ವಿಶ್ವಾದ್ಯಂತ ಭಾರತೀಯ ಖಾದ್ಯಗಳನ್ನು(Indian Dishes) ಸಾಕಷ್ಟು ಮಂದಿ ಪ್ರೀತಿಸುತ್ತಾರೆ. ಹೀಗಾಗಿ ಪ್ರವಾಸ ಬರುವ ಹೆಚ್ಚಿನ ವಿದೇಶಿಯರು ಭಾರತೀಯ ಖಾದ್ಯಗಳನ್ನು (Indian food) ಸವಿಯಲು ಇಷ್ಟಪಡುತ್ತಾರೆ. ಇದೀಗ ಭಾರತೀಯ ಖಾದ್ಯಗಳ ಮೇಲಿನ ಪ್ರೀತಿಯನ್ನು ಅಮೆರಿಕದ (US) ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಭಾರೀ ವೈರಲ್ (Viral Video) ಆಗಿದೆ. ಅಮೆರಿಕದ ಮಹಿಳೆ ತಮ್ಮ ಮಕ್ಕಳಿಗೆ ಮೆಚ್ಚಿನ ಭಾರತೀಯ ತಿನಿಸುಗಳನ್ನು ನೀಡುವ ವಿಡಿಯೋವೊಂದನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಭಾರತಕ್ಕೆ ಬಂದಿದ್ದ ಅಮೆರಿಕದ ಕಂಟೆಂಟ್ ಕ್ರಿಯೇಟರ್ ಕ್ರಿಸ್ಟನ್ ಫಿಶರ್ ಭಾರತೀಯ ಖಾದ್ಯಗಳ ಅಭಿಮಾನಿ. ಅವರು ಇತ್ತೀಚೆಗೆ ತಮ್ಮ ಮಕ್ಕಳು ನೆಚ್ಚಿನ ಭಾರತೀಯ ಭಕ್ಷ್ಯಗಳನ್ನು ಸವಿಯುವ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು.
ನಾವು ಮೊದಲು ಭಾರತಕ್ಕೆ ಬಂದಾಗ ನನ್ನ ಮಕ್ಕಳು ಭಾರತೀಯ ಆಹಾರವನ್ನು ತಿನ್ನುತ್ತಿರಲಿಲ್ಲ. ಆದರೆ ಈಗ ಅವರು ತಿನ್ನುವುದು ಅದನ್ನೇ. ಅವರು ಈ ದೇಶದ ಆಹಾರವನ್ನು ಪ್ರೀತಿಸಲು ಕಲಿತಿದ್ದಾರೆ. ನನ್ನ ಮೂವರು ಮಕ್ಕಳು ತಮ್ಮದೇ ಆದ ನೆಚ್ಚಿನ ಭಕ್ಷ್ಯಗಳನ್ನು ಹೊಂದಿದ್ದಾರೆ. ಚೋಲೆ ಬಟೂರೆ ನನ್ನ ಮೆಚ್ಚಿನ ಮತ್ತು ಮಸಾಲೆ ದೋಸೆ ನನ್ನ ಗಂಡನ ಮೆಚ್ಚಿನ ಭಾರತೀಯ ಖಾದ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಆರಂಭದಲ್ಲಿ ಕ್ರಿಸ್ಟನ್ ತನ್ನ ಮಗಳು ಟ್ರಿನಿಟಿಗೆ ಸ್ವಲ್ಪ ಮೊಸರು ಮತ್ತು ಸಲಾಡ್ನೊಂದಿಗೆ ಆಲೂ ಪರಾಠವನ್ನು ತಿನ್ನಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಅವರ ಒಬ್ಬ ಮಗಳು ನೋಯೆಲ್ ಪೋಹಾ ತುಂಬಿದ ಬಟ್ಟಲು ಹಿಡಿದು ನಗುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಇನ್ನೊಬ್ಬ ಮಗಳು ಸೋಫಿಯಾಗೆ ಅನ್ನದೊಂದಿಗೆ ಬೇಳೆ ಸಾರು ಇಷ್ಟಪಡುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ.
ಈ ವಿಡಿಯೋ 11 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಸಾಕಷ್ಟು ಮಂದಿ ಇದಕ್ಕೆ ಕಾಮೆಂಟ್ ಕೂಡ ಮಾಡಿದ್ದಾರೆ. ಒಬ್ಬರು ಟ್ರಿನಿಟಿ ಪಂಜಾಬಿ, ನೋಯೆಲ್ ಇಂದೋರ್, ಸೋಫಿಯಾ ಸಂಪೂರ್ಣ ಭಾರತ ಎಂದು ಹೇಳಿದ್ದು,ಇನ್ನೊಬ್ಬರು ಈ ಮಕ್ಕಳು ಜಗತ್ತಿಗೆ ಸಾಕ್ಷಿಯಾಗಿ ಬೆಳೆಯುತ್ತಿದ್ದಾರೆ ಎಂದಿದ್ದಾರೆ.
Viral Video: ಪತ್ನಿಯ ಸುರಕ್ಷತೆಗಾಗಿ ಮನೆಯಲ್ಲಿ ಹಿಡನ್ ಕ್ಯಾಮೆರಾ ಇಟ್ಟ ಪತಿ; ಕಂಡಿದ್ದು ನೋಡಬಾರದ ದೃಶ್ಯ!
ಮತ್ತೊಬ್ಬರು ಯಾರಾದರೂ ಅವರಿಗೆ ಆಧಾರ್ ಕಾರ್ಡ್ ನೀಡಿ ಎಂದಿದ್ದಾರೆ. ಮತ್ತೊಬ್ಬರು ಭಾರತೀಯರಿಗೆ ಸಸ್ಯಾಹಾರದಲ್ಲಿ ಸಾಕಷ್ಟು ಆಯ್ಕೆಗಳಿವೆ. ಅದನ್ನು ಬೇರೆ ಯಾವುದೇ ದೇಶದಲ್ಲಿ ನೋಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ.