Saturday, 23rd November 2024

Burqa Ban in Switzerland: ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ನಿಷೇಧಿಸಿದ ಸ್ವಿಟ್ಜರ್ಲ್ಯಾಂಡ್‌ ಸರ್ಕಾರ!

Burqa Ban in Switzerland

ಮುಸ್ಲಿಂ ಧರ್ಮದಲ್ಲಿ ಬುರ್ಖಾ ಧರಿಸಿಕೊಂಡೇ ಹೋಗಬೇಕೆಂಬ ಕಟ್ಟಳೆ ಇದೆ. ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸದೆ ಹೊರಗೆ ಕಾಲಿಡುವ  ಹಾಗಿಲ್ಲ. ಇದು ಅವರ ಧರ್ಮದಲ್ಲಿ ಮಹಿಳೆಯರು ಕಟ್ಟುನಿಟ್ಟಾಗಿ ಪಾಲಿಸಬೇಕಾದ ಪದ್ಧತಿಯಾಗಿದೆ. ಆದರೆ ಈ ಬುರ್ಖಾ ಧರಿಸುವಂತಹ ಪದ್ಧತಿಯನ್ನು ಜಗತ್ತಿನ ಹಲವು ದೇಶಗಳು ಬ್ಯಾನ್‍ ಮಾಡಿವೆ. ಇದೀಗ ಸ್ವಿಟ್ಜರ್ಲ್ಯಾಂಡ್‌ ಸರ್ಕಾರವು ಕೂಡ ಸಾರ್ವಜನಿಕ ಸ್ಥಳದಲ್ಲಿ ಕಣ್ಣು, ಮುಖ, ಮೂಗು ಬಾಯಿ ಮುಚ್ಚುವ ಮುಖಗವಸು ಧರಿಸುವುದಕ್ಕೆ ನಿಷೇಧ ಹೇರಿದೆ.

ಸ್ವಿಟ್ಜರ್ಲ್ಯಾಂಡ್‌ ಸರ್ಕಾರವು ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸಿ ಓಡಾಡುವಂತಿಲ್ಲ ಎಂಬ ಕಠಿಣ ಕಾನೂನು ಕ್ರಮವನ್ನು ಜಾರಿಗೊಳಿಸಿದೆ. ಹಾಗಾಗಿ ಸ್ವಿಟ್ಜರ್ಲ್ಯಾಂಡ್‍ನ ಸಾರ್ವಜನಿಕ ಸ್ಥಳಗಳಲ್ಲಿ ಕಣ್ಣು, ಮೂಗು, ಬಾಯಿ ಮುಖವನ್ನು ಮುಚ್ಚುವ ಬುರ್ಖಾ ಧರಿಸಿ ಓಡಾಡುವಂತಿಲ್ಲ. ಮುಂದಿನ ವರ್ಷದಲ್ಲಿ ಈ ಕಾನೂನು ಕ್ರಮ ಜಾರಿಯಾಗಲಿದೆ.  ಜನವರಿ 1ರಿಂದ ಬುರ್ಖಾ ನಿಷೇಧ ಕಾನೂನು ಜಾರಿಗೆ ಬರಲಿದೆ. ಅಲ್ಲದೇ ಈ ನಿಮಯವನ್ನು ಉಲ್ಲಂಘಿಸಿದವರಿಗೆ ದಂಡವನ್ನು ವಿಧಿಸಲಾಗುವುದು ಎಂದು ಸ್ವಿಟ್ಜರ್ಲ್ಯಾಂಡ್‌ ಸರ್ಕಾರ ತಿಳಿಸಿದೆ.

ಸ್ವಿಟ್ಜರ್ಲ್ಯಾಂಡ್‌ನ ಆಡಳಿತ ಸರ್ಕಾರ ಪೀಪಲ್ಸ್‌ ಪಾರ್ಟಿ ಬುರ್ಖಾ ಬ್ಯಾನ್‌ ಮಾಡುವಂತೆ ತಿಳಿಸಿದೆ. ಈ ಮಸೂದೆಗೆ  ಸ್ವಿಸ್‌ ಸಂಸತ್‌ ಮೇಲ್ಮನೆಯಲ್ಲಿ ಅಂಗೀಕಾರ ಕೂಡ ಸಿಕ್ಕಿದೆ. ಅಲ್ಲದೆ 2021ರಲ್ಲಿ ಬುರ್ಖಾ ಪದ್ಧತಿ ನಿಷೇಧ ಮಾಡುವ ಬಗ್ಗೆ  ಜನಾಭಿಪ್ರಾಯ ಸಂಗ್ರಹಣೆ ಮಾಡಿದಾಗ ಕೂಡ ಬಹುಸಂಖ್ಯೆಯ ಜನರು ಇದಕ್ಕೆ ಸಮ್ಮತಿ ನೀಡಿದ್ದರು. ಹಾಗಾಗಿ ಸ್ವಿಟ್ಜರ್ಲ್ಯಾಂಡ್‌ ಸರ್ಕಾರ ಬುರ್ಖಾ ನಿಷೇಧ ಮಾಡಲು ಮುಂದಾಗಿದೆ. ಆದರೆ ಸ್ವಿಟ್ಜರ್ಲ್ಯಾಂಡ್‌ ಸರ್ಕಾರ ಬುರ್ಖಾ ನಿಷೇಧ ನಿರ್ಧಾರಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಆದರೂ ಸ್ವಿಟ್ಜರ್ಲ್ಯಾಂಡ್‌ ಸರ್ಕಾರ ಪಟ್ಟು ಬಿಡದೆ ಬುರ್ಖಾ ನಿಷೇಧಕ್ಕೆ ಮುಂದಾಗಿದೆ. ಜನವರಿ 1, 2025 ರಿಂದ ಈ ಕಠಿಣ ಕಾನೂನು ಜಾರಿಗೆ ಬರಲಿದ್ದು, ಈ ನಿಯಮವನ್ನು ಉಲ್ಲಂಘಿಸಿದವರಿಗೆ 1,000 ಸ್ವಿಸ್‌ ಫ್ರಾಂಕ್‌ ಅಂದರೆ ಅಂದಾಜು 96,280 ರೂ. ದಂಡವನ್ನು ವಿಧಿಸಲಾಗುವುದು ಎಂಬ ಕಾನೂನನ್ನು ಸ್ವಿಟ್ಜರ್ಲ್ಯಾಂಡ್‌ ಸರ್ಕಾರ ಜಾರಿಗೊಳಿಸಿದೆ ಎಂದು ರಾಯಿಟರ್ಸ್‌ ಸುದ್ದಿ ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ:ಎರಡೂ ಕಾಲಿಲ್ಲದ ಭಿಕ್ಷುಕ ಸೇರಿ ಮೂವರಿಂದ ಸಂಶೋಧಕಿ ಮೇಲೆ ಅತ್ಯಾಚಾರ

ಹಾಗೇ ರಾಯಿಟರ್ಸ್‌ ಸುದ್ದಿ ಸಂಸ್ಥೆ ತಿಳಿಸಿದ ಪ್ರಕಾರ ಕೆಲವು ಸ್ಥಳಗಳು ಮತ್ತು ಸನ್ನಿವೇಶಗಳಲ್ಲಿ ಈ ನಿಯಮ ಅನ್ವಯವಾಗುವುದಿಲ್ಲ ಎನ್ನಲಾಗಿದೆ. ಅಂದರೆ ವಿಮಾನದಲ್ಲಿ ಪ್ರಯಾಣಿಸುವಾಗ, ರಾಜತಾಂತ್ರಿಕ ಸ್ಥಳಗಳು, ಪವಿತ್ರ ಸ್ಥಳಗಳು, ಪೂಜಾ ಆವರಣಗಳಲ್ಲಿ ಬುರ್ಖಾಗಳನ್ನು ಧರಿಸಬಹುದು. ಅಲ್ಲದೇ ಆರೋಗ್ಯ ಸಮಸ್ಯೆಗಳು ಹಾಗೂ ವಿಪರೀತ ಚಳಿಯ ಸಂದರ್ಭದಲ್ಲಿ ಮುಖ ಮುಚ್ಚುವಂತೆ ಬುರ್ಖಾಗಳನ್ನು ಧರಿಸಬಹುದು. ಜಾಹೀರಾತು ಮನರಂಜನಾ ಉದ್ದೇಶಗಳಿಗಾಗಿ ಬುರ್ಖಾ ಮತ್ತು ಮುಖ ಗವಸು ಧರಿಸಬಹುದು. ಇದಕ್ಕೆ ಸಂಬಂಧಿಸಿದ ಪ್ರಾಧಿಕಾರವು ಅನುಮತಿ ನೀಡಿದರೆ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗದಂತೆ ವೈಯಕ್ತಿಕ ರಕ್ಷಣೆಗಾಗಿ ಬುರ್ಖಾ ಅಥವಾ ಮುಖ ಗವಸು ಧರಿಸಬಹುದು ಎಂದು ಸ್ವಿಸ್‌ ಸರಕಾರ ಹೇಳಿದೆ.