Friday, 29th November 2024

Tumkur News: ಹಗಲಿರುಳು ಶ್ರಮಿಸುವ ಪೊಲೀಸರ ಸೇವೆ ಶ್ಲಾಘನೀಯ: ನ್ಯಾ.ಜಯಂತ್ ಕುಮಾರ್

ತುಮಕೂರು: ತಮ್ಮ ಪ್ರಾಣದ ಹಂಗನ್ನು ತೊರೆದು ಸದಾ ಕಾರ್ಯನಿರ್ವಹಿಸುವ ಪೊಲೀಸರ ಸೇವೆ ಶ್ಲಾಘನೀಯ ಎಂದು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಜಯಂತಕುಮಾರ್ ಹೇಳಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಆವರಣದಲ್ಲಿ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ ಯಲ್ಲಿ ಹುತಾತ್ಮ ಪೊಲೀಸರ ಸ್ಮಾರಕದ ಪುತ್ಥಳಿಗೆ ಪುಷ್ಪಗುಚ್ಛ ಇರಿಸಿ ಗೌರವ ಸಲ್ಲಿಸಿ ಮಾತನಾಡಿದರು.

ದೇಶದಲ್ಲಿ ನಾವುಗಳು ರಾತ್ರಿ ವೇಳೆ ನೆಮ್ಮದಿಯಾಗಿ ನಿದ್ದೆ ಮಾಡುತ್ತಿದ್ದೇವೆ ಎಂದರೆ ಅದಕ್ಕೆ ಪೊಲೀಸರ ಸೇವೆಯೇ ಕಾರಣ. ಪೊಲೀಸರು ದೇಶಕ್ಕಾಗಿ, ಸಮಾಜಕ್ಕಾಗಿ ದಿನದ 24 ಗಂಟೆಯೂ ಸಾಕಷ್ಟು ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಕೆಲ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗನ್ನು ತೊರೆದು ಕಾರ್ಯನಿರ್ವಹಿಸುವ ಸನ್ನಿವೇಶಗಳು ಎದುರಾಗುತ್ತವೆ ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ , ಪ್ರತಿ ವರ್ಷದಂತೆ ಈ ವರ್ಷವೂ ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ನಮ್ಮ ದೇಶದ ಉತ್ತರದ ಗಡಿ ಭಾಗವು ವರ್ಷವಿಡೀ ಹಿಮದಿಂದ ಆವೃತವಾಗಿರುವ ದುರ್ಗಮ ಪ್ರದೇಶವಾಗಿದೆ. ಇಂತಹ ಸಂದರ್ಭದಲ್ಲಿ 1959 ರ ಅ. 21 ರಂದು ಬೆಳಿಗ್ಗೆ 8 ಗಂಟೆ ಸಮಯದಲ್ಲಿ ಕರಣ್‌ಸಿಂಗ್ ಎಂಬ ಡಿವೈಎಸ್ಪಿ ರವರ ನಾಯಕತ್ವದಲ್ಲಿ ಸಿಆರ್‌ಪಿ ತಂಡದವರು ನಮ್ಮ ದೇಶದ ಗಡಿ ಭಾಗದ ಲಡಾಕ್ ಎಂಬಲ್ಲಿ ಕಾವಲು ಕಾಯುತ್ತಿರುವಾಗ ಚೀನಾ ದೇಶದ ಅಸಂಖ್ಯಾತ ಸೈನಿಕರು ನಮ್ಮ ದೇಶದ ಗಡಿ ಭಾಗದಲ್ಲಿ ಒಳನುಗ್ಗಿದರು. ಅಲ್ಲಿದ್ದ ನಮ್ಮ ಸೈನಿಕರು ದೇಶದ ರಕ್ಷಣೆಗಾಗಿ ಕೊನೆಯ ಹನಿ ರಕ್ತ ಇರುವ ವರೆಗೂ ಅಪ್ರತಿಮವಾಗಿ ಹೋರಾಡಿ ವೀರ ಮರಣ ಹೊಂದಿದರು ಎಂದು ಸ್ಮರಿಸಿದರು.

ಈ ಬಾರಿ ತುಮಕೂರು ಜಿಲ್ಲೆಯ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯ ಮಹೇಶ್ ಜಿ.ವಿ. ಸೇರಿದಂತೆ ಕರ್ನಾಟಕದಲ್ಲಿ 5 ಮಂದಿ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಹುತಾತ್ಮರಾಗಿದ್ದಾರೆ ಎಂದು ಸ್ಮರಿಸಿದರು.

ಇದೇ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಹುತಾತ್ಮ ಪೊಲೀಸರಿಗೆ ಗೌರವ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಅಡಿಷಲ್ ಎಸ್ಪಿಗಳಾದ ಮರಿಯಪ್ಪ, ಅಬ್ದುಲ್ ಖಾದರ್. ಕೆಎಸ್‌ಆರ್‌ಪಿ ಕಮಾಂಡೆಂಟ್ ಸತ್ಯ ನಾರಾಯಣ ಸೇರಿದಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಪೊಲೀಸ್ ಅಧಿಕಾರಿಗಳು, ನಿವೃತ್ತ ಪೊಲೀಸರು ಭಾಗವಹಿಸಿದ್ದರು.

ಇದನ್ನೂ ಓದಿ: Tumkur News: ಇಲಾಖೆಗಳಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ: ಉಪ ಲೋಕಾಯುಕ್ತ ಕಳವಳ