ಹೀಗೊಂದು ಮನವಿ..
ಶಿರಸಿಯಲ್ಲಿ ಹಳೆ ಬಸ್ ನಿಲ್ದಾಣ ಹೊಸದಾಗಿ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿ ಶಿರಸಿಯ ಹೊಸದಾದ ಹಳೆ ಬಸ್ ಸ್ಟ್ಯಾಂಡ್ಗೆ ಇರಿಸಬಹುದಾದ ಹೆಸರಿನ ಬಗ್ಗೆ ಚರ್ಚೆ ಕಾವೇರುತ್ತಿದೆ. ಇದು ಬಹುಶಃ ಪ್ರಾರಂಭವಾಗಿದ್ದು ಸಂಘಟನೆಯೊಂದು ಇಂಥವರ ಹೆಸರಿಡಿ ಎಂದು ಮನವಿ ಮಾಡುವ ಮೂಲಕ.
ಪ್ರಾದೇಶಿಕ ವ್ಯಕ್ತಿ-ವಸ್ತುಗಳಿಗೆ ಪ್ರಾಮುಖ್ಯತೆ ಕೊಡದ ಹೊರತು ನಮ್ಮ ಊರಿನ ಹೆಮ್ಮೆಯ ವಿಚಾರಗಳನ್ನು ಹೊರಜಗತ್ತಿಗೆ ತಲುಪಿಸುವುದು ಬಹುಕಷ್ಟ. ನಗರದ ಬಸ್ ನಿಲ್ದಾಣ ದಿನಂಪ್ರತಿ ಸಾವಿರಾರು ಜನರು ಓಡಾಡುವ ಸ್ಥಳ. ಪರ ಊರಿನಿಂದ ಬಸ್ನಲ್ಲಿ ಬರುವವರೂ ಬಸ್ ನಿಲ್ದಾಣದ ಹೆಸರಿನ ಮೇಲೆ ಕಣ್ಣಾಡಿಸಿಯೇ ಹೋಗುತ್ತಾರೆ. ಹೀಗಿರುವಾಗ ನಮ್ಮ ಊರಿನ ಹೆಮ್ಮೆಯ ಸಂಗತಿಯನ್ನು ಪ್ರಚುರಪಡಿಸಲು ಹಾಗೂ ಗೌರವ ಸೂಚಿಸಲು ಇದೊಂದು ಒಳ್ಳೆಯ ವಿಧಾನ ಎಂದು ಸಾಮಾಜಿಕ ಕಳಕಳಿಯುಳ್ಳ ಕಿರಣ್ ಭಟ್ ಮನವಿಮಾಡಿದ್ದಾರೆ.
ರಾಜ್ಯ ರಾಜಧಾನಿ ಬೆಂಗಳೂರಿನ ಬಸ್ ನಿಲ್ದಾಣಕ್ಕೆ ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಹೆಸರಿಟ್ಟಿ ರುವುದು ಎಲ್ಲರಿಗೂ ತಿಳಿದಿದೆ. ಅದೇ ರೀತಿ ನಮ್ಮ ಶಿರಸಿಯ ಎಷ್ಟು ಜನರಿಗೆ ಶಿರಸಿಗೂ ಒಬ್ಬ ನಿರ್ಮಾತೃ ಇರುವ ಕುರಿತು ತಿಳಿದಿದೆ ಹೇಳಿ? ಸೋದೆಯ ಅರಸು ಶ್ರೀ ರಾಮಚಂದ್ರ ನಾಯಕರು ಕುಗ್ರಾಮವಾಗಿದ್ದ ಶಿರಸಿಯನ್ನು ಕಟ್ಟಿ-ಬೆಳೆಸಿ ವಾಣಿಜ್ಯ ಕೇಂದ್ರವಾಗಿಸಿದವರು. ವಿಪರ್ಯಾಸವೆಂದರೆ ಇದುವರೆಗೂ ಶಿರಸಿಯ ಯಾವುದೇ ವೃತ್ತಕ್ಕಾ ಗಲಿ, ಪ್ರದೇಶಕ್ಕಾಗಲಿ ಅಥವಾ ಕಟ್ಟಡಗಳಿಗಾಗಲಿ ಅವರ ಹೆಸರಿಟ್ಟು ಕನಿಷ್ಠ ಗೌರವ ಸೂಚಿಸುವ ಕೆಲಸವನ್ನು ಶಿರಸಿಗ ರಾದ ನಾವು ಮಾಡಿಲ್ಲ. ಇದೀಗ ಒಂದು ಸುವರ್ಣಾವಕಾಶವಿದೆ.
ಹೊಸದಾಗಿ ನಿರ್ಮಾಣವಾಗುತ್ತಿರುವ ಶಿರಸಿಯ ಬಸ್ ನಿಲ್ದಾಣಕ್ಕೆ ಶ್ರೀ ರಾಮಚಂದ್ರ ನಾಯಕರ ಹೆಸರನ್ನಿಡಬೇಕು. ಆ ಮೂಲಕ ಇದುವರೆಗೂ ಸಲ್ಲಿಸದ (ಕನಿಷ್ಠ) ಗೌರವವನ್ನಾದರೂ ಸಲ್ಲಿಸಬೇಕು. ಶಿರಸಿಯ ಬಸ್ ನಿಲ್ದಾಣ ‘ಸೋದೆ ಅರಸ ರಾಮಚಂದ್ರ ನಾಯಕ ಬಸ್ ನಿಲ್ದಾಣ’ವಾಗಿ ಕಂಗೊಳಿಸಲಿ ಎನ್ನುವುದು ಕಿರಣ್ ಭಟ್, ಭೈರುಂಬೆ ಅವರ ಆಶಯ.
ಇದನ್ನೂ ಓದಿ: Sirsi News: ರಿಂಗ್ ಸ್ಪಾಟ್ ರೋಗ: ರೈತರಿಗೆ ತೊಂದರೆ