ಗುಬ್ಬಿ: ತಾಲ್ಲೂಕಿನ ಕಸಬ ಹೋಬಳಿ ಜಿ.ಹೊಸಹಳ್ಳಿ ಗ್ರಾಮದ ಕೆರೆಯಲ್ಲಿ ಈಜಲು ಹೋದ ಶಿರಾ ಮೂಲದ ನಾಲ್ವರ ಪೈಕಿ ಓರ್ವ ಯುವಕ ಈಜು ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಶಂಕೆಯಲ್ಲೇ ಸತತ 16 ಗಂಟೆ ತೀವ್ರ ಶೋಧ ನಡೆಸಿದ ಬಳಿಕ ಮಂಗಳವಾರ ಬೆಳಿಗ್ಗೆ ಯುವಕನ ದೇಹ ಪತ್ತೆಯಾಗಿದೆ.
ಜಿ.ಹೊಸಹಳ್ಳಿ ಗ್ರಾಮದ ಕೆರೆಯಲ್ಲಿ ಮದ್ಯಾಹ್ನ 4 ಗಂಟೆ ಸಮಯದಲ್ಲಿ ಈಜಲು ಹೋದ ನಾಲ್ಕು ಜನರ ಪೈಕಿ ಈಜು ಬಾರದ ರಾಕೇಶ್(28) ಮುಳುಗಿದ್ದ ಯುವಕ ಎನ್ನಲಾಗಿದೆ. ಹೊಸಹಳ್ಳಿಯಲ್ಲಿದ್ದ ಈ ಕೂಲಿ ಕಾರ್ಮಿಕರ ತಂಡ ಜಲ ಜೀವನ್ ಮಿಷನ್ ಕಾಮಗಾರಿ ಮಾಡುತ್ತಿದ್ದರು. ಹಬ್ಬದ ಹಿನ್ನಲೆ ಊರಿಗೆ ತೆರಳಿ ರಜೆ ಮುಗಿಸಿಕೊಂಡು ಮರಳಿ ಬಂದು ಸೋಮವಾರ ಮಧ್ಯಾಹ್ನ ಕೆರೆಗೆ ಇಳಿದಿದ್ದಾರೆ. ಈ ಸಮಯದಲ್ಲಿ ರಾಕೇಶ್ ನಾಪತ್ತೆಯಾಗಿರುವುದಾಗಿ ಜೊತೆಗಾರರು ಹುಡುಕಾಟ ನಡೆಸಿ ನಂತರ ಪೊಲೀಸರಿಗೆ ಮಾಹಿತಿ ತಿಳಿಸಲಾಗಿದೆ. ನಂತರ ಪೊಲೀಸರೊಂದಿಗೆ ಅಗ್ನಿ ಶಾಮಕ ದಳ ತೀವ್ರ ಹುಡುಕಾಟ ನಡೆಸಿದರು. ಕತ್ತಲಾದ ಬಳಿಕ ಮಂಗಳವಾರ ಬೆಳಿಗ್ಗೆ ಶೋಧ ಕಾರ್ಯ ಆರಂಭಿಸಿದ ಬಳಿಕ ರಾಕೇಶ್ ಶವ ಪತ್ತೆಯಾಗಿದೆ.
ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಹಾಗೂ ಮುಳುಗು ತಜ್ಞರು ಕಾರ್ಯಾಚರಣೆ ಯಶಸ್ವಿಯಾಗಿ ಮಳೆಯಲ್ಲೇ ನಡೆಸಿ ದ್ದಾರೆ. ಸೋಮವಾರದಿಂದ ಸ್ಥಳದಲ್ಲಿ ಮೊಕಂ ಹೂಡಿದ ಗುಬ್ಬಿ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.