ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ (State Congress Government) ದೀಪಾವಳಿ ನಿಮಿತ್ತ ರಾಜ್ಯಾದ್ಯಂತ ಮಹತ್ವದ ಆದೇಶ ಹೊರಡಿಸಿದ್ದು, ಈ ಕಾಲಾವಧಿಯಲ್ಲಿ ರಾತ್ರಿ 8 ರಿಂದ 10 ರವರೆಗೆ ಈ 2 ಗಂಟೆಗಳ ಕಾಲ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಿದೆ. ಪಟಾಕಿಗಳಿಂದ ಪರಿಸರ ಮಾಲಿನ್ಯ ಆಗುವುದರಿಂದ ಈ ಆದೇಶ ನೀಡಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಕೇವಲ ಹಿಂದೂಗಳ ಹಬ್ಬ ದೀಪಾವಳಿಯಲ್ಲಿ ಸರ್ಕಾರ ಪರಿಸರ ಮಾಲಿನ್ಯದ ಬೊಬ್ಬೆ ಹಾಕುತ್ತಿದ್ದು ಬೆಂಗಳೂರು ಸೇರಿದಂತೆ ರಾಜ್ಯದ ಮಹಾನಗರಗಳಲ್ಲಿ ವರ್ಷಪೂರ್ತಿ ವಾಹನಗಳಿಂದ ಉಂಟಾಗುತ್ತಿರುವ ಮಾಲಿನ್ಯ ತಡೆಯಲು ಯಾವ ಕ್ರಮ ಕೈಗೊಂಡಿದೆ? ಎಂದು ಹಿಂದೂ ಜನಜಾಗೃತಿ ಸಮಿತಿಯ (Hindu Janajagruti Samiti) ವಕ್ತಾರ ಶರತ್ ಕುಮಾರ್ ಪ್ರಶ್ನಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಅ.23ರಂದು ವಿದ್ಯುತ್ ವ್ಯತ್ಯಯ
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯ ಸರ್ಕಾರವು ಕೇವಲ ಹಿಂದೂ ಹಬ್ಬಗಳನ್ನು ಗುರಿಯಾಗಿಸಿ ಬೇರೆ ಬೇರೆ ಆದೇಶಗಳನ್ನು ಹೊರಡಿಸುವುದು ಹೊಸತೇನಲ್ಲ, ಗಣೇಶ ಚತುರ್ಥಿ ವೇಳೆಯೂ ಶಬ್ದ ಮಾಲಿನ್ಯದ ನೆಪವೊಡ್ಡಿ ಡಿಜೆಗೆ ನಿರ್ಬಂಧ ಹೇರಿತ್ತು, ಅಷ್ಟೇ ಅಲ್ಲದೆ ಬಿಬಿಎಂಪಿ ಇದ್ದಕ್ಕಿದ್ದಂತೆ ಗಣೇಶ ಮಂಟಪಗಳಲ್ಲಿ ನೀಡಲಾಗುವ ಪ್ರಸಾದಕ್ಕೆ FSSAI ಪತ್ರ ಕಡ್ಡಾಯ ಎಂದು ಆದೇಶಿಸಿತ್ತು. ಈಗ ಪುನಃ ದೀಪಾವಳಿಯ ಆಚರಣೆಗೆ ಕಡಿವಾಣ ಹಾಕಿದ್ದು ಕಾಂಗ್ರೆಸ್ ಹಿಂದೂಗಳ ಧಾರ್ಮಿಕ ಸ್ವಾತಂತ್ರ್ಯ ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿರುವ ಅವರು, ಹಿಂದೂ ಸಮಾಜ ಇದನ್ನು ಎಂದಿಗೂ ಸಹಿಸುವುದಿಲ್ಲ. ಈ ಆದೇಶ ಕೂಡಲೇ ಹಿಂಪಡೆಯದಿದ್ದರೆ ಸಮಸ್ತ ಹಿಂದೂ ಸಂಘಟನೆಗಳು ಒಟ್ಟಾಗಿ ಪ್ರತಿಭಟನೆ ನಡೆಸಬೇಕಾಗುವುದು ಎಂದು ಅವರು ತಿಳಿಸಿದ್ದಾರೆ.