Saturday, 23rd November 2024

WTC 2025 Points Table: ಭಾರತದ ಗೆಲುವಿನ ಶೇಕಡಾವಾರು ಅಂಕದಲ್ಲಿ ಭಾರೀ ಕುಸಿತ

ಬೆಂಗಳೂರು: ನ್ಯೂಜಿಲ್ಯಾಂಡ್‌(India vs New Zealand 1st Test) ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ 8 ವಿಕೆಟ್‌ಗಳ ಸೋಲು ಕಂಡ ಪರಿಣಾಮ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) 2023-25 ಅಂಕಪಟ್ಟಿಯಲ್ಲಿ(WTC 2025 Points Table) ಭಾರತದ ಗೆಲುವಿನ ಶೇಕಡಾವಾರು ಅಂಕದಲ್ಲಿ ಕುಸಿತ ಕಂಡಿದೆ. ಗೆಲುವು ಸಾಧಿಸಿದ ನ್ಯೂಜಿಲ್ಯಾಂಡ್‌ 6ನೇ ಸ್ಥಾನದಿಂದ 4ನೇ ಸ್ಥಾನಕ್ಕೇರಿದೆ.

ಬಾಂಗ್ಲಾದೇಶ ವಿರುದ್ಧದ ಸರಣಿ ಗೆದ್ದಾಗ ಭಾರತದ ಗೆಲುವಿನ ಶೇಕಡಾವಾರು ಅಂಕ 74.24 ಇತ್ತು. ಈಗ 68.060 ಕ್ಕೆ ಕುಸಿದಿದೆ. ಅಂಕದ ಕುಸಿತ ಕಂಡೂ ಕೂಡ ಭಾರತ ಅಗ್ರಸ್ಥಾನದಲ್ಲೇ ಮುಂದುವರಿದಿದೆ. ಡಬ್ಲ್ಯೂಟಿಸಿ ಫೈನಲ್ ತಲುಪುವ ಅವಕಾಶವನ್ನು ಹೆಚ್ಚಿಸಲು, ಭಾರತವು ತನ್ನ ಉಳಿದ 7 ಪಂದ್ಯಗಳಲ್ಲಿ ಕನಿಷ್ಠ ಆರನ್ನು ಗೆಲ್ಲಬೇಕು. ಹೀಗಾಗಿ ನ್ಯೂಜಿಲ್ಯಾಂಡ್‌ ವಿರುದ್ಧದ ಉಳಿದಿರುವ 2 ಪಂದ್ಯ ಮತ್ತು ಆಸ್ಟ್ರೇಲಿಯಾ ವಿರುದ್ದದ ಸರಣಿ ಅತ್ಯಂತ ಪ್ರಮುಖವಾಗಲಿದೆ.

ಭಾರತ ವಿರುದ್ಧದ ಗೆಲುವಿನಿಂದ ಮಾಜಿ ಚಾಂಪಿಯನ್‌ ನ್ಯೂಜಿಲ್ಯಾಂಡ್‌ 6ನೇ ಸ್ಥಾನದಿಂದ 4ನೇ ಸ್ಥಾನದಕ್ಕೇರಿದೆ. ಸದ್ಯ ಕಿವೀಸ್‌ 44.440 ಗೆಲುವಿನ ಶೇಕಡಾವಾರು ಅಂಕ ಹೊಂದಿದೆ. ಆಸ್ಟ್ರೇಲಿಯಾ ದ್ವಿತೀಯ ಮತ್ತು ಶ್ರೀಲಂಕಾ ಮೂರನೇ ಸ್ಥಾನದಲ್ಲಿದೆ.

ಇದನ್ನೂ ಓದಿ IND vs NZ: 36 ವರ್ಷಗಳ ಬಳಿಕ ಭಾರತದಲ್ಲಿ ಟೆಸ್ಟ್‌ ಗೆದ್ದ ನ್ಯೂಜಿಲೆಂಡ್‌; ರೋಹಿತ್‌ ಪಡೆಗೆ 8 ವಿಕೆಟ್‌ ಸೋಲು

ಜೂನ್‌ನಲ್ಲಿ ಫೈನಲ್‌

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯದ ದಿನಾಂಕವನ್ನು ಈಗಾಗಲೇ ಘೋಷಿಸಲಾಗಿದೆ. ಫೈನಲ್ ಪಂದ್ಯವು ಜೂನ್ 11 ರಿಂದ 15 ರ ತನಕ ಲಂಡನ್‌ನ ಲಾರ್ಡ್ಸ್‌ನಲ್ಲಿ ನಡೆಯಲಿದೆ. ಜೂನ್‌ 16 ಮೀಸಲು ದಿನವಾಗಿದೆ. ಕ್ರಿಕೆಟ್‌ ಕಾಶಿ ಎಂದು ಕರೆಯಲಾಗುವ ಲಾರ್ಡ್ಸ್‌ನಲ್ಲಿ ಇದೇ ಮೊದಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಫೈನಲ್‌ ನಡೆಯುತ್ತಿದೆ. ಮೊದಲ ಆವೃತ್ತಿಯ ಫೈನಲ್‌ (2021) ಸೌತ್‌ಹ್ಯಾಂಪ್ಟನ್ನಲ್ಲಿ ಮತ್ತು ಎರಡನೇ ಆವೃತ್ತಿಯ ಫೈನಲ್ (2023)‌ ಓವಲ್‌ನಲ್ಲಿ ನಡೆದಿತ್ತು. ನ್ಯೂಜಿಲ್ಯಾಂಡ್‌ ಮತ್ತು ಆಸ್ಟ್ರೇಲಿಯಾ ಕ್ರಮವಾಗಿ ಮೊದಲೆರಡು ಬಾರಿ ಚಾಂಪಿಯನ್‌ ಆಗಿ ಮೂಡಿಬಂದಿದ್ದವು. ಎರಡು ಬಾರಿಯೂ ಭಾರತ ರನ್ನರ್ ಅಪ್‌ ಆಗಿತ್ತು. ಮೂರನೇ ಆವೃತ್ತಿಯಲ್ಲಿ ಫೈನಲ್‌ಗೆ ಭಾರತ ಅರ್ಹತೆ ಪಡೆದು ಕಪ್‌ ಗೆಲ್ಲಲಿದೆಯಾ ಎಂದು ಕಾದು ನೋಡಬೇಕಿದೆ.

36 ವರ್ಷಗಳ ಬಳಿಕ ಪಂದ್ಯ ಗೆದ್ದ ಕಿವೀಸ್‌

ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಭಾನುವಾರ ಮುಕ್ತಾಯ ಕಂಡ ಭಾರತ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ 8 ವಿಕೆಟ್‌ ಗೆಲುವು ಸಾಧಿಸಿದ ನ್ಯೂಜಿಲೆಂಡ್‌ 36 ವರ್ಷಗಳ ಬಳಿಕ ಭಾರತದಲ್ಲಿ ಟೆಸ್ಟ್‌ ಪಂದ್ಯ ಗೆದ್ದ ಐತಿಹಾಸಿಕ ಸಾಧನೆ ಮಾಡಿತು. ಇದಕ್ಕೂ ಮುನ್ನ ನ್ಯೂಜಿಲ್ಯಾಂಡ್‌ ಭಾರತದಲ್ಲಿ 37 ಟೆಸ್ಟ್‌ ಪಂದ್ಯಗಳನ್ನು ಆಡಿ ಕೇವಲ 2 ಪಂದ್ಯಗಳನ್ನು ಮಾತ್ರ ಜಯಿಸಿತ್ತು. ಕೊನೆಯ ಬಾರಿಗೆ ಕಿವೀಸ್‌ ಭಾರತೀಯ ನೆಲದಲ್ಲಿ ಗೆಲುವು ಕಂಡಿದ್ದು1988ರಲ್ಲಿ. ಮುಂಬೈ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯ ವನ್ನು ನ್ಯೂಜಿಲೆಂಡ್‌ 136 ರನ್ನುಗಳಿಂದ ಗೆದ್ದಿತ್ತು. ಇದೀಗ 36 ವರ್ಷಗಳ ಬಳಿಕ ಜಯಭೇರಿ ಬಾರಿಸಿದೆ.