ಬಂಡವಾಳಶಾಹಿ-ಕೋಮುವಾದಿ ಪಕ್ಷಗಳಿಂದ ಜನರ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತಿಲ್ಲ
ಬಾಗೇಪಲ್ಲಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ಆಡಳಿತ, ಮೂಲಭೂತ ಸೌಲಭ್ಯಗಳ ಕೊರತೆ ಸೇರಿದಂತೆ ವಿವಿದ ಸಮಸ್ಯೆಗಳ ಬಗ್ಗೆ ತಾಲ್ಲೂಕಿನ ಸಿಪಿಎಂ ಸಮ್ಮೇಳನಗಳಲ್ಲಿ ನಿರ್ಣಯಗಳನ್ನು ತೆಗೆದುಕೊಂಡು ಜಾತಿ-ಧರ್ಮಗಳ ಆಧಾರದ ಮೇಲೆ ಚರ್ಚಿಸದೆ ಶ್ರಮಜೀವಿ ವರ್ಗ,ರೈತರು, ಬಡವರು,ಕೃಷಿ-ಕೂಲಿ ಕಾರ್ಮಿಕರು ಪರವಾದ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸಿಪಿಎಂ ತಾಲ್ಲೂಕು ಕಾರ್ಯದರ್ಶಿ ಎಂ.ಎನ್.ರಘುರಾಮರೆಡ್ಡಿ ತಿಳಿಸಿದರು.
ಪಟ್ಟಣದ ಸಿಪಿಎಂ ಕಚೇರಿ ಸುಂದರಯ್ಯ ಭವನದಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ದರು. ಎಲ್ಲಾ ಅರ್ಹ ಬಡವರಿಗೆ ಬಿಪಿಎಲ್ ಕಾರ್ಡುಗಳನ್ನು ನೀಡಬೇಕು. ಕಳೆದ ೫-೬ ವರ್ಷಗಳಿಂದ ಬಡವರಿಗೆ ಮನೆ-ನಿವೇಶನಗಳನ್ನು ನೀಡಬೇಕು ಎಂದು ಒತ್ತಾಯಿಸಿದ್ದರು ಪ್ರಯೋಜನವಾಗಲಿಲ್ಲ. ಕೇರಳ ರಾಜ್ಯದ ಮಾದರಿ ಯಲ್ಲಿ ಬಡವರಿಗೆ ೩೦*೪೦ ಅಳತೆಯಲ್ಲಿ ಮನೆಗಳನ್ನು ನಿರ್ಮಿಸಿಕೊಡಬೇಕು. ಎಲ್ಲಾ ರೈತರಿಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ-ಸೌಲಭ್ಯಗಳನ್ನು ಕಲ್ಪಿಸಬೇಕು.
ಸ್ತ್ರೀಶಕ್ತಿ ಸಂಘಗಳ ಸಾಲವನ್ನು ಮನ್ನಾ ಮಾಡಬೇಕು. ಮಸನ ಕಾರ್ಮಿಕರಿಗೆ ಮಾಶಾಸನ ನೀಡಬೇಕು. ಸುರಕ್ಷಾ ಪರಿಕರಗಳನ್ನು ನೀಡಬೇಕು. ನಿರುದ್ಯೋಗ ನಿವಾರಿಸಲು ಕೃಷಿ,ಗುಡಿ ಕೈಗಾರಿಕೆಗಳನ್ನು ನಿರ್ಮಾಣ ಮಾಡಬೇಕು. ಎಂನರೇಗಾ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ನರೇಗಾ ಯೋಜನೆಯಲ್ಲಿ ನಡೆಯುತ್ತಿರುವ ಭ್ರಷಾಚಾರವನ್ನು ತಡೆಗಟ್ಟಬೇಕು. ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಸರಿಪಡಿಸಬೇಕು ಮತ್ತು ಸಾರಿಗೆ ವ್ಯವಸ್ಥೆಯ ನ್ನು ಉತ್ತಮಗೊಳಿಸಬೇಕು.
ರೈತರ ಬೆಲೆಗಳಿಗೆ ಸ್ವಾಮಿನಾಥನ್ ವರದಿಯಂತೆ ಬೆಂಬಲ ಬೆಲೆ ನಿಗದಿ ಪಡಿಸಬೇಕು. ವಸತಿ ನಿಲಯಗಳಲ್ಲಿ ನಡೆಯುತ್ತಿರುವ ಭ್ರಷ್ಠಾಚಾರವನ್ನು ತಡೆಗಟ್ಟಬೇಕು. ಹೊರಗುತ್ತಿಗೆ ನೌಕರರ ವೇತನ ಕನಿಷ್ಠ ೩೦ ಸಾವಿರ ನೀಡಬೇಕು ಮತ್ತು ಸೇವಾ ಭದ್ರತೆ ನೀಡಬೇಕು. ಬಾಗೇಪಲ್ಲಿ ಕ್ಷೇತ್ರದಲ್ಲಿ ಸರ್ಕಾರಿ ಸ್ನಾತಕೋತ್ತರ ಕೇಂದ್ರ ಮತ್ತು ಸರ್ಕಾರಿ ಕಾನೂನು ಕಾಲೇಜು ಪ್ರಾರಂಭಿಸಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಜನಸಾಮಾನ್ಯರಿಗೆ ಸಿಗಬೇಕಾಗಿರುವ ಸೌಲಭ್ಯ ಗಳನ್ನು ನೀಡಬೇಕು ಜನಸಂಖ್ಯೆಗೆ ಅನುಗುಣವಾಗಿ ವೈದ್ಯರು ಮತ್ತು ಸಿಬ್ಬಂದಿಯನ್ನು ನೇಮಕ ಮಾಡಬೇಕು. ಗಾಂಜಾ ಮತ್ತಿತರ ಪದಾರ್ಥಗಳನ್ನು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡು ಮಟ್ಟಾಹಾಕಬೇಕು.
ಪ್ರಧಾನವಾಗಿ ನೂತನ ಚೇಳೂರು ತಾಲ್ಲೂಕನ್ನು ರಾಜಕೀಯ ಲಾಭಕ್ಕಾಗಿ ಘೋಷಣೆ ಮಾಡಲಾಗಿದೆಯೇ ಹೊರತು ಯಾವುದೇ ಸೌಲಭ್ಯಗಳನ್ನು ಇದುವರೆವಿಗೂ ಕಲ್ಪಿಸಲು ಸರ್ಕಾರಗಳಿಂದ ಸಾಧ್ಯವಾಗಿಲ್ಲ. ೬-೭ ವರ್ಷಗಳಲ್ಲಿ ಆ ಭಾಗದ ನಾಗರೀಕರು ಬಾಗೇಪಲ್ಲಿಗೆ ಓಡಾಡುವುದು ತಪ್ಪಿಲ್ಲ. ಚೇಳೂರು ತಾಲ್ಲೂಕಿನ ಬಗ್ಗೆ ಗಮನ ಹರಿಸಿಲ್ಲ. ಸರ್ಕಾರ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷಾಚಾರವನ್ನು ತಡೆಗಟ್ಟಬೇಕು. ಹೈನುಗಾರಿಕೆಯಿಂದ ರೈತರಿಗೆ ಲಾಭ ಬರುವಂತಹ ಯೋಜನೆಗಳನ್ನು ಜಾರಿಗೆ ತರಬೇಕಾಗಿದೆ. ತಾಲ್ಲೂಕಿಗೆ ಶಾಶ್ವತ ನೀರಾವರಿ ಯೋಜನೆ ಜಾರಿ ಯಾಗಲೇಬೇಕಾಗಿದೆ. ಅದನ್ನು ಸಮರ್ಪಕವಾಗಿ ಜಾರಿಗೆ ತರಲಿ ಎಂದರು. ರೈತರು ಮತ್ತು ರೈತರ ಮಕ್ಕಳು ತಮ್ಮ ಪಾರಂಪರಿಕ ಕೃಷಿ ಜೀವನದಿಂದ ವಿಮುಕ್ತರಾಗುತ್ತಿದ್ದು ವಲಸೆಹೋಗಿ ಅಸಂಘಟಿತ ಕಾರ್ಮಿಕರಾಗಿ ಬದಲಾಗುತ್ತಿರು ವುದು ಅಪಾಯಕಾರಿ. ಅರಣ್ಯ ಪ್ರದೇಶದ ಅಕ್ಕ-ಪಕ್ಕದ ಜಮೀನಿನ ರೈತರಿಗೆ ಕಾಡುಪ್ರಾಣಿಗಳಿಂದ ತೊಂದರೆ ಯಾಗುತ್ತಿದೆ ಅದಕ್ಕೆ ಅರಣ್ಯ ಇಲಾಖೆ ರಕ್ಷಣೆ ನೀಡಬೇಕಾಗಿದೆ. ಚಿಲ್ಲರೆ ಅಂಗಡಿಗಳಲ್ಲಿ ಮದ್ಯಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದು ಅದಕ್ಕೆ ಕಡಿವಾಣ ಆಗಬೇಕಾಗಿದೆ. ಕೇಂದ್ರ ಸರ್ಕಾರದ ಜೆಜೆಎಂ ಕಾವiಗಾರಿಗಳು ಕಳಪೆಯಿಂದ ಕೂಡಿದ್ದು ನೈಸರ್ಗಿಕ ನೀರಿಗೆ ಜನರೇ ಭವಿಷ್ಯದಲ್ಲಿ ಟ್ಯಾಕ್ಸ್ ಕಟ್ಟುವಂತೆ ಮಾಡುವ ಹುನ್ನಾರವನ್ನು ಹೊಂದಲಾಗಿದೆ ಎಂದು ಎಚ್ಚರಿಸಿದರು.
ಎಲ್ಲಾ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವುದು, ಜನರನ್ನು ಜಾಗೃತಿಗೊಳಿಸುವುದರ ಮೂಲಕ ಬಂಡವಾಳಿ ಶಾಹಿ ಮತ್ತು ಕೋಮುವಾದಿ ರಾಜಕೀಯ ಪಕ್ಷಗಳಿಂದ ಯಾವುದೇ ಸಮಸ್ಯೆಗಳ ಪರಿಹಾರ ದೊರೆಯುತ್ತಿಲ್ಲ, ಜನರ ಸಮಸ್ಯೆಗಳ ಬಗ್ಗೆ ವಿಧಾನಸೌದದಲ್ಲಿ ಮಾತನಾಡುವವರು ಇಲ್ಲವಾಗಿರುವ ಕಾರಣ ಬಾಗೇಪಲ್ಲಿ ವಿಧಾನಸಭ ಕ್ಷೇತ್ರದಲ್ಲಿ ಪ್ರತ್ಯೇಕವಾಗಿ ಸಿಪಿಎಂ ಪಕ್ಷ ಪರ್ಯಾಯ ರಾಜಕೀಯ ಶಕ್ತಿಯಾಗಿ ಬೆಳೆಯಬೇಕಾಗಿದೆ ಎಂದರು.
ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಕೆ.ನಾಗರಾಜು ಮಾತನಾಡಿ, ಸಿಪಿಎಂ ಸಮ್ಮೇಳನಗಳಲ್ಲಿ 22 ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಕನಿಷ್ಠ ದ್ವಿಚಕ್ರವಾಹನಗಳು ಓಡಾಡುವ ಸ್ಥಿತಿಯಲ್ಲಿ ರಸ್ತೆಗಳಿಲ್ಲ. ಸರ್ಕಾರ ಮತ್ತು ಇಲ್ಲಿನ ಜನಪ್ರತಿನಿಧಿಗಳು ರಸ್ತೆಗಳ ಅಭಿವೃದ್ಧಿ ಕಡೆ ಗಮನವನ್ನು ತೆಗೆದುಕೊಳ್ಳುತ್ತಿಲ್ಲ. ಮೈಕ್ರೊಫೈನಾನ್ಸ್ ಜನರನ್ನು ವಿಶೇಷ ವಾಗಿ ಮಹಿಳೆಯರನ್ನು ಲೈಂಗಿಕವಾಗಿ ಶೋಚಣೆ ಮಾಡುತ್ತಿದೆ. ಪ್ರತಿ ವಾರ ಬಡ್ಡಿ ವಸೂಲಿ ಮಾಡುತ್ತಿವೆ. ಸಾಲ ತೀರಿಸಲಾರದೆ ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದರ ಬಗ್ಗೆ ಹೋರಾಟ ನಡೆಸಲಾಗುತ್ತದೆ. ಕೆರೆಗಳ ಒತ್ತುವರಿ ತಡೆಯಬೇಕಾಗಿದೆ. ರಾಜಕಾಲುವೆಗಳ ರಕ್ಷಣೆ ಮಾಡಬೇಕಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಿಪಿಎಂ ಮುಖಂಡರಾದ ಡಿ.ಸಿ.ಶ್ರೀನಿವಾಸ್, ವಾಲ್ಮೀಕಿ ಅಶ್ವತ್ಥಪ್ಪ, ಜಿ.ಕೃಷ್ಣಪ್ಪ, ಪಿ.ಓಬಳರಾಜು, ಮುಸ್ತಫಾ, ಸೋಮಶೇಖರ್ ಉಪಸ್ಥಿತರಿದ್ದರು.