Saturday, 23rd November 2024

Chikkaballapur News: ಸಮಸ್ಯೆಗಳ ಸುಳಿಯಲ್ಲಿ ಸಂಪಂಗಿನಗರ ನಿವಾಸಿಗಳು: ಅಭದ್ರವಾದ ಬದುಕಿಗೆ ಪರಿಹಾರ ಮರೀಚಿಕೆ

ಬಾಗೇಪಲ್ಲಿ: ಪಟ್ಟಣಕ್ಕೆ ಹೊಂದಿಕೊಂಡಂತೆ ಸುಮಾರು ಎರಡು ದಶಕಗಳ ಹಿಂದೆ ಶಾಸಕರಾಗಿದ್ದ ಎನ್ ಸಂಪಂಗಿ ಯವರ ಅಧಿಕಾರವಧಿಯಲ್ಲಿ ನಿರ್ಮಾಣವಾಗಿರುವ ಎನ್.ಸಂಪಂಗಿನಗರ ಬಡಾವಣೆಯಲ್ಲಿ ಇಂದಿಗೂ ಕೂಡ ಮೂಲಭೂತ ಸೌಲಭ್ಯಗಳಿಲ್ಲದೆ ನಿವಾಸಿಗಳು ಪರದಾಡುತ್ತಿದ್ದು ನರಕ ಸದೃಶ ಬದುಕು ನಡೆಸುತ್ತಾ ಸೌಲಭ್ಯ ಕಲ್ಪಿಸು ವಂತೆ ಪುರಸಭೆಗೆ ಅಂಗಲಾಚಿದ್ದಾರೆ.

ಪಟ್ಟಣಕ್ಕೆ ಹೊಂದಿಕೊಂಡಿದ್ದರೂ ಕುಡಿಯುವ ನೀರಿಗಾಗಿ ಕಿ.ಮೀ ಗಟ್ಟಲೇ ಹೋಗಬೇಕಿದೆ. ನಿತ್ಯ ಬಳಕೆಗೆ ನೀರೊ ದಗಿಸಲು ಕೊಳವೆ ಬಾವಿ ಕೊರೆಸಿದ್ದರೂ ಈ ನೀರು ಗಬ್ಬು ವಾಸನೆಯಿಂದ ಕೂಡಿದೆ. ಇರುವ ಏಕ ಮಾತ್ರ ಬೀದಿಗೆ ಗುಣಮಟ್ಟದ ರಸ್ತೆಯ ನಿರ್ಮಾಣ ಮಾಡಲಾಗಿಲ್ಲ. ಚರಂಡಿ ವ್ಯವಸ್ಥೆ ಅಸಲೇ ಇಲ್ಲ. ಹಾಗಾಗಿ ಕೊಳಚೆ ನೀರು ಮನೆಗಳ ಮುಂದೆಯೇ ನಿಂತು ಮಡುಗಟ್ಟಿದ್ದು ಸಾಂಕ್ರಾಮಿಕ ರೋಗ ಭೀತಿಯಲ್ಲಿದ್ದಾರೆ.

ಇಲ್ಲಿನ ನಿವಾಸಿಗಳ ಮನೆಗಳ ಸುತ್ತಲೂ ದಟ್ಟ ಪೊದೆಗಳು ಬೆಳೆದಿರುವ ಕಾರಣ ಇಲ್ಲಿನ ನಾಗರಿಕರು ಸೊಳ್ಳೆಗಳ ಕಾಟ, ಹಾವು ಚೇಳುಗಳು ಆತಂಕದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಹಲವು ಬಾರಿ ಸಂಬಂಧ ಪಟ್ಟವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನೋವು ತೋಡಿಕೊಳ್ಳುತ್ತಾರೆ.

ಜನಪ್ರತಿನಿಧಿಗಳಾಗಲಿ, ಅಧಿಕಾರಿ ವರ್ಗದವರಾಗಲಿ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ಜರುಗಿಸಿಲ್ಲ. ಕೊಳವೆಬಾವಿ ಕೆಟ್ಟರೂ, ಬೀದಿ ದೀಪ ಸರಿ ಪಡಿಸಬೇಕಾದರೂ ಅಲ್ಲಿನ ನಿವಾಸಿಗಳು ಸ್ವಂತ ಖರ್ಚಿನಲ್ಲೆ ದುರಸ್ತಿ ಮಾಡಿಸಬೇಕಾಗಿದೆ ಎಂದು ದೂರಿದ್ದಾರೆ.

ಈ ಬಡಾವಣೆಯ ನಿವಾಸಿಗಳು ಘಂಟಮವಾರಪಲ್ಲಿ ಗ್ರಾಮ ಪಂಚಾಯತಿ ಮತ್ತು ಪುರಸಭೆಗಳ ನಡುವಿನ ಪ್ರದೇಶ ದಲ್ಲಿರುವುದೇ ಇವೆಲ್ಲಾ ಗೊಂದಲಗಳಿಗೆ ಕಾರಣವಾಗಿದ್ದು ಯಾರದೋ ಹೆಸರಿಗೆ ಇನ್ಯಾರೋ ಬಲಿಯಾದ ರೀತಿ ಇವರ ಬದುಕಿದೆ.

ಅಂಗನವಾಡಿಯೂ ಇಲ್ಲ
ಈ ಬಡಾವಣೆಯ ನಿವಾಸಿಗಳ ಮಕ್ಕಳು ಓದಬೇಕಾದರೆ, ಗರ್ಭಿಣಿ ಮಹಿಳೆಯರು ಸೌಲಭ್ಯಗಳನ್ನು ಪಡೆಯಬೇಕಾ ದರೂ ಪರಿತಪಿಸಬೇಕಾಗಿದೆ. ಏಕೆಂದರೆ ಅಂಗನವಾಡಿಯಾಗಲಿ, ಶಾಲೆಯಾಗಲಿ ಇಲ್ಲ. ಎಲ್ಲ ರೀತಿಯಲ್ಲೂ ಅಲ್ಲಿನ ಜನರು ಅನಾಮಿಕರಂತೆ ಬದುಕುತ್ತಿದ್ದಾರೆ.ಹಾಗಾಗಿ ಪಟ್ಟಣದ ಸಮೀಪದಲ್ಲಿ ಇದ್ದರೂ, ಒಂದು ರೀತಿಯ ದೀಪದ ಕೆಳಗೆ ಕತ್ತಲು ಎಂಬAತೆ ಆ ಕತ್ತಲಿನ ಕೂಪದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಹಾಗಾಗಿ ಇನ್ನಾದರೂ ಸಂಬಂಧ ಪಟ್ಟವರು ಕಣ್ತೆರುವರೆ ಎಂದು ನೋಡಬೇಕಾಗಿದೆ.

ಈ ಕುರಿತು ಸ್ಥಳೀಯ ನಿವಾಸಿ ರಾಮು ಮಾತನಾಡಿ, ನಾವು ಪುರಸಭೆ ಮತ್ತು ಘಂಟಮವಾರಪಲ್ಲಿ ಗ್ರಾಮ ಪಂಚಾ ಯಿತಿಗಳ ನಡುವಿನ ತಿಕ್ಕಾಟದಲ್ಲಿ ಅತಂತ್ರದಲ್ಲಿದ್ದೇವೆ. ಎರಡೂ ಕಡೆ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ಸಮಸ್ಯೆಗಳನ್ನು ಪರಿಹರಿಸುವಂತೆ ಕೇಳಿಕೊಂಡಿದ್ದೇವೆ. ಮತ್ತು ಮನವಿ ಪತ್ರಗಳನ್ನು ಕೂಡ ಸಲ್ಲಿಸಿದ್ದೇವೆ.ಆದರೆ ವರ್ಷಗಳು ಉರುಳುತ್ತಿವೆ. ಸಮಸ್ಯೆಗಳು ಪರಿಹಾರವಾಗುತ್ತಿಲ್ಲ ಎಂದು ನೋವು ತೋಡಿಕೊಂಡರು.

ಸಂಪಗಿ ನಗರದಲ್ಲಿ ಮಕ್ಕಳನ್ನು ಆಟ ಆಡಲು ಬಿಡುವುದಕ್ಕೂ ಭಯವಾಗುತ್ತದೆ. ಇಲ್ಲಿ ಚರಂಡಿ ಇಲ್ಲ, ರಸ್ತೆ ಇಲ್ಲ, ಅಷ್ಟೇ ಅಲ್ಲದೆ ಪಕ್ಕದಲ್ಲಿಯೇ ಕೆರೆಯಿರುವ ಕಾರಣ ಹಾವುಗಳು ಆಗಾಗ ಹೊರ ಬರುತ್ತಿರುತ್ತವೆ. ಸಮರ್ಪಕ ರೀತಿಯಲ್ಲಿ ಬೀದಿ ದೀಪಗಳಾಗಲಿ,ನಿಯಮಿತವಾಗಿ ಕುಡಿಯುವ ನೀರಾಗಲಿ ದೊರೆಯುವುದು ಗಗನಕುಸುಮವಾಗಿದೆ.ಏನು ಬೇಕಾದರೂ ಬಾಗೇಪಲ್ಲಿ ಪಟ್ಟಣಕ್ಕೆ ಬರಬೇಕು.ದಯವಿಟ್ಟು ತಾವು ಇಲ್ಲಿ ಸಮಸ್ಯೆಗಳನ್ನು ಪರಿಹರಿಸಿ ನಮಗೂ ಬದುಕಲು ಬಿಡಿ ಎಂದು ಇಲ್ಲಿನ ನಿವಾಸಿ ವೀಣಾ ಶಾಸಕ ಸುಬ್ಬಾರೆಡ್ಡಿ ಅವರಲ್ಲಿ ಮನವಿ ಮಾಡುತ್ತಾರೆ.

ನಿವೃತ್ತ ಶಿಕ್ಷಕ ರಾಮಕೃಷ್ಣಾರೆಡ್ಡಿಯವರು ಮಾತನಾಡಿ, ಮಾಜಿ ಶಾಸಕ ಸಂಪ0ಗಿ ಅವರ ಕಾಲದಲ್ಲಿ ಉಚಿತ ನಿವೇಶನ ನೀಡಿದ್ದರೂ ಈವರೆಗೆ ಇದರ ದಾಖಲೆಗಳನ್ನು ಕೊಟ್ಟಿಲ್ಲ. ಏನೇ ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಿದರೂ ಈ ಬಡಾವಣೆಯ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ತೀರ್ಪಿನ ನಂತರ ಪರಿಹರಿಸುತ್ತೇವೆ ಎನ್ನುತ್ತಾರೆ. ಹಾಗಾಗಿ ನಮ್ಮ ಬದುಕನ್ನು ಅತಂತ್ರಕ್ಕೆ ದೂಡಿ, ನಮಗೆ ಭದ್ರತೆ ಇಲ್ಲದಂತೆ ಮಾಡಿದ್ದಾರೆ. ಈ ಬಗ್ಗೆ ಸರ್ಕಾರವಾಘಲಿ ಅಥವಾ ಜನಪ್ರತಿನಿಧಿಗಳಾಗಲಿ ತುರ್ತು ಕ್ರಮ ಕೈಗೊಂಡು ನಮ್ಮನ್ನು ಆತಂಕದ ಜೀವನದಿಂದ ಪಾರು ಮಾಡಿ ಕೊಡಬೇಕೆಂದು ಕಣ್ಣೀರಿಡುತ್ತಾರೆ.

ಇದನ್ನೂ ಓದಿ: Chikkaballapur News: ಮಣ್ಣಿನ ದೀಪ, ಎಣ್ಣೆ ವಿತರಿಸಿ ಜಾಗೃತಿ ಮೂಡಿಸಿದ ಸಮಾನ ಮನಸ್ಕರ ಸಂಘ