Saturday, 23rd November 2024

Tragic Incident: 3 ದಿನಗಳಲ್ಲಿ 10 ಆನೆಗಳ ದಾರುಣ ಸಾವು – ವಿಷವಿಕ್ಕಿ ಗಜಪಡೆಗಳನ್ನು ಕೊಂದರೇ ದುರುಳರು..!?

ಭೋಪಾಲ್: ಕಳೆದ ಮೂರು ದಿನಗಳ ಅವಧಿಯಲ್ಲಿ ಹತ್ತು ಆನೆಗಳು ದಾರುಣವಾಗಿ ಮೃತಪಟ್ಟಿರುವ ಘಟನೆ(Tragic Incident) ಮಧ್ಯಪ್ರದೇಶದ ಬಂಧವ್ ಘರ್ ಹುಲಿ ಸಂರಕ್ಷಣಾ ಪ್ರದೇಶದಲ್ಲಿ (Bandhavgarh Tiger Reserve) ನಡೆದಿದೆ. ಪ್ರಾಥಮಿಕ ತನಿಖೆಯಲ್ಲಿ ಈ ಮೃತ ಆನೆಗಳ ದೇಹದಲ್ಲಿ ವಿಷಕಾರಿ ಅಂಶ (Toxins) ಪತ್ತೆಯಾಗಿದ್ದು, ವಿಷಪ್ರಾಶನದ ಕಾರಣದಿಂದ ಆನೆಗಳು ಮೃತಪಟ್ಟಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಮೊದಲಿಗೆ ಅ.29ರಂದು ಈ ಸಂರಕ್ಷಣಾ ಪ್ರದೇಶದಲ್ಲಿ ಸಿಬ್ಬಂದಿಗಳು ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ನಾಲ್ಕು ಆನೆಗಳ ಮೃತದೇಹ ಪತ್ತೆಯಾಗುವ ಮೂಲಕ ಈ ಘಟನೆ ಬೆಳಕಿಗೆ ಬಂದಿದೆ. ಬಳಿಕ ಈ ಪ್ರದೇಶದ ಆಸುಪಾಸಿನಲ್ಲಿ ಹುಡುಕಾಟ ನಡೆಸಿದ ಸಂದರ್ಭದಲ್ಲಿ ಮತ್ತೆ ಆರು ಆನೆಗಳ ಮೃತದೇಹ ಪತ್ತೆಯಾಗಿದೆ. ಇವುಗಳಲ್ಲಿ ಕೆಲವೊಂದು ಆನೆಗಳು ತೀವ್ರವಾಗಿ ಅಸ್ವಸ್ಥಗೊಂಡಿದ್ದವು ಹಾಗೂ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿದ್ದವು ಎಂದು ವರದಿಗಳು ತಿಳಿಸಿವೆ.

ಈ ದುರ್ಘಟನೆ ಬೆಳಕಿಗೆ ಬಂದ ತಕ್ಷಣವೇ ಅಸ್ವಸ್ಥಗೊಂಡಿದ್ದ ಮತ್ತು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆನೆಗಳಿಗೆ ವೈಲ್ಡ್ ಲೈಫ್ ಫಾರೆನ್ಸಿಕ್ ಮತ್ತು ಹೆಲ್ತ್ ಸ್ಕೂಲ್ (SWFH) ಹಾಗೂ ಇಲ್ಲಿನ ನಿವೃತ್ತ ಮುಖ್ಯಸ್ಥರಾಗಿರುವ ಡಾ. ಎ ಬಿ ಶ್ರೀವಾಸ್ತವ ನೇತೃತ್ವದಲ್ಲಿ ತುರ್ತು ವೈದ್ಯಕೀಯ ನೆರವನ್ನು ನೀಡಲಾಯಿತಾದರೂ ಅಸ್ವಸ್ಥಗೊಂಡಿದ್ದ ನಾಲ್ಕು ಆನೆಗಳು ಮರುದಿನ ಮೃತಪಟ್ಟಿವೆ ಹಾಗೂ ಮತ್ತೆರಡು ಆನೆಗಳು ಅ.31ರಂದು ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದವು.

ಸಾವಿಗೀಡಾದ ಆನೆಗಳಲ್ಲಿ ಒಂದು ಗಂಡಾನೆ ಮತ್ತು ಒಂಭತ್ತು ಹೆಣ್ಣಾನೆಗಳು ಸೇರಿದ್ದು, ಇವುಗಳಲ್ಲಿ ಆರು ಮರಿಯಾನೆಗಳು ಅಥವಾ ಹರೆಯದ ಆನೆಗಳಾಗಿವೆ. ಪ್ರಾಥಮಿಕ ವರದಿಗಳ ಪ್ರಕಾರ ಈ ಆನೆಗಳ ಹಿಂಡು ಕಾಡಿನಿಂದ ಸಮೀಪದ ಗದ್ದೆಗಳಿಗೆ ದಾಳಿ ಮಾಡಿವೆ ಈ ಸಂದರ್ಭದಲ್ಲಿ ಅವುಗಳಿಗೆ ವಿಷಪ್ರಾಶನವಾಗಿರಬಹುದೆಂಬ ವಿಚಾರ ಇದೀಗ ಪ್ರಾಥಮಿಕ ವರದಿಗಳ ಮೂಲಕ ಬೆಳಕಿಗೆ ಬಂದಿದೆ.

14 ಪಶುವೈದ್ಯರ ತಂಡದಿಂದ ಮೃತ ಆನೆಗಳ ಪೋಸ್ಟ್ ಮಾರ್ಟಂ ನಡೆಸಲಾಗಿದ್ದು, ಕೋಶದ ಮಾದರಿಗಳನ್ನು ಉತ್ತರಪ್ರದೇಶದ ಬರೇಲಿಯಲ್ಲಿರುವ ಇಂಡಿಯನ್ ವೆಟರ್ನರಿ ರಿಸರ್ಚ್ ಇನ್ಸ್ಟಿಟ್ಯೂಟ್ (IVRI) ಹಾಗೂ ಸಾಗರ್ ನಲ್ಲಿರುವ ಫಾರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿಗೆ (FSL) ಕಳುಹಿಸಲಾಗಿದ್ದು ವಿವರವಾದ ವರದಿಗಳನ್ನು ನಿರೀಕ್ಷಿಸಲಾಗುತ್ತಿದೆ. ಪ್ರಾಥಮಿಕ ತನಿಖೆಯಲ್ಲಿ ಮೃತ ಆನೆಗಳಿಗೆ ವಿಷಪ್ರಾಶನವಾಗಿರುವುದು ಕಂಡುಬಂದಿದ್ದರೂ ಫಾರೆನ್ಸಿಕ್ ಪರೀಕ್ಷೆಗಳ ಬಳಿಕವಷ್ಟೇ ನಿಖರವಾದ ಕಾರಣಗಳು ಹೊರಬರುವ ನಿರೀಕ್ಷೆಯಿದೆ.

ಈ ದುರ್ಘಟನೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರವು ಐದು ಜನ ಸದಸ್ಯರ ವಿಚಾರಣಾ ಮಂಡಳಿಯನ್ನು ರಚಿಸಿದ್ದು, ಅರಣ್ಯ ಸಂರಕ್ಷಣಾ ಹೆಚ್ಚುವರಿ ಪ್ರಧಾನ ಮುಖ್ಯಸ್ಥರು ಈ ಕಮಿಟಿಯ ಮುಖ್ಯಸ್ಥರಾಗಿರುತ್ತಾರೆ. ಈ ತಂಡದಲ್ಲಿ ನಾಗರಿಕ ಸಮಾಜದ ಪ್ರತಿನಿಧಿಗಳು, ವಿಜ್ಞಾನಿಗಳು ಹಾಗೂ ಪಶುವೈದ್ಯರು ಇರಲಿದ್ದಾರೆ. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಧೀನದಲ್ಲಿರುವ ವನ್ಯಮೃಗ ಅಪರಾಧ ನಿಯಂತ್ರಣ ಬ್ಯೂರೋ (WCCB) ಈ ಘಟನೆಯ ಬಗ್ಗೆ ಸ್ವತಂತ್ರ ತನಿಖೆಯನ್ನು ಕೈಗೆತ್ತಿಕೊಂಡಿದೆ.

ಇನ್ನೊಂದೆಡೆ, ರಾಜ್ಯ ಹುಲಿ ನಿಗ್ರಹ ಪಡೆ (STSF) ಮುಖ್ಯಸ್ಥರು ಈ ಭಾಗದ ಅರಣ್ಯಪ್ರದೇಶದಲ್ಲಿ ಹಾಗೂ ಸಮೀಪದ ಗ್ರಾಮಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿ ಸಂಬಂಧಿತ ಸುಳಿವುಗಳಿಗಾಗಿ ಜಾಲಾಡುತ್ತಿದ್ದಾರೆ. ಈ ದುರ್ಘಟನೆಯ ಬಳಿಕ ಅಧಿಕಾರಿಗಳು ಹೈ ಅಲರ್ಟ್ ಆಗಿದ್ದು, ಬುಂಧಾವ್ ಘರ್ ಪ್ರದೇಶದಲ್ಲಿ ಗಸ್ತು ಹೆಚ್ಚಿಸಿದ್ದಾರೆ. ಈ ಮೂಲಕ ಇದೇ ರೀತಿಯ ಘಟನೆಗಳು ಮತ್ತೆಲ್ಲೂ ಸಂಭವಿಸದಂತೆ ಅಧಿಕಾರಿಗಳು ನಿಗಾ ವಹಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: ಮಧ್ಯಪ್ರದೇಶದ ಕಾಳಿಕಾ ದೇವಾಲಯದಲ್ಲಿ ವಸ್ತ್ರಸಂಹಿತೆ ಜಾರಿ