Saturday, 23rd November 2024

Reunion: 5 ವರ್ಷದ ಬಳಿಕ ಮಕ್ಕಳಿಗೆ ಸಿಕ್ಕ ಹೆತ್ತಮ್ಮ, ಒಂದುಗೂಡಿಸಿದ ಮಂಗಳೂರಿನ ವೈಟ್‌ ಡೌಸ್‌

viral news

ಮಂಗಳೂರು: ಐದು ವರ್ಷದ ಹಿಂದೆ ಮಕ್ಕಳಿಂದ ಬೇರ್ಪಟ್ಟಿದ್ದ (Reunion) ತಾಯಿಯೊಬ್ಬರು (Mother) ಮಕ್ಕಳೊಂದಿಗೆ ಒಂದಾಗಿದ್ದಾರೆ. ಮಂಗಳೂರಿನ (Mangaluru news) ನಿರ್ಗತಿಕರ ಆಶ್ರಯ ತಾಣವೊಂದು ತಾಯಿ-ಮಕ್ಕಳ ಭಾವುಕ ಪುನರ್ಮಿಲನಕ್ಕೆ ಸಾಕ್ಷಿಯಾಗಿದೆ.

ನಿರ್ಗತಿಕರ ಆಶ್ರಯ ತಾಣ ನಡೆಸುತ್ತಿರುವ ಮಂಗಳೂರಿನ ವೈಟ್ ಡೌಸ್ ಸಂಸ್ಥೆ, ಅನಾಥೆಯಾಗಿದ್ದ ಮಹಿಳೆಗೆ ಆಶ್ರಯ ನೀಡಿದ್ದೂ ಅಲ್ಲದೆ, ಆಕೆ ಮಕ್ಕಳೊಂದಿಗೆ ಒಂದಾಗುವಂತೆಯೂ ಮಾಡಿದೆ. ದಾರಿ ತಪ್ಪಿ ಮನೆಯವರಿಂದ, ಕುಟುಂಬದಿಂದ ದೂರವಾಗಿದ್ದ, ಮಾನಸಿಕವಾಗಿ ಅನಾರೋಗ್ಯ ಹೊಂದಿದ್ದ ಮಹಿಳೆ ಇದೀಗ ಮತ್ತೆ ಮನೆ ಸೇರಿದ್ದಾರೆ.

ಮೂಲತಃ ಮುಂಬೈನ ಥಾಣೆಯ ಮಂಬ್ರಿಲ್ ಎಂಬಲ್ಲಿನ ನಿವಾಸಿ ಆಸ್ಮಾ ಈ ಕತೆಯ ನಾಯಕಿ. ಇವರು ಕೆಲ ವರ್ಷಗಳ ಹಿಂದೆ ಪತಿಯೊಂದಿಗೆ ವಿದೇಶದಲ್ಲಿದ್ದವರು. ಬಳಿಕ ಮುಂಬೈನ ಥಾಣೆಯ ಮಂಬ್ರಿಲ್‌ನಲ್ಲಿ ಪತಿಯ ಮನೆಯಲ್ಲಿ‌ ವಾಸವಿದ್ದರು. ಕೆಲ ಸಮಯದ ಬಳಿಕ ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದರು. 2019ರ ಮೇ ತಿಂಗಳಲ್ಲಿ ಮನೆಯಿಂದ ನಾಪತ್ತೆಯಾಗಿದ್ದರು.

ಪತಿ ಮನೆಯಿಂದ ಮುಂಬೈನ ಬೈಕುಲಾದಲ್ಲಿರುವ ತಮ್ಮ ತವರು ಮನೆಗೆ ರೈಲಿನಲ್ಲಿ ತೆರಳುತ್ತಿದ್ದಾಗ ಆಸ್ಮಾ ನಾಪತ್ತೆಯಾಗಿದ್ದರು. ಬಳಿಕ ದಾರಿ ತಪ್ಪಿ ಮಂಗಳೂರಿಗೆ ಬಂದಿದ್ದರು. ಮಂಗಳೂರಿನ ಪಣಂಬೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾನಸಿಕ ಅಸ್ವಸ್ಥರಂತೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ವೈಟ್ ಡೌಸ್ ನಿರ್ಗತಿಕರ ಆಶ್ರಯ ತಾಣದ ಸಂಸ್ಥಾಪಕಿ ಕೊರಿನ್ ರಸ್ಕಿನಾ ರಕ್ಷಿಸಿ, ತಮ್ಮ ಸಂಸ್ಥೆಗೆ ಕರೆ ತಂದು ಆಶ್ರಯ ನೀಡಿದ್ದರು.

ಬಳಿಕ ಆಸ್ಮಾ ಅವರಿಂದ ಮನೆಯ ವಿಳಾಸ ಪಡೆದು ಮನೆಯವರ ಪತ್ತೆ ಹಚ್ಚಲು ಪ್ರಯತ್ನಿಸಿದ್ದರು. ಆದರೆ ಪತ್ತೆ ಕಾರ್ಯಾಚರಣೆ ಸಫಲವಾಗಿರಲಿಲ್ಲ. ಇತ್ತೀಚೆಗೆ ಮುಂಬೈನ ಬೈಕುಲಾದ ತಮ್ಮ ತವರು ಮನೆಯ ವಿಳಾಸವನ್ನು ಆಸ್ಮಾ ನೀಡಿದ್ದರು. ವಿಳಾಸದ ಜಾಡು ಹಿಡಿದು ಬೈಕುಲಾ ಪೊಲೀಸ್ ಠಾಣೆಗೆ ಸಂಪರ್ಕಿಸಲಾಗಿತ್ತು. ವೈಟ್ ಡೌಸ್ ಸಂಸ್ಥೆಗೆ ಸಂಪರ್ಕಕ್ಕೆ ಸಿಕ್ಕ‌ ಆಸ್ಮಾ ಮನೆಯವರು ತಕ್ಷಣ ಫ್ಲೈಟ್ ಹತ್ತಿ ಬಂದಿದ್ದರು.

ಬಳಿಕ ಆಸ್ಮಾರನ್ನು‌ ಕುಟುಂಬ ಸದಸ್ಯರು ತಮ್ಮೊಂದಿಗೆ ಕರೆದೊಯ್ದಿದ್ದಾರೆ. ಬರೋಬ್ಬರಿ ಐದು ವರ್ಷದ ಬಳಿಕ ಕಳೆದುಕೊಂಡ ತಾಯಿಯನ್ನು ಮತ್ತೆ ಕಂಡು ಮಕ್ಕಳ ಕಣ್ಣಲ್ಲಿ ಕಣ್ಣೀರು ತುಂಬಿಬಂದಿದೆ. ಈ ಭಾವನಾತ್ಮಕ ಸನ್ನಿವೇಶಕ್ಕೆ ವೈಟ್ ಡೌಸ್ ಸಂಸ್ಥೆ ಸಾಕ್ಷಿಯಾಯಿತು.

ಇದನ್ನೂ ಓದಿ: Shah Rukh Khan: ಬಾಲಿವುಡ್‌ ಬಾದ್‌ಷಾಗೆ ಬೆದರಿಕೆ ಪ್ರಕರಣ; ಈ ಹಿಂದೆ SRK ವಿರುದ್ಧ ದೂರು ನೀಡಿದ್ದ ವಕೀಲನ ಫೋನ್‌ನಿಂದಲೇ ಕರೆ!