್ಪಿರಿಟ್ ಏರ್‌ಲೈನ್ಸ್‌ನ ಪ್ರತಿನಿಧಿಯೊಬ್ಬರು, ನಮ್ಮೊಂದಿಗೆ ಪ್ರಯಾಣಿಸುವ ಎಲ್ಲಾ ಅತಿಥಿಗಳಿಗೆ ಕೆಲವು ಉಡುಪು ಮಾನದಂಡಗಳಿವೆ. ಈ ವಿಷಯದ ಕುರಿತು ತನಿಖೆ ಮಾಡುತ್ತಿದ್ದೇವೆ. ಪ್ರಯಾಣಿಕರ ಅನುಭವದ ಕುರಿತು ನಾವು ಅವರೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದ್ದಾರೆ.

Viral Video: ಪ್ರೀ ವೆಡ್ಡಿಂಗ್ ಫೋಟೊಶೂಟ್‌ನಲ್ಲಿ ಲಿಪ್‌ ಲಾಕ್‌! ನೋಡುಗರಿಗೆ ಫುಲ್‌ ಟೆನ್ಶನ್‌!

ಒಂದು ವೇಳೆ ಪ್ರಯಾಣಿಕರು ಅಶ್ಲೀಲ ಉಡುಗೆ ಧರಿಸಿದ್ದರೆ ಅವರನ್ನು ವಿಮಾನದಿಂದ ಹೊರಹೋಗಲು ಒತ್ತಾಯಿಸಬಹುದು ಎಂದು ಹೇಳಿದ್ದಾರೆ.