ಹೈದರಾಬಾದ್: ಇತ್ತೀಚೆಗೆ ನಡೆದ ಭೀಕರ ಅಪಘಾತಕ್ಕೆ(Hyderabad accident) ಸಂಬಂಧಿಸಿದಂತೆ ಹೈದರಾಬಾದ್ನ ಸ್ಟಾಂಡ್ ಅಪ್ ಕಾಮಿಡಿಯನ್ (Stand-up comedian) ಉತ್ಸವ್ ದೀಕ್ಷಿತ್ನನ್ನು(Utsav Dixit) ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ ಸುಮಾರು ಬೆಳಗ್ಗೆ ಸುಮಾರು 9.35 ರ ವೇಳೆ ಕೆಬಿಆರ್ ರಾಷ್ಟ್ರೀಯ ಉದ್ಯಾನವನದ ಪಾದಚಾರಿ ಮಾರ್ಗ ಮತ್ತು ಬೇಲಿಗೆ ಪೋರ್ಷೆ ಟೇಕಾನ್ (Porsche) ಕಾರು ಡಿಕ್ಕಿ ಹೊಡೆದು ಕಾರನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದ. 33 ವರ್ಷದ ದೀಕ್ಷಿತ್ ಇತ್ತೀಚೆಗೆ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಆಗಿ ತನ್ನ ವೃತ್ತಿಯನ್ನು ಶುರು ಮಾಡಿದ್ದರು ಎಂದು ತಿಳಿದು ಬಂದಿದೆ.
ಅಜಾರೂಕತೆಯಿಂದ ಕಾರನ್ನು ಚಲಾಯಿಸಿದ್ದು ಈ ಘಟನೆಗೆ ಕಾರಣವಾಗಿದೆ ಎಂದು ಹೇಳಲಾಗಿದೆ. ಅಪಘಾತದ ನಂತರ ದೀಕ್ಷಿತ್ ಪರಾರಿಯಾಗಿದ್ದರು. ಭಾನುವಾರ ಅವರನ್ನು ಪತ್ತೆ ಹಚ್ಚಿ ಪೊಲೀಸರು ಬಂಧಿಸಿದ್ದಾರೆ. ಸ್ನೇಹಿತರನ್ನು ಭೇಟಿ ಮಾಡಿ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ. ಕೌಟುಂಬಿಕ ವಿಚಾರಕ್ಕೆ ಪತ್ನಿ ಜತೆಗಿನ ಭಿನ್ನಾಭಿಪ್ರಾಯ ಹಿನ್ನೆಲೆಯಲ್ಲಿ ಹಿಂದಿನ ರಾತ್ರಿ ಮನೆ ಬಿಟ್ಟು ಹೋಗಿದ್ದರು ಎಂದು ತಿಳಿದು ಬಂದಿದೆ.ಕಾರು ಅವರ ಪತ್ನಿಗೆ ತಂದೆ ನೀಡಿದ್ದ ಉಡುಗೊರೆಯಾಗಿದ್ದು, ಅವರ ಮಾವನ ಹೆಸರಿನಲ್ಲಿ ನೋಂದಣಿ ಇದೆ.
Porsche car crashes near KBR Park. More details awaited. #Porsche #KBRPark #hyderabadnews pic.twitter.com/tfVb1oHrF2
— Deccan Chronicle (@DeccanChronicle) November 1, 2024
ಅಪಘಾತ ಸಂಬಂಧ ಪೊಲೀಸರು ಆರೋಪಿಯ ಚಾಲನಾ ಪರವಾನಗಿಯನ್ನು ವಶಪಡಿಸಿಕೊಂಡು ಅನರ್ಹತೆಗಾಗಿ ಸಾರಿಗೆ ಇಲಾಖೆಗೆ ಕಳುಹಿಸಿದ್ದಾರೆ. ದುಡುಕಿನ ಚಾಲನೆ, ಮೋಟಾರು ವಾಹನ ಕಾಯ್ದೆಯ ಉಲ್ಲಂಘನೆ, ಹಾಗೂ ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆಯ ಉಲ್ಲಂಘನೆಗಾಗಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿದ್ದಾರೆ . “ಅಜಾಗರೂಕ ಚಾಲನೆಯಿಂದ ಡಿಕ್ಕಿ ಸಂಭವಿಸಿದ್ದು, ವಾಹನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ” ಮಾದಕವಸ್ತು ಮತ್ತು ಮದ್ಯ ಸೇವನೆ ಪರೀಕ್ಷೆಗೆ ಅವರನ್ನು ಒಳಪಡಿಸಲಾಗಿದೆ ವಿಚಾರಣೆಯ ನಂತರ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಬಂಜಾರ ಹಿಲ್ಸ್ ವಿಭಾಗದ ಎಸಿಪಿ ಎಸ್ ವೆಂಕಟ್ ರೆಡ್ಡಿ ತಿಳಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್)ನ ಸೆಕ್ಷನ್ 35ರ ಅಡಿಯಲ್ಲಿ ದೀಕ್ಷಿತ್ಗೆ ನೋಟಿಸ್ ನೀಡುವಂತೆ ನ್ಯಾಯಾಲಯವು ಪೊಲೀಸರಿಗೆ ಸೂಚನೆ ನೀಡಿದ್ದು, ವಿಚಾರಣೆಗಾಗಿ ತನಿಖಾ ಅಧಿಕಾರಿಯ ಮುಂದೆ ಹಾಜರಾಗಬೇಕು ಎಂದು ಆದೇಶ ನೀಡಿದೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳನ್ನು ಕೇಳಲಾಗುವುದು ಮತ್ತು ಅವರ ಹೇಳಿಕೆಯನ್ನು ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆ ಕನ್ನಡದ ನಟನೊಬ್ಬ ಕಾರು ಅಪಘಾತ ಮಾಡಿದ್ದು, ಮಹಿಳೆಯೊಬ್ಬಳು ಸ್ಥಳದಲ್ಲಿಯೇ ಮೃತಪಟ್ಟಿದ್ದಳು. ಕೌಸಲ್ಯ ಸುಪ್ರಜಾ ರಾಮ’ ಸೇರಿದಂತೆ ಕನ್ನಡದ ಹಲವು ಸಿನಿಮಾದಲ್ಲಿ ಅಭಿನಯಿಸಿದ್ದ ಖ್ಯಾತ ನಟ ನಾಗಭೂಷಣ ಅವರ ಕಾರು ಬೆಂಗಳೂರಿನ ಕೋಣನಕುಂಟೆ ಬಳಿ ಅಪಘಾತಕ್ಕೀಡಾಗಿತ್ತು. ಪಾದಾಚಾರಿ ಮಾರ್ಗದಲ್ಲಿ ನಡೆದು ಹೋಗುತ್ತಿದ್ದ ದಂಪತಿಯ ಮೇಲೆ ಕಾರು ಹತ್ತಿದ್ದರಿಂದ ಪ್ರೇಮಾ ಎಂಬುವವರು ಸ್ಥಳದಲ್ಲಿಯೇ ಮೃತ ಪಟ್ಟಿದ್ದರು. ಆಕೆಯ ಪತಿಗೆ ಗಂಭೀರ ಗಾಯಗಳಾಗಿದ್ದವು.