• ಬೆಂಗಳೂರಿನಲ್ಲಿ ಅಮೆಜಾನ್-ನ ಹೊಸ ಫ್ಯೂಚರ್ ಎಂಜಿನಿಯರ್ ಮೇಕರ್‌ಸ್ಪೇಸ್ : ರೋಬೊಟಿಕ್ಸ್, ಕೃತಕ ಬುದ್ಧಿಮತ್ತೆ (ಎಐ) ಮತ್ತು 3ಡಿ ಪ್ರಿಂಟಿಂಗ್ ಕಲಿಕೆ ಮೂಲಕ ಯುವಜನರ ಸಬಲೀಕರಣ ಉದ್ದೇಶಕ್ಕೆ ಅಮೆಜಾನ್, ಬೆಂಗಳೂರಿನಲ್ಲಿ ತನ್ನ ಮೊದಲ ಉಚಿತ ಫ್ಯೂಚರ್ ಎಂಜಿನಿಯರ್ ಮೇಕರ್ಸ್ಪೇಸ್ ಆರಂಭಿಸಿದೆ.
• ಯುವ ಆವಿಷ್ಕಾರರ ಸಬಲೀಕರಣ : ಪ್ರಾಥಮಿಕ ಕಲಿಕಾರ್ಥಿಗಳಿಂದ ಪರಿಣತರವರೆಗೆ ವಿವಿಧ ಕೌಶಲಗಳ, ವೈವಿಧ್ಯಮಯ ಕಾರ್ಯಕ್ರಮಗಳನ್ನು ಮೇಕರ್ಸ್ಪೇಸ್ ನೀಡಲಿದೆ. ಇಲ್ಲಿ ಪರಿಣತ ಮಾರ್ಗದರ್ಶಕರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕಲಿಯಬಹುದು, ಪ್ರಯೋಗ ಮಾಡಬಹುದು ಮತ್ತು ಸಹ ವಿದ್ಯಾರ್ಥಿಗಳ ಜೊತೆಗೆ ಸಹಯೋಗ ಸಾಧಿಸಬಹುದು.
• ಡಿಜಿಟಲ್ ಸಮಾನತೆಯ ಪೋಷಣೆ : ಡಿಜಿಟಲ್ ತಂತ್ರಜ್ಞಾನ ಬಳಕೆಯಲ್ಲಿ ಪ್ರತಿಯೊಬ್ಬರಿಗೂ ಸಮಾನ ಅವಕಾಶ ಕಲ್ಪಿಸುವ ಉಪಕ್ರಮವು ಕಂಪ್ಯೂಟರ್ ವಿಜ್ಞಾನ ಶಿಕ್ಷಣದಲ್ಲಿ ಸಮಾನ ಅವಕಾಶಗಳನ್ನು ಒದಗಿಸುವ ಅಮೆಜಾನ್ನ ವಿಶಾಲ ಬದ್ಧತೆಯ ಭಾಗವಾಗಿದೆ. ಸಂಸ್ಥೆಗಳೊಂದಿಗೆ ಪಾಲುದಾರಿಕೆ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಉಚಿತ ಲಭ್ಯತೆ ಒದಗಿಸುವ ಮೂಲಕ, ಅಮೆಜಾನ್ ಮುಂದಿನ ಪೀಳಿಗೆಯ ತಂತ್ರಜ್ಞಾನ ಪ್ರತಿಭಾನ್ವಿತರಿಗೆ ಸ್ಫೂರ್ತಿ ನೀಡುವ ಗುರಿ ಹೊಂದಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ತನ್ನ ಮೊದಲ ಅಮೆಜಾನ್ ಫ್ಯೂಚರ್ ಎಂಜಿನಿಯರ್ ಮೇಕರ್‌ಸ್ಪೇಸ್ ಪ್ರಾರಂಭಿಸಿರುವುದಾಗಿ ಅಮೆಜಾನ್ ಇಂದು ಇಲ್ಲಿ ತಿಳಿಸಿದೆ.
2025ರ ವೇಳೆಗೆ 4,000ಕ್ಕೂ ಹೆಚ್ಚು ಯುವ ಪ್ರತಿಭಾನ್ವಿತರನ್ನು ಸಬಲೀಕರಣಗೊಳಿಸಲು ಇದು ನೆರವಾಗಲಿದೆ. ದಿ ಇನ್ನೋವೇಷನ್ ಸ್ಟೋರಿ ಜೊತೆಗಿನ ಸಹಭಾಗಿತ್ವದಲ್ಲಿ, ಈ ಉಪಕ್ರಮವು ಅವಕಾಶ ವಂಚಿತ 5ನೇ ತರಗತಿಯಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಶಿಷ್ಟ ಬಗೆಯ ಕಲಿಕೆಯ ಸೌಲಭ್ಯ ಒದಗಿಸಲಿದೆ. ತನ್ಮಯಗೊಳಿಸುವ ಕಲಿಕೆಯ ಅನುಭವಗಳು, ಮಕ್ಕಳ ಕುತೂಹಲ ತಣಿಸುವಿಕೆ ಮತ್ತು ಭವಿಷ್ಯದಲ್ಲಿ ಬದಲಾವಣೆ ತರಲು ಅವರನ್ನು ಸಜ್ಜುಗೊಳಿಸಲು ಅಗತ್ಯವಾದ ನಾವೀನ್ಯತಾ ತಂತ್ರಜ್ಞಾನ ಕೌಶಲಗಳೊಂದಿಗೆ ಅವರನ್ನು ಸಜ್ಜುಗೊಳಿಸ ಲಾಗುವುದು.
ಎಲ್ಲಾ ಹಂತದ ವಿದ್ಯಾರ್ಥಿಗಳಿಗೆ ಈ ಸ್ಟುಡಿಯೊ ವೈವಿಧ್ಯಮಯ ಕಾರ್ಯಕ್ರಮಗಳನ್ನು ಒದಗಿಸಲಿದೆ. ಆರಂಭಿಕ ಕಲಿಕಾರ್ಥಿಗಳಿಗೆ ರೋಬೊಟಿಕ್ಸ್ ಮತ್ತು ಕೋಡಿಂಗ್ನ ಪ್ರಾಥಮಿಕ ಕಲಿಕೆಗೆ ಅಲ್ಪಾವಧಿಯ 3 ರಿಂದ 4 ಗಂಟೆಗಳ ತರಬೇತಿ ಕಾರ್ಯಕ್ರಮಗಳು ಇರಲಿವೆ. ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಬಯಸುವವರಿಗೆ, ಸುಧಾರಿತ ವಿಷಯಗಳನ್ನು ಕರಗತ ಮಾಡಿಕೊಳ್ಳಲು ಸುದೀರ್ಘ 6-ಗಂಟೆಗಳ ಕಾರ್ಯಕ್ರಮಗಳಿವೆ. ಎರಡು ದಿನಗಳ ಅವಧಿಯಲ್ಲಿ ಸುಧಾರಿತ ರೋಬೊಟಿಕ್ಸ್, ಪ್ರೋಗ್ರಾಮಿಂಗ್, ಪ್ರೊಟೊಟೈಪಿಂಗ್ ಮತ್ತು ವಿನ್ಯಾಸ ಕಲಿಕೆಯ ಪ್ರಾಥಮಿಕ ಪಾಠಗಳು ಇರಲಿವೆ. ಪ್ರತಿಭಾನ್ವಿತ ವಿದ್ಯಾರ್ಥಿಗಳು ಈ ವಿಷಯಗಳಲ್ಲಿ ಪರಿಣತಿ ಸಾಧಿಸಲು ಒಂದಕ್ಕಿಂತ ಹೆಚ್ಚು ತಿಂಗಳುಗಳ ಕಲಿಕಾ ಕಾರ್ಯಕ್ರಮಗಳು ಇರಲಿವೆ. ಈ ಕಾರ್ಯಕ್ರಮಗಳು ವಿದ್ಯಾರ್ಥಿಗಳು ಒಟ್ಟಾಗಿ ಕೆಲಸ ಮಾಡಲು, ರೋಬೊಟ್‌ಗಳನ್ನು ವಿನ್ಯಾಸಗೊಳಿಸಲು ಮತ್ತು ಇತರ ವಿದ್ಯಾರ್ಥಿಗಳ ಜೊತೆಗೆ ಸ್ಪರ್ಧಿಸಲು ನೆರವಾಗಲಿವೆ. ವಿದ್ಯಾರ್ಥಿಗಳು ತಮ್ಮ ರೋಬೊಟ್‌ಗಳನ್ನು ತಯಾರಿಸಲು ಮತ್ತು ಪರೀಕ್ಷಿಸಲು ಸ್ಟುಡಿಯೊದಲ್ಲಿ ಪ್ರತ್ಯೇಕ ಸ್ಥಳಾವಕಾಶ ಇರಲಿದೆ.
ಅಮೆಜಾನ್ ಫ್ಯೂಚರ್ ಎಂಜಿನಿಯರ್ ಕಾರ್ಯಕ್ರಮದ ಇಂಡಿಯಾ ಲೀಡ್ ಅಕ್ಷಯ್ ಕಶ್ಯಪ್ ಅವರು ಮಾತನಾಡಿ , “ಬೆಂಗಳೂರಿನಲ್ಲಿ ನಮ್ಮ ಮೊದಲ ಅಮೆಜಾನ್ ಫ್ಯೂಚರ್ ಎಂಜಿನಿಯರ್ ಮೇಕರ್‌ಸ್ಪೇಸ್ ತೆರೆಯಲು ನಾವು ಉತ್ಸುಕರಾಗಿದ್ದೇವೆ. ಭವಿಷ್ಯದ ಆವಿಷ್ಕಾರರು ಆಗಲು ಬಯಸುವ ಸಾವಿರಾರು ಯುವ ಮನಸ್ಸುಗಳಿಗೆ ಅಗತ್ಯವಾದ ಪರಿಕರಗಳು, ಜ್ಞಾನ ಮತ್ತು ಮಾರ್ಗದರ್ಶನವನ್ನು ಈ ಅತ್ಯಾಧುನಿಕ ಸೌಲಭ್ಯವು ಒದಗಿಸಲಿದೆ. ರೋಬೊಟಿಕ್ಸ್, ಕೃತಕ ಬುದ್ಧಿಮತ್ತೆ ಮತ್ತು 3ಡಿ ಮುದ್ರಣದಲ್ಲಿ ಪ್ರಾಯೋಗಿಕ ಅನುಭವಗಳನ್ನು ನೀಡುವ ಮೂಲಕ, ನಾವು ಮುಂದಿನ ಪೀಳಿಗೆಯ ತಂತ್ರಜ್ಞಾನ ಪ್ರತಿಭಾನ್ವಿತರನ್ನು ಸನ್ನದ್ಧಗೊಳಿಸುತ್ತಿದ್ದೇವೆ. ಜೊತೆಗೆ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (ಎಸ್ಟಿಇಎಂ) ಕ್ಷೇತ್ರಗಳಲ್ಲಿ ಜೀವಮಾನಪೂರ್ತಿ ಒಲವು ಹೊಂದಿರುವುದಕ್ಕೆ ಸ್ಪೂರ್ತಿ ನೀಡಲಿದ್ದೇವೆ. ಡಿಜಿಟಲ್ ಸಮಾನತೆ ಒದಗಿಸಲು ಮತ್ತು ಎಲ್ಲರಿಗೂ ಅವಕಾಶಗಳನ್ನು ಸೃಷ್ಟಿಸುವ ನಮ್ಮ ಬದ್ಧತೆಯ ಆರಂಭ ಇದಾಗಿದೆʼ ಎಂದು ಹೇಳಿದ್ದಾರೆ.
ಅಮೆಜಾನ್ ಫ್ಯೂಚರ್ ಎಂಜಿನಿಯರ್ ಮೇಕರ್‌ಸ್ಪೇಸ್– ಇದೊಂದು ಅತ್ಯಾಧುನಿಕ ಸೌಲಭ್ಯವಾಗಿದ್ದು, ರೋಬೋಟ್‌ಗಳ ಪರಿಕಲ್ಪನೆ, ವಿನ್ಯಾಸ, ತಯಾರಿಕೆ ಮತ್ತು ಕಾರ್ಯಾಚರಣೆ ಒಳಗೊಂಡಿರುವ ರೋಬೊಟಿಕ್ಸ್, ಕೃತಕ ಬುದ್ಧಿಮತ್ತೆ (ಎಐ) ಮತ್ತು 3ಡಿ ಮುದ್ರಣದಲ್ಲಿ ಉಚಿತ ಕಲಿಕೆಯ ಅವಕಾಶಗಳನ್ನು ಒದಗಿಸಲಿದೆ. ವಿದ್ಯಾರ್ಥಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಕಂಪ್ಯೂಟರ್ ಸಂವಹನ ಮತ್ತು ಮಾಹಿತಿ ವಿನಿಮಯದ ಆನ್ಲೈನ್ ಕಲಿಕೆಯನ್ನು ಮುಂಚಿತವಾಗಿಯೇ ಕಾಯ್ದಿರಿಸಬಹುದು. 40 ಕಲಿಕಾರ್ಥಿಗಳು ಭಾಗವಹಿಸುವುದಕ್ಕೆ ಅವಕಾಶ ದೊರೆಯಲಿದೆ. 3ಡಿ ಪ್ರಿಂಟರ್, ಯಂತ್ರಗಳು, ಪವರ್ ಟೂಲ್, ಎಲೆಕ್ಟ್ರಾನಿಕ್ಸ್ ಉಪಕರಣ ಮತ್ತು ಅಂತರರಾಷ್ಟ್ರೀಯ ಸ್ಪರ್ಧೆಗಳಿಗೆ ನೆರವಾಗುವ ಕಿಟ್‌ಗಳಂತಹ ಅತ್ಯಾಧುನಿಕ ಉಪಕರಣಗಳನ್ನು ಈ ಮೇಕರ್ಸ್ಪೇಸ್ ಹೊಂದಿದೆ.
ಕಲಿಕೆಯ ಅನುಭವವನ್ನು ಇನ್ನಷ್ಟು ಹೆಚ್ಚಿಸಲು, ಪರಿಣತ ಮಾರ್ಗದರ್ಶಕರು ಮತ್ತು ಅಮೆಜಾನ್ ಸ್ವಯಂಸೇವಕರು ಅಗತ್ಯ ಮಾರ್ಗದರ್ಶನ ನೀಡಲಿದ್ದಾರೆ. ವಿದ್ಯಾರ್ಥಿಗಳಲ್ಲಿ ಕೋಡಿಂಗ್ ಕಲಿಕೆ, ಸಮಸ್ಯೆ-ಪರಿಹರಿಸುವಿಕೆ ಮತ್ತು ವಿನ್ಯಾಸ ಚಿಂತನೆಯಂತಹ ನಿರ್ಣಾಯಕ ಕೌಶಲಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಲಿದ್ದಾರೆ. ತಂತ್ರಜ್ಞಾನ, ಮಾರ್ಗದರ್ಶನ ಮತ್ತು ಪ್ರಾಯೋಗಿಕ ಅನುಭವದ ಈ ವಿಶಿಷ್ಟ ಮಿಶ್ರಣವು, ಭವಿಷ್ಯಕ್ಕೆ ಸನ್ನದ್ಧ ಸ್ಥಿತಿಯಲ್ಲಿ ಇರುವ ಆವಿಷ್ಕಾರರಾಗಲು ವಿದ್ಯಾರ್ಥಿಗಳನ್ನು ಸಿದ್ಧಪಡಿಸಲಿದೆ.
ಇನ್ನೋವೇಷನ್ ಸ್ಟೋರಿ ಸಂಸ್ಥಾಪಕಿ ಮೀನಲ್ ಮಜುಂದಾರ್ ಅವರು ಮಾತನಾಡಿ , “ಕಂಪ್ಯೂಟರ್ ವಿಜ್ಞಾನ ಮತ್ತು ರೋಬೊಟಿಕ್ಸ್‌ನಲ್ಲಿ ಜಾಗರೂಕತೆಯಿಂದ ರೂಪಿಸಲಾಗಿರುವ, ಮಾರ್ಗದರ್ಶಕರ ನೇತೃತ್ವದಲ್ಲಿನ ಕಲಿಕಾ ಕಾರ್ಯಕ್ರಮ ಮತ್ತು ನೇರವಾಗಿ ಭಾಗಿಯಾಗಿ ಪಡೆಯುವ ಕಲಿಕಾ ಅನುಭವದ ನೆರವಿನಿಂದ ಬದಲಾವಣೆಯ ಹರಿಕಾರರಾಗಲು ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದು ನಮ್ಮ ಉದ್ದೇಶವಾಗಿದೆ. ಅಮೆಜಾನ್ ಭವಿಷ್ಯದ ಎಂಜಿನಿಯರ್ ಕಾರ್ಯಕ್ರಮದ ಜ್ಞಾನದ ಪಾಲುದಾರರಾಗಿರುವ ನಾವು ಅವಕಾಶ ವಂಚಿತ ಸಮುದಾಯಗಳ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ವಿಶಿಷ್ಟ ಅನುಭವ ನೀಡುವ ತರಬೇತಿ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಿದ್ದೇವೆ. ಯುವಜನರಲ್ಲಿ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದ ವೃತ್ತಿಗಳ ಕೌಶಲಗಳನ್ನು ಅಳವಡಿಕೆ ಮಾಡುವುದು ನಮ್ಮ ಗುರಿಯಾಗಿದೆʼ ಎಂದು ಹೇಳಿದ್ದಾರೆ.
ಅಮೆಜಾನ್ ಫ್ಯೂಚರ್ ಎಂಜಿನಿಯರ್ ಒಂದು ಪ್ರಮುಖ ದಾನ – ಧರ್ಮದ ಉಪಕ್ರಮವಾಗಿದ್ದು, ಹಿಂದುಳಿದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ವಿಜ್ಞಾನ ಶಿಕ್ಷಣದಲ್ಲಿ ಸಮಾನ ಅವಕಾಶಗಳನ್ನು ಒದಗಿಸುವ ಉದ್ದೇಶ ಒಳಗೊಂಡಿದೆ. ಈ ಸಮಗ್ರ ಸ್ವರೂಪದ ಕಲಿಕಾ ಕಾರ್ಯಕ್ರಮವು ಪ್ರಾಥಮಿಕ ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ಹುಟ್ಟುಹಾಕುವ ಮೂಲಕ ಪ್ರಾರಂಭವಾಗಲಿದ್ದು, ಪ್ರೌಢಶಾಲೆಯ ಮೂಲಕ ಮುಂದುವರೆಯಲಿದೆ. ಅಂತಿಮವಾಗಿ ತಂತ್ರಜ್ಞಾನ ಉದ್ಯಮದಲ್ಲಿ ಯಶಸ್ವಿ ವೃತ್ತಿಜೀವನದ ಕಡೆಗೆ ಸಾಗಲು ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಲಿದೆ.
ಭಾರತದಲ್ಲಿ, 17,000 ಶಾಲೆಗಳಿಗೆ ಕಂಪ್ಯೂಟರ್ ವಿಜ್ಞಾನ ಶಿಕ್ಷಣವನ್ನು ಪರಿಚಯಿಸಲು ಅಮೆಜಾನ್ 11 ಲಾಭದ ಉದ್ದೇಶ ಹೊಂದಿಲ್ಲದ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಿದೆ. ಕಳೆದ ಮೂರು ವರ್ಷಗಳಲ್ಲಿ, ಈ ಕಾರ್ಯಕ್ರಮವು 29 ಲಕ್ಷ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರಿದೆ. ದೇಶದಾದ್ಯಂತ 16,000ಕ್ಕೂ ಹೆಚ್ಚು ಶಿಕ್ಷಕರಿಗೆ ತರಬೇತಿ ನೀಡಿದೆ. ಮೇಕರ್ಸ್ಪೇಸ್- ಅಮೆಜಾನ್ ಫ್ಯೂಚರ್ ಎಂಜಿನಿಯರ್ ಕಾರ್ಯಕ್ರಮದ ಅಡಿಯಲ್ಲಿ ಶಿಕ್ಷಣ ಮತ್ತು ಮುಂದಿನ ಪೀಳಿಗೆಯ ತಂತ್ರಜ್ಞಾನ ಪ್ರತಿಭಾನ್ವಿತರಿಗೆ ಸ್ಫೂರ್ತಿ ನೀಡುವ ಮೂಲಕ ಒಳಗೊಳ್ಳುವಿಕೆ ಮತ್ತು ಸಬಲೀಕರಣ ಉತ್ತೇಜಿಸುವ ಅಮೆಜಾನ್ನ ಬದ್ಧತೆಯ ಭಾಗವಾಗಿದೆ.