Saturday, 23rd November 2024

Viral Video: 1 ವರ್ಷದಿಂದ ಸಾಗುತ್ತಲೇ ಇದೆ ದೈತ್ಯಕಾರದ ಟ್ರಕ್; ಇದು ಹೋಗುತ್ತಿರುವುದಾದರೂ ಎಲ್ಲಿಗೆ? ಇರುವುದಾದರೂ ಏನು?

Viral Video

ಗಾಂಧಿನಗರ: ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಹೆದ್ದಾರಿಗಳ ಗುಣಮಟ್ಟ ಹೆಚ್ಚಾಗಿದೆ. ಹಾಗಾಗಿ ದೂರದೂರಿಗೆ ಪ್ರಯಾಣ ಮಾಡುವುದು ಬಹಳ ಸುಲಭ ಎನಿಸಿದೆ. ತುಂಬಾ ಹೊತ್ತು ವಾಹನದಲ್ಲಿ ಕಳೆಯಬೇಕಾಗಿಲ್ಲ. ಇಷ್ಟೆಲ್ಲ ಅಭಿವೃದ್ಧಿ ಹೊಂದಿದರೂ ಭಾರತದ ಟ್ರಕ್‍ ಒಂದು ಗುಜರಾತ್‍ನಿಂದ ಹರಿಯಾಣಕ್ಕೆ ತಲುಪಲು ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲ ತೆಗೆದುಕೊಂಡಿದೆಯಂತೆ. ಈ ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ (Viral Video) ಆಗಿದೆ. ಹಾಗಾದರೆ ಈ ಟ್ರಕ್‍ ಯಾವುದು, ಅದರಲ್ಲಿ ಏನನ್ನು ಸಾಗಿಸಲಾಗುತ್ತಿದೆ ? ಎಂಬ ಮಾಹಿತಿ ಇಲ್ಲಿದೆ.

ಇತ್ತೀಚಿಗೆ ಯುಟ್ಯೂಬ್‍ನಲ್ಲಿ ವಿಡಿಯೊವೊಂದು ಹರಿದಾಡುತ್ತಿದ್ದು, ಅದರಲ್ಲಿ ಭಾರತದ ಅತಿ ಉದ್ದದ ಟ್ರಕ್ ಬಗ್ಗೆ ತಿಳಿಸಲಾಗಿದೆ. ಆಶ್ಚರ್ಯವೆಂದರೆ ಈ ಟ್ರಕ್‍ 400 ಚಕ್ರಗಳನ್ನು ಹೊಂದಿದೆ. ಈ ಬೃಹದಾಕಾರದ ಟ್ರಕ್‍ನಲ್ಲಿ ಕೋಕ್‍ ಡ್ರಮ್‍ ಅನ್ನು ಸಾಗಿಸಲಾಗುತ್ತಿದೆ. ಈ ಕೋಕ್ ಡ್ರಮ್‍ ತೈಲ ಸಂಸ್ಕರಣಾಗಾರಗಳಲ್ಲಿ ಬಳಸಲಾಗುವ ಪ್ರಮುಖ ಸಾಧನವಾಗಿದೆ.  ಇದರ ತೂಕ ಸುಮಾರು 8 ಲಕ್ಷ ಕೆಜಿ. ಹಾಗಾಗಿ ಇದನ್ನು ದೊಡ್ಡದಾದ ಟ್ರಕ್‍ನಲ್ಲಿಟ್ಟು ನಿಧಾನವಾಗಿ ಸಾಗಿಸಲಾಗುತ್ತಿದೆ. 

ಈ ಟ್ರಕ್‌ ಗುಜರಾತ್‍ನ ಕಾಂಡ್ಲಾ ಬಂದರಿನಿಂದ ಸುಮಾರು 1,150 ಕಿ.ಮೀ ದೂರದಲ್ಲಿರುವ ಹರಿಯಾಣದ ಪಾಣಿಪತ್‍ಗೆ ಹೋಗಲಿದೆ. 400 ಚಕ್ರಗಳನ್ನು ಹೊಂದಿರುವ ಟ್ರೈಲರ್ ಅನ್ನು ಎಳೆಯಲು ಮೂರು ವೋಲ್ವೋ ಟ್ರಕ್ ಗಳು ಬೇಕಾಗುತ್ತವೆ. ಈ ಟ್ರಕ್ ಹೊರಟು ಒಂದು ವರ್ಷವಾದರೂ ಇನ್ನೂ ತಲುಪಬೇಕಾಗಿದ್ದ ಸ‍್ಥಳವನ್ನು ತಲುಪಿಲ್ಲ. ಈ ಟ್ರಕ್‍ ತನ್ನ ಗಮ್ಯಸ್ಥಾನವನ್ನು ತಲುಪಲು ಇನ್ನೂ 2-3 ತಿಂಗಳು ತೆಗೆದುಕೊಳ್ಳಬಹುದು.  ಈ ಟ್ರಕ್ ದಿನಕ್ಕೆ ಸುಮಾರು 25 ಕಿ.ಮೀ. ಪ್ರಯಾಣಿಸುತ್ತದೆ. ಸುಮಾರು 27 ಸಿಬ್ಬಂದಿ ತಂಡವು ಈ ಟ್ರಕ್‍ ಅನ್ನು ನಿರ್ವಹಿಸುತ್ತಿದೆ. ಇದು ಒಂದು ವರ್ಷದಿಂದ ಪ್ರಯಾಣ ಮಾಡುತ್ತಿದ್ದ ಕಾರಣ ಹಾಗೂ ಟೈರ್‌ ಸ್ಫೋಟದಿಂದ ಈಗಾಗಲೇ ಇದರ 200 ಟೈರ್‌ಗಳನ್ನು ಬದಲಿಸಲಾಗಿದೆ.

ಇದನ್ನೂ ಓದಿ:ಮಗನ ಮದುವೆ ನೋಡಿ ಬಿಕ್ಕಿ ಬಿಕ್ಕಿ ಅತ್ತ ನಟ ನೆಪೋಲಿಯನ್; ಕಾರಣವೇನು?

ಅಂತಹ ದೊಡ್ಡ ಯಂತ್ರವನ್ನು ಚಲಿಸುವ ಲಾಜಿಸ್ಟಿಕ್ಸ್ ಹಲವು ಸವಾಲುಗಳನ್ನು ಒಳಗೊಂಡಿದೆ. ಅದರ ಚಲನೆಗೆ ಅನುಕೂಲವಾಗುವಂತೆ ರಸ್ತೆ ತಡೆಗಳಿಗೆ ಅನುಮತಿಗಳು ಅವಶ್ಯಕವಾಗಿರುತ್ತದೆ. ಇದು ಆಗಾಗ್ಗೆ ವಿಳಂಬಕ್ಕೆ ಕಾರಣವಾಗುತ್ತದೆ. ಹೆಚ್ಚುವರಿಯಾಗಿ, ಮಾರ್ಗದುದ್ದಕ್ಕೂ ತಾತ್ಕಾಲಿಕ ರಚನೆಗಳನ್ನು ನಿರ್ಮಿಸಬೇಕಾಗುತ್ತದೆ. ಇದು ಕೂಡ ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ವಿಸ್ತರಿಸುತ್ತದೆ.