Saturday, 23rd November 2024

KNRajanna: ಮಹರ್ಷಿ ವಾಲ್ಮೀಕಿ ಸ್ವಾಭಿಮಾನದ ಬದುಕಿಗೆ ಮಾರ್ಗತೋರಿದ ಗುರು : ಸಹಕಾರಿ ಸಚಿವ ಕೆ.ಎನ್.ರಾಜಣ್ಣ

ಗೌರಿಬಿದನೂರು: ಸಮಾನತೆ, ಸ್ವಾಭಿಮಾನದ ಬದುಕು ತೋರಿ ವಾಲ್ಮೀಕಿ ಸಮುದಾಯವು ಆರ್ಥಿಕವಾಗಿ ಸಧೃಡ ರಾಗಬೇಕೆಂದು ಪ್ರಪಂಚಕ್ಕೆ ಸಾರಿದವರು ಮಹರ್ಷಿ ವಾಲ್ಮೀಕಿ ಆಗಿದ್ದಾರೆ ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.

ತಾಲೂಕಿನ ಹೊಸೂರು ಗ್ರಾಮದಲ್ಲಿರುವ ಮಹಾಬಲೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ನಾಯಕರ ಸಂಘದ ವತಿಯಿಂದ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಹರ್ಷಿ ವಾಲ್ಮೀಕಿ ಆದಿಕವಿಯಾಗಿದ್ದು, 24000 ಸಾವಿರ ಶ್ಲೋಕಗಳನ್ನಳಗೊಂಡ ‘ರಾಮಾಯಣ’ ಎಂಬ ಮಹಾ ಕಾವ್ಯವನ್ನು ರಚಿಸಿ ಭೂಮಂಡಲಕ್ಕೆ ರಾಮರಾಜ್ಯದ ಕಲ್ಪನೆ ನೀಡಿದ್ದಾರೆ.

ಜಗತ್ತಿಗೆ ರಾಮಚಂದ್ರನನ್ನು ಪರಿಚಯಿಸಿ, ಆತನ ಮಕ್ಕಳಾದ ಲವ-ಕುಶರಿಗೆ ವಿದ್ಯಾದಾನ ಮಾಡಿ ಉತ್ತಮ ಜೀವನ ನೆಡೆಸುವ ವಾತಾವರಣ ಸೃಷ್ಟಿಸಿದವರು. ಇಂತಹ ಮೂಲ ಪುರುಷರ ಕುಲದಲ್ಲಿ ಹುಟ್ಟಿರುವುದು ನಮ್ಮ ಅದೃಷ್ಟ ವಾಗಿದೆ. ಸರ್ಕಾರವು ಕೂಡ ನಮ್ಮ ಸಮುದಾಯದ ಅಭಿವೃದ್ಧಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಇಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ನಾನು ಸೇರಿದಂತೆ ವೇದಿಕೆಯ ಮೇಲಿನ ಎಲ್ಲ ಮುಖಂಡರು ದೇಣಿಗೆ ನೀಡುವು ದರ ಜೊತೆಗೆ ಸರ್ಕಾರದಿಂದಲೂ ೫೦ ಲಕ್ಷ ರೂ. ಗಳ ಅನುದಾನ ಮಂಜೂರು ಮಾಡಿಸಿಕೊಡುತ್ತೇನೆ ಎಂದರು.

ಶಾಸಕ ಪುಟ್ಟಸ್ವಾಮಿಗೌಡ ಮಾತನಾಡಿ ಭರತಖಂಡದ ಒಗ್ಗಟಿಗೆ ವಾಲ್ಮೀಕಿ ಮಹರ್ಷಿ ಕಾರಣ. ರಾಮಾಯಣದ ಮೂಲಕ ರಾಮನ ಮಹತ್ವವನ್ನು ಪ್ರಪಂಚಕ್ಕೆ ತೋರಿಸಿದವರು. ದೇಶಕ್ಕೆ ಸಂಸ್ಕೃತಿಗೆ ಬುನಾದಿ ಹಾಕುವುದರ ಮೂಲಕ ಎಲ್ಲ ಭಾಷೆಗಳ ಸಾಹಿತ್ಯ ಅಭಿವೃದ್ಧಿಯಾಗುವಂತೆ ಮಾಡಿದವರು. ಈ ಸಮುದಾಯದ ಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಹಾಗೂ ವಾಲ್ಮೀಕಿ ಭವನ ನಿರ್ಮಾಣ ಸೇರಿದಂತೆ ಯಾವುದೇ ರೀತಿಯ ಸೌಲಭ್ಯಗಳನ್ನು ಕಲ್ಪಿಸಲು ನನ್ನ ಸಹಾಯ ಸಹಕಾರವಿರುತ್ತದೆ ಎಂದರು.

ಮಾಜಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಮಾತನಾಡಿ, ಮಹರ್ಷಿ ವಾಲ್ಮೀಕಿ ರಚಿತ ರಾಮಾಯಣದಿಂದ ನಿತ್ಯ ಜೀವನದಲ್ಲಿ ನಾವು ಯಾವ ರೀತಿ ಬಾಳ್ವೆ ನಡೆಸಬೇಕು, ಸಮಾನತೆಯುಳ್ಳ ಸಮ ಸಮಾಜದ ಕಲ್ಪನೆಯನ್ನು ಹೇಗೆ ಕಟ್ಟಬೇಕು ಎಂದು ತೋರಿಸಿದ್ದಾರೆ. ಶೋಷಿತ ಸಮಾಜದಲ್ಲಿ ಹುಟ್ಟಿದ ಶ್ರೇಷ್ಠ ವ್ಯಕ್ತಿಯಾಗಿ ಹಿಂದುಳಿದ ವರ್ಗಗಳ ಏಳಿಗೆಗೆ ಶ್ರಮಿಸಿದವರು. ಸರ್ಕಾರವು ಕೂಡ ಸಮಾಜದ ಏಳಿಗೆ ಮತ್ತು ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ವಾಲ್ಮೀಕಿ ಜಯಂತಿ ಆಚರಿಸಲು ತೀರ್ಮಾನ ಮಾಡಿದೆ ಎಂದು ಹೇಳಿದರು.

ಚಿಕ್ಕಬಳ್ಳಾಪುರ ಶಾಖಾ ಮಠದ ವಾಲ್ಮೀಕಿ ಬ್ರಹ್ಮಾನಂದಸ್ವಾಮೀಜಿ, ಜಿಲ್ಲಾಧಿಕಾರಿ ರವೀಂದ್ರ, ಗ್ರಾ.ಪಂ.ಅಧ್ಯಕ್ಷೆ ಗೀತಾ ನಾಗರಾಜ, ತಹಸೀಲ್ದಾರ್ ಮಹೇಶ್, ಎಸ್.ಪತ್ರಿ, ತಾ.ಪಂ ಇಒ ಜಿ.ಕೆ.ಹೊನ್ನಯ್ಯ, ಜಿಲ್ಲಾ ಬಿಜೆಪಿ ಎಸ್.ಟಿ. ಮೋರ್ಚಾ ಅಧ್ಯಕ್ಷ ಬಿ.ಎನ್.ರಂಗನಾಥ, ತಾಲೂಕು ನಾಯಕ ಸಂಘದ ಅಧ್ಯಕ್ಷ ಬಾಬಣ್ಣ ಕಾರ್ಯದರ್ಶಿ ಆರ್. ಅಶೋಕ ಕುಮಾರ್, ಮಾನಸ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಚ್.ಎಸ್. ಶಶಿಧರ್, ಎಚ್.ವಿ.ಮಂಜುನಾಥ, ರಾಕೇಶ್, ರಾಘವೇಂದ್ರ ಹನುಮಾನ್, ವೇಣುಗೋಪಾಲರೆಡ್ಡಿ, ಆರ್. ಲೋಕೇಶ್, ಎಂ.ನರಸಿ0ಹಮೂರ್ತಿ, ನಿರಂಜನ್ ಮತ್ತು ಗ್ರಾಮದ ಮಹರ್ಷಿ ವಾಲ್ಮೀಕಿ ಸಂಘದ ಪಧಾದಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಇದನ್ನೂ ಓದಿ: Hasanamba Jatre: ಅ.24ರಿಂದ ಹಾಸನಾಂಬ ಜಾತ್ರೆ; ದೇಗುಲಕ್ಕೆ ದೇವಿಯ ಒಡವೆಗಳು ರವಾನೆ