ಚೆನ್ನೈ : ಕಾಲಿವುಡ್‍ನ ಖ್ಯಾತ ನಟ, ರಾಜಕೀಯ ಮುಖಂಡ ನೆಪೋಲಿಯನ್ (Napolean) ಅವರ ಕಿರಿಯ ಪುತ್ರ ಧನುಷ್ (Dhanoosh) ಅವರ ವಿವಾಹ ನ. 7ರಂದು ಜಪಾನ್‍ನಲ್ಲಿ ಹಿಂದೂ ಸಂಪ್ರದಾಯದಂತೆ ಬಹಳ ಅದ್ದೂರಿಯಾಗಿ ನಡೆಯಿತು. ಈ ಸಮಾರಂಭಕ್ಕೆ ಕಾಲಿವುಡ್‌ನ ಹಲವು ನಟ-ನಟಿಯರು ಆಗಮಿಸಿ ನೂತನ ವಧು-ವರರರಿಗೆ ಶುಭಕೋರಿದ್ದಾರೆ. ಮಗ ಧನುಷ್ ಮದುವೆಯಾಗುವುದನ್ನು ನೋಡಿ ನಟ ನೆಪೋಲಿಯನ್ ಭಾವುಕರಾಗಿ ಕಣ್ಣೀರು ಸುರಿಸಿದ್ದಾರೆ (Napolean’s Son Dhanoosh Marriage). ಅದಕ್ಕೇನು ಕಾರಣ? ಇಲ್ಲಿದೆ ವಿವರ.
ನಟ ನೆಪೋಲಿಯನ್ ಅವರ ಕಿರಿಯ ಮಗ ಧನುಷ್ ಅವರಿಗೆ ಚಿಕ್ಕ ವಯಸ್ಸಿನಲ್ಲಿ ಸ್ನಾಯು ಕ್ಷಯ (Muscular dystrophy) ಎಂಬ ಕಾಯಿಲೆ ಇರುವುದು ಇದೆ. ಇದು ಒಂದು ಅಪರೂಪದ ಕಾಯಿಲೆಯಾಗಿದ್ದು, ಇದರಿಂದ ಸ್ನಾಯುಗಳು ಕ್ಷೀಣಿಸುವ ಕಾರಣ ಧನುಷ್ ಅವರಿಗೆ ನಡೆದಾಡಲು ಸಾಧ್ಯವಾಗದೆ ವ್ಹೀಲ್ ಚೇರ್ ಮೇಲೆಯೇ ಇರಬೇಕಾದ ಪರಿಸ್ಥಿತಿ ಇದೆ. ಇನ್ನು ಧನುಷ್ ಅವರು ಎಲ್ಲ ಕೆಲಸಕ್ಕೂ ಬೇರೆಯವರ ಮೇಲೆ ಅವಲಂಬಿತರಾಗಬೇಕಿತ್ತು. ಹಾಗಾಗಿ ಅವರಿಗೆ ಸರಿಯಾದ ಚಿಕಿತ್ಸೆ ಕೊಡಿಸಲು ನೆಪೋಲಿಯನ್ ತಮ್ಮ ಕುಟುಂಬದೊಂದಿಗೆ ಅಮೆರಿಕಕ್ಕೆ ಹೋಗಿ ನೆಲೆಸಿದ್ದರು.
ನಟ ನೆಪೋಲಿಯನ್ ಅವರಿಗೆ ವಯಸ್ಸಿಗೆ ಬಂದಿರುವ ಮಗನಿಗೆ ಮದುವೆ ಮಾಡಬೇಕೆಂಬ ಆಸೆ ಇತ್ತು. ಆದರೆ ಅವನನ್ನು ಈ ಪರಿಸ್ಥಿತಿಯಲ್ಲಿ ಯಾರು ಮದುವೆಯಾಗುತ್ತಾರೆ ಎಂದು ಕೊರಗುತ್ತಿದ್ದರು. ಕೊನೆಗೂ ಚೆನ್ನೈ ಮೂಲದ ಯುವತಿ ಅಕ್ಷಯಾ ಅವರು ಧನುಷ್ ಅವರನ್ನು ಮದುವೆಯಾಗಲು ಮುಂದೆ ಬಂದಿದ್ದಾರೆ. ಹಾಗಾಗಿ ಇವರ ಮದುವೆ ಸಮಾರಂಭವನ್ನು ಜಪಾನಿನಲ್ಲಿ ಅದ್ದೂರಿಯಾಗಿ ನೇರವೇರಿಸಲಾಗಿದೆ. ಇವರ ಮದುವೆ ಮೆಹೆಂದಿ ಮತ್ತು ಸಂಗೀತ್ ಸಮಾರಂಭಗಳಂತಹ ಎಲ್ಲ ಸಾಂಪ್ರದಾಯಿಕ ವಿವಾಹ ಆಚರಣೆಗಳನ್ನು ಒಳಗೊಂಡಿದ್ದವು. ಧನುಷ್ ಅಕ್ಷಯಾ ಅವರನ್ನು ಮದುವೆಯಾಗುವುದನ್ನು ನೋಡಿ ನೆಪೋಲಿಯನ್ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.
ಕಾರ್ತಿ, ಶರತ್ ಕುಮಾರ್, ರಾಧಿಕಾ, ಮೀನಾ, ಖುಷ್ಬು, ಸುಹಾಸಿನಿ ಮತ್ತು ಕಲಾ ಮಾಸ್ಟರ್ ಸೇರಿದಂತೆ ಕಾಲಿವುಡ್‍ನ ಹಲವು ಪ್ರಮುಖ ಸೆಲೆಬ್ರಿಟಿಗಳು ಧನುಷ್ ಅವರ ವಿವಾಹಕ್ಕಾಗಿ ಜಪಾನ್‍ಗೆ ಪ್ರಯಾಣ ಬೆಳೆಸಿದ್ದರು. ನಟ ಶಿವಕಾರ್ತಿಕೇಯನ್ ವಿಡಿಯೊ ಕಾಲ್ ಮೂಲಕ ದಂಪತಿಗತನ್ನು ಅಭಿನಂದಿಸಿದ್ದಾರೆ. ಈ ಕಾರ್ಯಕ್ರಮದ ಫೋಟೊಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ.
ಕನ್ನಡದಲ್ಲಿಯೂ ನಟಿಸಿದ್ದ ನೆಪೋಲಿಯನ್
1991ರಲ್ಲಿ ತೆರೆಕಂಡ ತಮಿಳಿನ ʼಪುದು ನೆಲ್ಲು ಪುದು ನಾಟುʼ ಸಿನಿಮಾ ಮೂಲಕ ನೆಪೋಲಿಯನ್ ಚಿತ್ರರಂಗಕ್ಕೆ ಕಾಲಿಟ್ಟರು. ಅದಾದ ಬಳಿಕ ಕನ್ನಡ, ತೆಲುಗು, ಮಲಯಾಳಂ, ಇಂಗ್ಲಿಷ್‌ನ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 1998ರಲ್ಲಿ ಬಿಡುಗಡೆಯಾದ ʼಗಮರ್ನಮೆಂಟ್ʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೂ ಕಾಲಿಟ್ಟದ್ದರು. 2009 – 2013 ಅವಧಿಯಲ್ಲಿ ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ಸಚಿವರಾಗಿಯೂ ಕರ್ತವ್ಯ ನಿರ್ವಹಿಸಿದ್ದರು.