ನ್ಯೂಜಿಲೆಂಡ್: ಸೋಶಿಯಲ್ ಮೀಡಿಯಾಗಳಲ್ಲಿ ಮನುಷ್ಯರಿಗೆ ಸಂಬಂಧಪಟ್ಟ ವಿಡಿಯೊಗಳು ಮಾತ್ರವಲ್ಲ ಪ್ರಾಣಿ, ಪಕ್ಷಿಗಳಿಗೆ ಸಂಬಂಧಪಟ್ಟ ವಿಡಿಯೊಗಳು ಹರಿದಾಡುತ್ತಿರುತ್ತವೆ. ಅದೇ ರೀತಿ ಇದೀಗ ನ್ಯೂಜಿಲೆಂಡ್ನಲ್ಲಿ ಹೆದ್ದಾರಿಯಲ್ಲಿ ಅಳವಡಿಸಲಾದ ಟ್ರಾಫಿಕ್ ಕ್ಯಾಮೆರಾ ಮುಂದೆ ಬಂದ ‘ಆಂಗ್ರಿ’ ಮೈನಾ ಹಕ್ಕಿಯೊಂದು ಕ್ಯಾಮೆರಾಗೆ ಪೋಸ್ ನೀಡಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ವೈರಲ್ (Viral Video)ಆಗಿದೆ.
ನ್ಯೂಜಿಲೆಂಡ್ ಸಾರಿಗೆ ಸಂಸ್ಥೆ ವಾಕಾ ಕೊಟಾಹಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಹನ್ನೊಂದು ಸೆಕೆಂಡುಗಳ ಈ ವಿಡಿಯೊದಲ್ಲಿ, ಕಪ್ಪು ಮತ್ತು ಹಳದಿ ಬಣ್ಣದ ಉಷ್ಣವಲಯದ ‘ಆಂಗ್ರಿ’ ಮೈನಾ ಹಕ್ಕಿ ಆಕ್ಲೆಂಡ್ ಬಳಿಯ ರಸ್ತೆಯಲ್ಲಿ ವಾಹನ ಸಂಚಾರದ ದೃಶ್ಯವನ್ನು ಸೆರೆಹಿಡಿಯುವ ಕ್ಯಾಮೆರಾ ಬಳಿ ಬಂದು ಪೋಸ್ ನೀಡಿದೆ.
‘ಆಂಗ್ರಿ’ ಮೈನಾ ಹಕ್ಕಿ ನ್ಯೂಜಿಲೆಂಡ್ನಲ್ಲಿ ಹೆಚ್ಚು ಕಂಡುಬರುವಂತಹ ಹಕ್ಕಿಯಾಗಿದೆ. ಇದು ಇತರ ಪಕ್ಷಿಗಳ ಜೊತೆ ಆಕ್ರಮಣಕಾರಿಯಾಗಿ ವರ್ತಿಸುತ್ತವೆ. ಅವುಗಳ ಗೂಡುಗಳನ್ನು ನಾಶಪಡಿಸುತ್ತದೆ, ಸ್ಥಳೀಯ ಹಣ್ಣುಗಳನ್ನು ತಿನ್ನುತ್ತದೆ ಮತ್ತು ಇತರ ಪಕ್ಷಿಗಳ ಗೂಡುಗಳನ್ನು ಸ್ವಾಧೀನಪಡಿಸಿಕೊಳ್ಳುತ್ತದೆ, ಆದ್ದರಿಂದ ಇದು ಖಂಡಿತವಾಗಿಯೂ ನಮ್ಮ ಕ್ಯಾಮೆರಾಗಳನ್ನು ಹಾನಿಗೊಳಿಸಲು ಬಂದಿರಬಹುದು ಎಂದು ಕ್ಯಾಮೆರಾಗಳನ್ನು ನಿರ್ವಹಿಸುವ ಜವಾಬ್ದಾರಿ ಹೊಂದಿರುವ ನ್ಯೂಜಿಲೆಂಡ್ ಸಾರಿಗೆ ಸಂಸ್ಥೆ ಈ ವಿಡಿಯೊದ ಶೀರ್ಷಿಕೆಯಲ್ಲಿ ತಿಳಿಸಿದೆ. ಹಾಗೇ ಆ ಹಕ್ಕಿ ಅಲ್ಲಿ ಹೆಚ್ಚು ಸಮಯ ಇರಲಿಲ್ಲ, ಕೂಡಲೇ ಹಾರಿಹೋಗಿದೆ ಎಂದು ಸಂಸ್ಥೆ ಹೇಳಿದೆ.
“ನಾವು ದಿನದ 24 ಗಂಟೆಗಳು, ವಾರದ ಏಳು ದಿನಗಳು ಕ್ಯಾಮೆರಾದ ಮೂಲಕ ವಾಹನ ಸಂಚಾರವನ್ನು ಮೇಲ್ವಿಚಾರಣೆ ಮಾಡುತ್ತೇವೆ. ಈ ನಡುವೆ ಈ ರೀತಿಯಲ್ಲಿ ಮೈನಾ ಹಕ್ಕಿಗಳ ಕಿರಿಕಿರಿಯಿಂದಾಗಿ ರಸ್ತೆಗಳನ್ನು ನೋಡಲು ಸ್ವಲ್ಪ ಕಷ್ಟವಾಗುತ್ತಿದೆ. ಅದೃಷ್ಟವಶಾತ್ ಮೈನಾ ಹೆಚ್ಚು ಕಾಲ ಅಲ್ಲಿರಲಿಲ್ಲ. ಹಾಗಾಗಿ ತಕ್ಷಣ ನಮ್ಮ ಗಮನವನ್ನು ವಾಹನ ಸಂಚಾರದ ಮೇಲೆ ಇರಿಸಲು ಸಾಧ್ಯವಾಯಿತು ಎಂದು ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ದೈತ್ಯ ಕೋಳಿಯಾಕಾರದಲ್ಲಿರೋ ಹೊಟೇಲ್ ನೋಡಿದ್ದೀರಾ? ಗಿನ್ನೆಸ್ ದಾಖಲೆ ಬರೆದ 114 ಅಡಿ ಎತ್ತರದ ಚಿಕನ್ ಶೇಪ್ ರೆಸಾರ್ಟ್
1860 ರ ದಶಕದಲ್ಲಿ ನ್ಯೂಜಿಲೆಂಡ್ನಲ್ಲಿ ಕಂಡು ಬಂದ ಈ ಮೈನಾ ಪಕ್ಷಿಗಳು ಉತ್ತರ ದ್ವೀಪದಾದ್ಯಂತ ವ್ಯಾಪಕವಾಗಿ ಕಂಡುಬರುತ್ತವೆ. ಅನುಕರಣೆ ಕೌಶಲ್ಯಗಳಿಗೆ ಹೆಸರುವಾಸಿಯಾದ ಈ ಹಕ್ಕಿಗಳು ಸ್ಥಳೀಯ ಪರಿಸರ ವ್ಯವಸ್ಥೆಗಳ ಮೇಲೆ ಹಾನಿಯುಂಟುಮಾಡುವುದರಿಂದ ಅಲ್ಲಿನ ಜನರು ಇವುಗಳನ್ನು ಆಕ್ರಮಣಕಾರಿ ಹಕ್ಕಿ ಎಂದು ಕರೆಯುತ್ತಾರೆ.