ಗೌರಿಬಿದನೂರು ನಗರಸಭೆ ಸಾಮಾನ್ಯ ಸಭೆಯಲ್ಲಿ ಸಮಸ್ಯೆಗಳ ಅನಾವರಣ
ಗೌರಿಬಿದನೂರು: ನಗರದ ನಗರಸಭೆ ಆವರಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯು ಸಮಸ್ಯೆಗಳ ಅನಾವರಣಕ್ಕೆ ಕರೆದಿರುವ ಮುಕ್ತ ವೇದಿಕೆಯಾಗಿ ಬದಲಾಗಿತ್ತು.
ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಗರಸಭಾ ಸದಸ್ಯರು ನಗರಾಡಳಿತದ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮದಾನ ವ್ಯಕ್ತಪಡಿಸಿ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು.
ನಗರಸಭೆ ಆಡಳಿತ ಮಂಡಳಿ ಈವರೆಗೆ ತಾವು ನಡೆಸಿರುವ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ಸದಸ್ಯರಿಗೆ ನೀಡುತ್ತಿಲ್ಲ, ಸಭೆಯ ಅಜೆಂಡಾ ಏನಿದೆ, ಯಾವ ವಿಷಯಕ್ಕೆ ಒತ್ತು ನೀಡಬೇಕು, ಯಾರು ಏನು ಹೇಳಿದ್ದಾರೆ, ಅದಕ್ಕೆ ಪರಿಹಾರ ಏನು ಕಂಡುಹಿಡಿದಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ, ನಮ್ಮ ಗಮನಕ್ಕೆ ತರದೇ ಎಲ್ಲಕ್ಕೂ ತಾವೇ ಅನುಮೋದನೆ ನೀಡುತ್ತಿದ್ದಾರೆ. ಹಣಕಾಸು ವ್ಯವಹಾರವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸು ತ್ತಿಲ್ಲ. ಪಾರದರ್ಶಕತೆ ಎಂಬುದು ಮರೀಚಿಕೆಯಾಗಿದೆ. ಇದರಿಂದ ಸಾರ್ವಜನಿಕರ ಹಣ ಪೋಲಾಗುತ್ತಿದೆ.
ಎಸ್.ಸಿ ಮತ್ತು ಎಸ್.ಟಿ ಮಕ್ಕಳಿಗೆ ಲ್ಯಾಪ್ಟಾಪ್ ವಿತರಣೆ ಸರಿಯಾಗಿ ಆಗಿಲ್ಲ, ಇದರಿಂದ ಮಕ್ಕಳಿಗೆ ಅನ್ಯಾಯವಾಗು ತ್ತಿದೆ, ಬಡವರ ಹೊಟ್ಟೆ ತುಂಬಿಸುವ ಇಂದಿರಾ ಕ್ಯಾಂಟೀನ್ ದುರಸ್ತಿಗೆ ಹಣ ಮಾತ್ರ ಖರ್ಚುಗಿದೆ ಎಂದು ಅಧಿಕಾರಿ ಗಳು ತಿಳಿಸುತ್ತಿದ್ದಾರೆ, ಆದರೆ ಇಲ್ಲಿ ಯಾವುದೂ ಸರಿಯಿಲ್ಲ,ಕಸವಿಲೇವಾರಿ ಘಟಕದಿಂದ ಬರುತ್ತಿರುವ ಯಾವುದೇ ಆದಾಯವನ್ನು ಈವರೆಗೂ ಸದಸ್ಯರಿಗೆ ತೋರಿಸುತ್ತಿಲ್ಲ. ನಗರಸಭೆ ವ್ಯಾಪ್ತಿಯಲ್ಲಿರುವ ತರಕಾರಿ ಮಾರುಕಟ್ಟೆ ಕಟ್ಟಡದಲ್ಲಿ ಹಲವು ಮಳಿಗೆಗಳು ಖಾಲಿ ಇವೆ, ಆದರೆ ಈಗ ಮತ್ತೊಮ್ಮೆ ಹರಾಜು ಮಾಡಲು ಸಿದ್ದರಾಗಿದ್ದಾರೆ. ಇಲ್ಲಿ ಪಾರ್ಕಿಂಗ್ ವ್ಯವಸ್ಥೆಯಾಗಲಿ, ಶೌಚಾಲಯದ ವ್ಯವಸ್ಥೆಯಾಗಲಿ ಇಲ್ಲ. ಮಳೆ ಬಂದಾಗ ಕಟ್ಟಡ ಸೋರಿಕೆಯಾಗಿ ಮಳೆ ನೀರು ಮಾರುಕಟ್ಟೆಯಲ್ಲೆಲ್ಲಾ ಹರಿದು ವ್ಯಾಪಾರಕ್ಕೆ ಬಹಳ ತೊಂದರೆಯಾಗುತ್ತಿದೆ ಎಂದು ಸಮಸ್ಯೆಗಳ ದೊಡ್ಡ ಪಟ್ಟಿಯನ್ನೇ ಶಾಸಕರ ಮುಂದೆ ನಗರಸಭಾ ಸದಸ್ಯರು ತೆರೆದಿಟ್ಟರು.
ಸಮಸ್ಯೆ ಆಲಿಸಿ ಮಾತನಾಡಿದ ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಮಾತನಾಡಿ, ನಗರದ ಅಭಿವೃದ್ಧಿಗೆ ಪೂರಕವಾದ ಕೆಲಸಗಳು ನಡೆಯುತ್ತಿವೆ. ವೇಗವಾಗಿ ಬೆಳೆಯುತ್ತಿರುವ ನಗರದ ಬೆಳವಣಿಗೆಗೆ ತಕ್ಕಂತೆ ಹೊಸ ಯೋಜನೆಗಳನ್ನು ರೂಪಿಸಲಾಗುತ್ತಿದೆ, ನಗರಸಭೆಗೆ ಸಂಬ0ಧ ಪಟ್ಟ ಯಾವುದೇ ದೂರುಗಳಿದ್ದಲ್ಲಿ ಲಿಖಿತ ರೂಪದಲ್ಲಿ ನೀಡಿದರೆ, ತಕ್ಷಣ ಪರಿಹರಿಸುವುದಾಗಿ ತಿಳಿಸಿದರು.
ನಗರಸಭೆ ಪೌರಾಯುಕ್ತೆ ಡಿ.ಎಂ.ಗೀತಾ ಮಾತನಾಡಿ, ನಗರಸಭೆಯಲ್ಲಿ ನಡೆಯುತ್ತಿರುವ ಎಲ್ಲಾ ಕೆಲಸಗಳು ಪಾರ ದರ್ಶಕತೆಯಿಂದ ಹಾಗೂ ಸರ್ಕಾರದ ನಿಯಮಗಳ ಪ್ರಕಾರ ನಡೆಯುತ್ತಿವೆ. ಸದಸ್ಯರ ಆರೋಪದಲ್ಲಿ ಹುರುಳಿಲ್ಲ ಎಂದು ಎಲ್ಲಾ ಆರೋಪಗಳನ್ನು ಅಲ್ಲಗಳೆದರು.
ಸಭೆಯಲ್ಲಿ ನಗರಸಭೆ ಅಧ್ಯಕ್ಷರಾದ ಲಕ್ಷ್ಮೀನಾರಾಯಣಪ್ಪ, ಉಪಾಧ್ಯಕ್ಷ ಫರೀದ್, ಸದಸ್ಯರಾದ, ಕಲೀಮ್ ಉಲ್ಲಾ, ರಮೇಶ್, ಶ್ರೀರಾಮಪ್ಪ, ಮಾರ್ಕೆಟ್ ಮೋಹನ್ ಮಂಜುಳಾರಾಮಾಂಜಿ , ಪದ್ಮಾವತಮ್ಮ, ಮೊಬೈನ್ ತಾಜ್, ಪುಣ್ಯವತಿ ಜಯಣ್ಣ, ಗೋಪಿನಾಥ್, ರಮೇಶ್, ಸಾವಿತ್ರಮ್ಮ, ಗಾಯತ್ರಿ ಬಸವರಾಜು, ಭಾಗ್ಯಮ್ಮ, ರಾಜೇಶ್ವರಿ ಮೈಲಾರಿ, ಗೋಪಾಲಪ್ಪ, ಸಪ್ತಗಿರಿ,ಅಮರ್, ಗಿರೀಶ್, ರೂಪ ಅನಂತರಾಜು, ವೆಂಕಟ ರೆಡ್ಡಿ, ಮತ್ತು ಅಧಿಕಾರಿಗಳು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಇದನ್ನೂ ಓದಿ: Chikkaballapur News: ಮಣ್ಣಿನ ದೀಪ, ಎಣ್ಣೆ ವಿತರಿಸಿ ಜಾಗೃತಿ ಮೂಡಿಸಿದ ಸಮಾನ ಮನಸ್ಕರ ಸಂಘ