ಟೋಕಿಯೋ: ರಸ್ತೆ ಬಿಡಿ ಮನೆಯ ಒಳಗೆ ಬರಿಗಾಲಿನಲ್ಲಿ ತಿರುಗಾಡುವಾಗ ಕಾಲುಗಳಿಗೆ ಧೂಳು, ಕೊಳೆ ಅಂಟಿಕೊಳ್ಳುವುದು ಸಾಮಾನ್ಯ. ಎಷ್ಟೇ ಸಾಕ್ಸ್, ಶೂ ಧರಿಸಿದರೂ ಧೂಳು, ಮಣ್ಣು ಕಾಲಿಗೆ ಅಂಟಿಕೊಳ್ಳುವುದು ಮಾತ್ರ ತಪ್ಪಲ್ಲ. ಆದರೆ ಜಪಾನಿನ ಬೀದಿಯಲ್ಲಿ ಬರಿಗಾಲಿನಲ್ಲಿ ಓಡಾಡಿದರೂ ಕಾಲಿಗೆ ಯಾವುದೇ ಧೂಳು, ಕೊಳೆ ಅಂಟಿಕೊಳ್ಳುವುದಿಲ್ಲ. ಯಾಕೆಂದರೆ ಜಪಾನ್ ಅಷ್ಟು ಸ್ವಚ್ಛವಾದ ದೇಶವಾಗಿದೆ. ಇದನ್ನು ಯುವತಿಯೊಬ್ಬರು ಸಾಕ್ಷಿ ಸಮೇತವಾಗಿ ನಿರೂಪಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ (Viral Video)ಆಗಿದೆ.
ಟ್ರಾವೆಲ್ ಮತ್ತು ಬ್ಯೂಟಿ ಇನ್ಫ್ಲುಯೆನ್ಸರ್ ಸಿಮ್ರಾನ್ ಬಲಾರ್ ಜೈನ್ ಈ ವಿಡಿಯೊವನ್ನು ಅಪ್ಲೋಡ್ ಮಾಡಿದ್ದಾರೆ. ಇದರಲ್ಲಿ ಅವರು ಜಪಾನ್ ಬೀದಿಗಳಲ್ಲಿ ಬರಿ ಸಾಕ್ಸ್ ಧರಿಸಿ ನಡೆಯುವುದರ ಮೂಲಕ ಜಪಾನ್ ಎಷ್ಟು ಸ್ವಚ್ಛವಾಗಿದೆ ಎಂಬುದನ್ನು ತೋರಿಸಿದ್ದಾರೆ. ವೈರಲ್ ವಿಡಿಯೊದಲ್ಲಿ ಮೊದಲಿಗೆ ಸಿಮ್ರಾನ್ ಬಟ್ಟೆ ಅಂಗಡಿಗೆ ಬಂದು ಅಲ್ಲಿ ಬಿಳಿ ಸಾಕ್ಸ್ಗಳನ್ನು ಖರೀದಿಸಿದ್ದಾರೆ. ನಂತರ ಅದನ್ನು ಕಾಲಿಗೆ ಧರಿಸಿಕೊಂಡು ನಂತರ ತಮ್ಮ ಬೂಟುಗಳನ್ನು ಕೈಯಲ್ಲಿ ಹಿಡಿದು ಜಪಾನಿನ ಬೀದಿ ಬೀದಿ ಸುತ್ತಿದ್ದಾರೆ. ಎಲ್ಲಾ ಕಡೆ ಸುತ್ತಾಡಿದ ನಂತರ ಅವರು ಬಂದು ತಮ್ಮ ಸಾಕ್ಸ್ ತೋರಿಸಿದಾಗ ಅದರಲ್ಲಿ ಒಂದೇ ಒಂದು ಕಲೆ ಇಲ್ಲ. ಅವು ಅಂಗಡಿಯಿಂದ ತಂದಾಗ ಎಷ್ಟು ಸ್ವಚ್ಛವಾಗಿತ್ತೋ ಅಷ್ಟೇ ಸ್ವಚ್ಛವಾಗಿತ್ತು.
ಹಾಗಾಗಿ ಈ ವಿಡಿಯೊಗೆ ಅನೇಕರು ಪ್ರತಿಕ್ರಿಯಿಸಿದ್ದಾರೆ. ಜಪಾನ್ ಅತ್ಯಂತ ಸ್ವಚ್ಛವಾಗಿದೆ ಎಂದು ಅವರ ಪೋಸ್ಟ್ಗೆ ಕಾಮೆಂಟ್ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. “ನಾನು ಇದೀಗ ಟೋಕಿಯೊದಲ್ಲಿದ್ದೇನೆ ಮತ್ತು ಜಪಾನ್ ಎಷ್ಟು ಸ್ವಚ್ಛವಾಗಿದೆ ಎಂದು ನೀವು ಸರಿಯಾಗಿಯೇ ಹೇಳಿದ್ದೀರಿ. ಇಲ್ಲಿ ನಿಮಗೆ ಕಸ ಎಸೆಯಲು ಮನಸ್ಸಾಗುವುದಿಲ್ಲ” ಎಂದು ಒಬ್ಬರು ಬರೆದಿದ್ದಾರೆ. ಇನ್ನೊಬ್ಬ ವ್ಯಕ್ತಿ, “ಹೌದು ನಾನು ಕಳೆದ ತಿಂಗಳು ಅಲ್ಲಿಗೆ ಹೋಗಿದ್ದೆ … ಜಪಾನ್ ಸೂಪರ್ ಕ್ಲೀನ್ ಆಗಿದೆ” ಎಂದಿದ್ದಾರೆ. ಆದರೆ ಮತ್ತೊಬ್ಬರು “ಜಪಾನ್ ಸ್ವಚ್ಛವಾಗಿದೆ ಎಂದು ನಾನು ನಂಬುತ್ತೇನೆ ಆದರೆ ನಾನು ಈ ವಿಡಿಯೊವನ್ನು ನಂಬಲು ಸಾಧ್ಯವಿಲ್ಲ. ಬಿಳಿ ಸಾಕ್ಸ್ ಬಿಳಿಯಾಗಿಯೇ ಇದೆ ಎಂದರೆ ಇದು ನಂಬಲು ಅಸಾಧ್ಯ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:18 ಟನ್ ಫುಡ್, 25,000 ಬಾಟಲಿ ವೈನ್! ಮರುಭೂಮಿಯಲ್ಲೇ ಕಾಡು ಸೃಷ್ಟಿಸಿ ಅದ್ಧೂರಿ ಪಾರ್ಟಿ!
ಜಪಾನ್ ಒಂದು ಅಭಿವೃದ್ಧಿ ಹೊಂದಿದ ದೇಶವಾಗಿದೆ. ಇಲ್ಲಿನ ಜನರು ಬೀದಿಗಳನ್ನು ತಮ್ಮ ಮನೆಯಂತೆ ಸ್ವಚ್ಛವಾಗಿಟ್ಟುಕೊಳ್ಳುತ್ತಾರೆ. ಹಾಗೇ ಇಲ್ಲಿ ಎಲ್ಲೆಂದರಲ್ಲಿ , ಉಗುಳುವುದು ಕಸ ಎಸೆಯುವಂತಿಲ್ಲ. ಒಂದು ವೇಳೆ ಮಾಡಿದರೆ ಅವರಿಗೆ ದಂಡ ವಿಧಿಸಲಾಗುತ್ತದೆ.