ಆದಿಜಾಂಬವ ಅಭಿವೃದ್ಧಿ ನಿಗಮದಿಂದ ೨೧ ಫಲಾನುಭವಿಗಳಿಗೆ ಪಂಪು ಮೋಟರ್ ವಿತರಣೆ
ಶಿರಾ: ಗಂಗಾ ಕಲ್ಯಾಣ ಯೋಜನೆಯು ರೈತರಿಗೆ ವರದಾನವಾಗಿದ್ದು, ಕೊಳವೆ ಬಾವಿಗಳನ್ನು ಕೊರೆಸಲು ಸಾಧ್ಯವಾಗದ ರೈತರಿಗೆ ಸರ್ಕಾರದಿಂದಲೇ ಕೊಳವೆ ಬಾವಿ ಕೊರೆಸಿ ಪಂಪು ಮೋಟಾರ್ಗಳನ್ನು ಉಚಿತವಾಗಿ ನೀಡುತ್ತಿದೆ. ಈ ಯೋಜನೆಯಡಿ ಸವಲತ್ತು ಪಡೆದ ರೈತರು ಇದರ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.
ಅವರು ಸೋಮವಾರ ನಗರದ ಶ್ರೀ ವಿವೇಕಾನಂದ ಕ್ರೀಡಾಂಗಣದ ಆವರಣದಲ್ಲಿ ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದಿಂದ 2020-21 ನೇ ಸಾಲಿನ ಗಂಗಾಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳನ್ನು ಕೊರೆಯ ಲಾಗಿರುವ 21 ಫಲಾನುಭವಿಗಳಿಗೆ ಪಂಪು ಮೋಟಾರ್ ಹಾಗೂ ಇತರೆ ಪೂರಕ ಸಾಮಾಗ್ರಿಗಳನ್ನು ವಿತರಣೆ ಮಾಡಿ ಮಾತನಾಡಿದರು.
ರೈತರು ಆರ್ಥಿಕವಾಗಿ ಸಧೃಡರಾಗಲಿ ಎಂಬ ಉದ್ದೇಶದಿಂದ ಸರ್ಕಾರದ ವತಿಯಿಂದ ರೈತರಿಗೆ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಸಿ ಪಂಪು ಮೋಟಾರ್ಗಳನ್ನು ನೀಡುತ್ತಿದ್ದು, ಕರ್ನಾಟಕ ಸರ್ಕಾರದಿಂದ ಪಾರದರ್ಶಕವಾಗಿ ಸವಲತ್ತುಗಳನ್ನು ಒದಗಿಸಲಾಗುತ್ತಿದೆ. ಗಂಗಾ ಕಲ್ಯಾಣ ಯೋಜನೆಯಡಿ ಪ.ಜಾತಿಯ ಫಲಾನು ಭವಿಗಳಿಗೆ ಉತ್ತಮ ಗುಣಮಟ್ಟದ ಪಂಪು ಮೋಟಾರ್ಗಳನ್ನು ನೀಡಲಾಗುತ್ತಿದೆ. ಇದರಿಂದ ರೈತರು ನೀರಾವರಿ ಪ್ರದೇಶಗಳಲ್ಲಿ ಬೆಳೆಯಬಹುದಾದ ವಿವಿಧ ಬೆಳೆಗಳನ್ನು ಬೆಳೆದು ಉತ್ತಮ ಲಾಭ ಗಳಿಸಬಹುದು ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಡಿ.ಜಯರಾಮಣ್ಣ, ತಾಲ್ಲೂಕು ಅಭಿವೃದ್ಧಿ ಅಧಿಕಾರಿ ಎಸ್.ಎಂ.ರಾಜಶೇಖರ್, ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮದ್, ಉಪಾಧ್ಯಕ್ಷ ಲಕ್ಷ್ಮೀಕಾಂತ್, ನಗರಸಭೆ ಸದಸ್ಯರಾದ ಬಿ.ಎಂ.ರಾಧಾಕೃಷ್ಣ, ಆಶ್ರಯ ಸಮಿತಿ ಸದಸ್ಯ ವಾಜರಹಳ್ಳಿ ರಮೇಶ್, ಬಗರ್ಹುಕುಂ ಸಮಿತಿ ಸದಸ್ಯ ಮದ್ದಕ್ಕನಹಳ್ಳಿ ತಿಪ್ಪೇಸ್ವಾಮಿ, ಮಾಜಿ ತಾ.ಪಂ. ಸದಸ್ಯ ಪಿ.ಬಿ.ನರಸಿಂಹಯ್ಯ, ಕೆಪಿಸಿಸಿ ಸದಸ್ಯ ಕೋಟೆ ಲೋಕೇಶ್ ಸೇರಿದಂತೆ ಹಲವರು ಹಾಜರಿದ್ದರು.
ಇದನ್ನೂ ಓದಿ: Tumkur News: ಅಧಿಕಾರಿಗಳ ಅಲಭ್ಯತೆ-ಪರಿಶಿಷ್ಟ ಕಲ್ಯಾಣ ಸಮಿತಿ ಸಭೆ ಮುಂದೂಡಿಕೆ