Saturday, 23rd November 2024

Vishwavani Editorial: ಕೆಟ್ಟ ಮೇಲೂ ಬುದ್ಧಿ ಬರಲಿಲ್ಲ !

ಕೆಲವರ ಜಾಯಮಾನವೇ ಹಾಗೆ, ಕೆಟ್ಟರೂ ಬುದ್ಧಿ ಕಲಿಯುವುದಿಲ್ಲ. ದ್ವೇಷ, ಅಸೂಯೆ, ಆಕ್ರಮಣಕಾರಿ ನಿಲುವು, ಹಿಂಸಾವಿನೋದಿ
ಚಿತ್ತಸ್ಥಿತಿ ಇಂಥವುಗಳನ್ನು ಮುಂದುವರಿಸಿಕೊಂಡು ಹೋದರೆ ಒದಗುವ ಪರಿಣಾಮವೂ ವ್ಯತಿರಿಕ್ತವಾಗೇ ಇರುತ್ತದೆ. ಇದಕ್ಕೆ ಪ್ರಸ್ತುತ ಪ್ಯಾಲೆಸ್ತೀನಿಯರು ಅನುಭವಿಸುತ್ತಿರುವ ದುಸ್ಥಿತಿಯೇ ಸಾಕ್ಷಿ. ಅಲ್ಲಿನ ಹಮಾಸ್ ಉಗ್ರರು ಸುಖಾಸುಮ್ಮನೆ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ಮಾಡಿದ್ದಕ್ಕೆ ಇಸ್ರೇಲಿಗರೂ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಿದ್ದು, ಅದರ ಪರಿಣಾಮವಾಗಿ ಗಾಜಾ ಪಟ್ಟಿ ಪ್ರದೇಶ ಹಾಗೂ ಅಲ್ಲಿನ ಜನಜೀವನವು ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು ಜಗತ್ತಿಗೇ ತಿಳಿದಿರುವ ಸಂಗತಿ.

ಸಮಸ್ಯೆಗಳ ಇತ್ಯರ್ಥಕ್ಕೆ ಆಯುಧವನ್ನು ಎತ್ತಿಕೊಳ್ಳುವುದಷ್ಟೇ ಮಾರ್ಗವಲ್ಲ, ಪರಸ್ಪರ ಸಮಾಲೋಚಿಸಿ ಪರಿಹಾರದ ಮದ್ದು ಅರೆಯಬಲ್ಲಂಥ ವಿವೇಚನಾಯುತ ಶಾಂತಿಮಾರ್ಗವೂ ಇದೆ. ಆದರೆ ಹಿಂಸಾವಿನೋದಿಗಳಿಗೆ ಮತ್ತು ವಿಕೃತ ಮನಸ್ಥಿತಿಯವರಿಗೆ ಇಂಥ ಸರಳಸತ್ಯ ಅರ್ಥವಾಗಬೇಕಲ್ಲ? ಖಲಿಸ್ತಾನಿ ಉಗ್ರ ಗುರು ಪತ್ವಂತ್ ಸಿಂಗ್ ಪನ್ನುನ್‌ನ ಇತ್ತೀಚಿನ ವರ್ತನೆ ಈ ಮಾತಿಗೆ ಪುಷ್ಟಿ ನೀಡುವಂತಿದೆ.
“ಅಯೋಧ್ಯೆಯ ಶ್ರೀರಾಮ ಮಂದಿರದ ತಳಪಾಯವನ್ನೇ ಸ್ಪೋಟಿಸುವೆ.

ಹಿಂದುತ್ವ ಸಿದ್ಧಾಂತದ ಮೂಲಕೇಂದ್ರವಾದ ಈ ಮಂದಿರದಲ್ಲಿ ನವೆಂಬರ್ ೧೬-೧೭ರಂದು ಹಿಂಸಾಚಾರ ನಡೆಯಲಿದೆ” ಎಂಬುದಾಗಿ ಆತ ಬೆದರಿಕೆ ಹಾಕಿರುವ ವಿಡಿಯೋ ಬಿಡುಗಡೆಯಾಗಿದ್ದು, ಇದರಲ್ಲಿ ಆತ ಕೆನಡಾದಲ್ಲಿನ ಕನ್ನಡಿಗ ಸಂಸದ ಚಂದ್ರ ಆರ್ಯ ಅವರಿಗೂ ಜೀವಭಯ ಒಡ್ಡಿದ್ದಾನೆ. ಕೆಲವರಿಗೆ ಕೆಟ್ಟ ಮೇಲೂ ಬುದ್ಧಿ ಬರುವುದಿಲ್ಲ ಎಂಬುದಕ್ಕೆ ಈತನೇ ಸಾಕ್ಷಿ. ಭಾರತವು ಈಗಲೂ ದಶಕಗಳ ಹಿಂದಿದ್ದ ಭಾರತವೇ ಎಂದು ಪತ್ವಂತ್ ಸಿಂಗ್ ಭಾವಿಸಿದಂತಿದೆ! ಬದಲಾದ ಪರಿಸ್ಥಿತಿಯಲ್ಲಿ ಭಾರತವು ಉಗ್ರವಾದದ ಹಾಗೂ ಉಗ್ರವಾದಿಗಳ ಬಾಲವನ್ನು ಕತ್ತರಿಸಿರುವುದನ್ನು ಈತ ಮರೆತಿರಬಹುದು. ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ನೆಲೆಗೊಂಡಿದ್ದ ಉಗ್ರವಾದಿ ಗುಂಪುಗಳ ತರಬೇತಿ ಶಿಬಿರದ ಮೇಲೆ ೨೦೧೯ರ -ಬ್ರವರಿಯಲ್ಲಿ ವಾಯುದಾಳಿ ನಡೆಸಿ ‘ಉದಯೋನ್ಮುಖ ಉಗ್ರರನ್ನು’ ಭಾರತ ಹೊಸಕಿ ಹಾಕಿದ್ದನ್ನು ಪತ್ವಂತ್ ಸಿಂಗ್ ಒಮ್ಮೆ ನೆನಪಿಸಿಕೊಳ್ಳಲಿ. ಅಯೋಧ್ಯೆಯ ರಾಮಮಂದಿರವನ್ನು ಸ್ಪೋಟಿಸುವುದು ಅಷ್ಟು ಸುಲಭವಲ್ಲ…

ಇದನ್ನೂ ಓದಿ:Vishwavani Editorial: ಅಸ್ತಿತ್ವ-ಅಸ್ಮಿತೆಗೆ ಧಕ್ಕೆಯಾಗದಿರಲಿ