ಚಿಕ್ಕಬಳ್ಳಾಪುರ: ಶಾಲಾ ಮಕ್ಕಳೇ ಮೊದಲಾಗಿ ಎಲ್ಲಾ ವಯೋಮಾನದವರು ಪ್ರತಿನಿತ್ಯ ತಮಗಿಷ್ಟದ ಕ್ರೀಡೆಗಳಲ್ಲಿ ಭಾಗಿಯಾಗುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ನೆರವು ನೀಡುತ್ತವೆ. ಯಾವುದೇ ಕ್ರೀಡಾಕೂಟವಿರಲಿ ಲವಲವಿಕೆಯಿಂದ ಭಾಗಿಯಾಗುವ ಗುಣ ಬೆಳೆಸಿಕೊಳ್ಳಬೇಕು ಎಂದ ನಗರಸಭಾಧ್ಯಕ್ಷ ಎ.ಗಜೇಂದ್ರ ಹೇಳಿದರು.
ನಗರದ ಸರ್.ಎಂ.ವಿ.ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಉಪ ನಿರ್ದೇಶಕರ ಕಾರ್ಯಾಲಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರ ಮೇಲಾಟಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಾಲಾ ಕಾಲೇಜು ದಿನಗಳಲ್ಲಿ ಕ್ರೀಡೆಗಳಲ್ಲಿ ಭಾಗಿಯಾಗಿ ಮಾಡುವ ಸಾಧನೆ ಜೀವನ ಪರ್ಯಂತ ನಮ್ಮ ಜತೆಗೆ ಉತ್ತಮ ನೆನಪಾಗಿ ಉಳಿದುಕೊಳ್ಳಲಿದೆ. ಕ್ರೀಡಾಕೂಟ ಎಂದ ನಾನಾ ಆಟೋಟಗಳ ಸಂಗಮವಾಗಿರುತ್ತದೆ. ಯಾವುದೇ ಆಟವಿರಲಿ ಸೋಲು ಗೆಲುವು ಇದ್ದೇ ಇರುತ್ತದೆ. ಇದನ್ನು ಅರಿತು ಕ್ರೀಡಾಸ್ಪೂರ್ತಿಯಿಂದ ಆಟೋಟಗಳಲ್ಲಿ ಭಾಗಿ ಯಾಗಬೇಕು. ಗೆಲುವೇ ಪ್ರತಿಯೊಬ್ಬ ಕ್ರೀಡಾಪಟುವಿನ ಗುರಿಯಾಗಿದ್ದರೂ ಸೋಲನ್ನು ಕೂಡ ಅಷ್ಟೇ ಸಮಾಧಾನ ದಿಂದ ಸಂತೋಷದಿಂದ ಸ್ವೀಕರಿಸುವ ಗುಣ ಬೆಳೆಸಿಕೊಳ್ಳಬೇಕು. ಗೆದ್ದವರು ಕೂಡ ಈ ಗೆಲುವು ಶಾಶ್ವತವಲ್ಲ, ತಾತ್ಕಾಲಿಕ ಎಂಬ ಸತ್ಯವನ್ನು ಅರಿತು ಆಟವಾಡಿದರೆ ಫಲಿತಾಂಶ ಏನೇ ಬಂದರೂ ಬೇಸರಕ್ಕಿಂತ ಸಂತೋಷವೇ ಆಗುತ್ತದೆ ಎಂದರು.
ನಗರಸಭೆಯ ಉಪಾಧ್ಯಕ್ಷ ನಾಗರಾಜ್ ಮಾತನಾಡಿ ಕ್ರೀಡೆಗಳು ವಿದ್ಯಾರ್ಥಿ ಜೀವನದ ಅವಿಭಾಜ್ಯ ಅಂಗವಾಗಿವೆ. ಶಾಲಾ ಕಾಲೇಜು ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಒಂದಲ್ಲಾ ಒಂದು ಚಟವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳಬೇಕು ಎಂಬ ಆರೋಗ್ಯಕರ ಮನಸಿರುತ್ತದೆ.ಅದನ್ನು ಗುರುತಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಸಕಾಲದಲ್ಲಿ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡಿದರೆ ವಿದ್ಯಾರ್ಥಿಗಳ ಬದುಕೇ ಬದಲಾಗಲಿದೆ. ಜಿಲ್ಲೆಯ ಮಕ್ಕಳು ಕ್ರೀಡೆಗಳಲ್ಲಿ ಹೆಚ್ಚಿನ ಸಾಧನೆ ಮಾಡಿ ಹೆತ್ತವರಿಗೆ, ಜಿಲ್ಲೆಗೆ ಹೆಸರು ತರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆಗೆ ಸಂಬಂಧಪಟ್ಟ ಎಲ್ಲಾ ಮುಖ್ಯಸ್ಥರು, ಶಿಕ್ಷಕರು ಹಾಗೂ ಕ್ರೀಡಾಪಟುಗಳು ಹಾಜರಿದ್ದರು.