ಅನಿಸಿಕೆ
ಪುಸ್ತಕಮನೆ ಹರಿಹರಪ್ರಿಯ
ಕನ್ನಡ ವಿಶ್ವವಿದ್ಯಾಲಯವು, ರಾಷ್ಟ್ರಕವಿ ಕುವೆಂಪು ಅವರ ಹೆಸರಿನಲ್ಲಿ 12 ಸಂಪುಟಗಳನ್ನು ಇದೀಗ ಮಾರಾಟಕ್ಕಿಟ್ಟಿದೆ.
2017ರಿಂದ 2020ರವರೆಗೆ ಪ್ರಕಟಿಸಿಯೂ ಮೂಲೆ ಗುಂಪಾಗಲು ವಿಶ್ವವಿದ್ಯಾಲಯದಲ್ಲಿನ ರಾಜಕೀಯ ಸಂಘರ್ಷವೇ ಕಾರಣವೋ? ರಟ್ಟಿನ ಮೇಲೆ ಇಲ್ಲದ ಸಂಪಾದಕನ ಹೆಸರು, ಈಗ ನೂತನ ರಕ್ಷಾಪುಟ ಸೃಷ್ಟಿಸಿ, ಕುವೆಂಪು ಭಾವಚಿತ್ರಗಳನ್ನು ಮರೆಮಾಚಿದ ಹೀನ ಕೃತ್ಯ ಎಸಗಲು ಆಡಳಿತ ಮಂಡಲಿಗೆ ಮೂರು ವರ್ಷ ಹಿಡಿಯಿತೇ?
ಇಷ್ಟಾಗಿಯೂ ಕುವೆಂಪು ಅವರ ಮಹಾಕಾವ್ಯ, ಮಹಾಕಾದಂಬರಿ ಇತ್ಯಾದಿ ಕೃತಿಗಳ ಮೇಲೆ ಯಾವ ಪುರುಷಾರ್ಥಕ್ಕಾಗಿ ಈ ಸಂಪಾ ದಕನ ಹೆಸರನ್ನು ಬಳಸಬೇಕಾಗಿ ಬಂದಿದೆ? ಇದು ಒಪ್ಪಿತವಾದರೆ, ಮುಂದೆ ಪುಸ್ತಕ ಪ್ರಕಟಣಾ ರಂಗದಲ್ಲಿ, ಸಂಪಾದಕನ ಹೆಸರಿ ನಿಂದಲೇ ಅಭಿಜಾತ ಲೇಖಕರು, ಕೃತಿಗಳನ್ನು ಉಲ್ಲೇಖಿಸುವ ದುರಂತ ಒದಗುವುದಿಲ್ಲವೇ? ಕುವೆಂಪು ಅಭಿಮಾನಿಗಳು, ಕನ್ನಡದ ಎಲ್ಲಾ ಸ್ತರದ ಓದುಗರು, ಪುಸ್ತಕ ಸಂಗ್ರಾಹಕರು, ಇಂಥ ಸಮಗ್ರ ಕೃತಿಗಳನ್ನು ಕೊಳ್ಳಲು ಸಾಧ್ಯವೇ? ಈ ಹಿಂದೆಯೇ 2013ರಲ್ಲಿ ಕುಪ್ಪಳಿಯ ‘ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ’ದವರು ಹೊರತಂದ ಸಮಗ್ರಕೃತಿಗಳಿಗೂ ಈಗಿನ ಕನ್ನಡ ವಿಶ್ವವಿದ್ಯಾಲಯದ ಸಮಗ್ರ ಕೃತಿಗಳಿಗೂ ಯಾವ ರೀತಿ ಭಿನ್ನ? ಸಂಪಾದಕನೊಬ್ಬನ ತೆವಲಿಗೆ ಕನ್ನಡ ವಿಶ್ವವಿದ್ಯಾಲಯದ ಮೂರ್ಖತನಕ್ಕೆ ಇಡೀ ಪುಸ್ತಕಗಳನ್ನು ಭಾರೀ ಮೊತ್ತ ತೆತ್ತು ತೆಗೆದಿಟ್ಟುಕೊಳ್ಳಬೇಕೇ?
ಏಕೆಂದರೆ, ಏನೋ ಸಂಶೋಧನೆ ಮಾಡಿರಬಹುದು ಎಂಬ ಭ್ರಮೆ, ಬಿಡಿ ಬಿಡಿ ಪುಸ್ತಕಗಳು ಮಾರಾಟಕ್ಕೆ ಸಿಗದೇ ಇರುವುದು ನಾಡಿನ ಓದುಗರಿಗೆ ಮಾಡಿದ ಮೋಸವಲ್ಲವೇ ಇದು? ಇಷ್ಟಕ್ಕೂ ಈ ಸಂಪಾದಕನ ದುರಂಹಕಾರಕ್ಕೆ ಒಂದು ವಿಶ್ವವಿದ್ಯಾಲಯ ಹೀಗೆ ಬಲಿಯಾಗಬೇಕಾಗಿ ಬಂದಿತೇ? ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯ ರಚನೆಗೂ ಮುನ್ನವೇ 1931ರಲ್ಲಿಯೇ ಪ್ರಕಟವಾದ ‘ಸಮುದ್ರ ಲಂಘನ’ವೆಂಬ ಕಥನಕಾವ್ಯವನ್ನು ಸಂಪುಟ 2ರಲ್ಲಿ ಪ್ರಕಟಿಸಿರುವುದು ಮಾತ್ರವಲ್ಲದೇ ಕುವೆಂಪು ‘ಕೃತಿಸೂಚಿಯಲ್ಲಿ ಯೂ 1981ರಲ್ಲಿ ಎಂದೇ ದಾಖಲಿಸಿರುವುದು ಯಾವ ಬಗೆಯ ಸಂಪಾದಕತ್ವದ ಹಿರಿಮೆಯೋ ಕಂಡುಬರುತ್ತಿಲ್ಲ.
ಆ ಕೃತಿ ಶೋಧಿಸಿದ್ದು ಪ್ರೊ.ಕ.ವೆಂ. ರಾಜಗೋಪಾಲರು. ಪ್ರಕಟಿಸಿದ್ದು ಮೈಸೂರಿನ ಶ್ರೀ ಕುವೆಂಪು ವಿದ್ಯಾವರ್ಧಕ ಟ್ರಸ್ಟ್ನವರು. ಆ ಉಲ್ಲೇಖಗಳೇ ಇಲ್ಲವೇ? ಅದೇ ರೀತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರಕಟಿಸಿರುವ ಮಹಾಕಾವ್ಯದ ಹಸ್ತಪ್ರತಿಗೂ ಮುದ್ರಿತ ಕೃತಿಗೂ ಇರುವ ಎಷ್ಟೋ ಸೂಕ್ಷ್ಮ ಭೇದಗಳನ್ನು ಗುರುತಿಸಲಾಗದೆ ಇರುವುದು, ವಿದ್ವತ್ ಲೋಕಕ್ಕೆ ಮಾಡಿದ ಅವಮಾನ, ಅನ್ಯಾಯ, ಅಪಚಾರವಲ್ಲವೇ? ಇವಕ್ಕೂ ಮೀರಿ, ಹಾಸ್ಯಾಸ್ಪದ ಲಜ್ಜೆಗೇಡಿತನದ ಸಂಗತಿ ಎಂದರೆ: 1974ರಲ್ಲಿ ಪ್ರಕಟವಾದ ‘ಕುವೆಂಪು ಪತ್ರಗಳು’ (ಸಂಪಾದಕ ಹರಿಹರ ಪ್ರಿಯ) ಕೃತಿಯನ್ನು ಕುವೆಂಪು ಕೃತಿಸೂಚಿಯಲ್ಲಿ ಸೇರ್ಪಡೆ ಮಾಡಿರುವುದು.
ಸಾಕ್ಷಾತ್ ರಾಷ್ಟ್ರಕವಿ ಕುವೆಂಪು ಅವರೇ ತಮ್ಮ ಮಹಾನ್ ಕೃತಿ ‘ನೆನಪಿನ ದೋಣಿಯಲ್ಲಿ’ ಆತ್ಮಕಥೆಯಲ್ಲಿಯೇ, ‘ಹರಿಹರ ಪ್ರಿಯ
ಸಂಪಾದಿತ ಕುವೆಂಪು ಪತ್ರಗಳು’ಎಂದು ಹಲವೆಡೆ ಉಲ್ಲೇಖಿಸಿರುವಾಗ ಈ ಘನಂದಾರಿ ವಿದ್ವಾಂಸ ಕುಚೇಷ್ಟೆಗೋ ಹುಚ್ಚುತನಕ್ಕೋ ಓದುಗರಲ್ಲಿ, ಅಧ್ಯಯನಕಾರರಲ್ಲಿ ಸಂಶಯ ಬಿತ್ತಿರುವುದು ಕ್ಷಮಾರ್ಹವಲ್ಲ. ಅಲ್ಲದೆ, ‘ಕುವೆಂಪು ಪತ್ರಗಳು’ ಸಂಕಲನದಿಂದಲೇ ಹಲವು ಪತ್ರಗಳನ್ನು ಹೆಸರು ನಮೂದಿಸದೆ ಬಳಸಿಕೊಂಡು, ಸಮಗ್ರ ಕೃತಿ ಪ್ರಕಟಿಸಿರುವುದು ಒಂದು ಪ್ರತಿಷ್ಠಿತ ವಿಶ್ವವಿದ್ಯಾ ಲಯಕ್ಕೆ ಘನತೆ ತರುವಂಥಹುದೋ? ಇದು ಅಕಾಡೆಮಿಕ್ ಮಾದರಿಯೇ? ಕುವೆಂಪು ಅವರ ಅನೇಕ, ಅಮೂಲ್ಯ ಮುನ್ನುಡಿ ಗಳನ್ನು ಸಂಶೋಧಿಸಲಾಗದೆ ಮೈಗಳ್ಳತನದಿಂದ ‘ಕುಪ್ಪಳಿ ಆವೃತ್ತಿ’ಯನ್ನೇ ಮಕ್ಕೀಕಾ ಮಕ್ಕಿ ‘ಕನ್ನಡ ವಿಶ್ವವಿದ್ಯಾಲಯ ಆವೃತ್ತಿ’ ಯಲ್ಲಿ ಬಳಸಿಕೊಂಡಿರುವುದು ಹೀನ ಕುತಂತ್ರವೇ ಆಗಿರುವಂತಿದೆ. ಈ ಮಾತಿಗೆ ಸಂಪಾದಕೀಯದಲ್ಲಿ ವಿಷಪೂರಿತ ವಾಗಿಯೂ, ಕೀಳುಮಟ್ಟದಲ್ಲಿಯೂ, ವ್ಯಕ್ತಿ ದ್ವೇಷದಿಂದಲೂ ಬರೆದಿರುವುದು ಕುವೆಂಪು ಸಾಹಿತ್ಯಕ್ಕೆ ಶೋಭೆ ತರುವಂಥಹುದಲ್ಲ.
ಇದನ್ನು ಕನ್ನಡ ವಿಶ್ವವಿದ್ಯಾಲಯವು ಹೇಗೆ ಸಮರ್ಥಿಸಿಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಕೊನೆಗೆ ಅತ್ಯಂತ
ನೋವಿನಿಂದ ಎಲ್ಲರಲ್ಲಿಯೂ ನಾನು ಕೇಳುವುದು ಇಷ್ಟೆೆ: ಕನ್ನಡ ವಿಶ್ವವಿದ್ಯಾಲಯದಿಂದ ಆಗಬಾರದ ಅಚಾತುರ್ಯ ಉಂಟು ಮಾಡಿರುವ ಈ ಕುವೆಂಪು ಕೃತಿ ಸರಣಿ ಮಾರಾಟ ನಿಲ್ಲಿಸಿ, ಸಂಪಾದಕರ ಮೇಲೆ ಕ್ರಮ ಕೈಗೊಳ್ಳಬೇಕು.